Saturday, August 1, 2009

ಈಗಲೂ ಅಷ್ಟೆ

ಅವಳು ಹೋಗಿಯೆ ಬಿಟ್ಟಳೆಂದರೆ ನಂಬುವುದೇ ಇಲ್ಲ
ನಾನು. ಎಂಜಿ ರೋಡಿರಲಿ ಗಾಂಧಿಬಜಾರಿಗೂ ಒಬ್ಬಳೇ
ಹೋದವಳಲ್ಲ. ಪಿಕ್ನಿಕ್ಕಿಗೆ ಹೇಗೋ ಹಾಗೇ ಕ್ಲಿನಿಕ್ಕಿಗೂ
ಒಟ್ಟಿಗೇ ಹೋಗಿಬಂದದ್ದು ನಾವು ಜಗಳಪಗಳ ಸಮೇತ.
ಸಿನಿಮಾ ನಾಟಕ ರಾಮನವಮಿ ಕಚೇರಿ-ಒಟ್ಟಿನಲಿ
ಬೆಂಗಳೂರಲ್ಲೂ ನಾನಿರಬೇಕು ಜತೆಯಲ್ಲೆ. ಹೀಗಿರುವಾಗ
ಹೋಗಿಬಿಟ್ಟಳೆ ಪರಸ್ಥಳಕ್ಕೆ ಎಡಗೈಬೀಸಿಕೊಂಡೊಬ್ಬಳೇ?
ದಾರಿಯಲಿ ಜೋಲಿಗೀಲಿ ಹೊಡೆದರೆ ಯಾರಿದ್ದಾರೆ ಪಕ್ಕ?
ಜನನಿಬಿಡ ರಸ್ತೆಯಲಿ ನಡೆಯುವುದೆಂದರವಳಿಗೆ
ಬಲೇ ಖುಷಿ. ನನಗಿಷ್ಟ ಸಾಲ್ಮರದ ಮಬ್ಬಿಳಿದ ರಸ್ತೆ.
ಗುಡಿಗಿಡಿಯೆಂದರೆ ಮುಗಿಯಿತು. ಚಪ್ಪಲಿ ಮೆಟ್ಟಿ ನಿಂತಳೆಂದೇ
ಬೀದಿಯಲಿ. ನಾನಿನ್ನೂ ಕಾರ ಕೀ ಹುಡುಕುತ್ತ ಮನೆಯಲ್ಲಿ.

ಪುಸ್ತಕ ಹಿಡಿದರೆ ಮುಗೀತು ಜಗತ್ತೇ ಬೇಡ ಎಂದು ಗೊಣಗುತ್ತ
ಈಗಲೂ ನಿಂತಿರಬೇಕಾಕೆ ನನಗಾಗಿ ಬೀದಿತಿರುವಲ್ಲಿ ಕಾಯುತ್ತ.

3 comments:

  1. ಪ್ರೀತಿಯ ಮಾಸ್ಟರಿಗೆ,

    ದಾಂಪತ್ಯ ಜೀವನದ ಹೂರಣವನ್ನು ನಮಗೆ ಉಣಬಡಿಸಿದ್ದೀರಾ ಸಾರ್...
    ಧನ್ಯವಾದಗಳು.

    ಒಲವಿನಿಂದ,
    ಚಂದಿನ

    ReplyDelete
  2. ಧುತ್ತೆಂದು ಎದ್ದು ಹೊರಟು ಹೋದವರ ಬೆನ್ನು ಮುಟ್ಟಲು ಹವಣಿಸುತ್ತ ಕಾರು ಕೀ ಹುಡುಕುತ್ತಾ ಮನೆಯಲ್ಲೇ ಉಳಿದ ಮನದ ಅಳಲು ಎದೆಯೊಳಗೆ ಇಳಿದುಬಿಟ್ಟಿತು, ಸರ್.

    ReplyDelete
  3. sir,
    yestu apatha, yestu vishada, yestu bhavuka.
    adbhuta.
    avara nenapugalu nimma jothe irali.
    -vikas negiloni

    ReplyDelete