ಬಾರೋ ಬಾರೋ ಮಳೆರಾಯ ಸಂಗ್ರಹದ ಕೆಲವು ಕವಿತೆಗಳು ನಿಮ್ಮ ಮಕ್ಕಳಿಗಾಗಿ:

ಮಲ್ಲಿ ಮಲ್ಲಿ ಎಲ್ಲಿಗೆ?
ಮಲ್ಲಿ ಮಲ್ಲಿ ಎಲ್ಲಿಗೆ? ಮಲ್ಲೀಪಟ್ಣದ ಗಲ್ಲಿಗೆ!
ಯಾತಕ್ಕಮ್ಮ ಅಲ್ಲಿಗೆ? ಗೋಲೀ ಮಾಡೋ ಕಲ್ಲಿಗೆ!
ಗೋಲೀಮಾಡೋ ಕಲ್ಲನ್ ತಂದು ಯಾರಿಗೆ ಕೊಡ್ತೀ ಮಲ್ಲಿಗೆ?
ರಾತ್ರಿ ಎಲ್ಲಾ ಅಳ್ತಾ ಇರೋ ಅಡುಗೇಮನೆ ನಲ್ಲಿಗೆ!
ಪೋಲೀ ಗುಂಡ!
ಪೋಲೀ ಗುಂಡ ಬಂದ! ಕೋಳೀವಾಡದಿಂದ!
ಬಗಲಲ್ಲೊಂದು ಕೋಳಿ! ಬೆಳಗಾಯ್ತಣ್ಣ ಏಳೀ!
ಕೂಗ್ತಾ ಇತ್ತು ಕೊಕ್ಕೋ! ಉದ್ರೀಗಾದ್ರೂ ತಕ್ಕೋ!
ರಾಣೀ ಬೆಕ್ಕು-ರಾಜಾ ಬೆಕ್ಕು
ರಾಣೀ ಬೆಕ್ಕು, ರಾಜಾ ಬೆಕ್ಕು ಸಿಕ್ಕಿದ ಇಲಿಗಾಗಿ
ರೇಗಾಡುತ್ತಾ ಕೂಗಾಡುತ್ತಾ ಜಗಳಕ್ಕೇ ರೆಡಿಯಾಗಿ
ನಿಂತಿದ್ದಾಗ ಅಲ್ಲಿಗೆ ಬಂತು ನಾಯಿ-ತೆರೆದೇ ಬಾಯಿ!
ಜಗಳ ಇಲ್ಲ, ಪಗಳ ಇಲ್ಲ ಎರಡೂ ಬೆಕ್ಕು ಮಾಯ!
ಹಿರಿಯೂರಲ್ಲಿ
ಹಿರಿಯೂರಲ್ಲಿ ಕರಿಯಣ್ಣೋರು ಕುರೀ ಕಾಯ್ತಾ ಇದ್ರು!
ಕುರಿ ಕಾಯ್ತಾ ಕಾಯ್ತಾ ಒಮ್ಮೆ ಕರೀ ಬಾವೀಲಿ ಬಿದ್ರು!
ಕರೀಬಾವೀಲಿಲ್ಲ ನೀರು. ಬರೀಕತ್ತಲ ಜೋರು!
ಮೊದಲೇ ಬಿದ್ದೋರ್ ಕೇಳ್ತಾ ಇದ್ರು: "ಈಗ ಬಿದ್ದೋರ್ ಯಾರು?"
ಪಾಪನ ಚಡ್ಡಿ!
ಪುಟ್ಟ ಕಂದ ಹೈ!
ಪಾಪ! ಬರೀ ಮೈ!
ಚಡ್ಡಿ ಕೂಡ ನೈ!
ಥೈ! ಥೈ! ಥೈ!
ತಾತ ಎನ್ನುತ
ಕಣ್ಣ ತಿಕ್ಕುತ
ಅಳುತ ಇದ್ದ ತಾ
ಛೆ! ಛೆ! ಛೆ!
ತಾತ ಬಂದರು!
ಕೊಟ್ಟು ಒಂದು ರೂ
ಚಡ್ಡಿ ತಂದರು!!
ಹ! ಹ! ಹ!
ತೊಡಿಸಿ ನಿಕ್ಕರು
ತಾತ ನಕ್ಕರು
ಝಿಪ್ಪೆ ಚಕ್ಕರ್ರು!!
ಹೊ! ಹೊ! ಹೊ!
ಧೋ ಧೋ ಎಂದು!
ಧೊ! ಧೊ! ಎಂದು ಮಳೆ ಸುರಿವಂದು
ಅರಳಿದ ನಾಯಿಕೊಡೆ!
ಮುರಿಯದ ಹಾಗೆ ಬೀದಿಯ ನಾಯಿ
ನಿಂತಿದೆ ಮೇಲುಗಡೇ!
ಇಂದು ಚಿಕ್ಕ ಕೊಡೆ ಬೆಳೆದರೆ ಮುಂದೆ
ಆಗುವುದೂರಗಲ!
ಚೂರೂ ತೊಯ್ಯದೆ ನಿಲ್ಲುವೆ ಕೆಳಗೆ
ಮುಂದಿನ ಮಳೆಗಾಲ!
ಗಿಲ್! ಗಿಲ್! ಗಿಲ್!
ಗಿಲ್! ಗಿಲ್! ಗಿಲ್!
ಹೋಗ್ಬೇಡ ನಿಲ್!
ಹನಿ ಹನಿ ಮಳೆ ಜತೆ
ತಲೆ ಮೇಲೆ ಕಲ್!!
ನಮ್ಮ ಚೋಟು ನಾಯಿಗೆ
ನಮ್ಮ ಚೋಟು ನಾಯಿಗೆ
ನಾಕು ಫೀಟು ನಾಲಗೆ!
ಈಗ ಚೋಟು ಬೌ ಅಂದರೆ
ಕೇಳಿಸುವುದು ನಾಳೆಗೆ!
ಬಾವಿಯಾಮೆಚಿಪ್ಪಲಿ
ಬಾವಿಯಾಮೆಚಿಪ್ಪಲಿ
ಮಾಡಿಕೊಂಡು ಚಪ್ಪಲಿ
ಉರ್ಅ ತಿರುಗುತಿತ್ತು ಕತ್ತೆ
ವಾಕಿಂಗಿನ ನೆಪ್ಪಲಿ!
ಓಟೇ ರೇಟು!
ಒಂದು ಹಳೇ ಕೋಟೆ; ಕೋಟೆ ಒಳಗೊಂದು ಪೇಟೆ;
ಪೇಟೆ ಉದ್ದಕ್ಕು ಮಾರ್ತಾ ಇದ್ದಾರೆ ಒಣಾ ಮಾವಿನ ಓಟೆ!
ಓಟೇ ರೇಟು ಜಾಸ್ತಿ ಅಂದ್ರ ಶ್ರೀಮಾನ್ ಜೆಮ್ ಷೆಡ್ ತಾತ!
"ಓಟೇ ರೇಟೇ ಹಾಗೇ" ಅಂತು ಕುರುಚಲು ಗಡ್ಡದ ಹೋತ!
ಮಿತ್ರರೆ,ಈ ಕವಿತೆಗಳನ್ನ ನಿಮ್ಮ ಮಕ್ಕಳಿಗೆ ಹೇಳಿಕೊಡಿ. ಶುಭಾಶಯಗಳೊಂದಿಗೆ -ಎಚ್.ಎಸ್.ವಿ.
ನಮಸ್ಕಾರ ಸರ್,
ReplyDeleteಮಕ್ಕಳಿಗಾಗಿರುವ ಹನಿಗಳು ಮಜವಾಗಿವೆ. ನಾನೇ ಹಲವಾರು ಸಲ ಓದಿ ಖುಷಿಪಟ್ಟುಕೊಂಡೆ; ತಪ್ಪಿಲ್ಲವಲ್ಲ!
ಈ ಕವಿತೆಗಳನ್ನು ನನ್ನ ಸ್ನೇಹಿತರಿಗೆ ಕಳಿಸುತ್ತಿದ್ದೇನೆ, ನಿಮಗೆ ಧನ್ಯವಾದಗಳು.
ನಮಸ್ತೆ ಸಾರ್...ಹೇಗಿದ್ದೀರಿ
ReplyDeleteಖಂಡಿತ ನನ್ನ ಮಗಳಿಗೆ ಇವನ್ನು ಹೇಳಿಕೊಡುವ ಪ್ರಯತ್ನ ಮಾಡುತ್ತೇನೆ.
ಧನ್ಯವಾದಗಳೊಂದಿಗೆ.
ಚಂದಿನ
ಶಿಶುಪ್ರಾಸಗಳು ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಇಷ್ಟವಾಗುವಂತವುಗಳು. ನಮ್ಮ ಬಾಲ್ಯದ ಹಲವಾರು ಶಿಶುಪ್ರಾಸಗಳೂ ಇಂದಿಗೂ ನನಗೆ ಚೆನ್ನಾಗಿ ನೆನಪಿನಲ್ಲಿ ಉಳಿದಿವೆ. ಈಗಂತೂ ಅವುಗಳನ್ನು ನನ್ನ ಐದು ವರ್ಷದ ಮಗಳಿಗೆ ಹೇಳಿಕೊಡುವುದರಲ್ಲಿ ಸಂತೋಷ ಕಾನುತ್ತಿದ್ದೇನೆ. ಇವುಗಳನ್ನೇ ಆಧರಿಸಿ ನಮ್ಮ ಕಡೆಯ ಶಿಶುಪ್ರಾಸಗಳು ಎನ್ನುವ ಒಂದು ಲೇಖನವನ್ನೂ ಕೂಡ ಬರೆದಿದ್ದೆ. ಈ ಕೆಳಗಿನ ಲಿಂಕಿನಲ್ಲಿ ಅದನ್ನು ಓದಬಹುದು.
ReplyDeletehttp://nandondmatu.blogspot.com/2009/05/blog-post_27.html
padya tuMba iShTavaayitu!
ReplyDeletesamartha suhas
ರಾಜರತ್ನಮ್ ನಂತರ ಈಗ ನೀವು ಒಳ್ಳೇ ಶಿಶುಗೀತೆ ಕೊಡ್ತಾ ಇದ್ದೀರಿ.
ReplyDeleteಎಲ್ಲ ಬಾಲರ ಪರವಾಗಿ ನಿಮಗೆ ಧನ್ಯವಾದಗಳು.
ಸರ್,
ReplyDeleteಮಕ್ಕಳಿಗೆ ಅಲ್ಲ ನಮಗು ಇಷ್ಟವಾಗಿದೆ ನಾವು ಕಲಿತು ನನ್ನ ಮಗನಿಗು ಕಲಿಸುವೆ.. ಬಹಳ ಇಷ್ಟವಾಯಿತು.. ಮತ್ತಷ್ಟು ಬರಲಿ ನಾವುಗಳೆಲ್ಲ ಕಲಿಯುವಂತಾಗಲಿ....
ನೀವು ಬ್ಲಾಗ್ ಪ್ರಪಂಚಕ್ಕೆ ಬಂದಿದ್ದು ಬಹಳ ಖುಷಿ ನನಗೆ ನಿಮ್ಮ ಕವನಗಳ ಸಾಲುಗಳು ತುಂಬಾ ತುಂಬಾ ಇಷ್ಟ ನಿಮ್ಮ ಉತ್ತರಾಯಣ ಎಲ್ಲವನ್ನು ಓದಿರುವೆ.. ಮುಕ್ತ ಮುಕ್ತ ಹಾಡಂತು ಎಷ್ಟು ಅರ್ಥ ಕಲ್ಪಿಸಿದ್ದೀರಿ ಬಹಳ ಅರ್ಥಗರ್ಭಿತ ....
ಮುಕ್ತ ಮುಕ್ತ ಹಾಡನ್ನು ಸದಾ ಕೇಳಬೇಕೆನ್ನ ಆಸೆ ದಯವಿಟ್ಟು ಇದು ಸಾಧ್ಯವಾದರೆ ಬ್ಲಾಗ್ನಲ್ಲಿ upload ಮಾಡಬಹುದಾದರೆ ಮಾಡಿ ನಾವು ಬೇಕೆನಿಸಿದಾಗಲೆಲ್ಲ ಕೇಳುವಂತೆ ಮಾಡಿ.
ವಂದನೆಗಳು
ದಸರಾ ಹಬ್ಬದ ಶುಭಾಶಯಗಳು