Saturday, October 17, 2009

ಅಶ್ವತ್ಥ ಎಂಬ ಅಯಸ್ಕಾಂತ...

ಸಮಕಾಲೀನ ಸಂದರ್ಭದಲ್ಲಿ ನಾನು ಕಂಡ ಮಹಾನ್ ಪ್ರತಿಭಾಶಾಲಿಗಳಲ್ಲಿ ಅಶ್ವಥ್ ಒಬ್ಬರು. ಸುಮಾರು ಮೂವತ್ತು ವರ್ಷಗಳ ಸುದೀರ್ಘವಾದ ಒಡನಾಟ ನಮ್ಮದು. ಸೃಷ್ಟಿಶೀಲವಾದ ಅನೇಕ ಗಟ್ಟಿ ಕ್ಷಣಗಳನ್ನು ಅವರೊಟ್ಟಿಗೆ ಕಳೆದಿರುವ ಅನುಭವ ನನಗುಂಟು. ಇಷ್ಟಾಗಿಯೂ ಅವರ ಬಗ್ಗೆ ಬರೆಯುವುದು ಒಂದು ಸವಾಲಿನ ಸಂಗತಿಯೇ. ಕಾರಣ ಸುಲಭವಾದ ಗ್ರಹಿಕೆಗೆ ಸಿಕ್ಕುವ ಸರಳ ವ್ಯಕ್ತಿಯಲ್ಲ ಅವರು. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂಬುದೇ ಅವರ ಜೀವನ ಸೂತ್ರ. ಸದಾ ಹೊಸ ಹೊಸ ಕನಸು ಕಾಣುತ್ತಾ, ಅವನ್ನು ಕಾರ್ಯ ರೂಪಕ್ಕೆ ತರುತ್ತಾ, ನನ್ನನ್ನು ಸದಾ ವಿಸ್ಮಿತಗೊಳಿಸುತ್ತಾ ಬಂದಿರುವ ವ್ಯಕ್ತಿ ಇವರು. ಇವರಂಥಾ ಕನಸುಗಾರರನ್ನು ನಾನು ಕಂಡೇ ಇಲ್ಲ ಎಂದರೂ ತಪ್ಪಾಗದು.ಇವರ ವ್ಯಕ್ತಿತ್ವದಲ್ಲಿ ಎರಡು ಧ್ಯಾನ ಕೇಂದ್ರಗಳಿವೆ. ಒಂದು ಸುಗಮಸಂಗೀತ. ಇನ್ನೊಂದು ಸ್ವತಃ ಅಶ್ವಥ್. ಈ ಎರಡು ಕೇಂದ್ರಗಳು ದೂರ ಸರಿಯುತ್ತಾ , ಹತ್ತಿರವಾಗುತ್ತಾ ಒಂದು ಬಗೆಯ ವಿಚಿತ್ರವಾದ ಖೋ ಆಟದಲ್ಲಿ ತೊಡಗಿರುವ ಹಾಗೆ ನನಗೆ ಯಾವಾಗಲೂ ಅನ್ನಿಸಿದೆ. ಕೆಲವೊಮ್ಮೆ ಸುಗಮ ಸಂಗೀತ ಅಶ್ವಥ್ ಅವರನ್ನು ಆವರಿಸಿಬಿಡುತ್ತದೆ. ಮತ್ತೆ ಕೆಲವೊಮ್ಮೆ ಅಶ್ವಥ್ ಸುಗಮ ಸಂಗೀತವನ್ನು ಆವರಿಸಿಬಿಡುತ್ತಾರೆ. ವಿಶೇಷವಾದ ಅರ್ಥದಲ್ಲಿ ಸುಗಮ ಸಂಗೀತ ಎಂಬುದು ಅಶ್ವಥ್ ಅವರ ಅಹಂಅಭಿವ್ಯಕ್ತಿಯೇ ಆಗಿದೆ. ಪ್ರಾಯಃ ಒಬ್ಬ ಸಾಹಿತಿ, ಚಿತ್ರಗಾರ, ಶಿಲ್ಪಿಗಿಂತ ಇದು ಭಿನ್ನವಾದ ನಿಲುವು. ಸಂಗೀತಗಾರ, ನೃತ್ಯಪಟು, ನಟ- ತಮ್ಮ ಹಾಜರಿಯಲ್ಲೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆಗೆ ಒಳಗಾದವರು. ಅಶ್ವಥ್ ಇಲ್ಲದೆ ಅಶ್ವಥ್ ಗಾಯನವಿಲ್ಲ; ಮಾಯಾರಾವ್ ಇಲ್ಲದೆ ಮಾಯಾರಾವ್ ಅವರ ನರ್ತನವಿಲ್ಲ; ರಾಜಕುಮಾರ್ ಇಲ್ಲದೆ ರಾಜಕುಮಾರ್ ಅವರ ಅಭಿನಯವಿಲ್ಲ. ಈ ಮಾಧ್ಯಮದವರು ವ್ಯಕ್ತಿ ನಿರಸನವನ್ನು ಸಾಧಿಸುವ ಬಗೆಯೆಂತು? ಅಸಾಮಾನ್ಯವಾದ ನಡಾವಳಿ, ಲಯಪ್ರತೀತಿ, ವೇಷಾಂತರಗಳು, ಮತ್ತು ಶಿಷ್ಯನಿರ್ಮಾಣಗಳಿಂದ ತಕ್ಕಮಟ್ಟಿಗಿನ ವ್ಯಕ್ತಿನಿರಸನವನ್ನು ಸಾಧಿಸಬಹುದೇನೋ! ಆದರೂ ಬೇರೆ ಕಲಾಮಾಧ್ಯಮಗಳಲ್ಲಿ ಸಾಧ್ಯವಾಗುವ ವ್ಯಕ್ತಿನಿರಪೇಕ್ಷತೆ (ವ್ಯಕ್ತಿತ್ವನಿರಪೇಕ್ಷತೆ ಅಲ್ಲ) ಸಂಗೀತ, ನೃತ್ಯ, ಅಭಿನಯದ ಮಾಧ್ಯಮಗಳಲ್ಲಿ ಸಾಧ್ಯವಾಗುವುದಿಲ್ಲವೇನೋ...!ಈ ತೊಡಕಿನ ಅರಿವು ಅಶ್ವಥ್ ಅವರನ್ನು ಅರ್ಥೈಸುವಲ್ಲಿ ನಮ್ಮ ನೆರವಿಗೆ ಬಂದೀತು!

***

ಅಶ್ವಥ್ ಅವರನ್ನು ಮೊಟ್ಟಮೊದಲಬಾರಿ ನಾನು ನೋಡಿದ್ದು ಯವನಿಕಾ ಕಲಾಮಂದಿರದಲ್ಲಿ. ಗೆಳೆಯ ವ್ಯಾಸರಾವ್, ಅವರನ್ನು ನನಗೆ ಪರಿಚಯಿಸಿದರು. ಅಶ್ವಥ್, ನಾನು ಮತ್ತು ಬಿ.ಆರ್.ಎಲ್. ಅವರನ್ನು ನೋಡಲಿಕ್ಕಾಗಿ ಯವನಿಕಾಕ್ಕೆ ಬಂದಿದ್ದರು. ಯವನಿಕಾದ ಮುಂಭಾಗದ ಅಂಗಳದಲ್ಲಿ ಸುತ್ತ ಇರುವ ಮಂದಿಯ ಗಮನವೇ ಇಲ್ಲದೆ ಅಶ್ವಥ್ ತಮ್ಮ ಒಂದು ಕನಸನ್ನು ನಮ್ಮ ಮುಂದೆ ತೆರೆದಿಡತೊಡಗಿದರು! ಹೀಗೆ ಒಂದು ಕನಸಿನ ಸಮೇತವೇ ಅಶ್ವಥ್ ಅವರನ್ನು ನಾನು ಮೊಟ್ಟಮೊದಲು ನೋಡಿದ್ದು. ಮುಂದೆ ಅದೆಷ್ಟು ಬಾರಿ ನಾನು ಅವರು ಸೇರಿ ಮಾತಾಡಿದ್ದೇವೋ. ಕನಸಿಲ್ಲದ ಬರಿಗಣ್ ಅಶ್ವಥ್ ಯಾವತ್ತೂ ನನ್ನ ಕಣ್ಣಿಗೆ ಬಿದ್ದಿಲ್ಲ. ಮೊದ ಮೊದಲು ಸಣ್ಣಪುಟ್ಟ ಕನಸುಗಳನ್ನು ಅಶ್ವಥ್ ಕಾಣುತ್ತಿದ್ದರು. ಬರು ಬರುತ್ತಾ ಅವು ವಿಶ್ವೋವಿಶಾಲವಾಗತೊಡಗಿದವು! ಅವರ ಕನಸಿನ ಪ್ರಪಂಚ ಅಳತೆಮೀರಿ ದೊಡ್ಡದಾಗತೊಡಗಿತು. ಅಸಂಖ್ಯ ಅನಾಮಿಕ ಮುಖಗಳು ಆ ಕನಸುಗಳಲ್ಲಿ ಕಿಕ್ಕಿರಿಯತೊಡಗಿದವು. ಅದೆಲ್ಲಾ ಅಶ್ವಥ್ ಅವರ ಆಯಸ್ಕಾಂತಪ್ರತಿಭೆಯಿಂದ ದೋಚಲ್ಪಟ್ಟ ಅನಾಮಿಕ ಅಭಿಮಾನಿಗಳ ಸಾಂದ್ರ ದಟ್ಟಣೆ. ಅಶ್ವಥ್..ಅಶ್ವಥ್..ಅಶ್ವಥ್..ಎಂದು ಅಭಿಮಾನದಿಂದ ಒಕ್ಕೊರಳಲ್ಲಿ ಘೋಷಿಸುವ ಅಭಿಮಾನಿಗಳು ಅವರು. ಇಂಥ ಒಂದು ವಿಶ್ವವ್ಯಾಪೀ ಕನಸು ಕನ್ನಡವೇ ಸತ್ಯ ಕಾರ್ಯಕ್ರಮದ್ದು! ಎಂಥಾ ಜನ ಸಾಗರ ನೆರೆದಿತ್ತು ಅಲ್ಲಿ! ಒಂದು ಸುಗಮಸಂಗೀತ ಕಾರ್ಯಕ್ರಮಕ್ಕೆ ಆಪಾಟಿ ಮಂದಿ ಸೇರುತ್ತಾರೆಂದು ನಾವು ಕಲ್ಪಿಸುವುದೇ ಸಾಧ್ಯವಿರಲಿಲ್ಲ. ಅದು ಅಶ್ವಥ್ ಕಲ್ಪಿಸಿದ್ದ ಅತ್ಯಂತ ಬೃಹತ್ ಆದ ಕನಸಾಗಿತ್ತು. ಆ ಅಸಾಧ್ಯವೆನಿಸುವ ಕನಸನ್ನು ಅವರು ಈ ನೆಲದ ಪಾತಳಿಗೇ ಎಳೆದು ತಂದಿದ್ದರು. ಇದೊಂದು ಅದ್ಭುತ ಪ್ರಮಾಣಾತ್ಮಕ ಕನಸು.

***

ಅಶ್ವಥ್ ಕಂಡ ಬೇರೆ ಬಗೆಯ ಕನಸುಗಳೂ ನನ್ನ ಕಣ್ಮುಂದೆ ಇವೆ. ನಿರ್ಜನವಾದ ಒಂದು ಅರಣ್ಯಪ್ರದೇಶ. ಇರುಳು ಮೆಲ್ಲಗೆ ತಾಯ ಮುಸುಕಿನಂತೆ ಭೂಮಿಯ ಮೇಲೆ ಇಳಿಬಿದ್ದಿದೆ. ಒಂದು ದೊಡ್ಡ ಹಸಿರುಕಪ್ಪು ಮರದ ಕೆಳಗೆ ಅಶ್ವಥ್ ಕುಳಿತಿದ್ದಾರೆ. ಕೆಲವರು ಕವಿಗಳು, ಕಾವ್ಯರಸಿಕರು, ಆಪ್ತೇಷ್ಟರು, ಅಶ್ವಥ್ ಅವರ ಮಿತ್ರಬಾಂಧವರು ಅಲ್ಲಿ ನೆರೆದಿದ್ದಾರೆ. ಪ್ರಖರವಾದ ಬೆಳಕೂ ಇಲ್ಲ. ಸಣ್ಣಗೆ ಒಂದು ಹಣತೆಯ ದೀಪ. ಅಷ್ಟೆ. ಅಶ್ವಥ್ ತಂಬೂರಿಯ ಮಂಗಲಶ್ರುತಿಯ ಹಿನ್ನೆಲೆಯಲ್ಲಿ ಮೆಲ್ಲಗೆ ಹಾಡ ತೊಡಗುತ್ತಾರೆ. ವಿಲಂಬ ಗತಿಯ ಗಂಭೀರವಾದ ಕವಿತೆಗಳು. ಸಾವಧಾನದ ಗಾಯನ. ಗಾಯಕ ಮತ್ತು ಕೇಳುಗ ಇಬ್ಬರೂ ಆ ಗಾಯನದಲ್ಲಿ ತನ್ಮಯರಾಗಿಬಿಟ್ಟಿದ್ದಾರೆ. ರಾತ್ರಿ ಎಷ್ಟುಹೊತ್ತಿನವರೆಗೆ ಈ ಕಾರ್ಯಕ್ರಮ ನಡೆಯಿತೋ...ಯಾರ ಅರಿವಿಗೂ ಬರುವುದಿಲ್ಲ. ಬೇಂದ್ರೆ, ಕುವೆಂಪು, ಕೆ.ಎಸ್.ನ, ಷರೀಫ್ ಇವರ ಗೀತೆಗಳು ಕೇಳುಗರ ಮನದ ಆಳಕ್ಕೆ ಇಳಿಯುತ್ತಾ ಗಾಢವಾದ ಸಂವೇದನೆಯನ್ನು ನಿರ್ಮಿಸುತ್ತಾ ಇವೆ...ಕೆಲವರು ಕೇಳುಗರ ಕಣ್ಣಂಚು ಕೂಡಾ ಒದ್ದೆಯಾಗುತ್ತಾ ಇದೆ. ಇದು ಇನ್ನೊಂದು ಬಗೆಯ ಕನಸು. ಈ ಕನಸನ್ನು ನಮ್ಮ ಕಣ್ಣಮುಂದೆ ನೆಲಕ್ಕಿಳಿಸಿದವರು ಅಶ್ವಥ್ ಅವರೇ!

***

ತಮ್ಮ ಮಾಧ್ಯಮ ಕೇವಲ ಒಪ್ಪಿಸುವ ಮಾಧ್ಯಮವಲ್ಲ; ಚಿಂತಿಸುವ ಮಾಧ್ಯಮ ಎಂದು ದೃಢವಾಗಿ ನಂಬಿದವರು ಅಶ್ವಥ್. ತನ್ನದೇ ಕಾವ್ಯ ಮೀಮಾಂಸೆಯನ್ನು ಬೆಳೆಸದೆ ಒಬ್ಬ ಕವಿ ಹೇಗೆ ಬೆಳೆಯಲಾರನೋ, ಹಾಗೇ ತನ್ನ ಗಾಯನ ಮೀಮಾಂಸೆಯನ್ನು ಬೆಳೆಸದೆ ಒಬ್ಬ ಗಾಯಕನೂ ಬೆಳೆಯಲಾರ. ತಮ್ಮ ಮಾಧ್ಯಮದ ವ್ಯಾಕರಣದ ಬಗ್ಗೆ ಆಳವಾಗಿ ಚಿಂತಿಸುವ ಒಬ್ಬನೇ ಗಾಯಕ ಸಿ.ಅಶ್ವಥ್. ಅಶ್ವಥ್ ಚಾಲ್ತಿಗೆ ಬರುವ ತನಕ , ರಾಗ ಸಂಯೋಜನೆ ಎನ್ನುವ ಮಾತೇ ನಮ್ಮಲ್ಲಿ ರೂಢಿಯಲ್ಲಿದ್ದುದು. ಅಶ್ವಥ್ "ಸ್ವರ ಸಂಯೋಜನೆ " ಎಂಬ ಹೊಸ ವ್ಯಾಕರಣ ಸೂತ್ರವನ್ನು ಹುಟ್ಟು ಹಾಕಿದರು. ಇದು ಸುಲಭಸಾಧ್ಯವಾದುದಲ್ಲ. ಹಗಲೂ ಇರುಳೂ ತನ್ನ ಮಾಧ್ಯಮವನ್ನ ಹಚ್ಚಿಕೊಂಡು ಚಿಂತಿಸದೆ ಹೊಸ ಕಲ್ಪನೆಗಳು ಆವಿರ್ಭವಿಸಲಾರವು.ಸ್ವರ ಸಂಯೋಜನೆ ಎಂಬುದು ಸುಗಮ ಸಂಗೀತಕ್ಕೆ ಅಶ್ವಥ್ ಕೊಟ್ಟ ಬಹು ದೊಡ್ಡ ಕಾಣಿಕೆ. ಇದು ಸರ್ವ ಸಮ್ಮತವಾಗುವ ತನಕ ಚರ್ಚೆಗಳು ನಡೆಯಬಹುದು. ಆದರೆ ಇದು ಚರ್ಚೆಗೆ ಯೋಗ್ಯವಾದ ನವೋನವ ಕಲ್ಪನೆ. ಈಚಿನ ದಿನಗಳಲ್ಲಿ ಅಶ್ವಥ್ ಹಾಡುತ್ತಾರೆ ಅಥವಾ ಹಾಡಿನ ಶಾಸ್ತ್ರವನ್ನು ಚಿಂತಿಸಿ, ತಮ್ಮ ಹೊಸ ಹೊಳಹುಗಳನ್ನು ಭಾಷೀಕರಿಸಲು ಹರಸಾಹಸ ಮಾಡುತ್ತಾರೆ. ಮಂಗಳೂರು ಸಾಹಿತ್ಯ ಸಮ್ಮೇಳನದಲ್ಲಿ ಅವರು ನೀಡಿದ ಸೋದಾಹರಣ ಉಪನ್ಯಾಸ ನನ್ನ ನೆನಪಲ್ಲಿದೆ. ಅಷ್ಟು ದೊಡ್ಡ ಸಭೆಗೆ ಸೂಕ್ಷ್ಮವಾದ ಸುಗಮಸಂಗೀತದ ವ್ಯಾಕರಣವನ್ನು ತಿಳಿಸಲು ಅಶ್ವಥ್ ಹೇಗೆ ಸಮರ್ಥರಾದರು? ಇದು ನನಗೆ ಇವತ್ತೂ ಆಶ್ಚರ್ಯ ಹುಟ್ಟಿಸುವ ಸಂಗತಿ. ಇದು ವಾಗ್ಮಿತೆಯ ಬಲವಲ್ಲ. ಹೊಸದನ್ನು ಹೊಸದಾಗಿ ಹೇಳಬೇಕೆಂಬ ಒಬ್ಬ ಆಳಚಿಂತಕನ ಮನಸ್ಸಿನ ಒಳಾಂದೋಳನದ ಕೊಡುಗೆ. ಬುದ್ಧಿ ಮತ್ತು ಭಾವ ಇವುಗಳ ಬೆಸುಗೆಗಾರನಾಗಿ ಹೀಗೆ ಅಶ್ವಥ್ ನನಗೆ ಪ್ರಿಯರಾದ ಕಲಾವಿದರಾಗಿದ್ದಾರೆ.

***

ಅಶ್ವಥ್ ಒಬ್ಬ ಮೋಡಿಕಾರ ಎಂಬುದು ಸಾಮಾನ್ಯವಾಗಿ ಹೇಳಲಾಗುವ ಮಾತು. ಹಾಗೇ ಅವರು ಮೂಡಿಕಾರನೂ ಹೌದು! ಈ ಮೋಡಿ ಮತ್ತು ಮೂಡಿ ಎಷ್ಟು ಹತ್ತಿರದ ಪದಗಳಾಗಿವೆ! ಮೊದಲನೆಯದು ಕನ್ನಡದ ಮೋಡಿ. ಎರಡನೆಯದು ಇಂಗ್ಲಿಷ್ ಮೂಡಿ! ಕಲಾವಿದರೆಲ್ಲಾ ಸಾಮಾನ್ಯವಾಗಿ ಮೂಡಿ ಮನುಷ್ಯರೇ! ಅಶ್ವಥ್ ಅತಿ ಎನ್ನಬಹುದಾದಷ್ಟು ಮೂಡಿ. ಶೀಘ್ರಕೋಪಿ; ಅಪರಿಮಿತ ಭಾವುಕ; ಮಹಾನ್ ಹಠಗಾರ; ಸ್ವಕೇಂದ್ರಿತವ್ಯಕ್ತಿ. ಈ ಎಲ್ಲ ಮಾತಿಗೂ ವಿರುದ್ಧವಾದುದನ್ನೂ ಅವರ ಬಗ್ಗೆ ಹೇಳ ಬಹುದು. ಮಹಾ ಮುಗ್ಧ; ತಕ್ಷಣ ಕರಗಿಬಿಡುವ ಸ್ವಭಾವ; ವಿಮರ್ಶೆ, ಟೀಕೆಗಳಿಗೆ ಅತಿಯಾಗಿ ಘಾಸಿಗೊಳ್ಳುವ ಮನಸ್ಸು; ಮಹಾ ಸ್ನೇಹಜೀವಿ; ಬೀಸುಗೈ ಧಾರಾಳಿ! ಎಂಥಾ ಕಲಸುಮೇಲೋಗರ ವ್ಯಕ್ತಿತ್ವ ಈ ಮನುಷ್ಯನದ್ದು! ಈ ವಿಕ್ಷಿಪ್ತತೆಗಳ ನಡುವೆ ಅಶ್ವಥ್ ಅವರನ್ನು ಗರಿಷ್ಠ ಪ್ರಮಾಣದಲ್ಲಿ ನಾವು ನೋಡ ಬಹುದಾದದ್ದು ಎಲ್ಲಿ?

ನಾನು ಕಂಡಂತೆ ನಾನು ಅತ್ಯಂತ ಆಳದಲ್ಲಿ ಪ್ರೀತಿಸುವ ಅಶ್ವಥ್ ವ್ಯಕ್ತಿತ್ವದ ಅಭಿವ್ಯಕ್ತಿ ಕೆಳಕಂಡಂತೆ:

"ಅಶ್ವಥ್ ಮಸುಕು ಬೆಳಕಿನ ಕೋಣೆಯೊಂದರಲ್ಲಿ ತಮ್ಮ ಹಾರ್ಮೋನಿಯಮ್ಮಿನ ಹಿಂದೆ ಕೂತು ಅರೆಗಣ್ಣಿನಲ್ಲಿ ತನ್ಮಯರಾಗಿ ಹೋಗಿದ್ದಾರೆ. ಕೆಲವರೇ ಅತ್ಯಾಪ್ತ ಗೆಳೆಯರು ಅವರ ಎದುರು ಕೂತಿದ್ದಾರೆ. ಅಶ್ವಥ್ ಕವಿತೆಯೊಂದಕ್ಕೆ ಸ್ವರ ಸಂಯೋಜಿಸುವ ಸೃಷ್ಟಿಶೀಲ ಕ್ಷಣವದು. ಎಲ್ಲರೂ ತುಟಿಪಿಟ್ಟೆನ್ನದೆ ಕಾಯುತ್ತಾ ಇದ್ದಾರೆ. ಕಾಯುತ್ತಿದ್ದಾರೆ-ಗೆಳೆಯರು. ಕಾಯುತ್ತಿದ್ದಾರೆ-ಪಕ್ಕವಾದ್ಯದ ಆತ್ಮೀಯರು. ಕಾಯುತ್ತಿದ್ದಾರೆ-ಸ್ವತಃ ಅಶ್ವಥ್. ಕಾಯುತ್ತಿದ್ದಾರೆ ಬೇಂದ್ರೆ, ಕುವೆಂಪು, ಕೆ.ಎಸ್.ನ.,ಜಿ.ಎಸ್.ಎಸ್., ಷರೀಫ್....ಮೆಲ್ಲಗೆ ಏನೋ ಒಡಲಾಳದಿಂದ ಒಡಮುರಿದು ಮೇಲೇಳುತ್ತಾ ಇದೆ. ಏನೋ ಸಿಕ್ಕಂತೆ ತಕ್ಷಣ ಇಷ್ಟಗಲ ಕಣ್ಣರಳಿಸುತ್ತಾರೆ ಅಶ್ವಥ್. ಅದೊಂದು ವಿಲಕ್ಷಣ ಕ್ಷಣ; ಹೆಚ್ಚೂ ಕಮ್ಮಿ ಸಮಾಧಿ ಸ್ಥಿತಿ. ಅಶ್ವಥ್ ತಮಗೆ ತಾವೇ ಎಂಬಂತೆ ಮೆಲ್ಲಗೆ ಹಾಡ ತೊಡಗುತ್ತಾರೆ....ಷ್! ಸುಮ್ಮನಿರಿ. ಇದು ಕವಿತೆ ಮತ್ತು ಗೀತೆ ಸಂಲಗ್ನಗೊಳ್ಳುತ್ತಿರುವ ಶುಭ ಮುಹೂರ್ತ..!"

******