Sunday, August 30, 2009

ಆಲಯವನ್ನು ಹೊಕ್ಕ ಆಕಾಶ : ಶ್ರೀರಾಮಚಂದ್ರ

ಬಿಸಿಲಧಗೆ ನಿಧಾನವಾಗಿ ಏರುತ್ತಿರುವಂತೆ ಮತ್ತೆ ರಾಮನವಮಿ ಬರುತ್ತಿದೆ.ತಕ್ಷಣ ನೆನಪು ನನ್ನ ಬಾಲ್ಯದ ದಿನಗಳತ್ತ ಹಾಯುತ್ತಿದೆ. ಚನ್ನಗಿರಿಯಲ್ಲಿ ಆ ಬೆಳಿಗ್ಗೆ ಬಂಡಿಗಳ ಹಿಂದೆ ಬಂಡಿ ಬೆಟ್ಟದ ಮೇಲಿನ ಆಂಜನೇಯನ ಗುಡಿಗೆ ಹೊರಟಿದ್ದವು. ನನ್ನ ಗೆಳೆಯರು ಹೇಳಿದರು. ಈವತ್ತು ಮಧ್ಯಾಹ್ನ ನಾವು ಬೆಟ್ಟದ ಗುಡಿಗೆ ಹೋಗೋಣ...ರಾಮನವಮಿ ಅಲ್ಲವಾ? ಅಲ್ಲಿ ರುಚಿರುಚಿಯಾದ ಕೋಸಂಬರಿ, ತಿಳಿಮಜ್ಜಿಗೆ, ಪಾನಕ ಕೊಡುತ್ತಾರೆ. ಓಹೋ....ನಾನೂ ಬರುತ್ತೇನೆ...!


ಮನೆಯಲ್ಲಿ ನಮ್ಮ ಅಜ್ಜಿ ಪೂಜೆಗೆ ಸಿದ್ಧಮಾಡುತ್ತಿದ್ದರು.ಹಸೆಹಾಕಿ ಹಾಕಿ, ನಡುಮನೆಯಲ್ಲೇ ರಾಮದೇವರ ಫಟ ಇಟ್ಟಿದ್ದರು! ಆ ಫಟ ಈ ರಾಮನವಮಿಗಾಗಿಯೇ ದಾವಣಗೆರೆಯಿಂದ ತಂದದ್ದು...!ಯಥಾಪ್ರಕಾರ ರಾಮದೇವರ ಫ಼್ಯಾಮಿಲಿ ಫೋಟೊ!ನಡುವೆ ರಾಮ.ಪಕ್ಕದಲ್ಲಿ ಸೀತಾದೇವಿ.ಹಿಂದೆ ಚಾಮರ ಹಾಕುತ್ತಿರುವ ಲಕ್ಷ್ಮಣ, ಶತ್ರುಘ್ನ. ಚತ್ರಿ ಹಿಡಿದಿರುವ ಭರತ. ಕಾಲ ಬುಡದಲ್ಲಿ ಪಾದಸೇವೆ ಮಾಡುತ್ತಿರುವ ಆಂಜನೇಯ.ಆ ಈ ಪಕ್ಕ ಲಂಕಾಧೀಶ ವಿಭೀಷಣ...ಸುಗ್ರೀವಾದಿ ಕಪಿವೀರರು....! ಇದನ್ನು ಫ್ಯಾಮಿಲಿ ಫೋಟೊ ಅನ್ನದೆ ಇನ್ನೇನೆಂದು ಕರೆಯೋಣ? ಭಾರತದ ಆದ್ಯಂತ ರಾಮ ಪೂಜಿತನಾಗುವುದೇ ಹೀಗೆ. ರಥದ ಮೇಲೆ ಕೂತು ಧನುಸ್ಸನ್ನು ಬಾಗಿಸಿ , ಬಾಣವನ್ನು ಯಾವುದೋ ಅಜಾತ ವೈರಕ್ಕೆ ಗುರಿಹೂಡಿ ನಿಂತಿರುವ ರಾಮ ಇತ್ತೀಚಿನ ಕಲ್ಪನೆ ! ಶ್ರೀ ರಾಮನನ್ನು ಹೀಗೆ ನಾನು ಕಲ್ಪಿಸಲೇ ಆರೆ. ಪತ್ನಿ, ತಮ್ಮಂದಿರು, ಗೆಳೆಯರು, ಆಳುಕಾಳುಗಳೊಂದಿಗೆ ಪೂಜೆ ಕೈಗೊಳ್ಳುವ ರಾಮ ನನ್ನ ದೃಷ್ಟಿಯಲ್ಲಿ ನಿಜವಾದ ಅರ್ಥದಲ್ಲಿ ಒಂದು ಕುಟುಂಬ ದೈವ. ರಾಮನ ಪೂಜೆ ಅಂದರೆ ಒಂದು ಕುಟುಂಬ ವ್ಯವಸ್ಥೆಯ ಆರಾಧನೆ!ಗಂಡ-ಹೆಂಡತಿ-ಮಗುವಿನ ಆಧುನಿಕ ವಿಭಿಜಿತ ಕುಟುಂಬವಲ್ಲ ಇದು!ತಮ್ಮಂದಿರು, ನಾದಿನಿಯರು, ಸೇವಕರು, ಗೆಳೆಯರು ಎಲ್ಲ ಒಟ್ಟಿಗೇ ನಗುನಗುತ್ತಾ ಸ್ಮಿತವದನರಾಗಿ ಒಗ್ಗೂಡಿರುವ ಅವಿಭಾಜ್ಯ ಕೂಡುಕುಟುಂಬ! ಈ ಕುಟುಂಬ ವಾನರ ಜಾತಿಯ ಆಂಜನೇಯ ಸುಗ್ರೀವರನ್ನು ಒಳಗೊಳ್ಳುತ್ತದೆ. ರಾಕ್ಷಸ ಮತದ ವಿಭೀಷಣನನ್ನೂ ಒಳಗೊಳ್ಳುತ್ತದೆ. ಭಲ್ಲೂಕ ಮತದ ಜಾಂಬವನಿಗೂ ಇಲ್ಲಿ ಗೌರವಾನ್ವಿತ ಸ್ಥಾನವಿದೆ.ಅಂದರೆ ರಾಮನ ಮನೆಯಲ್ಲಿ, ಮನೆಯ ಖಾಸಗಿ ಫಟದಲ್ಲಿ ಅಯೋಧ್ಯೆ ಮಾತ್ರ ಇಲ್ಲ. ಕಿಷ್ಕಿಂಧ, ಮತ್ತು ಸ್ವರ್ಣ ಲಂಕೆಯೂ ಇವೆ.ಆರ್ಯ, ದ್ರಾವಿಡ, ಗುಡ್ಡಗಾಡಿನ ಸಂಸ್ಕ್ರುತಿ ಎಲ್ಲ ಇವೆ. ಅದಕ್ಕೇ ಇದು ಆಕಾಶವನ್ನು ಒಳಗೊಂಡ ಆಲಯ ಅಂತ ಮತ್ತೆ ಮತ್ತೆ ನನಗೆ ಅನ್ನಿಸುತ್ತದೆ.ವಸುಧೈವಕ ಕುಟುಂಬ ಅಂದರೆ ಇದೇ ಇರಬಹುದೇ? ಬೇರೆ ಬೇರೆ ಸಮಾಜಗಳನ್ನು, ಬೇರೆ ಬೇರೆ ಜಾತಿಧರ್ಮಗಳನ್ನು ಒಪ್ಪಿಡಿಯಲ್ಲಿ ಹಿಡಿಯುವ ಹಸನ್ಮುಖಗಳ ಒಂದು ಅವಿಭಾಜ್ಯ ಕುಟುಂಬ! ರಕ್ತ ಸಂಬಂಧಿಗಳನ್ನು ಮಾತ್ರವಲ್ಲ , ಗೆಳೆಯರು , ಆಳು ಕಾಳುಗಳನ್ನೂ ಒಂದೇ ಪಂಕ್ತಿಯಲ್ಲಿ ಆಲಂಗಿಸಿಕೊಳ್ಳುವ ಕುಟುಂಬ ವ್ಯವಸ್ಥೆ!


ಬೇರೆ ದೇವರುಗಳ ದೇವಾಲಯಗಳಲ್ಲಿ ಇಂಥ ಚಿತ್ರವನ್ನು ನಾನು ನೋಡಿಲ್ಲ! ಗರ್ಭಾಂಕಣದಲ್ಲಿ ಪ್ರಧಾನ ದೈವ ಮಾತ್ರ ಆರಾಧಿತವಾಗುತ್ತದೆ ; ಪೂಜಾಕೈಂಕರ್ಯಗಳನ್ನು ಕೈಗೊಳ್ಳುತ್ತದೆ.ವಿಷ್ಣು ದೇವಾಲಯಗಳಲ್ಲಿ ಮೂರ್ತಿಯ ಎದೆಯಲ್ಲಾದರೂ ಲಕ್ಷ್ಮಿಯ ಸನ್ನಿಧಾನವಿರುತ್ತದೆ. ಲಿಂಗಾಕಾರಿಯಾದ ಶಿವನಂತೂ ನಿಜಕ್ಕೂ ಏಕಾಂಗಿ! ಗರ್ಭಾಂಕಣದ ಹೊರಗೆ ಮನೆಯ ಪೋರ್ಟಿಕೋದಲ್ಲಿ ಪಾರ್ಕ್ ಮಾಡಿರುವ ವಾಹನದಂತೆ ಬಸವಣ್ಣ ಕೂತಿದ್ದಾನೆ! ಅದು ಮನೆಯೊಳಗೆ ಮನೆಯೊಡೆಯ ಇದ್ದಾನೆ ಎಂಬುದಕ್ಕೆ ಗುರುತು!....ಏಕದೇವೋಪಾಸನೆಗೆ ರಾಮದೇವಾಲಯಗಳು ಒಂದು ಸಾಂಕೇತಿಕ ಅಸಮ್ಮತಿ ತೋರಿದ ಹಾಗೆ ಇವೆ. ಪುರಿಯ ಜಗನ್ನಾಥನ ಗುಡಿಯಲ್ಲಿ ಬಲರಾಮ, ಕೃಷ್ಣ, ಸುಭದ್ರೆಯರ ಪೂಜೆ ಒಟ್ಟಿಗೇ ನಡೆಯುತ್ತಿದೆ! ಅದನ್ನು ನೋಡಿ ನನಗೆ ನಿಜಕ್ಕೂ ಸಂತೋಷವಾಯಿತು. ಅಣ್ಣ -ತಮ್ಮ -ತಂಗಿ..ಈ ಸೋದರ ಪ್ರೇಮದ ಆರಾಧನೆ ಮೆಚ್ಚಬೇಕಾದ್ದೆ! ರಾಮನ ಗುಡಿಯಲ್ಲಿ ಇಡೀ ಕುಟುಂಬವೇ ಆರಾಧ್ಯದೈವವಾಗಿರುತ್ತಾ, ಬಹಳ ಹಿಂದೆಯೇ ಒಂದು ಹೊಸ ಮೌಲ್ಯವನ್ನು ನಮ್ಮ ಹಿರೀಕರು ಎತ್ತಿಹಿಡಿದಿದ್ದಾರೆ! ಅಣ್ಣ ತಮ್ಮಂದಿರ ಜಗಳವೇ ಮುಖ್ಯ ಸಂಘರ್ಷದ ವಿಷಯವಾಗಿರುವ ಮಹಾಭಾರತದ ಕಥೆ ನೆನಪಾಗುತ್ತಿದೆ. ಪಾಂಡವರು ಕೌರವರು ಹೀಗೆ ಒಟ್ಟಿಗೇ ಆರಾಧಿತವಾಗುವ ಚಿತ್ರ ಅನೂಹ್ಯವಾದುದು. ಇಂಥ ಚಿತ್ರವೊಂದನ್ನು ಕುಮಾರವ್ಯಾಸಭಾರತದಲ್ಲಿ ಕೃಷ್ಣನೇನೋ ಒಂದು ಕನಸು ಎಂಬ ಹಾಗೆ ನಮ್ಮ ಕಣ್ಣಮುಂದೆ ಚಿತ್ರಿಸುತ್ತಾನೆ! ಉದ್ಯೋಗ ಪರ್ವದಲ್ಲಿ ಅಂಥ ಒಂದು ಚಿತ್ರ ಬರುತ್ತದೆ. ಅದು ಕರ್ಣಭೇದನ ಸಂದರ್ಭ.ಒಂದು ವೇಳೆ ಕರ್ಣ ಪಾಂಡವರ ಪಕ್ಷಕ್ಕೆ ಬಂದರೆ ಪಾಂಡವರು ಹಿರಿಯಣ್ಣ ಎಂದು ಅವನನ್ನು ಗೌರವಿಸುತ್ತಾರೆ. ದುರ್ಯೋಧನ ಕರ್ಣನ ಪ್ರಾಣ ಮಿತ್ರನಾದ ಕಾರಣ ಅವನು ರಾಜ್ಯವನ್ನು ಕರ್ಣನಿಗೇ ಒಪ್ಪಿಸುತ್ತಾನೆ. ಕುರುಕ್ಷೇತ್ರ ಯುದ್ಧವೇ ನಡೆಯುವುದಿಲ್ಲ. ಆಗ ಅವರೆಲ್ಲಾ ಒಟ್ಟಿಗೇ ಕೂತ ಚಿತ್ರ ಹೇಗಿರುತ್ತದೆ?

ಕೃಷ್ಣ ವರ್ಣಿಸುತ್ತಾನೆ :


ಎಡದ ಮೈಯಲಿ ಕೌರವೇಂದ್ರರ

ಗಡಣ. ಬಲದಲಿ ಪಾಂಡುತನಯರ

ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು

ನಡುವೆ ನೀನೋಲಗದಲೊಪ್ಪುವ ಕಡುವಿಲಾಸವ ಬಿಸುಟು ಕುರುಪತಿ

ನುಡಿಸೆ ಜೀಯ ಹಸಾದವೆಂಬುದು ಕಷ್ಟನಿನಗೆಂದ

ಕೃಷ್ಣ ಕೊಡುವ ಈ ಕನಸಿನ ಚಿತ್ರ ಕರ್ಣನಿಗೆ ಅಪ್ರಿಯವಾದುದು. ಕೃಷ್ಣ ಕೂಡ ಈ ಕನಸು ಒಡೆಯಲಿಕ್ಕೇ ಹೊರಟವನು. ಅದು ಬೇರೆ ವಿಷಯ . ಆದರೆ ನನ್ನ ಮನಸ್ಸಿಗೆ ಹಿಡಿಸಿದ್ದು ಈ ಚಿತ್ರ ಮತ್ತು ರಾಮನ ಕುಟುಂಬಚಿತ್ರಕ್ಕೂ ಇರುವ ಸಾಮ್ಯ ಮತ್ತು ವೈಷಮ್ಯದ ಹೊಳಹು.ಮಹಾಭಾರತ ಇಂಥ ಒಂದು ಚಿತ್ರ ಅಸಾಧ್ಯ ಎನ್ನುತ್ತದೆ. ಏಕೆಂದರೆ ಯಾವುದೇ ಗದ್ದುಗೆಯಲ್ಲೂ ಇಬ್ಬರು ಕೂಡಲು ಅಸಾಧ್ಯ ಎನ್ನುತ್ತದೆ ಮಹಾಭಾರತ. ರಾಮಾಯಣ ಒಂದು ಗದ್ದುಗೆಯಲ್ಲಿ ನಾವೆಲ್ಲಾ ಒಟ್ಟಿಗೇ ಮಂದಸ್ಮಿತದೊಂದಿಗೆ ಆಸೀನರಾಗುವುದು ಸಾಧ್ಯ ಎನ್ನುತ್ತದೆ.


ಹಾಗೆ ನೋಡಿದರೆ ರಾಮನಿಗೆ ಗದ್ದುಗೆ ಅನಿವಾರ್ಯ ಎನ್ನಿಸಿಯೇ ಇಲ್ಲ. ಭರತನಿಗೆ ಎಷ್ಟು ಸುಲಭವಾಗಿ ಗದ್ದುಗೆಯನ್ನು ಬಿಟ್ಟುಕೊಟ್ಟು ವನವಾಸಕ್ಕೆ ಅವನು ಸಿದ್ಧನಾಗುತ್ತಾನೆ! ಹದಿನಾಲಕ್ಕು ವರ್ಷದ ಅವಧಿಯಲ್ಲಿ ಒಮ್ಮೆಯಾದರು ಸೀತೆಯಾಗಲೀ ರಾಮನಾಗಲಿ ಅಯೋಧ್ಯೆಯ ರಾಜಕಾರಣದ ಬಗ್ಗೆ ಚಿಂತಿಸುವುದಿಲ್ಲ. ಮಹಾಭಾರತದಲ್ಲಿ ಪಾಂಡವರನ್ನು ನೋಡಿ...!ಸದಾ ಅವರಿಗೆ ಹಸ್ತಿನಾವತಿಯ ಗದ್ದುಗೆಯದೇ ಚಿಂತೆ. ಸದಾ ಕಾಡುವ ಬೆಂಕಿಯ ನೆನಪು ಅದು. ಅದಕ್ಕೆ ಕೊಂಚ ಬೂದಿ ಮುಸುಕಿದರೂ ಅದನ್ನೂದಿ ಊದಿ ಗಾಳಿ ಹಾಕುವ ದ್ರೌಪದಿ!ಈ ಗಾಳಿಬೆಂಕಿಯ ಅಪವಿತ್ರ ಮೈತ್ರಿಯನ್ನು ಅದೆಷ್ಟು ಕೀರ್ತಿಸುತ್ತದೆ ಮಹಾಭಾರತ. ರನ್ನನ ಗದಾಯುದ್ಧ ಹೇಳುತ್ತದೆ: ದ್ರೌಪದಿ ಬೆಂಕಿಯ ಮಗಳು. ಭೀಮ ಗಾಳಿಯ ಮಗ. ಅವರಿಬ್ಬರೂ ಕೂಡಿದಾಗ ಕೌರವ ವಂಶವನ್ನು ದಹಿಸದೆ ಬಿಡುತ್ತಾರೆಯೇ? ದಾಂಪತ್ಯಕ್ಕೆ ಎಂತಹ ವಿಷಮ ರೂಪಕ. ಮನುಕುಲದ ತಂದೆ ತಾಯಿ ನಾವು ಆಗೋಣ ಎಂದು ಆಧುನಿಕ ಕನ್ನಡ ಕಾವ್ಯ ಹಪಹಪಿಸುತ್ತಿದೆ. ಮನುಕುಲದ ನಾಶ ಮಾಡುವ ಗಾಳಿಬೆಂಕಿಯ ಸಂಗಮ ನಾವಾಗೋಣ ಎಂದು ರನ್ನನ ಮಹಾಭಾರತದ ನಾಯಕ ನಾಯಕಿ ಆಶಿಸುತ್ತಾರೆ!


ರಾಮಾಯಣದ ಭರತನ ಬಗ್ಗೆ ಯೋಚಿಸೋಣ. ಎಂಥ ಮಹಾತ್ಮ ಅವನು! ಅಣ್ಣ ಬಿಟ್ಟುಕೊಟ್ಟರೂ ಗದ್ದುಗೆ ತನಗೆ ಬೇಡ ಅನ್ನುವವನು ಅವನು. ಗದ್ದುಗೆಯಮೇಲೆ ಅಣ್ಣನ ಪಾದುಕೆಗಳನ್ನು ಇಟ್ಟು ಪೂಜಿಸಿದವನು.ಇದು ಆದಿಪುರಾಣದ ಬಾಹುಬಲಿಯ ನಿಲುವಿಗಿಂತ ಭಿನ್ನವಾದುದು! ನನಗೆ ಗದ್ದುಗೆ ಬೇಡ, ಪ್ರಜಾಪರಿಪಾಲನೆಗೆ ಗದ್ದುಗೆಯ ಅಗತ್ಯವಿಲ್ಲ ಎನ್ನುತ್ತಾನೆ ಭರತ! ತನ್ನ ತಾಯಿ ಸಿಂಹಾಸನ ತನಗೆ ದೊರಕಿಸಲು ಮಾಡಿದ ಎಲ್ಲ ಯತ್ನಗಳಿಗೂ ಭರತನೇ ಪ್ರಥಮ ವಿರೋಧಿ! ಆಧುನಿಕ ಭಾರತದಲ್ಲಿ ಅಪರೂಪ ಅಲ್ಲವೇ ಇಂಥ ದೃಶ್ಯ?ತಾಯಿ ತಂದೆ ಮಕ್ಕಳಿಗೆ ಅಧಿಕಾರದ ಹಸ್ತಾಂತರವನ್ನು ಮಾಡಲಿಕ್ಕೆ ಎಂತೆಂಥಾ ರಾಜಕೀಯ ಚದುರಂಗದಾಟದಲ್ಲಿ ತೊಡಗುವುದಿಲ್ಲ ಈವತ್ತು? ಅಧಿಕಾರವನ್ನು ಧಿಕ್ಕರಿಸಿ ಹೊರಡುವ ರಾಮ , ಗದ್ದುಗೆ ಕೈನಿಲುಕಿನಲ್ಲಿದ್ದರೂ ಅದರ ಕಡೆ ಕಡೆಗಣ್ಣೂ ಹಾಯಿಸದ ಭರತ ಬಹಳ ದೊಡ್ಡ ಮೌಲ್ಯಗಳನ್ನು ಪ್ರತಿನಿಧಿಸುವಂತಿದ್ದಾರೆ!


ಕುಟುಂಬಸಂಘಟನೆ ರಾಮಾಯಣ ಎತ್ತಿಹಿಡಿಯುವ ಮೌಲ್ಯವಾಗಿದೆ. ಕುಟುಂಬ ವಿಘಟನೆ ಅನಿವಾರ್ಯವೆನ್ನುವುದನ್ನು ಮಹಾಭಾರತ ಧ್ವನಿಸುತ್ತಿದೆ. ಮಹಾಭಾರತದಲ್ಲಿ ಕೃಷ್ಣನಿಗೆ ನಡೆಯುವುದು ಅಗ್ರಪೂಜೆ.ಒಬ್ಬನನ್ನೇ ಒಂದು ಗದ್ದುಗೆಯಲ್ಲಿ ಕೂಡಿಸಿ ನಡೆಸುವ ಆರಾಧನೆ. ರಾಜಸೂಯಯಾಗದಲ್ಲಿ ಎಂತೆಂಥ ಉತ್ಪಾತಗಳಿಗೆ ಈ ಅಗ್ರಪೂಜೆ ಕಾರಣವಾಯಿತು ನೋಡಿ! ಪೂಜಾಗೃಹದಲ್ಲೇ ಕೃಷ್ಣನ ವೈರಿಯಾದ ಶಿಶುಪಾಲನ ಕೊಲೆಯೇ ಆಗಿಹೋಯಿತು! ಆ ಶಿಶುಪಾಲ ಮತ್ಯಾರೂ ಅಲ್ಲ. ಕೃಷ್ಣನ ಸೋದರತ್ತೆಯ ಮಗ. ಇಡಿ ಮಹಾಭಾರತವೇ ಬಂಧುವಿನಾಶದ ಕಥೆಯಾಗಿದೆ. ಕುರುಕ್ಷೇತ್ರದಲ್ಲಿ ಕೂಡ ಹೊರಗಿನವರು ಯಾರೂ ಇಲ್ಲ. ಅಲ್ಲಿ ನಂಟರು ಪರಸ್ಪರ ಹೊಡೆದಾಡಿಕೊಂಡು ಸತ್ತಿದ್ದಾರೆ. ಹಿರಿಯರ, ತಾಯಿ ತಂದೆಯರ, ಗುರುಗಳ ಮಾತನ್ನು ಅಲ್ಲಿ ಹೊಸಪೀಳಿಗೆಯ ಜನ ಕೇಳುತ್ತಿಲ್ಲ. ದುರ್ಯೋಧನ ತನಗೆ ತೋರಿದ್ದನ್ನೇ ಮಾಡುವವನಾಗಿದ್ದಾನೆ. ತಂದೆ ತಾಯಿ ಅಜ್ಜ ಗುರು ಯಾರ ಮಾತನ್ನು ಕೇಳಿದ್ದರು ಯುದ್ಧದ ವಿನಾಶ ತಪ್ಪುತ್ತಿತ್ತು!


ಪಿತೃವಾಕ್ಯಪರಿಪಾಲನೆ ಎನ್ನುವುದು ರಾಮನಿಗೆ ಅನುಲ್ಲಂಘನೀಯವಾದ ಜೀವ ಮೌಲ್ಯವಾಗಿದೆ. ತಾಯಿಯ ಬಗ್ಗೆ ಅವನಿಗೆ ಅದೆಂಥಾ ಗೌರವ. ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಶ್ರೇಷ್ಠವಾದುದು ಅನ್ನುವವನು ಅವನು.ಕುಟುಂಬ ಎನ್ನುವ ವಿಶ್ವವನ್ನು ರಾಮಪ್ರಜೆ ಕೈವಾರಿಸುತ್ತದೆ. ಹಾಗೇ ವಿಶ್ವ ಎನ್ನುವ ಕುಟುಂಬವನ್ನು. ಅದಕ್ಕೇ ರಾಮ ಎಂದರೆ ಆಲಯವನ್ನು ಹೊಕ್ಕ ಆಕಾಶ ಎನ್ನುತ್ತೇನೆ ನಾನು! ರಾಮನದು ಬದ್ಧವ್ಯಕ್ತಿತ್ವ ಎನ್ನಲಾರೆ! ರಾಮನದು ಮೌಲ್ಯಬದ್ಧ ವ್ಯಕ್ತಿತ್ವ ಎನ್ನುತ್ತೇನೆ. ಅದಕ್ಕೆ ವಿರುದ್ಧವಾಗಿರುವ ರಾಮಜೀವನದ ಎಳೆಗಳನ್ನು ಈಗ ಪುನರ್ನೇಯ್ಗೆಗೆ ಒಳ ಪಡಿಸಿ ಪುರುಷೋತ್ತಮ ತತ್ವವನ್ನು ಮತ್ತೆ ಈ ಕಾಲಕ್ಕೆ ತಕ್ಕ ರೂಪಕವಾಗಿ ಕಡೆದುಕೊಳ್ಳ ಬೇಕಾಗಿದೆ.


ನನ್ನ ಅಳಿಲು ರಾಮಾಯಣದಲ್ಲಿ ರಾಮ ತನಗೆ ಸೇತುಬಂಧನ ಕಾರ್ಯದಲ್ಲಿ ಸಹಕರಿಸಿದ ಅಳಿಲಿನ ಪ್ರೀತಿಗೆ ಸೋತು ನಿನಗೆ ಬೇಕಾದ ವರ ಕೇಳು ಕೊಡುತ್ತೇನೆ ಅನ್ನುತ್ತಾನೆ. ಆಗ ಅಳಿಲುಮರಿ ನೀನು ನನ್ನ ಜೋಡಿ ಕಬಡಿ ಆಡುತ್ತೀಯ ಎಂದು ಕೇಳುತ್ತದೆ! ರಾಮ ಆಗ ನಕ್ಕು ಆಹಾ ಎಂಥಾ ಬೇಡಿಕೆ...ಎನ್ನುತ್ತಾ ತನ್ನ ಬತ್ತಳಿಕೆ ಬಿಲ್ಲು ಲಕ್ಷ್ಮಣನಿಗೆ ಹಿಡಿದುಕೊಳ್ಳಲು ಕೊಟ್ಟು ಅಳಿಲಿನೊಂದಿಗೆ ಕಬಡಿ ಆಡಲು ಸಿದ್ಧನಾಗುತ್ತಾನೆ! ಬಿಲ್ಲು ಬಾಣ ಮೈಯಿಂದ ಇಳಿಸಿದಾಗ ಎಷ್ಟು ಹಗುರ ಆಗುತ್ತದೆ ಅವನಿಗೆ . ಆಹಾ ಈಗ ಹಗುರಾಯಿತು ಅನ್ನುತ್ತಾನೆ. ಕೋದಂಡವನ್ನು ಕೆಳಗಿಟ್ಟು ಅಳಿಲನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ರಾಮ ನನ್ನ ಆದರ್ಶವಾಗಿದ್ದಾನೆ!


ರಾಮನ ಫೋಟೋದಲ್ಲಿ ಈಗ ಒಂದು ಖಾಲಿಬಿದ್ದ ಜಾಗವಿದೆ.ಅದು ಶ್ರೀರಾಮನ ಹೆಗಲು. ಆ ಹೆಗಲಿನ ಮೇಲೆ ಹಾವಿನ ಹೆಡೆಯ ಹಾಗೆ ಬಾಗಿರುವ ಕೋದಂಡದ ಕೊಂಕು ಕಾಣುತ್ತಿದೆ. ಫೋಟೋಗ್ರಾಫರ್ ಹೇಳುತ್ತಾನೆ. ಸರ್...ದಯವಿಟ್ಟು ಆ ಬಿಲ್ಲನ್ನು ತೆಗೆದು ಕೆಳಗಿಡಿ...ಅಲ್ಲಿ ಈ ಪುಟ್ಟ ಅಳಿಲುಮರಿ ಕೂಡಿಸಿಕೊಳ್ಳಿ...!


ಕುಟುಂಬಪೂಜೆಯ ಮೂರ್ತರೂಪವಾದ ರಾಮಸಂಸಾರದ ಪರ್ಯಾಯ ಪ್ರತೀಕವಾಗಿ ಈಗ ನಮ್ಮ ಭಾರತದ ಚಿತ್ರವನ್ನು ದಯವಿಟ್ಟು ಕಲ್ಪಿಸಿಕೊಳ್ಳಿ. ನಡುವೆ ತಾಯಿ ಭಾರತಿ. ಮಕ್ಕಳು ಮೊಮ್ಮಕ್ಕಳು ಬಂಧುಗಳು ಬಳಗದವರು ಬೀಗರು ಬಿಜ್ಜರು ಹೊರದೇಶದ ಅತಿಥಿಗಳು...ಸ್ವಲ್ಪ ನಗಿ ಪ್ಲೀಝ್...ಇದು ಸರ್ವ ಜನಾಂಗದ ಶಾಂತಿಯ ತೋಟ...ಇದೇ ನಮ್ಮ ಗ್ರೂಪ್ ಫೋಟೋದ ಶೀರ್ಷಿಕೆ ಕೂಡ...

4 comments:

 1. ನಮಸ್ಕಾರ, ಈ ಬರಹ, ಅನೇಕ ಪೌರಾಣಿಕ ಪಾತ್ರಗಳ ಬಗ್ಗೆ ಈ ಹಿಂದೆ ಒಮ್ಮೆಯೂ ಕಾಣದಿದ್ದ ಹೊಸ ಹೊಳಪನ್ನು ಕಂಡ ಹಾಗಾಯಿತು. ತುಂಬಾ ನವಿರಾದ ಬರಹ.

  ಬೆಂಕಿಗಾಳಿ ಸಂಗಮದ ರೂಪಕದ ಕಲ್ಪನೆಯಂತೂ ಮನಸ್ಸಿಗೆ ತುಂಬಾ ನಾಟಿತು.

  ನನ್ನಿ,
  ಸುನಿಲ.

  ReplyDelete
 2. ಮಹಾಕಾವ್ಯಗಳಾದ ರಾಮಾಯಣ,ಮಹಾಭಾರತಗಳಿಗಿರುವ ವ್ಯತ್ಯಾಸವನ್ನು ತುಂಬಾ ಸರಳವಾಗಿ ಮನ ಮುಟ್ಟುವಂತೆ ಚಿತ್ರಿಸಿದ್ದೀರಿ ಸರ‍್.
  ರಾಮಾಯಣ ಮೌಲ್ಯಯುತ ಜೀವನ ಹೇಗಿರಬೇಕೆಂಬ ಪಾಠ ಹೇಳುತ್ತದೆ.ಅದರಲ್ಲಿ ರಾಮ,ಭರತ,ಲಕ್ಷ್ಮಣ,ಸೀತೆ,ಹನುಮಂತ,ಒಳ್ಳೆಯತನದ ಪ್ರತೀಕವಾದರೆ,ರಾವಣ,ಕುಂಭಕರ್ಣಾದಿಗಳು ಕೆಡುಕಿನ ಸಂಕೇತವೆನಿಸುತ್ತಾರೆ.
  ಮಹಾಭಾರತ ಮಾನವರ ಮನೋಭಾವನೆಗಳ ವಾಸ್ತವ ಚಿತ್ರಣ ನೀಡುತ್ತದೆ.ಇಲ್ಲಿ ಒಳಿತು,ಕೆಡುಕು ಎರಡು ಭಾವಗಳು ಎಲ್ಲ ಪಾತ್ರಗಳ ಮೂಲಕ ಅನಾವರಣಗೊಳ್ಳುತ್ತದೆ.
  ಹೀಗೆ ರಾಮಾಯಣ ಆದರ್ಶವಾದರೆ,ಮಹಾಭಾರತ ವಾಸ್ತವವೆಂಬುದು ನನ್ನ ಅಭಿಪ್ರಾಯ ಸರ‍್.

  ReplyDelete
 3. ನಮಸ್ಕಾರ ಸರ್,
  ನಿಮ್ಮ ಬರಹಗಳನ್ನು ಓದುತ್ತಿದ್ದರೆ ಸಾಹಿತ್ಯ ತರಗತಿಯಲ್ಲಿ ಕೂತಿರುವಂತೆ ಅನಿಸುತ್ತಿದೆ. ನನ್ನ ಅರಿವಿನ ಪರಿಧಿ ವಿಸ್ತರಿಸುವ ನಿಮ್ಮೀ ಪರಿಗೆ ವಂದನೆಗಳು, ಧನ್ಯವಾದಗಳು.

  ReplyDelete
 4. tumba sogasaada lEkhana. ee angle nalli tumba kadime jana yochane maaDirthaare bahusha. Ramayana , Mahabharathada comparision chennagide. Rama maryaada purshothama, aadru sari seethena agni parikshe maadiddu sariya sir? eeglu kelvrge Seetha anno hesridoke anjkobeku haagagide nodi. ommomme, tumba besara aadaga nammanthaha hennu makklu ankoLode heege, aa seetha mathige tapplilla kashTa naavenu maha antha...
  heege bareyuthiri.

  ReplyDelete