Saturday, August 1, 2009

ಉತ್ತರಾಯಣ


ಬತ್ತಿ ಸುಟ್ಟು, ಎಣ್ಣೆ ತೀರಿ, ಉದ್ವಿಗ್ನದೀಪ ನಿಷ್ಪಂದ ಶಾಂತ.
ಮತ್ತೆ ಬತ್ತಿ ಪೋಣಿಸಿ, ಎಣ್ಣೆ ರೆಡಿಮಾಡಿ, ದೀಪ ಹಚ್ಚಿಟ್ಟಾಗ
ಖಾಲಿ ಗೋಡೆಯ ನಡುವೆ ಒಂದು ನಿಶ್ಶಬ್ದ ನಿರುಂಬಳ ನಗೆ.
ದೀಪಶಿಖಿಯಿಂದೇಳುತ್ತಿದೆ ಸುರುಳಿ ಸುರುಳಿ ಕಪ್ಪು ಹೊಗೆ

ಕಣ್ಣಿಂದ ನೀರು ಸುರಿಯುತ್ತೆ ತನಗೆ ತಾನೇ, ಗಂಟಲಲ್ಲಿ
ಬೆಂಕಿ ಉರಿಯುತ್ತೆ ತನಗೆ ತಾನೇ, ಶುರುವಾಗಿದೆ ಬಟ್ಟಂಬಯಲಲ್ಲಿ
ನಿರಂತರ ನೆಪ್ಪಿನ ನಾಟಕ...ಶಬ್ದದ ಹಂಗಿಲ್ಲದ ಮಾತು;
ಬಣ್ಣದ ಹಂಗಿಲ್ಲದ ರೂಪು; ಗಾಳಿಯ ಹಂಗಿಲ್ಲದ ಉಸಿರಾಟ.

ಈಗ ನನ್ನ ನಾಟಕದಲ್ಲಿ ನಾನೇ ಅಭಿನೇತೃ, ನಾನೇ ಪ್ರೇಕ್ಷಕ.
ನೋಡುತ್ತಿದ್ದೇನೆ ನನ್ನನ್ನ ನಾನೇ...ಮುಗಿಲಿಲ್ಲದೆ ಮಳೆ ಸುರಿಯುತ್ತಿದೆ...
ಗಾಳಿಯಿಲ್ಲದೆ ಸೆರಗು ಹಾರುತ್ತಿದೆ...ಚಂದ್ರನಿಲ್ಲದ ಬೆಳದಿಂಗಳಲ್ಲಿ
ನಗುತ್ತಿದ್ದಾಳೆ ನನ್ನಾಕೆ-ಯಾವ ಗುರಿಯೂ ಇಲ್ಲದ ಕಟ್ಟಾ ಖಾಸಗಿ ನಗೆ.

ಕನ್ನಡಿಯಾಚೆ ಪ್ರತಿಬಿಂಬ...ಹಿಡಿಯಲು ಕೈ ಚಾಚಿದರೆ
ಅಡ್ಡನಿಂತಿದೆ ಬೂತಗನ್ನಡಿ...ಕನ್ನಡಿಯನ್ನು ಒಡೆಯುವಂತಿಲ್ಲ
ಪ್ರತಿಬಿಂಬವನ್ನು ಹಿಡಿಯುವಂತಿಲ್ಲ...ಕನ್ನಡಿಯ ಸುತ್ತಾ
ಕತ್ತಲು...ಕನ್ನಡಿಯೊಳಗಿದೆ ಬೆಳಕು -ದೀಪದ ಕಣ್ಣು ಧಿಗ್ಗನುರಿಯುತ್ತ.ಪಶ್ಚಿಮವಾಹಿನಿಯಲ್ಲಿ ನಡುಹಗಲ ಬಿಸಿಲಲ್ಲೂ ತಣ್ಣಗೆ
ಕೊರೆಯುವ ನದಿ. ಮೆಲ್ಲಗೆ ಕಾಲೂರಿ ನದಿಗಿಳಿದಾಗ
ಗದಗುಟ್ಟುತ್ತಿದೆ ಇಡೀ ಶರೀರ...ಗಂಟು ಬಿಚ್ಚಿ
ಕುಡಿಕೆಯಲ್ಲಿದ್ದ ಕನಕಾಂಬರಿ, ಮಲ್ಲಿಗೆ ತೆಗೆದು ಮೆಲ್ಲಗೆ

ಅಲೆಯ ಮೇಲಿಟ್ಟಾಗ ಹೊತ್ತುಕೊಂಡೊಯ್ಯುತ್ತಿವೆ
ಹೆಗಲಬದಲಾಯಿಸುತ್ತ ಓಡೋಡಿ ಬರುವ ಅಲೆ.
ಬೆಳ್ಳಗೆ ಹುಡಿ ಹುಡಿ ಮೂಳೆತುಂಡ
ಕನಸೊಡೆಯದಂತೆ ಮೆಲ್ಲಗಿಳಿಸಿ ನಿದ್ದೆಗೆ
ನೀರಲ್ಲಿ ಡಬಕ್ಕನೆ ಅದ್ದಿದರೆ ತಲೆ, ಬರೀ ಕತ್ತಲೆ

ಕಿವಿಯೊನ್ನೊತ್ತುವ ಪ್ರವಾಹದ ಸದ್ದು. ತಿರುಗಿ
ತಲೆ ಎತ್ತಿದಾಗ ಕಡಲ ಕಡೆ ಯಾನ ಹೊರಟಿವೆ
ಅಸಂಖ್ಯ ಪುಟ್ಟ ಪುಟಾಣಿ ಹಾಯಿ ದೋಣಿ. ತನ್ನ ಗುರಿಯತ್ತ
ಹರಿವ ಹೊಳೆಯಲ್ಲಿ ಮೆಲ್ಲಗೆ
ಕರಗುತ್ತಾ ಕರಗುತ್ತಾ....


ಕಣ್ಣಿದೆ; ಕಾಣಿಸುತ್ತಿಲ್ಲ. ಕಿವಿಯಿದೆ; ಕೇಳಿಸುತ್ತಿಲ್ಲ.
ನಾಲಗೆಯಿದೆ; ನುಡಿಯುತ್ತಿಲ್ಲ. ನೀನಿದ್ದೀಯ-ಇಲ್ಲದ ಹಾಗೆ.
ಕ್ರಿಯಾಹೀನ ಕಾರ್ಯವ್ಯವಸ್ಥೆಯ ಮುಚ್ಚಿಟ್ಟ ಸಂಪುಟವೇ...
ನೀನು ತೆರೆದ ಕಣ್ಣಿಂದ ಮತ್ತೆ ನೋಡಬಹುದೆಂದು ಕಾಯುತ್ತಿರುವೆ.

ಯಾರೋ ಪರದೆ ಎಳೆಯುತ್ತಿದ್ದಾರೆ. ಮುಗಿಯಿತು ಸ್ವಾಮಿ ನಾಟಕ.
ನೀವಿನ್ನು ಹಿಡಿಯಿರಿ ಮನೆ ದಾರಿ. ಅಕ್ಕ ನೀನಿದ್ದಾಗಲೇ
ಬೆಕ್ಕು ಕೊಂಡು ಹೋಯಿತು. ನಾಕೂ ಮಂದಿ ಮಕ್ಕಳು, ಸೊಸೆಯಂದಿರು,
ಪಾಣಿಗ್ರಹಣ ಮಾಡಿದ ಪತಿ ಸುತ್ತಾ ನಿಂತಿರುವಾಗಲೇ ಹೋಗಿಬಿಟ್ಟೆ!

ಬಿದ್ದು ಹೋಗಿತ್ತು ಕಾಲು. ಕಾಲಕ್ಕಿಲ್ಲವೇ ಇಲ್ಲ ಕಾಲಿನ ಮರ್ಜಿ.
ಮಣ್ಣಲ್ಲಿ ಮೈಯೂರಿದ ಮೇಲೆ ಇದ್ದಲ್ಲೇ ವಿಶ್ವವಿಭ್ರಮಣೆ.
"ಏಳಿ ಊರು ಬಂತು" ಎಂದು ಹೇಳಲೇ ಇಲ್ಲ ನೀನು.
ನನಗೂ ಮೈಮರೆವೆ. ಅರ್ಧ ಪಂಚೆ ಸುತ್ತಿಕೊಂಡು ಹೆಂಡತಿ ಹೊರಟಾಗ ಹೊರಕ್ಕೆ,
ಗಂಡನಿಗಿನ್ನೂ ಮರಣಾಂತಿಕ ನಿದ್ದೆ.ಬಾ ಬಾ ಕಪ್ಪು ಹಕ್ಕಿಯೇ...ನಿನಗೆ ಯಾವತ್ತೂ ಹೀಗೆ
ಅನ್ನವಿಟ್ಟು ಕಾಯ್ದಿರಲಿಲ್ಲ. ಆತಂಕದಿಂದ ಕುದಿಯುತ್ತಿದ್ದಾರೆ
ನೆರೆದ ಹತ್ತೂ ಸಮಸ್ತರು.
ಒಲ್ಲೆನೆನ್ನ ಬೇಡ...ಹೀಗೆ ನಿಷ್ಕರುಣೆಯಿಂದ ತಲೆಯೊನೆಯ ಬೇಡ.
ಕುಪ್ಪಳಿಸಿ ಕುಪ್ಪಳಿಸಿ ಹತ್ತಿರ ಬಂದು ಮತ್ತೆ ಮತ್ತೆ ಹಿಂದಕ್ಕೆ ಜಿಗಿಯ ಬೇಡ.

ಎಷ್ಟು ಕೂರಾಗಿದೆಯಲ್ಲ ನಿನ್ನ ಕಣ್ಣು. ಯಾವುದೋ ಘನಂದಾರಿ ಪಾರ್ಟಿ
ಯೆಂದು ಸುಳ್ಳು ಬಗುಳಿ ತಡವಾಗಿ ಬಂದಿದ್ದುಂಟು ಮನೆಗೆ. ಸದ್ಯ ನಿನಗೆ
ನಿದ್ದೆ ಬಂದಿದ್ದರೆ ಸಾಕು. ಮೆಲ್ಲಗೆ ಕಾರಿಂದಿಳಿದು ಬಂದಾಗ ಬಾಗಿಲಿಗೆ
ಕೂತೇ ಇದ್ದೀಯ ನೀನು ಕುರ್ಚಿಯಲ್ಲಿ ತೂಕಡಿಸುತ್ತಾ

ಟೀವಿಯಲ್ಲಿ ತನ್ನ ಪಾಡಿಗೆ ತಾನು
ನಡೆದಿದೆ ಅಳುಬುರುಕ ನಾಟಕ. ಕಣ್ಣಲ್ಲಿ ಹೀಗೆ ಚೂರಿ
ಬಚ್ಚಿಡಬಾರದು. ಬಾ ಬಾ ಕಪ್ಪು ಹಕ್ಕಿಯೇ...ಹೊಟ್ಟೆಕುದಿಯೊಂದಿಗೆ
ನಿನಗಾಗಿ ಕಾಯುತ್ತಿದ್ದೇವೆ...ಕ್ಷಮಿಸಿ ಸರ್ವಾಪರಾಧವನ್ನ ಮುಟ್ಟು ಮಿಟ್ಟಿಗೆ ಅನ್ನ.ನಿರುಪಯುಕ್ತ ನಿನ್ನೀ ದೇಹ. ತಿನ್ನಲಿಕ್ಕಿಲ್ಲ, ಉಣ್ಣಲಿಕ್ಕಿಲ್ಲ
ಕೊಡಲಿಕ್ಕಿಲ್ಲ, ಪಡಲಿಕ್ಕಿಲ್ಲ. ಯಕೃತ್ತಿನ ವಿಕೃತಿಗೆ
ತುತ್ತು ಇಡೀ ಒಡಲು. ರಸಸರಸ್ಸಾಗಿ ಉನ್ಮುಖಸುಖೋನ್ಮಾದದಲ್ಲಿ
ತೇಲಿಸಿ ಮುಳುಗಿಸಿ ಸುಳಿಸುತ್ತಿ ತಳಕ್ಕೆಳೆದ ಇದೇ ದೇಹ ಈಗ
ತತ್ತರಸುವಡಿಗೆ ವ್ಯರ್ಥ ಭಾರ.ಅಲ್ಲಲ್ಲ...
ನಿನ್ನ ಒಡಲೀಗ ಸೇವಾಕಾರ್ಯಕ್ಕೆ ತೆರೆದ
ಪವಿತ್ರಕ್ಷೇತ್ರ; ಮೆಲ್ಲಮೆಲ್ಲಗೆ ಕಾಲೊತ್ತುವೆ..ಕಣ್ಣಲ್ಲಿ
ತೇಲಿಹೋಗುವ ಕ್ಷಣನೆಮ್ಮದಿ ಅಲೆ ಹುಟ್ಟಿಸಿದ್ದೇ ಈ ಕೈಯ ಕೈಂಕರ್ಯ
ಇಗೋ ಹಿಡಿದ ತೊಡೆಯ ಸ್ನಾಯುಗೆ ನಿಷ್ಕಾಮದಿಂದ ಮೂವೊತ್ತಿಮೆತ್ತಿ

ಮೃದುವಾಗಿ ಆಡಿಸುವೆ ಕೈ, ಹಾಯೆನಿಸಿ ನಿರಾಳವಾಗುವ ಉಸಿರಾಟವಾಲಿಸುತ್ತಾ.
ಸ್ಪೂನಲ್ಲಿ ಗುಟುಕು ಗುಟುಕು ಗಂಜಿಯೂಡಿಸುತ್ತಾ ತುಟಿಯೊದ್ದೆಯಲ್ಲಿ ಮೆಲ್ಲಗೆ
ಅರಳಿ ಬಾಡುವ ನಗೆಯೆಸಳು ನೋಡುವೆ. ನಿರುಪಯುಕ್ತವಲ್ಲ ಈ ದೇಹ.
ಸೇವಾಯೋಗಕ್ಕೆ ಈಗಷ್ಟೇ ನನ್ನಿಷ್ಟದೈವ ತೆರೆದ ಸೇವಾಕ್ಷೇತ್ರ. ಮೆಲ್ಲಗೆ

ಬಿಗಿಮಾಡಿ ತಿರುಪು, ವೀಣೆಯೆತ್ತಿ ತೊಡೆಮೇಲಿಟ್ಟು, ನಿಧಾನ ಮಿಡಿದಾಗ ತಂತಿ,
ತುಟಿ ಮಧ್ಯೆ ಸದ್ದಿಲ್ಲದೆ ತಲೆಯೆತ್ತುವ ನಿರಾಕಾರ ಓಂಕಾರವಾಲಿಸುವೆ ಕಿವಿಗೊಟ್ಟು.ಕೈಯಲ್ಲಿದೆ ಹತ್ತು ವರ್ಷಗಳ ಹಿಂದೆ ತೆಗೆಸಿದ್ದ ಫೋಟೊ.
ಕೇಮರಾ ಎಂದರೆ ಮೊದಲಿಂದಲೂ ವಿಚಿತ್ರ ಭಯ ನಿನಗೆ.
ನಗುತ್ತಿದ್ದಾಕೆ ಸಹಜ ಇದ್ದಕ್ಕಿದ್ದಂತೆ ಗುಮ್ಮಾಗಿದ್ದೀ.
ಸ್ಮೈಲ್ ಪ್ಲೀಸ್ ಅಮ್ಮಾ...ಬಲವಂತವಾಗಿ ಎಳೆದು ತಂದ

ನಗುವಿನ ಮಸ್ಲಿನ್ ಫರದೆ ಕ್ಷಣಾರ್ಧದಲ್ಲಿ ಕೆಳಕ್ಕೆ
ಜಾರಿ ಮತ್ತದೇ ಜೋಲು ಮುಖ...ಈಗ ಕೋತಿ ಕುಣಿಯುತ್ತಾನೆ
ಕೊನೆ ಮಗ...ತಾಯಿದೇವಿ ಕೇಮರಾ ಮರೆತು ಥಟ್ಟನೆ ನಕ್ಕದ್ದು
ಶಾಶ್ವತ ಉಳಿದು ಬಿಟ್ಟಿದೆ ತೊಳೆದಿಟ್ಟ ಫಟದಲ್ಲಿ

ಸತ್ತಮೇಲೆ ಸತ್ತವರ ಫಟದ ಅರ್ಥವೇ ಬದಲಾಗಿ ಹೋಗಿ
ದೆ ಶಿವಶಿವಾ! ಹಳೆಯ ಹಕ್ಕಿ ಹಾರಿ ಹೊಸದೊಂದು ಹಕ್ಕಿ ಫರ್ರನೆ
ಎಗರಿ ಬಂದು ಕೂತಿದೆ ಕಟ್ಟಿನ ಮೇಲೆ, ಈಗ ಬಿಟ್ಟೂ ಬಿಡದ ಮಳೆ. ಕಾಲ ಕೆಳಗೆ
ನಡೆದಾಡುವ ರೋಡಲ್ಲೇ ತಣ್ಣಗೆ ಹರಿದುಹೋದಂತೆ ಅಂಕುಡೊಂಕು ಹೊಳೆ.ಆವತ್ತು ಮಳೆಮಿಂಚಿನಿರುಳು.ಯಾವತ್ತಿನಂತೆ
ಹೋಗಿತ್ತು ವಿದ್ಯುತ್ತು.ತೊಯ್ದು ತೊಪ್ಪಡಿಯಾಗಿ
ಮನೆಗೆ ಬಂದಾಗ ಏನೇನೂ ಕಾಣುತ್ತಿಲ್ಲ.
ಹೇಗೊ ಬಾಗಿಲ ತೆಗೆದು ಒಳಗೆ ಬಂದೆ .

ಕತ್ತಲ ಮುಸುಕಲ್ಲಿ ಸೋಫಕುರ್ಚಿಗಳೆಲ್ಲ ಗಪ್ಪುಚುಪ್ಪು.
ಇನ್ನು ಕಡ್ಡಿಪೆಟ್ಟಿಗೆಗಾಗಿ ದರಿದ್ರ ಪತ್ತೆದಾರಿ
ಹಾಳಾದದ್ದು ಸಿಗಲಿಲ್ಲ.
ಸಿಡಿಮಿಡಿ.
ರಜ ಎಂದು ಮಕ್ಕಳಿಗೆ
ಸಂಜೆಯೇ ಹಿಡಿದಿದ್ದೆ
ಚಿತ್ರದುರ್ಗದ ರೈಲು.
ಚಡಪಡಿಕೆ ಈಗ.
ಹೋಗಿದ್ದರಾಗಿತ್ತು ನಾಳೆಯೋ ನಾಡಿದ್ದೊ...
ಅಥವ ಮುಂದಿನ ವಾರ.
ಕದ್ಡಿಪೆಟ್ಟಿಗೆಗಾಗಿ ತಡಕಾಟ ನಡೆದೆ ಇದೆ.

ಅರೆ ಅರೆ! ಅಡುಗೆ ಮನೆ ಕಿಡಕಿಯಲ್ಲಿಡುತ್ತಿದ್ದೆಯಲ್ಲವೆ ಅದನ್ನ?
ಅಲ್ಲೆ ಕೆಳಗಡೆ ಹಣತೆ.
ಕಡ್ಡಿಗೀರಿದೆ.

ದೀಪವಷ್ಟೇ ಮೊದಲು ಕಂಡದ್ದು

ಆಮೇಲೆ ತಡವಾಗಿ

ಪ್ಲಾಸ್ಕು
ಬಿಸಿ ಅಡುಗೆ
ಕಾಸಿದ ಹಾಲು
ಹಾಳು ಕಳಕಳಿ ಅಕ್ಕರಾಸ್ತೆ ಕವಿತೆಯ ಸಾಲು.ಇದು ಹರಳ ಬಳೆ. ಹವಳದ ಹಾರವಿದು. ಇದು
ಚೈನು. ವಂಕಿಯುಂಗುರವಿದು. ಇದು ಸವೆದು ಮಾಸಿದ ಕಾಲ್ಗೆಜ್ಜೆ.
ಇದು ಹರಿದ ಮುತ್ತಿನ ಹಾರ. ಇವು ಚೂರು ಪಾರು
ಮುರಿದಾಭರಣ ತುಣುಕು. ಹಂಚಿಬಿಡಿ ಸೊಸೆಯರಿಗೆ.

ಇದು ಧಾರೆ ಸೀರೆ. ಇದಿದೆಯಲ್ಲಾ ಇದು ಮಗ ಮದುವೆಗುಡಿಸಿದ್ದು.
ಇದು ಹೊಸಮನೆಯ ಗೃಹಪ್ರವೇಶದಲ್ಲಿ ಬಂದದ್ದು
ತೌರಿಂದ. ಇದು ನಿಮಗೂ ಗುಟ್ಟು ಬಿಟ್ಟು ಕೊಡದೆ
ಕಾಸಿಗೆ ಕಾಸು ಕೂಡಿಕ್ಕಿ ಕೊಂಡ ನಕ್ಕಿ ಮಿರುಗಿನ ತಿಳಿ ಗುಲಾಬಿ

ಜರತಾರಿ ಪತ್ತಲ. ಈ ಎಲ್ಲ ಕಳಚಿ ಬೆತ್ತಲೆ ನಿಂತ
ನಿರಾಭರಣ ಸುಂದರಿ ನಾನು. ಜಗ್ಗುವ ಬೊಜ್ಜು. ಜೋತು
ಸುಕ್ಕಿದ ಮೊಲೆ. ಬತ್ತಿದ ನಿತಂಬ. ಮೈ ಮುಚ್ಚ
ಲಾರದ ಅರೆನರೆ ಬೆರೆತ ಕುರುಚಲು ಮುಡಿ.

ಬಾ ಬಾ ತಿರುಗುಣಿ ಹಲ್ಲು ಹೀರಿ ಉಗಿದ ಕಬ್ಬೇ ಎನ್ನುತ್ತಾ ತಬ್ಬಿ ಎಳೆದಾಗ
ತೂಗುಮಂಚಕ್ಕೆ, ಒದ್ದೆ ಕಣ್ಣಿಗೆ ಉಪ್ಪುಪ್ಪು ಮುದ್ದು. ನಿಧಾನ ಬೆನ್ನ ಮೇಲೆ
ಕೈ ಆಡಿಸುತ್ತಾ ಬತ್ತಿದ ತೊರೆಯನ್ನೊತ್ತಿಕೊಳ್ಳುತ್ತೇನೆ
ಎದೆಗೆ. ಇಂಗಿದ ಇಮ್ಮುಖೀ ಹೊಳೆಗೀಗ ಜಿನುಗುವ ನಾಲಕ್ಕು ನೀರ್ಗಣ್ಣು.

೧೦

ಒಂಬತ್ತು ತಿಂಗಳು ಸಾಕು ಮತ್ತೆ ಹುಟ್ಟಲಿಕ್ಕೆ.
ಹನ್ನೆರಡು ತಿಂಗಳಾದವು ನೀನು ಹೋಗಿ ಗೊತ್ತೇ ಇಲ್ಲದ
ಪರಸ್ಥಳಕ್ಕೆ. ಬಂದಿರಬೇಕಲ್ಲ ಮತ್ತೆ ಮೂರು ತಿಂಗಳ ಚಿಗುರಾಗಿ
ಯಾರೋ ಉತ್ತ ನೆಲಕ್ಕೆ?
ಕಿಟಕಿಯಲ್ಲಿಣುಕುವ ದಾಸವಾಳವೇ? ಕಣಗಿಲೆ ಮೇಲೆ ಸರಸರ ಹರಿವಳಿಲೆ?

ವಿನಾಕಾರಣ ದೀಪ ಸುತ್ತುವ ಪತಂಗವೇ? ಎಳೆಗಂದಮ್ಮನ ತುಟಿಯಂಚಲ್ಲಿ
ಜಿನುಗುವ ಜೊಲ್ಲುನಗೆಯೇ? ಎಲ್ಲಿರಬಹುದೆಂದು ಹುಡುಕುತ್ತಿದ್ದೇನೆ
ನಿನ್ನಕ್ಕರೆಯ ಆಲಿಬಿಂದು. ನಡೆಯುತ್ತಿದೆ ಕೊನೆಯಿರದ ಪತ್ತೇದಾರಿ.
ಉರಿಯುವ ನಂದಾದೀಪದ ಕತ್ತಲ್ಲಿ ಸುಡುಸುಡುತ್ತೇರುತ್ತಿರುವ

ಎಣ್ಣೆಯ ಮೇಲ್ಮುಖೀ ಬೆಂಕಿಗುಟುಕು ನೀಲಾಂಜನದ ಕುತ್ತಿಗೆಗಲ್ಲದೆ ತಿಳಿಯದು
ಮತ್ತಾರಿಗೂ.

೧೧

ಊದುಬತ್ತಿಯ ಬಳ್ಳಿ ಕೇವಲ ಕಂಪಾಗಿ ಕರಗಿ ಹೋಯಿತೆ ಗಾಳಿಬಯಲಲ್ಲಿ?
ರಪ ರಪ ರಾಚಿದ ಜರಡಿಮಳೆ ತೇವ ತೇಲಿಸಿ ಮೇಲೆ ಮಣ್ಣಲ್ಲಿಂಗಿ ಹೋಯಿತೆ?
ತಣ್ಣೀರಲ್ಲಿ ಮೀಹಕ್ಕಿಳಿದ ಅಗ್ನಿಪಿಂಡದ ದಾಹ
ತಣಿದು ತೇಲಿತೇ ಕೊಳದ ಮೇಲೊಂದು ಬೆಳಕಿನ ಹೆಣ?

೧೨

ಮರವೆತ್ತಿದೆ ತನ್ನ ಅಷ್ಟೂ ಬೋಳು ಕೈ ಆಕಾಶಕ್ಕೆ
ಕ್ಷಣ ಕ್ಷಣಕ್ಕೆ ದೂರ ದೂರ... ಅಂಗೈಯಗಲದ ಗಾಳಿಪರವಶ ಮೋಡ-
ರಾಮಗಿರಿಯಿಂದಲಕೆಗೂ ನಿಲುಕದೆ, ಹಿಮಾಲಯದ, ಗಸಗಸ ಮಸೆದ ಕಲಶಕ್ಕೆ,
ಯಾರೋ ಎಸೆದ ವಿಚ್ಛಿದ್ರ ಕಣ್ಣೊದ್ದೆ ಕರವಸ್ತ್ರ.

೧೩

ಕಣ್ಮುಚ್ಚಿದಾಗ ನೀನು.... ಪಕ್ಕೆಯಲ್ಲಿ ಬಚ್ಚಿಟ್ಟುಕೊಂಡಿದ್ದ
ರೆಕ್ಕೆಗಳ ಛಕ್ಕನೆಳೆದು ಹೊರಕ್ಕೆ
ಶೂನ್ಯಕ್ಕೆಗರಿ ಹಾರಿಯೇ ಹೋಯಿತು
ಹುಣ್ಣಿವೆಗಿಂಡಿ ಕಚ್ಚಿದಾಕಾಶಪಕ್ಷಿ.

ಕಣ್ಮುಚ್ಚಿದಾಗ ನೀನು.... ನೆಲದಾಯಿ ಕೆಚ್ಚಲ ಸಾಲು
ಪಾತಾಳದಾಳಕ್ಕೆ ಬೊಕ್ಕ ಬೋರಲೆ ಬಿದ್ದು ಗೋಧೂಳಿಯಲ್ಲಿ
ಮಣ್ಣಲ್ಲಿ ಮಣ್ಣು.

ಕಣ್ಮುಚ್ಚಿದಾಗ ನೀನು...ಓತಪ್ರೋತ ನುಗ್ಗುತ್ತಿದ್ದಾ
ವೇಶಿತ ನದಿ ನದ ಹಳ್ಳವೆಲ್ಲ
ಸುಯ್ಯೆಂದರೆಕ್ಷಣದಲ್ಲಿಂಗಿ ಹೋದವು
ಕಾದ ಕಾವಲಿ ಎಣ್ಣೆಗಿಮಟು ನೆಲದಲ್ಲಿ.

ನೀನೆಳೆದಾಗ ಕೊನೆಯುಸಿರು...
ನೆಲವನ್ನಾವರಿಸಿ ಬಳಸಿದ್ದ
ಗಾಳಿಸೀರೆಯು ಜಾರಿ
ನಿಷ್ಕಂಪವಾಯಿತಡಿಗಿಳಿದಿದ್ದ ಜೋಲು ಮುಡಿ.

ಸಂಜೆಯುರಿಲಿಂಗಕ್ಕೆ
ನಿಗಿ ನಿಗೀ ತಾರೆಮರದೆತ್ತರದ ಪ್ರಣತಿಯಲಿ
ಕೊನೆಸುತ್ತಿನಾರತಿಯನ್ನೆತ್ತಿ
ಉಳಿದದ್ದು ಕೊನೆಗೆ ಉರಿಗಣ್ಣ ರೆಪ್ಪೆಗೆ ಕಪ್ಪು.

ಪಂಚಭೂತದ ಪಿಂಡ ಮತ್ತೆ ಅಲುಗುತ್ತುಂಟು
ಈಗಷ್ಟೆ ಹುಟ್ಟಿ
ಕಣ್ತೆರೆವ ಕೂಸಿನ ಜೋಡಿ
ತಿರುಗಿ ಹುಟ್ಟುವ ವೃತ್ತರೂಪೀ ಚಲನಕ್ಕೆ.

೧೪

ಆಗಿತ್ತು
ಕಣ್ಣು ನಕ್ಷತ್ರಗೂಡು. ಬಾನಾಡಿ ಬಂದು ನೆಲೆಸುವುವು ಇಲ್ಲಿ ಒಂದು ಕ್ಷಣ
ನಿಮಿಷ ನಿಮಿಷದ ನಡುವೆ ಅನಿಮಿಷತೆ

ಎತ್ತಿಕೊಡು ಮಧುಪಾತ್ರೆ
ಹೊಂಡದಲ್ಲಿ ಅಲೆಯ ಒತ್ತಡಕ್ಕೆ ತೊನೆದಾಡುತ್ತಿವೆ
ದುಂಬಿಗಳ ಭಾರಕ್ಕೆ ತಾವರೆಯ ಮೊಗ್ಗು.
ಹಿಂದೆ ಅಕಾಶ
ತೆರೆದ ಕಿಡಕಿಗೆ ಫರದೆ
ಜಗ್ಗಿದರೆ ಬಗ್ಗುವುದು ಭೂಮಿಗೇ ಬೆಳ್ದಿಂಗಳಿನ ರೆಂಬೆ
ಉದುರುವುವು ಸೂಜಿಮಲ್ಲಿಗೆ ನಿನ್ನ ತುರುಬಿಂದ

ಹೊಸಹಸಲೆ ಗುಂಗುರಿನ ಸ್ಪ್ರಿಂಗು
ತೊಡೆನಡುವೆ ಹೊತ್ತುರಿವ ಪಂಜು
ಒಂದೊಂದು ಕೇಶಕ್ಕು ವಿದ್ಯುತ್ತಿನಾವೇಶ
ಆಳುವೇಳುವ ಸ್ನಿಗ್ಧಲೀಲೆ
ಮೈಯೋ ಒಂದು ತೆರೆದಿಟ್ಟ ಮಧುಶಾಲೆ
ಎಲ್ಲ
ಕೆಲವೇ ಕ್ಷಣಕ್ಕೆ ಮುಗಿದು

ದೇಹಗಳಾಗ ಗಂಧರ್ವರೀಸಾಡಿ ಹೋದ ಜೋಡಿಕೊಳ.

೧೫

ಪ್ಲೀಜ್ ಕಣ್ಮುಚ್ಚಿ ನೀವು. ಬಟ್ಟೆಬಿಚ್ಚಲಿಕ್ಕಿದೆ.
ಕಿಸಿದ ಲಂಗದ ಮೇಲೆ ಹೊಚ್ಚ ಹೊಸ ಸೀರೆ.
ಹೊಂಬಣ್ಣ ಚುಕ್ಕಿ ಮೈತುಂಬ ಗರಿ ಗರಿ ಬೇರೆ
ಮೊದಲಿಂದಲೂ ಅಷ್ಟೆ ಸುಳಿಗೆ ಬೈತಲೆ ಓರೆ.

ಬೆನ್ನ ಹಿಂದಿನ ಹುಕ್ಕು ಹಾಕಿ ಬಿಡಿ ಮತ್ತೆ. ಬಿಚ್ಚುವುದು
ಸುಲಭ-ಹಾಕುವುದಲ್ಲ ನೆನಪಿಡಿ. ಅಗೊ ಅಗೋ
ಅಲ್ಲಿಗೇಕೋಡುತ್ತೆ ಈ ಪೋಲಿ ಕೈ?
ಕಡಿವಾಣವೇ ಇಲ್ಲ ಕುದುರೆಗೆ.ಈಗೀಗ

ಮೈ ಕಾದ ಕಾವಲಿ. ತಲೆಯೊ ಸಿಡಿಮಿಡಿ ಸ್ಟೌ.
ಹೆಕ್ಕತ್ತು ಬೆಂಕಿ ಜಾರ್ಬಂಡೆ. ಆಳಕ್ಕಿಳಿದ ಕಣ್ಣು
ಕಾಫಿಬಸಿ ಇಂಗುತ್ತಿರುವ ಬೋಸಿ. ಉಸಿರು
ಬಿಸಿಯೋಡಲ್ಲಿ ಹಾಯುವ ಹಬೆ.

ಅನಾಮತ್ತೆತ್ತಿ ಅದ್ದಿಬಿಡಿ ಯಾವುದಾದರೂ
ತಣ್ಣನೆ ಹೊಳೆಯಲ್ಲಿ.

೧೬

ಅದೇನು ಭಾರ ಶರೀರ. ನಿಧಾನ...ನಿಧಾನ..
ಹಾಗೆ ಹಾಗೇ ಹಿಡಿದುಕೊಳ್ಳುತ್ತೆ ತೊಡೆ. ಒತ್ತೊತ್ತಿ ಬರುತ್ತೆ ಉಸಿರು.
ಇಡೀ ಒಡಲ ತುಂಬಿ ಹೊರಕ್ಕುಕ್ಕುತ್ತಿದೆ ನೋವು. ತುಟಿಯೊಣಗುತ್ತ
ಗಂಟಲಾರುತ್ತ, ಉರಿಗೊಳ್ಳಿ ಇಕ್ಕಟ್ಟಿನಲ್ಲಿ ಭಗಭಗ ಬೇಗೆ.

ಬಿಟ್ಟುಬಿಡಿ. ಬಿಟ್ಟುಬಿಡಿ ನನ್ನ. ಒತ್ತಿ ಬರುತ್ತಿದೆ ನಿದ್ದೆ.
ಮುಚ್ಚುತ್ತಿವೆ ತಮಗೆ ತಾವೇ ಕಣ್ಣು. ಬರುತ್ತೀನಿನ್ನು.
ಝಾಡಿಸಿ ಗಂಟು ಗಂಟು ಮೆತ್ತೆ, ಬರೀಬೆತ್ತಲು
ಮೈಚಾಚುವೆ ಮಣ್ಣಲ್ಲಿ. ಬೆಳಗಾಗದಿರಲಿನ್ನು ಮತ್ತೆ.

೧೭

ಕೊನೆಕೊನೆಗೆ ಮಣ್ಣೆಂದರೇನು ಮೋಹವೊ ನಿನಗೆ
ಮೆಲ್ಲಗೆ ಕಾಲೆಳೆಯುತ್ತ ಹೋಗಿ ಹಿತ್ತಲಿಗೆ ಕುರ್ಜಿಗೆ ಸಮೇತ
ಒದ್ದೆ ನೆಲ ಕುಕ್ಕುತ್ತ ಗಸಗಸ ಉಸಿರಿಕ್ಕುತ್ತ
ಕೈ ಸಾಗದಿದ್ದಾಗಲೂ ನಡೆಯಲೇಬೇಕು ಕೈತುಂಬ ಕೈಂಕರ್ಯ.

ಮುಷ್ಠಿ ತುಂಬ ಮುಚ್ಚಿಟ್ಟುಕೊಂಡ ಬಣ್ಣ ಬಣ್ಣದ ಬೀಜ
ತದೇಕಚಿತ್ತೇಕಾಗ್ರತೆಯಿಂದ ಧ್ಯಾನಿಸುತ್ತ ಮಂಕು ಕಣ್ಣಲ್ಲಿ
ಮೆಲ್ಲಗೆ ಬದಮಾಡಿ ಮಣ್ಣಲ್ಲಿ ಬಣ್ಣದ ಬಿತ್ತವ
ನ್ನೊತ್ತೊತ್ತಿ ಬಚ್ಚಿಡುತ್ತಾ ಪುಟ್ಟ ಮಗುವಂತೆ

ಒಳಗೊಳಗೇ ಕುಲುಕುಲು ನಗುತ್ತಿ. ಇದ್ಯಾವ ಬಾಲ ಲೀಲೆಯೋ
ಈ ಅಕಾಲ ಮುಪ್ಪಲ್ಲಿ! ನೀನು ಹೋದ ಮೇಲೆ
ಬೆಳ್ಮೊಳಕೆ ಬದಿಯಲ್ಲಿ ಬಗಿದು ನೋಡಿದರೆ ಫಳಕ್ಕನೆ
ಹೊಳೆಯುತ್ತವೆ ಮಂಚಗುದುಮುರುಗಿಯಲ್ಲೊಡೆದ ಹಲವಾರು ಬಳೆ ಚೂರು.

೧೮

ಇದೇನು ರೀ ..ಈಪಾಟಿ ಸುಕ್ಕು ನನ್ನೀ ಮುಂಗೈ ಮೇಲೆ?
ಕೆನ್ನೆ ಮೇಲೆ? ಜಾರು ಬಾರೆಯ ಹಣ್ಣಗಲ್ಲದಲ್ಲಿ?
ಮೊನ್ನೆ ತಾನೇ ಬಣ್ಣ ಬಳಿದ ಗೋಡೆಯ ಮೇಲೆ?
ಕೆಲಸದ ಹೆಣ್ಣು ತಿಕ್ಕಿ ತಿಕ್ಕಿ ಒರೆಸಿದ ಕಿಡಕಿ ಹರಳಿನ ಮೇಲೆ?

೧೯

ಬಿಂದಿಗೆ ಬಿಂದಿಗೆ ತಣ್ಣೀರು ಸುರಿದು ಹಣೆಯಲ್ಲಿದ್ದ
ಬಿಂದಿ ಕರಗಿ ಮುಚ್ಚಿದ ಕಣ್ಣಂಚಿಂದ ಹರಿಯುತಿದೆ ಕೆನ್ನೀರು.
ಮೂಗ ತುದಿಯಲ್ಲೊಂದು ವಜ್ರದ ನತ್ತು-ಹೊತ್ತಿಲ್ಲ ಗೊತ್ತಿಲ್ಲ-
ಹೊಳೆಯುತ್ತಿದೆ. ಆಕಾಶವಿತ್ತೆಂಬುದಕ್ಕೆ ಸಾಕ್ಷಿ ಈ ನಕ್ಷತ್ರ.

೨೦

ಮಹಡಿಗೆ ಬಂದು ನೋಡಿದರೆ ಖೋಲಿ ತುಂಬಾ
ಕುಬುಸ, ಸೀರೆ, ಬ್ರೇಜಿಯರ್ ಚೆಲ್ಲಾಪಿಲ್ಲಿ.
ಬರಿಮೈ ನದರೇ ಇಲ್ಲದೆ ಒಂದೊಂದೇ ಸೀರೆ
ಕೊಡವಿ ಕೊಡವಿ ಹುಡುಕುತ್ತಿದ್ದೀ!

ಅಯ್ಯಯ್ಯೋ..ಇದೇನು ರಾಣಾರಂಪೆಂದರೆ
ಇಲ್ಲೇ ಎಲ್ಲೋ ಇಟ್ಟಿದ್ದೆ ಎಂದು ಸಣ್ಣಗೆ ಮುಲುಕುತ್ತಿ.
ಹದಿನಾರರ ಹದಿಹಯದ ಕುಬುಸ ಬೆದಕುತ್ತಿ.
ಹಳೆಯ ಬಟ್ಟೆಗಳಲ್ಲಿ ಕಳೆದುಹೋದದ್ದೇನು ?

೨೧

ನೀನು ಹುಟ್ಟಿದ ಕ್ಷಣವೇ ಹುಟ್ಟಿಸಿದೆ ಅಮ್ಮನ್ನ
ನಗೆಮಿಂಚಿನೊಡನೆ ಸಂಚಲಿಸುವಪ್ಪನ್ನ
ಅಕ್ಕ ಅಣ್ಣಂದಿರಾಡೊಂಬಲದ ಮನೆಯನ್ನ
ಮನೆಮುಂದಿನರಳಿಮರವ ಹೆಬ್ಬಾವಂತೆ ನುಂಗುತ್ತಿರುವ

ಬಸಿರಿಮರವನ್ನ, ಹಾದಿಬದಿ ಸದಾ ಉಗ್ಗುತ್ತಿದ್ದ ಬಾಯ್ಬಡುಕಿ
ಚಚ್ಚೌಕ ಸೀನೀರ ಬಾವಿಯನ್ನ, ಯಕ್ಷಿಣಿಯ ಹಸ್ತಮುದ್ರಿಕೆಯ
ವಿಲಕ್ಷಣ ತಿರುಪಿನಂತಿರುವ ರಾಮಗಿರಿಗುಡ್ಡವನ್ನ
ಬಂಡೆಸಂದಿಗಳಿಂದ ಚಿಮ್ಮಿ ಚಾಮರವಿಕ್ಕೊ

ಹೊನ್ನೆ ಹೂ ಮರವನ್ನ, ಮರಕ್ಕೆ ಹಗ್ಗವಕಟ್ಟಿ
ಗಾಳಿತೂಗುತ್ತಿರುವ ಸಾದುಗಪ್ಪಿನ ನೆರಳ ಕೂಸುಮರಿಯನ್ನ
ಮಾಸದಿರಲೆಂದು ವರ್ಣಮಯ ಗುಡ್ಡಕ್ಕೆ ಹೊದ್ದಿಸಿದ ಹಾಗಿರುವ
ಆಕಾಶ ನೆಟ್ಟನ್ನ, ನೀನು ಹುಟ್ಟಿದ ಕ್ಷಣವೆ

ಹುಟ್ಟಿಸಿದೆ. ನೀನು ಬೆಳೆದಂತೆ ಬೆಳೆದು, ನೀನು ಕುಣಿದಂತೆ
ಕುಣಿದು, ನೀನು ನಮೆದಂತೆ ನಮೆದು, ನೀನು ನಿರಾಳ ಮಲಗಿ
ಮುಚ್ಚಿದ ಹಾಗೆ ಕಣ್ಣು, ನಿನ್ನಾ ಸಮಸ್ತ ಜಗತ್ತೂ
ನಿನ್ನೊಂದಿಗೇ ಸತ್ತು ಮುಚ್ಚಿತ್ತು ಕಣ್ಣು. ನಿನ್ನ ಜಗತ್ತಿಗಿದೋ

ನನ್ನ ಜಗತ್ತಿನ ಕೊನೆಯ ವಿದಾಯ...

೨೨

ವಿದಾಯ ಹೇಳಬಹುದೇ ಇಷ್ಟು ಸುಲಭಕ್ಕೆ ನಿನಗೆ?
ಕಣ್ಣಿಗಂಟಿದ ಕನಸೇ...ಅರಿವಲ್ಲಿಂಗಿದ ಜಿನುಗು ಬೆವರೇ
ಬಾಯೊಳಗುಳಿದ ನಾಲಗೆಯೆಂಜಲ ಮೈಲಿಗೆ ಮುತ್ತೆ...
ವಿದ್ಯುತ್ಪಾತವನ್ನ ತಂತಿಮುಖೇನ ಒಳಕ್ಕಿಳಿಸಿಕೊಳ್ಳೋ

ಒದ್ದೆಮೈ ಮಣ್ಣೆ...!ನಿನ್ನ ಮರವಾಗಲೆನ್ನ ಕೈಗೋಲು.
ಬಾಡಿಯುದುರಿದ ನಗೆಪಕಳೆಯೆನ್ನ ಉರಿಗಣ್ಣಿಗೆಣ್ಣೆ.
ಜಗುಳಿದ ಕಣ್ಣಹನಿಯೆನ್ನ ಮಣ್ಣ ಪ್ರಣತಿಯ ನಿಶ್ಚಲ ಮೂಕ ಸನ್ನೆ.
ಮೈಬೆಂಕಿ, ಆರುತ್ತಿರುವಗ್ಗಿಷ್ಟಿಕೆಯ ಕೊನೆಯ ಕೆಂಡ.

೨೩

ಅಲೆಯ ಬಲೆ ಬೀಸಿ ಯಾರಾದರೂ ಹೊಳೆಯ ಹೆಡೆಮುರಿಕಟ್ಟಿ.
ದಯಮಾಡಿ ಸೂರ್ಯಛತ್ರಿಯ ಹಿಡಿದು ಸುಡುವ ನೆತ್ತಿಗೆ ನೆರಳ ನೀಡಿ.
ಏನಾದರೂ ಮಾಡಿ, ಕಾಲಕಸ ನೆರಳನ್ನು ಬಿಸಿಲಿಂದ ಪಾರುಮಾಡಿ.
ಯಾರೊ ರಚಿಸಿದ ಕವಿತೆ ಹರಿದು ಚಲ್ಲಾಪಿಲ್ಲಿ ಆಕಾಶಪಟದಲ್ಲಿ-

ಪದ ಪಂಕ್ತಿ ಹಂಗಿಲ್ಲದೋದಿಕೊಳ್ಳಿ...

೨೪

ಛಂದಸ್ಸು ಹೇಳಿದ್ದು:

ಮಳ್ಳಿ ಮೀನಿನ ಸುತ್ತ ಒತ್ತು ನೀರಿನ ಕವಚ;
ಮಣ್ಣ ಗೋಳಕ್ಕೆ ಆಕಾಶ ಕವಚ!
ನಕ್ಷತ್ರದುಂಗುರಕ್ಕಿರುಳ ಶಾಪದ ಕವಚ;
ಲಿಂಗಕ್ಕಾಲಿಂಗನದ ನಿರ್ವಯಲ ಕವಚ!

ಶಾಂತಿರಸ್ತು

1 comment:

 1. ಪ್ರೀತಿಯ ಮಾಸ್ಟರಿಗೆ ವಂದನೆಗಳು...

  ನಿಮ್ಮ ಅನುಭಾವ ದಾಂಪತ್ಯ ಗೀತೆ ಪ್ರತಿಯೊಬ್ಬರ ಮನ ಮಿಡಿಸುತ್ತದೆ.
  ರೋಮಾಂಚಕಾರಿಯಾಗಿದ್ದೂ ಓದುಗರಲ್ಲಿ ಅನನ್ಯ ಅನುಭೂತಿ ಸೃಷ್ಟಿಸುತ್ತದೆ. ಅದ್ಭುತ...ಅತ್ಯದ್ಭುತ ಆಪ್ತ ಕಾವ್ಯ.

  ಅನಂತ ಧನ್ಯವಾದಗಳೊಂದಿಗೆ


  ಒಲವಿನಿಂದ,

  ಚಂದಿನ

  ReplyDelete