Saturday, December 19, 2009

ಗಂಭೀರ ಕವಿಯ ಹಸನ್ಮುಖ...

ತಮ್ಮ ಶ್ರೀಮದ್ಗಾಂಭೀರ್ಯ, ಬಿಗುವು, ಎಷ್ಟು ಬೇಕೋ ಅಷ್ಟು ಮಾತು, ಸಲೀಸಾಗಿ ಯಾರೊಂದಿಗೂ ಬೆರೆಯದ ಸ್ವಭಾವ-ಇವುಗಳಿಂದ ಜಿಎಸ್ಸೆಸ್ ಜೊತೆ ಸಲುಗೆ ಅಸಾಧ್ಯ ಎಂದೇ ಜನಜನಿತ ಅಭಿಪ್ರಾಯ. ಆದರೆ ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು-ಅವರ ಹಾಸ್ಯ ಮನೋಧರ್ಮ. ಈ ಹಾಸ್ಯ ಸ್ವಭಾವ ತಾವೂ ನಗುತ್ತಾ ಇನ್ನೊಬ್ಬರನ್ನೂ ನಗಿಸುವಂಥ ಸ್ವರೂಪದ್ದು. ಕೆಲವೊಮ್ಮೆ ಅವರು ತರಗತಿಯಲ್ಲೂ ಹಾಸ್ಯ ಚಟಾಕಿ ಹಾರಿಸುತ್ತಿದ್ದುದು ಉಂಟು. ಮೈತುಂಬ ಆಭರಣ ಹೇರಿಕೊಂಡು ಅಡ್ಡಾಡುತ್ತಿದ್ದ ಮಹಿಳೆಯನ್ನು ನೋಡಿದಾಗ ಅವರು ಬರೆದ ಚುಟಕ-"ಇವಳೇನು ನಾರಿಯೋ-ಒಡವೆಗಳ ಲಾರಿಯೋ?". ಒಮ್ಮೆ ಈ ಚುಟುಕ ಕ್ಲಾಸಲ್ಲಿ ಹೇಳಿ ನಮಗಿಂತ ಜೋರಾಗಿ ಅವರೇ ನಗುತ್ತಾ ಕೂತ ದೃಶ್ಯ ನನ್ನ ಕಣ್ಣಿಗೆ ಕಟ್ಟಿದೆ. ಈ ನಮ್ಮ ಗಹನ ಗಂಭೀರ ಕವಿ ಒಂದು ಕಾಲದಲ್ಲಿ ಹಾಸ್ಯಪದ್ಯಗಳನ್ನು ಬರೆಯುತ್ತಿದ್ದರು ಎಂದರೆ ಯಾರು ನಂಬುತ್ತಾರೆ? ಜಿಎಸ್ಸೆಸ್ ದಾವಣಗೆರೆ ಕಾಲೇಜಿನಲ್ಲಿ ಕನ್ನಡ ರೀಡರ್ ಆಗಿದ್ದಾಗ ಕನ್ನಡದ ಪ್ರಸಿದ್ಧ ಹಾಸ್ಯ ಸಾಹಿತಿ ನಾ.ಕಸ್ತೂರಿ ಕಾಲೇಜಿನ ಸೂಪರಿಂಟೆಂಡೆಂಟರು. ಆಗ ಅವರು ಜಿಎಸ್ಸೆಸ್ ಅವರಿಂದಲೂ ಕೆಲವು ಕನ್ನಡ ಹಾಸ್ಯ ಪದ್ಯಗಳನ್ನು ಬರೆಸುತ್ತಾರೆ. ಸಂಜೆಯಾದರೆ ಜಿಎಸ್ಸೆಸ್ ಮತ್ತು ಅವರ ಗೆಳೆಯರಾದ ಪ್ರಭುಪ್ರಸಾದರು ದಾವಣಗೆರೆಯ ಊರಾಚೆಯ ಬಯಲಿನ ಕಡೆ ತಿರುಗಾಡಲು ಹೋಗುತ್ತಿದ್ದರಂತೆ. ಅಲ್ಲಿದ್ದ ದಿಬ್ಬವೊಂದರ ಮೇಲೆ ಇಬ್ಬರೂ ಕುಳಿತು ಹರಟೆ ಹೊಡೆಯುತ್ತಿದ್ದರಂತೆ. ಇದನ್ನು ಗಮನಿಸಿದ ನಾ.ಕಸ್ತೂರಿ ಜಿಎಸ್ಸೆಸ್ ಅವರಿಗೆ ದಿಬ್ಬಯ್ಯ ಎಂದು ನಾಮಕರಣ ಮಾಡುತ್ತಾರೆ. ಕೊರವಂಜಿಯಲ್ಲಿ ಜಿಎಸ್ಸೆಸ್ ಬರೆದ ಅನೇಕ ಹಾಸ್ಯ ಪದ್ಯಗಳು ದಿಬ್ಬಯ್ಯ ಎಂಬ ನಾಮಾಂಕಿತದಲ್ಲಿ ಪ್ರಕಟವಾಗುತ್ತವೆ. ಅವುಗಳಲ್ಲಿ ಒಂದು ಓದುಗರ ಗಮನಕ್ಕಾಗಿ:


ಇಂದ್ರ ಭವನದಲಿ ಚಂದ್ರ ಮೂಡಿತೋ

ದೋಸೆ ಹಂಚಿನಲ್ಲಿ.

ಮೂಡಿತೆಂದೆಯೊ, ಮತ್ತೆ ಮುಳುಗಿತೋ

ಉದರ ಗಗನದಲ್ಲಿ!

ರಾಶಿಯವರಿಗೆ ತುಂಬ ಮೆಚ್ಚುಗೆಯಾದ ಪದ್ಯವಂತೆ ಇದು!

ಜಿಎಸ್ಸೆಸ್ ತಮ್ಮ ಅಸಮಗ್ರ ಆತ್ಮಕಥೆ ಚತುರಂಗದಲ್ಲಿ ವರ್ಣಿಸಿರುವ ಈ ಪ್ರಸಂಗವನ್ನು ನೋಡಿ: "ಒಂದು ಮಧ್ಯಾಹ್ನ ತರಗತಿ ಮುಗಿಸಿಕೊಂಡು, ಕಸ್ತೂರಿಯವರನ್ನು ನೋಡೋಣವೆಂದು ಅವರ ಕೊಠಡಿ ಪ್ರವೇಶಿಸಿದೆ. ಸಾಮಾನ್ಯವಾಗಿ ತುಂಬ ಲವಲವಿಕೆಯಿಂದ ಇರುತ್ತಿದ್ದ ಅವರು ಅಂದು ಯಾಕೋ ಸ್ವಲ್ಪ ಸುಸ್ತಾದವರಂತೆ ತೋರಿದರು. ನನ್ನನ್ನು ಕಂಡು ಬಾರಯ್ಯಾ ಬಾ, ಕ್ಲಾಸು ಮುಗೀತು ಅಂತ ಕಾಣುತ್ತೆ ಅಂದರು. ನಾನು ಹೌದು ಸಾರ್, ಯಾಕೋ ಇವತ್ತು ಸ್ವಲ್ಪ ಆಯಾಸಗೊಂಡವರಂತೆ ಕಾಣಿಸುತ್ತೀರಲ್ಲಾ? ಎಂದೆ. "ಇವತ್ತು ಬೆಳಿಗ್ಗೆಯಿಂದ ಬರೀ ಪುರಂದರ ದಾಸರ ಕೀರ್ತನೆ ಕೇಳೀ ಕೇಳೀ ಸಾಕಾಗಿದೆ ಕಣಯ್ಯ" ಅಂದರು. ನನಗೆ ಅರ್ಥವಾಗಲಿಲ್ಲ. ಅವರು ಮುಂದುವರೆಸಿದರು. "ಈಗ ಗೊತ್ತಲ್ಲ, ಫ್ರೀಶಿಪ್ಪು, ಸ್ಕಾಲರ್ ಶಿಪ್ಪು, ಡಿಸೈಡ್ ಮಾಡೋ ಕಾಲ. ಅದಕ್ಕಾಗಿ ಹುಡುಗರು ಬೆಳಿಗ್ಗೆಯಿಂದ ಬಂದು ಪೀಡಿಸುತ್ತಾ ಇದ್ದಾರೆ. ಒಬ್ಬ ಬರ್ತಾನೆ. ಸಾರ್ ರಾಮಯ್ಯನಿಗೆ ಹಾಫ್ ಫ್ರೀ ಕೊಟ್ಟಿದ್ದೀರಿ, ವೆಂಕಟಪ್ಪನಿಗೆ ಫುಲ್ ಫ್ರೀ ಕೊಟ್ಟಿದ್ದೀರಿ. ಸೋಮಣ್ಣನಿಗೆ ಸ್ಕಾಲರ್ ಶಿಪ್ ಕೊಡುವುದಾಗಿ ಹೇಳಿದ್ದೀರಿ...ನಂಗ್ಯಾಕೆ ಸಾ, ಒಂದು ಹಾಫ್ ಫ್ರೀನಾದರೂ ಕೊಡಬಾರದು?" ಹೀಗೆ ಪ್ರತಿಯೊಬ್ಬರೂ ಪುರಂದರದಾಸರ ಹಾಗೆ "ಅಜಾಮಿಳನಿಗೆ ನಾರಾಯಣ ಅಂದದ್ದಕ್ಕೆ ಒಲಿದೆ. ದ್ರೌಪದಿ ಕೃಷ್ಣಾ ಎಂದು ಕರೆದದ್ದಕ್ಕೆ ಅಕ್ಷಯ ವಸ್ತ್ರ ಕರುಣಿಸಿದೆ. ಗಜೇಂದ್ರ ಸೊಂಡಿಲೆತ್ತಿ ಕರೆದ. ಅವನಿಗೆ ಒಲಿದೆ. ನನಗ್ಯಾಕೆ ಕೃಪೆ ಮಾಡಬಾರದು?" ಇದೇ ತಾನೆ ದಾಸರ ಕೀರ್ತನೆಗಳ ಧಾಟಿ?"

ಜಿಎಸ್ಸೆಸ್ ಅವರಿಗೆ ಏಕವಚನದ ಗೆಳೆಯರು ತುಂಬಾ ಕಮ್ಮಿ. ಆ ಕಮ್ಮಿ ಜನರಲ್ಲಿ ಜಿ.ಬ್ರಹ್ಮಪ್ಪ ಒಬ್ಬರು. ಜಿಎಸ್ಸೆಸ್ ಬಿ.ಎ.ಆನರ್ಸ್ ಓದುತ್ತಿದ್ದ ಕಾಲ. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕಾಗಿ ಮೈಸೂರಿಂದ ಹಂಪೆಗೆ ಬಂದಿದ್ದಾರೆ. ಹಂಪೆಯಿಂದ ಮುಂದೆ ಅವರು ಬಾದಾಮಿಗೆ ಹೋಗಬೇಕು. ಎಲ್ಲ ಗಂಟುಮೂಟೆ ಕಟ್ಟಿ ಹೊಸಪೇಟೆಯ ರೈಲ್ವೇಸ್ಟೇಷನ್ ಗೆ ಹೊರಟಿದ್ದಾರೆ. ಸಹಪಾಠಿ ಜಿ.ಬ್ರಹ್ಮಪ್ಪನವರ ಸುದ್ದಿ ಸುಳಿವಿಲ್ಲ. ಎಲ್ಲಾ ಗಡಿಬಿಡಿಯಿಂದ ಬ್ರಹ್ಮಪ್ಪನವರಿಗಾಗಿ ಹಂಪಿಯಲ್ಲಿ ಅಲ್ಲಿ ಇಲ್ಲಿ ಪರದಾಡುತ್ತಿದ್ದರೆ ಬ್ರಹ್ಮಪ್ಪ ಯಾವುದೋ ಒಂದು ಮುರುಕು ಮಂಟಪದಲ್ಲಿ ಕೂತು ನಿಶ್ಚಿಂತೆಯಿಂದ ಏನೋ ಬರೆಯುತ್ತಿದ್ದಾರೆ. ಹೋಗಿ ಕೂಗಿದರೂ ಮಾತಡುತ್ತಿಲ್ಲ. ಎಲ್ಲರಿಗೂ ತಿಳಿಯುತ್ತದೆ. ಓಹೋ! ಬ್ರಹ್ಮಪ್ಪ ಕಾವ್ಯ ಸಮಾಧಿಯಲ್ಲಿದ್ದಾರೆ ಎಂದು. ರಾತ್ರಿ ಇವರದ್ದು ಪಟ್ಟದಕಲ್ಲಲ್ಲಿ ಬಿಡಾರ. ಜಿಎಸ್ಸೆಸ್ ಅವರ ಗೆಳೆಯರೊಬ್ಬರು ರಾತ್ರಿ ಎಲ್ಲರೂ ಕೂತು ಪಟ್ಟಾಂಗ ಹೊಡೆಯುತ್ತಿರುವಾಗ ಪ್ರಾಧ್ಯಾಪಕ ರಾಘವಾಚಾರ್ ಗೆ ಹೇಳುತ್ತಾರೆ. "ಸಾರ್ ಬ್ರಹ್ಮಪ್ಪನವರು ಒಂದು ಭಾರೀ ಕಾವ್ಯವನ್ನು ಬರೆದು ಮುಗಿಸಿದ್ದಾರೆ ಹಂಪೆಯಲ್ಲಿ. ಅದನ್ನು ಓದಲು ಹೇಳಿ ಸಾರ್" . ಆ ಪ್ರಸಂಗವನ್ನು ಜಿಎಸ್ಸೆಸ್ ವರ್ಣಿಸುವ ಕ್ರಮವನ್ನು ಗಮನಿಸಿ: " ಕೂಡಲೇ ಬ್ರಹ್ಮಪ್ಪನವರು ತಮ್ಮ ಕೈಚೀಲದಿಂದ ಒಂದು ನೋಟ್ ಬುಕ್ ತೆರೆದು, ಒಂದು ಚಿಟಕಿ ನಶ್ಯ ಏರಿಸಿ, ತಮ್ಮ ಹೊಚ್ಚ ಹೊಸ ಕಾವ್ಯವನ್ನು ಓದಲು ಸಿದ್ಧರಾದರು. ರಾತ್ರಿ ಹನ್ನೊಂದೂವರೆ ಗಂಟೆ. ನಿಶ್ಶಬ್ದವಾದ ಹಳ್ಳಿ. ಇಡೀ ಹಳ್ಳಿಯ ಮೇಲೆ ಬೆಳದಿಂಗಳು. ಆದರೆ ಕೆಳಗಿನ ಮುರುಕು ಹೆಂಚಿನ ಮನೆಯೊಳಗೆ ಉರಿಯುವ ಲಾಟೀನಿನ ಸುತ್ತಾ ಕುತೂಹಲಭರಿತರಾದ ಸಹೃದಯ ವೃಂದ. ಕವಿಗೆ ಇದಕ್ಕಿಂತ ಪ್ರಶಸ್ತವಾದ ಸಂದರ್ಭ ಬೇರೆ ಬೇಕೆ? ನಶ್ಯವನ್ನು ಮತ್ತೆ ಒಮ್ಮೆ ಮೂಗಿಗೆ ಏರಿಸಿ ಕರ್ಚೀಫಿನಿಂದ ಮೂಗೊರೆಸಿಕೊಂಡು ಶುರು ಮಾಡಿದರು ಬ್ರಹ್ಮಪ್ಪನವರು.

ಹಂಪೆಯ ಬಳಿ ಹರಿಯುತಿದೆ ತುಂಗಭದ್ರೆ

ಇದ ನೋಡಿದರೆ ನನಗೆ ಬರುವುದು ನಿದ್ರೆ

-ಎಂದು ಅವರು ತಮ್ಮ ಮಹಾಕಾವ್ಯದ ಮೊದಲೆರಡು ಪಂಕ್ತಿಗಳನ್ನು ಓದುತ್ತಲೇ, ಹಂಪೆಯಿಂದ ದೂರದ ಪಟ್ಟದಕಲ್ಲಿನ ಮುರುಕು ಮನೆಯಲ್ಲಿ ನಿದ್ರೆ ಬರುವ ಹಾಗಿದ್ದ ನಾವೆಲ್ಲಾ ಹೋ ಎಂದು ನಕ್ಕು ಪ್ರತಿಕ್ರಿಯೆಯನ್ನು ತೋರಿದೆವು. ತುಂಗಭದ್ರಾ ನದಿಯ ವರ್ಣನೆ, ಹಾಗೂ ಹಾಳು ಹಂಪೆಯನ್ನು ಕುರಿತ ಪ್ರತಿಕ್ರಿಯೆಗಳಿದ್ದ ಆ ಕಾವ್ಯ ಮುಂದೆ-


ರಾಣಿಯರ ರಾಗದ ರಾಟೆ ತಿರುವಿದ ತಾಣದಲಿ

ಕತ್ತೆಗಳು ಲದ್ದಿಯನಿಕ್ಕುತ್ತಿದ್ದವು ಸೋಗಿನಲಿ

ಎಂಬ ಚರಣಕ್ಕೆ ಬಂದ ಕೂಡಲೇ, ರಾಘವಾಚಾರ್ಯರು ಅದೇನಪ್ಪಾ ಸೋಗಿನಲಿ?- ಅಂದರೆ, 'ತಾಣದಲಿ ಅನ್ನೋದಕ್ಕೆ ಪ್ರಾಸವಾಗಿ ಬಂದಿದೆ ಸಾರ್ ಸೋಗಿನಲಿ ಅನ್ನುವುದು' ಅಂದರು ಬ್ರಹ್ಮಪ್ಪ."

ಬೆಂಗಳೂರಿನಲ್ಲಿ ಜಿಎಸ್ಸೆಸ್ ಪ್ರಾಧ್ಯಾಪಕರಾಗಿದ್ದಾಗ(೧೯೭೦ ರ ಸುಮಾರು) ಜಿಎಸ್ಸೆಸ್ ತಮ್ಮ ಸಹೋದ್ಯೋಗಿಗಳೊಡನೆ ಕರಗ ನೊಡಲಿಕ್ಕೆ ಹೋಗುತ್ತಾರೆ. ಕರಗ ಹಾದು ಹೋಗುವ ಕಬ್ಬನ್ ಪೇಟೆಯ ಎರಡೂ ಬದಿಯಲ್ಲಿ ಜನ ಜಮಾಯಿಸಿಬಿಟ್ಟಿದ್ದಾರೆ. ಜಿಎಸ್ಸೆಸ್ ಬರೆಯುತ್ತಾರೆ: " ಇಂಥಾ ಪರಿಸರದಲ್ಲಿ ನಾವೂ ಕಡಲೇ ಕಾಯಿ ತಿನ್ನುತ್ತಾ , ಲುಂಗಿ ಪಂಚೆ ಉಟ್ಟು, ಕೊರಳಿಗೆ ಮಫ್ಲರು ಸುತ್ತಿ, ಕರಗದ ಆ ಬೆಳದಿಂಗಳ ಇರುಳಿನಲ್ಲಿ ಜನಜಂಗುಳಿಯ ನಡುವೆ ಅಡ್ಡಾಡುತ್ತಾ, ಕರಗವನ್ನು ತೀರ ಹತ್ತಿರದಿಂದ ವೀಕ್ಷಿಸಲು ತಕ್ಕ ಸ್ಥಳವೊಂದರ ಸಂಶೋಧನೆಯಲ್ಲಿ ತೊಡಗಿದೆವು. ಕರಗ ಹಾದುಹೋಗುವ ಕಬ್ಬನ್ಪೇಟೆಯಿಕ್ಕಟ್ಟಿನ ಬೀದಿಯ ಎರಡೂ ಬದಿಗೆ ನಿಲ್ಲಲು ಕೂಡಾ ಸ್ಥಳವಿಲ್ಲದಂತೆ ಜಮಾಯಿಸಿದ್ದ ಜನದ ನಡುವೆ ನಿಂತರೆ, ಕೇವಲ ನಿಂತೇ ಇರಬೇಕಾದಂಥ ಸ್ಥಿತಿಗೆ ಹೆದರಿ , ಎಲ್ಲಾದರೂ ಕೂತು ನಿಧಾನವಾಗಿ ವೀಕ್ಷಿಸಲು ಸರಿಯಾದ ಸ್ಥಳ ದೊರೆತೀತೆ ಎಂದು ಅತ್ತ ಇತ್ತ ನೋಡುವಾಗ, ಕೆಲವರು ದೊಡ್ಡದೊಂದು ಏಣಿಯನ್ನು ತಂದು ಅತ್ತ ಇತ್ತ ನಿಂತ ಮನೆಗಳ ತಾರಸಿಯ ಮೇಲೆ ಜನರನ್ನು ಹತ್ತಿಸುವುದನ್ನು ಕಂಡೆವು. ಹೌದಲ್ಲ! ಈ ಏಣಿಯ ಮೇಲಿಂದ ಹೋಗಿ ಮನೆಯ ತಾರಸಿಯ ಮೇಲೆ ಕೂತರೆ ಕೆಳಗೆ ಬರುವ ಕರಗವನ್ನು , ಅದರ ಹಿಂದೆ ಮುಂದೆ ಬರುವ ಉತ್ಸವಗಳನ್ನು ಸಲೀಸಾಗಿ ನೋಡಬಹುದಲ್ಲ ಅನ್ನಿಸಿತು. ಹೋಗಿ ವಿಚಾರಿಸಿದರೆ ಏಣಿ ಹತ್ತಿ ಹೋಗಲು ಒಬ್ಬೊಬ್ಬರಿಗೆ ಕೇವಲ ನಾಲ್ಕೇ ಆಣೆ(ಇಪ್ಪತ್ತೈದು ಪೈಸೆ) ಎಂಬುದು ತಿಳಿಯಿತು. ಸರಿ, ನಾವೂ ಹಿಂದೆ ಮುಂದೆ ನೋಡದೆ , ನಾಲ್ಕು ನಾಲ್ಕು ಆಣೆ ತೆತ್ತು, ಸರಸರನೆ ಏಣಿಯ ಮೆಟ್ಟಿಲ ಮೇಲೆ ಹತ್ತಿ ಯಾರದೋ ಮನೆಯ ತಾರಸಿಯನ್ನು ತಲಪಿದೆವು! ಅದೊಂದು ವಿಸ್ತಾರವಾದ ಮೇಲುಪ್ಪರಿಗೆ. ಅದರ ತುಂಬಾ ಸಾಕಷ್ಟು ಕಸ ಧೂಳು. ಆದರೂ ಅಲ್ಲೇ ಕೂತು, ನಾವು ಕೊಂಡು ತಂದಿದ್ದ ಕಳ್ಳೇಪುರಿ ಹಾಗೂ ಕಡಲೇ ಕಾಯನ್ನು ಮೆಲ್ಲುತ್ತಾ, ಮೇಲಿನ ಆಕಾಶದಲ್ಲಿ ರಾರಾಜಿಸುವ ಪೂರ್ಣಚಂದ್ರನನ್ನೂ, ಆ ಚಂದ್ರಮಂಡಲದಿಂದ ಸುರಿಯುವ ಬೆಳದಿಂಗಳಲ್ಲಿ ಬೆಪ್ಪು ತಕ್ಕಡಿಗಳಂತೆ ಮಂಕಾಗಿ ಪಿಳಿ ಪಿಳಿ ಕಣ್ಣು ಬಿಡುವ ನಗರದ ವಿದ್ಯುದ್ದೀಪಗಳನ್ನೂ , ಕೆಳಗಿನ ಬೀದಿಯಲ್ಲಿ ಗೋಚರಿಸುವ ಜನಸಂದಣಿಯ ಚಲನವಲನವನ್ನೂ ನೋಡುತ್ತಾ ಕುಳಿತೆವು. ಆ ತಾರಸಿಯ ಅಂಚಿಗೆ ಎರಡಡಿಯ ಸಣ್ಣ ಗೋಡೆಯೊಂದು ಇದ್ದುದರಿಂದ ಯಾವುದೇ ಆತಂಕವಿಲ್ಲದೆ , ಬರುವ ಕರಗದ ದಾರಿ ಕಾಯ್ದುಕೊಂಡು, ಅದೂ ಇದೂ ಹರಟೆಹೊಡೆಯುತ್ತಾ ಕೂತೆವು." ಹೀಗೆ ಉಪ್ಪರಿಗೆಯಲ್ಲಿ ಕೂತು ಜಿಎಸ್ಸೆಸ್ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಚಿದಾನಂದ ಮೂರ್ತಿ, ಕೆ.ಮರುಳಸಿದ್ದಪ್ಪ ಮೊದಲಾದವರು ಕರಗದ ವೈಭವವನ್ನೇನೋ ಮನದಣಿಯ ಸವಿಯುತ್ತಾರೆ. ಕರಗ ದರ್ಶನ ಮುಗಿದಾಗ ರಾತ್ರಿ ಎರಡು ಗಂಟೆ ಸಮಯ. ತಾರಸಿ ಮೇಲೆ ಕೂತ ಇವರು ಈಗ ಕೆಳಗೆ ಇಳಿಯ ಬೇಕು. ಇಳಿಯಬೇಕಾದರೆ ಏಣಿಗಳು ಬೇಕು. ಆದರೆ ಅಲ್ಲಿ ಏಣಿಗಳೇ ಇಲ್ಲ. ಇವರಿಂದ ನಾಲ್ಕಾಣೆ ವಸೂಲು ಮಾಡಿ ಮೇಲಕ್ಕೆ ಹತ್ತಿಸಿದವನು ಮಂಗಮಾಯವಾಗಿಬಿಟ್ಟಿದ್ದಾನೆ. ತಾರಸಿ ಹತ್ತಿಸುವುದಕ್ಕೆ ಅವನು ಇವರಿಂದ ನಾಲ್ಕಾಣೆ ವಸೂಲು ಮಾಡಿದ್ದ. ಆಗ ಇಳಿಸುವ ಅಗ್ರೀಮೆಂಟೇನೂ ಆಗಿರಲಿಲ್ಲವಲ್ಲ! ಮುಂದೆ ಜಿಎಸ್ಸೆಸ್ ಮೊದಲಾದವರು ಹೇಗೆ ಏಣಿಯಿಲ್ಲದೆ ತಾರಸಿಯಿಂದ ಕೆಳಗಿಳಿದರು ಎಂಬುದನ್ನು ತಿಳಿಯಲು ನೀವು ಜಿಎಸ್ಸೆಸ್ ಅವರ 'ಚತುರಂಗ'ವನ್ನೇ ಓದಬೇಕು! ನಾನಂತೂ ಸಸ್ಪೆನ್ಸ್ ಉಳಿಸಲು ಬಯಸುತ್ತೇನೆ! ಜಿಎಸ್ಸೆಸ್ ಅವರ ಪ್ರವಾಸ ಕಥನದಲ್ಲೂ ಇಂಥಾ ಅನೇಕ ಹಾಸ್ಯಮಯವಾದ ವರ್ಣನೆಗಳು ಬರುತ್ತವೆ. ಜಿಎಸ್ಸೆಸ್ , ರುದ್ರಾಣಿ ಮತ್ತು ಪದ್ಮಾ ಅವರ ಜೊತೆ ಹಿಮಾಲಯ ಯಾತ್ರೆಗೆ ಹೋಗಿದ್ದಾಗ, ಯಾತ್ರಾರ್ಥಿಗಳು ಕಂಡಿವಾಲಾಗಳ ಬೆನ್ನ ಬುಟ್ಟಿಯಲ್ಲಿ ಕೂತು ಪರ್ವತವನ್ನೇರಬೇಕಷ್ಟೆ? ಜಿಎಸ್ಸೆಸ್, ರುದ್ರಾಣಿ ಮತ್ತು ಪದ್ಮಾ ಅವರು, ಮೂವರು ಕಂಡಿವಾಲಾಗಳ ಬೆಣ್ಣೇರಿ ಪರ್ವತ ಯಾನವನ್ನು ಪ್ರಾರಂಭಿಸುತ್ತಾರೆ. ಕೇದಾರದಿಂದ ನಮ್ಮ ಪಯಣಿಗರು ಕಂಡಿಗಳಲ್ಲಿ ಕುಳಿತು ಬರುತ್ತಿರುವಾಗ ತಮಗೆ ತಮ್ಮ ಶ್ರೀಮತಿಯರು ಹೇಗೆ ಕಂಡರು ಎಂಬುದನ್ನು ಜಿಎಸ್ಸೆಸ್ ವರ್ಣಿಸುತ್ತಾರೆ: "ಸ್ವಲ್ಪ ದೂರ ನಡೆದ ನಂತರ ಅಲ್ಲೊಂದು ಸರಿಯಾದ ಸ್ಥಳ ನೋಡಿ ಮತ್ತೆ ಕಂಡಿಯಲ್ಲಿ ಕೂರುವ ಸಿದ್ಧತೆ ನಡೆಸಿದೆವು. ಮೊದಲು ನಮ್ಮ ಮನೆಯವರು ಕಂಡಿಗಳಲ್ಲಿ ಕುಳಿತರು. ನಾನು ಇನ್ನೂ ಸ್ವಲ್ಪ ದೂರ ನಡೆದೇ ಹೋಗುವ ಅಪೇಕ್ಷೆಯಿಂದ ಹಿಂದೆ ಹೊರಟೆ. ಆ ಎತ್ತರದಲ್ಲಿ , ಹೊತ್ತು ನಡುಹಗಲನ್ನು ಸಮೀಪಿಸುತ್ತಿದ್ದರೂ ಚಳಿಯ ಕೊರೆತವೇನೂ ಕಡಿಮೆಯಾಗಿರಲಿಲ್ಲ. ಮೈತುಂಬ ಶಾಲು ಹೊದ್ದು, ತಲೆಗಳಿಗೆ ಉಣ್ಣೆಯ ಮಫ್ಲರುಗಳನ್ನು ಸುತ್ತಿಕೊಂಡು, ಕಂಡಿಯ ಬಿದಿರು ಬುಟ್ಟಿಯಲ್ಲಿ ಮುದುರಿಕೊಂಡು ಕೂತಿದ್ದ ನಮ್ಮ ಮನೆಯವರಿಬ್ಬರೂ ಗ್ರಾಮದೇವತೆಯರಂತೆ ವಿರಾಜಮಾನರಾಗಿದ್ದರು. ನನಗೆ ಒಂದು ಕ್ಷಣ ನಗು ಬಂತು. ನಾನು ಸಹ ಕೋಟು ತೊಟ್ಟು, ಮುಸುಕು ಟೋಪಿ ಹಾಕಿಕೊಂಡಿದ್ದರಿಂದ , ಕಂಡಿಯಲ್ಲಿ ಕೂತ ಸಮಯದಲ್ಲಿ, ಅವರ ಕಣ್ಣಿಗೆ ನಾನೂ ಏನೇನೋ ಆಗಿ ಕಾಣಿಸಲು ಸಾಧ್ಯ ಎಂದುಕೊಳ್ಳುತ್ತಾ ಹಿಂದೆ ನಡೆದೆ." ಇದು ಜಿಎಸ್ಸೆಸ್ ಅವರ ಹಾಸ್ಯ ಮನೋಧರ್ಮ. ಇನ್ನೊಬ್ಬರನ್ನು ನೋಡಿ ನಗುವಂತೆ , ತಮ್ಮನ್ನೂ ನೋಡಿ ನಗುವುದು ಸಾಧ್ಯವಾದಾಗ ಆ ಹಾಸ್ಯ ಸದಭಿರುಚಿಯ ಹಾಸ್ಯವಾಗುತ್ತದೆ. ಜಿಎಸ್ಸೆಸ್ ಅವರದ್ದು ಆ ಬಗೆಯ ಹಾಸ್ಯ ಮನೋಧರ್ಮ.