Wednesday, February 3, 2010

ಮಾಸ್ತಿಯವರ ಕಾವ್ಯ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡದ ಆದ್ಯ ಮತ್ತು ಅಭೂತಪೂರ್ವ ಕತೆಗಾರರು. ಅವರು ಗದ್ಯವನ್ನು ಬರೆಯಲಿ ಪದ್ಯವನ್ನು ಬರೆಯಲಿ ಮುಖ್ಯವಾಗಿ ನಮ್ಮ ಮನಸ್ಸನ್ನು ಸೆಳೆಯತಕ್ಕದ್ದು ಅವರ ಕಥನ ಪ್ರತಿಭೆಯೇ. ಅವರು ಮಾತಾಡುವಾಗ ಕೂಡಾ ಕತೆಗಾರಿಕೆಯ ವರಸೆಗಳೇ ಎದ್ದು ಕಾಣುತ್ತಿದ್ದವು. ಲೋಕಾಭಿರಾಮವಾಗಿ ಮಾತಾಡುವಾಗ ಇರಲಿ, ಸಭೆಗಳಲ್ಲಿ ಭಾಷಣ ಮಾಡುವಾಗಲೂ ಮಾಸ್ತಿ ಸಲೀಸಾಗಿ ಕಥನಕ್ಕೆ ಇಳಿದುಬಿಡುತ್ತಿದ್ದರು. ಹೀಗಾಗಿ ಕಥನ ಎಂಬುದು ಮಾಸ್ತಿಯವರ ಪಾಲಿಗೆ ಒಂದು ಅಭಿವ್ಯಕ್ತಿಕ್ರಮವಷ್ಟೇ ಅಲ್ಲ; ಅದು ಅವರ ಬದುಕಿನ ಅನುಸಂಧಾನದ ಮಾರ್ಗ. ಅದಕ್ಕೇ ನಾವು ಮುಖ್ಯವಾಗಿ ಹೇಳಬೇಕಾದದ್ದು ಮಾಸ್ತಿ ನೂರಕ್ಕೆ ನೂರು ಕತೆಗಾರ. ಬರೆಹ ಬದುಕು ಎರಡರಲ್ಲೂ ಕತೆಗಾರರಾಗಿಯೇ ಅವರು ಕಾಣಿಸಿಕೊಳ್ಳುತ್ತಾರೆ. ಕತೆಗಾರ ರಾಮಣ್ಣ ಎಂಬ ಅವರದೊಂದು ಉಕ್ತಿಯಿದೆ. ಆ ಮಾತು ಸ್ವತಃ ಮಾಸ್ತಿ ಅವರಿಗೇ ಹೆಚ್ಚಾಗಿ ಅನ್ವಯಿಸುತ್ತದೆ.

ಕಥೆಯ ಆಸಕ್ತಿ ಬದುಕನ್ನು ಸಂಬಂಧಿಸಿ ನೋಡುವುದರಲ್ಲಿ ಇದೆ. ವ್ಯಕ್ತಿಗಳ ಜೀವಿತ ಕ್ರಮವನ್ನು- ಪರಿಸರ , ಅವರು ಬದುಕುತ್ತಿರುವ ಸಮಾಜ, ಅವರು ನಂಬಿರುವ ಧರ್ಮ, ತತ್ವ, ಮತ್ತು ಜೀವನಾದರ್ಶಗಳೊಂದಿಗೆ ತಳುಕು ಹಾಕಿ ಮಾಸ್ತಿ ನೋಡುವುದರಿಂದ ಆಂಗ್ಲಕವಿ ಚಾಸರನಂತೆ ಮಾಸ್ತಿಯೂ ಒಬ್ಬ ಜೀವನ ವಿಜಾನಿಯಾಗಿದ್ದಾರೆ.(ಚಾಸರ್ ಒಬ್ಬ ಜೀವನ ವಿಜಾನಿ ಎಂಬುದು ಮಾಸ್ತಿಯವರದ್ದೇ ಮಾತು). ಕಥನಕ್ಕೆ ತೊಡಗುವುದು ಎಂದರೆ ಬದುಕಿನೊಂದಿಗೆ ಅನುಸಂಧಾನಕ್ಕೆ ತೊಡಗುವುದು ಮಾತ್ರವಲ್ಲ; ಕೇಳುಗನೊಬ್ಬನೊಂದಿಗೆ ಆತ್ಮೀಯ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು ಕೂಡ. ಮಾಸ್ತಿಯವರ ಕತೆಗಾರ ಪಂಡಿತಮಾನ್ಯರೊಂದಿಗೆ ಸಂವಾದಕ್ಕೆ ತೊಡಗಿಲ್ಲ. ಸಾಮಾನ್ಯ ಜನರೊಂದಿಗೆ ಸಂವಾದಕ್ಕೆ ತೊಡಗಿದ್ದಾನೆ. ಕಥನವು ಪ್ರೌಢವಾಗುವುದು ಅಥವ ಸರಳವಾಗುವುದು ಕತೆಗಾರನ "ಕೇಳುಗನ" ಕಲ್ಪನೆಯನ್ನು ಆಧರಿಸಿದೆ. ಪಂಪನಂಥ ಕವಿ ಆಸ್ಥಾನ ಪಂಡಿತರನ್ನು ಕೂರಿಸಿಕೊಂಡು ಅವರಿಗೆ ಕಥೆ ಹೇಳಲು ತೊಡಗಿದ್ದರಿಂದಲೇ ಅವನ ಭಾಷೆ, ಲಯ, ಅಭಿವ್ಯಕ್ತಿಯ ವರಸೆಗಳು ತಮ್ಮದೇ ಆದ ಒಂದು ವಿಶಿಷ್ಟ ಸ್ವಭಾವವನ್ನು ರೂಢಿಸಿಕೊಳ್ಳುತ್ತವೆ. ಕುಮಾರವ್ಯಾಸನ ಕೇಳುಗರು ಶ್ರೀಸಾಮಾಜಿಕರಾಗಿರುವುದರಿಂದ ಆತನ ಕಾವ್ಯದ ಹದ ಬೇರೆಯದೇ ಬಗೆಯದಾಗಿದೆ. ಮುದ್ದಣ ಆಧುನಿಕನಾಗಿಯೂ ರಾಮೇಶ್ವಮೇಧದಲ್ಲಿ ಒಂದು ಸ್ವಯಂಕಲ್ಪಿತ ರಾಜಾಸ್ಥಾನದಿಂದ ಮನೆಗೆ ಹಿಂದಿರುಗಿ, ಮನೆಯಲ್ಲಿ ತನ್ನ ಮನದರಸಿ ಮನೋರಮೆಯನ್ನು ಉದ್ದೇಶಿಸಿ ಕಥನಕ್ಕೆ ತೊಡಗುತ್ತಾನೆ. ಇದು ಓದುಗವರ್ಗದ ಪಲ್ಲಟತೆಯ ಸಂಘರ್ಷವಾಗಿದೆ. ಕುವೆಂಪು ತಮ್ಮ ಕಾವ್ಯಸಂದರ್ಭದಲ್ಲಿ ಎರಡು ಬಗೆಯ ಓದುಗ ವರ್ಗವನ್ನು ತಮ್ಮ ಕಣ್ಣ ಮುಂದೆ ಇರಿಕೊಂಡಿದ್ದಾರೆ. ಒಂದು, ಊಹಾ ನಿರ್ಮಿತಿಯಿಂದ ಕಲ್ಪಿಸಿಕೊಂಡ ಪಂಡಿತವರ್ಗವೊಂದರ ಕಾಲ್ಪನಿಕ ಸಮಷ್ಟಿ. ಇನ್ನೊಂದು, ವಾಸ್ತವವಾಗಿ ಕಣ್ಣೆದುರು ಇರುತ್ತಿರುವ ಶ್ರೀಸಾಮಾನ್ಯ ವರ್ಗ. ಕಿಂದರಜೋಗಿ ಮತ್ತು ಶ್ರೀರಾಮಾಯಣದರ್ಶನಂ ಕೃತಿಗಳು ಈ ಎರಡು ವರ್ಗದ ಓದುಗರನ್ನು ಪ್ರತ್ಯೇಕವಾಗಿ ಉದ್ದೇಶಿಸಿವೆ. ಪುತಿನ ಅವರ ಓದುಗವರ್ಗವೂ ಹೀಗೆ ಎರಡಾಗಿ ವಿಭಜಿತಗೊಂಡಿದೆ. ಆದರೆ ಮಾಸ್ತಿ ಉದ್ದೇಶಿಸಿರುವುದು ಒಂದೇ ಸಮಷ್ಟಿಯನ್ನು. ಅದು ಪ್ರಜಾಭುತ್ವದ ಸಂದರ್ಭದಲ್ಲಿ ಕತೆಗಾರ ತನ್ನ ನಿತ್ಯಜೀವನದ ಸಂದರ್ಭದಲ್ಲಿ ಮುಖಾಮುಖಿಯಾಗುತ್ತಿರುವ ಶ್ರೀಸಾಮಾನ್ಯವರ್ಗ. ಸಾಹಿತ್ಯದ ಸಂಸ್ಕಾರವುಳ್ಳ ಶ್ರೀಸಾಮಾನ್ಯ ವರ್ಗ. ಮಾಸ್ತಿಯವರ ಮದಲಿಂಗನ ಕಣಿವೆಯ ಓದುಗ ವರ್ಗ ಮತ್ತು ಶ್ರೀರಾಮಪಟ್ಟಾಭಿಷೇಕದ ಓದುಗ ವರ್ಗ ಒಂದೇ. ಅದು ಅವಿಭಜಿತವಾದ ಮತ್ತು ಸಾಹಿತ್ಯ ಸಂಸ್ಕಾರವುಳ್ಳ ಶ್ರೀಸಾಮಾನ್ಯ ಓದುಗ ವರ್ಗ. ಇದು ವಿಶೇಷವಾಗಿ ಗಮನಿಸಬೇಕಾದ ಅಂಶ. ಈ ಓದುಗ ವರ್ಗ ಮಾಸ್ತಿ ಅವರ ಕಥನ ಕಾವ್ಯದ ಭಾಷೆ ಶೈಲಿ ಲಯಗಳನ್ನು ನಿರ್ಧರಿಸುತ್ತದೆ. ಹೀಗಾಗಿಯೇ ಸ್ವಯಂ ವಿಜೃಂಭಣೆ ಮಾಸ್ತಿಗೆ ಮುಖ್ಯವಾಗುವುದಿಲ್ಲ. ಸರಳತೆ, ಸ್ವಭಾವೋಕ್ತಿ, ಸ್ಪಷ್ಟತೆ, ಸಾಮಾನ್ಯತೆ ಅವರ ಭಾಷೆ ಮತ್ತು ಕಥನವನ್ನು ರೂಪಿಸುತ್ತವೆ. ಮಾಸ್ತಿಯವರ ಕತೆಯಾಗಲಿ ಕಾವ್ಯವಾಗಲಿ ಮಂದ್ರಸ್ಥಾಯಿಯ ಬರವಣಿಗೆ ಯಾಗುವುದಕ್ಕೆ ಮುಖ್ಯ ಕಾರಣವಿದು. ತತ್ಕಾಲೀನ ಬಹುಸಂಖ್ಯಾಕ ಸಮಾಜದೊಂದಿಗೆ ಗೌರವಾದರ ಬೆರೆತ ಸಂಪನ್ನ ಸಂವಾದ ಮಾಸ್ತಿಯವರ ಮೂಲ ಶ್ರುತಿಯನ್ನು ನಿರ್ಧರಿಸಿದೆ. ಸಮಾನ ನೆಲೆಯೇ ಅಲ್ಲಿ ಹೇಳುಗ ಮತ್ತು ಕೇಳುಗರ ನಿಲುವು. ಹಾಗಾಗಿಯೇ ಅದು ಅಧಿಕಾರವಾಣಿಯೂ ಅಲ್ಲ; ಅಪ್ಪಣೆಕೊಡಿಸುವ ಗುರುವಾಣಿಯೂ ಅಲ್ಲ. ಸಹಪ್ರಯಾಣಿಗರೊಂದಿಗೆ ನಿಗರ್ವಿಯಾದ ಯಾತ್ರಿಕನ ಮಾತುಕತೆ. ಸಮಾನಸ್ಕಂಧತೆ ಮಾಸ್ತಿ ಅವರ ಕಥನದ ಶೈಲಿ ಮತ್ತು ಮನೋಧರ್ಮವನ್ನು ನಿಸ್ಸಂದಿಗ್ಧವಾಗಿ ರೂಪಿಸಿದೆ. ಈ ಸಮಾನಸ್ಕಂಧತೆಯ ನೆಲೆ ಅವರ ಸಾಹಿತ್ಯ ಜೀವಿತದ ಉದ್ದಕ್ಕೂ ಅವರ ಜೀವನಾನುಸಂಧಾನವನ್ನು ನಿಯೋಜಿಸಿದೆ. ಯಾವನೇ ಕತೆಗಾರ ಕೇಳುಗನೊಬ್ಬನಿಲ್ಲದೆ ತನ್ನ ಅಸ್ತಿತ್ವವನ್ನೇ ಪಡೆಯಲಾರ. ಮಾಸ್ತಿಯವರ ಭಾಷೆ ಮತ್ತು ಶೈಲಿ ಅಂತರ್ಮುಖಿಯಾಗದಿರುವುದಕ್ಕೆ ಕಾರಣ ಇಲ್ಲಿದೆ. ಪುತಿನ ಅವರ ಸ್ವಗತ ಅವರ ವ್ಯಕ್ತಿತ್ವಕ್ಕೆ ಸಹಜವಾದದ್ದು. ಸಭೆಯಲ್ಲೂ ಕೂಡ ಅವರು ಒಮ್ಮೆಗೇ ಏಕಾಂಗಿಯಾಗಿಬಿಡುತ್ತಿದ್ದರು. ಮಾತು ಸ್ವಗತವಾದಾಗ ಹೊರಗಿನ ಯಾವ ಉಪಾಧಿಯನ್ನೂ ಅದು ಲಕ್ಷಿಸುವುದಿಲ್ಲ. ಪುತಿನ ಪ್ರಧಾನವಾಗಿ ಸ್ವಗತದ ಕವಿ. ಕುವೆಂಪು ಏಕಾಂತ ಮತ್ತು ಲೋಕಾಂತ ಎರಡರಲ್ಲೂ ವ್ಯವಹರಿಸಬಲ್ಲರು. ಬೇಂದ್ರೆಯೂ ಹಾಗೇ ಏಕಾಂತ ಲೋಕಾಂತ ಎರಡರಲ್ಲೂ ಸಹಜವಾಗಿ ಪ್ರವರ್ತಿಸಬಲ್ಲರು. ಮಾಸ್ತಿ ಪ್ರಧಾನಾವಾಗಿ ಲೋಕಾಂತದ ಲೇಖಕರಾಗಿದ್ದಾರೆ. ಅವರಿಗೆ ಏಕಾಂತದ ಧ್ಯಾನವಿಲ್ಲ ಎಂಬುದು ನನ್ನ ಅಭಿಪ್ರಾಯವಲ್ಲ. ಅವರು ಏಕಾಂತದಲ್ಲಿ ಧ್ಯಾನಿಸುತ್ತಾರೆ. ಆದರೆ ಅವರ ಅಭಿವ್ಯಕ್ತಿ ಸಾಧ್ಯವಾಗುವುದು ಲೋಕಾಚರಣೆಯಲ್ಲೇ. ಸಮುದಾಯದ ಮುಖಾಮುಖಿಯಲ್ಲೇ. ಮಾಸ್ತಿ ಬಹಳ ಶಕ್ತಿಯುತ ಲೇಖಕರಾಗಿ ಕಾಣುವುದು ಕೂಡ ಅವರು ಬಹಿರ್ಮುಖಿಯಾದಾಗಲೇ. ಇದು ಕತೆಗಾರಿಕೆಯ ಪ್ರಾರಬ್ಧ.

ಮಾಸ್ತಿಯವರ ಕಾವ್ಯದಲ್ಲಿ ಎರಡು ಬಗೆಯ ರಚನೆಗಳಿವೆ. ಅದನ್ನು ನಮ್ಮ ವಿಮರ್ಶಕರೂ ಗುರುತಿಸಿದ್ದಾರೆ. ಭಕ್ತಿಭಾವ ಪೂರಿತವಾದ ಗೀತಾತ್ಮಕ ರಚನೆಗಳು ಒಂದು ಬಗೆ. ಓದುಗ ವರ್ಗವನ್ನು ಕುರಿತು ತೊಡಗುವ ಕಥನಾತ್ಮಕ ಬರವಣಿಗೆ ಎರಡನೆಯ ಬಗೆ. ಅವರು ಶಕ್ತಿಶಾಲಿ ಲೇಖಕರಾಗಿ ಕಾಣಿಸುವುದು ಎರಡನೆಯ ಬಗೆಯ ಬರವಣಿಗೆಯಲ್ಲಿ. ಮಾಸ್ತಿಯವರ ಭಾವಗೀತೆಗಳು ಬೇಂದ್ರೆ, ಕುವೆಂಪು, ಪುತಿನ ಅವರ ಭಾವಗೀತೆಗಳ ಹತ್ತಿರಕ್ಕೂ ಬರಲಾರವು. ಮಾಸ್ತಿ ಅವರ ಏಕಾಂತದ ಧ್ವನಿ ದೃಢವಾಗುವುದೇ ಇಲ್ಲ. ಮಧುರ ಭಕ್ತಿಯ ಆರ್ದ್ರತೆ ಮಾತ್ರ ಅಲ್ಲಿ ಕಾಣುತ್ತದೆ. ಅದೂ ನಿವೇದನೆಯ ಸ್ವರೂಪದ್ದು. ಮಧುರಚೆನ್ನರಲ್ಲಿ ಕಾಣುವಂತೆ ಜೀವವನ್ನೇ ಹಿಡಿದು ಅಲ್ಲಾಡಿಸುವಂಥದಲ್ಲ. ಅದಕ್ಕೆ ಆ ಬಗೆಯ ತೀವ್ರತೆಯೂ ಇಲ್ಲ; ನಿಗೂಢತೆಯೂ ಇಲ್ಲ. ಭಾವನಿಬಿಡವಾದ ಒಂದು ಪ್ರಪತ್ತಿ ಭಾವ ಅಲ್ಲಿ ಹೃದ್ಯವಾದ ಅಭಿವ್ಯಕ್ತಿಯನ್ನು ಪಡೆಯುವುದು. ಅಷ್ಟೆ. ಮಾಸ್ತಿಯವರ ಘನವಾದ ಕವಿತೆಗಳು ಅವರ ಕಥನಾತ್ಮಕ ಕವಿತೆಗಳೇ ಆಗಿವೆ. ಕಾರಣ ಅವು ಬದುಕನ್ನು ಅದರ ಎಲ್ಲ ಸೂಕ್ಷ್ಮತೆ ಮತ್ತು ಆಳದಲ್ಲಿ ಸ್ಪರ್ಶಿಸಲು ಹವಣಿಸುತ್ತವೆ. ರಾಮನವಮಿ, ಮೂಕನ ಮಕ್ಕಳು, ಗೌಡರ ಮಲ್ಲಿ ಮತ್ತು ನವರಾತ್ರಿಯ ಕೆಲವು ಕವನಗಳು ಮಾಸ್ತಿಯವರ ಘನವಾದ ಶಕ್ತಿಯ ಸಂಪರ್ಕಕ್ಕೆ ನಮ್ಮನ್ನು ತರುತ್ತವೆ. ಕಥನಕ್ಕೆ ಸಹಜವಾದ ಬಹಿರ್ಮುಖತೆ, ವಾಚಾಳತ್ವ ಅಲ್ಲಿ ಇದೆ ನಿಜ. ಹಾಗಾಗಿಯೇ ಅವರ ಅತ್ಯಂತ ಸಮರ್ಥವಾದ ರಾಮನವಮಿಯಲ್ಲೂ ಅತಿಮಾತಿನ ಜಾಳು ಇದೆ. ಎಂಥ ಬಿಗಿಯಾದ ಸಂದರ್ಭವನ್ನೂ ಮಾಸ್ತಿ ಅಳ್ಳಕ ಮಾಡಿಬಿಡುತ್ತಾರೆ ಎಂದು ಮತ್ತೆ ಮತ್ತೆ ಅನ್ನಿಸುತ್ತದೆ. ಆದರೆ ಒಟ್ಟಂದದಲ್ಲಿ ಆ ಕವಿತೆಗಳು ಮಾಡಿಸುವ ಜೀವನ ದರ್ಶನ ಘನವಾದುದಾಗಿರುತ್ತದೆ. ಅವರ ಗದ್ಯದ ಸದ್ಯತನ, ಮಾತಿನ ಸಹಜತೆ, ಲಯದ ಮಂದ್ರಸ್ಥಾಯಿ, ಯಾವತ್ತೂ ಅತಿಗೊಳ್ಳದ ಭಾವಕ್ಷಮತೆ ನಮ್ಮನ್ನು ಆದ್ಯಂತವಾಗಿ ಮತ್ತು ಸಾವಧಾನವಾಗಿ ಆವರಿಸಿಕೊಳ್ಳುತ್ತವೆ. ಮಾಸ್ತಿಯವರದ್ದು ಆರ್ಷೇಯ ನಂಬುಗೆಯ ಕಾವ್ಯವೋ , ಆಧುನಿಕ ಕಾವ್ಯವೋ?, ಮೌಲ್ಯಶೋಧಕ ಕಾವ್ಯವೋ, ಮೌಲ್ಯಾರಾಧಕ ಕಾವ್ಯವೋ? ಅವರಲ್ಲಿ ಕಾಣುವುದು ಧಾರ್ಮಿಕತೆಯೋ ಆಧ್ಯಾತ್ಮಿಕತೆಯೋ? ಅವರದ್ದು ಪ್ರತಿಮಾ ನಿರ್ಮಿತಿಯ ಕಾವ್ಯವೋ, ಸ್ವಭಾವೋಕ್ತಿಯ ಕಾವ್ಯವೋ? ಮಾಸ್ತಿಯವರದ್ದು ಸಮಾಧಾನದ ಕಾವ್ಯವೋ, ದುರಂತದ ಅರಿವಿನ ಕಾವ್ಯವೋ? ಅದು ಪರುಷವಾಕ್ಯದ ಕಾವ್ಯವೋ, ಪ್ರಸನ್ನ ಮಾತಿನ ಕಾವ್ಯವೋ? ಆಕಾಶಕ್ಕೆ ಜಿಗಿಯುವ ಕಾವ್ಯವೋ, ನೆಲಕ್ಕೆ ಅಂಟಿಕೊಂಡಿರುವ ಕಾವ್ಯವೋ? ಕೇಡಿನ ಎಚ್ಚರವುಳ್ಳ ಕಾವ್ಯವೋ, ಮಂಗಳಾಯತನದ ಕಾವ್ಯವೋ?- ಮುಂತಾದ ಯುಗಳ ಪ್ರಶ್ನೆಗಳನ್ನು ಎತ್ತಿಕೊಂಡು ಕನ್ನಡ ವಿಮರ್ಶೆ ಮೊದಲಿನಿಂದಲೂ ಚರ್ಚಿಸುತ್ತಾ ಬಂದಿದೆ. ಮುಗಳಿ, ಕೀರ್ತಿನಾಥ ಕುರ್ತಕೋಟಿ, ಚಂದ್ರಶೇಖರ ನಂಗಲಿಯಂಥ ವಿಮರ್ಶಕರೂ, ವಿಸೀ, ಅಡಿಗ, ಕೆ ಎಸ್ ನ ಮೊದಲಾದ ಕವಿಗಳೂ ಈ ಪ್ರಶ್ನೆಗಳನ್ನು ಎತ್ತಿಕೊಂಡು ಮಾಸ್ತಿಕಾವ್ಯದ ಬಗ್ಗೆ ಒಳನೋಟಗಳುಳ್ಳ ವಿಮರ್ಶೆಯನ್ನು ಬರೆದಿದ್ದಾರೆ. ಈ ಪ್ರಶ್ನೆಗಳು ಮಾಸ್ತಿಯವರ ಕಾವ್ಯ ಮತ್ತು ಮನೋಧರ್ಮಗಳನ್ನು ಆಳದಲ್ಲಿ ಪೃತ್ಥಕ್ಕರಿಸಿರುವುದರಿಂದ ಮುಖ್ಯವೆನಿಸುತ್ತವೆ. ಆದರೆ ನಾವು ಈವತ್ತು ಕೇಳಬೇಕಾದದ್ದು ಈ ನಿರ್ದಿಷ್ಟ ಸ್ವರೂಪದ ಕಾವ್ಯದಿಂದ ನಾವು ಪಡೆಯಬಹುದಾದದ್ದು ಏನನ್ನು ಎಂಬುದನ್ನು. ಕವಿಯ ಮತ್ತು ಕಾವ್ಯದ ಮನೋಧರ್ಮ ಮತ್ತು ಸ್ವರೂಪಗಳನ್ನು ಯಾರಿಗೂ ತೊಡೆದುಹಾಕಲಿಕ್ಕಾಗುವುದಿಲ್ಲ. ಆದರೆ ಈ ಮನೋಧರ್ಮ ಮತ್ತು ಈ ಮನೋಧರ್ಮ ನಿರ್ಮಿಸಿರುವ ಕಾವ್ಯ ಬದುಕಿನ ಪರಾಂಬರಿಕೆಗೆ ಓದುಗ ಸಮುದಾಯಕ್ಕೆ ನೀಡುವ ಒಳನೋಟಗಳು ಯಾವುವು ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ. ಸಮಾಜ ಮತ್ತು ವ್ಯಕ್ತಿಜೀವಿತದ ಗರಿಷ್ಠ ಅರಳುವಿಕೆಗೆ ಆರ್ಷೇಯ ನಂಬಿಕೆ ಮತ್ತು ಶ್ರದ್ಧಾಜೀವನವು ಒಂದು ಬಗೆಯ ಸಂಪನ್ನವಾದ ಮಣ್ಣು ನೀರು ಬಿಸಿಲು ಒದಗಿಸುತ್ತದೆ ಎಂಬುದನ್ನು ಮಾಸ್ತಿ ಕಾವ್ಯ ಪ್ರತಿಪಾದಿಸುತ್ತಿದೆ. ಅದಕ್ಕಾಗಿ ಯುಕ್ತವಾದ ಮತ್ತು ನಂಬಿಕೆಗೆ ಅರ್ಹವಾದ ಕೆಲವು ಜೀವನ ದೃಷ್ಟಾಂತಗಳನ್ನು ಒದಗಿಸುವಲ್ಲಿ ಅವರ ಕಥನಕವಿತೆಗಳು ಅತ್ಯಂತ ಪ್ರಾಮಾಣಿಕ ಮತ್ತು ನಿರ್ವಂಚನೆಯ ನೆಲೆಯಲ್ಲಿ ತೊಡಗಿಕೊಂಡಿವೆ. ಸಮಾಜಮುಖತೆಯನ್ನೇ ಒಂದು ಗುಣಮೌಲ್ಯವಾಗಿ ರೂಪಿಸಿಕೊಳ್ಳುವಲ್ಲಿ ಮಾಸ್ತಿಯವರ ಕಾವ್ಯ ಘನವತ್ತಾದ ಸಾಧನೆ ಮಾಡಿದೆ. ಅವರಿಗೆ ಸಮಾಜಪುರುಷ ಮಾತ್ರವಲ್ಲ, ಅಂತರಂಗದ ದೈವವೂ ಕೂಡಾ ಬಹಿರಂಗದಲ್ಲೇ, ಆಪ್ತ ಸನ್ನಿಧಿಯಲ್ಲೇ ಆವಿರ್ಭವಿಸಬೇಕಾಗಿದೆ!(ಬ್ರಹ್ಮಾಂಡವನ್ನು ನೋಡದೆ ದೇವರ ಕಾಣ್ಬರೆ?).

ನನ್ನ ಈವರೆಗಿನ ಹೇಳಿಕೆಗಳನ್ನು ದೃಢೀಕರಿಸುವ ಕನ್ನಡದ ಇಬ್ಬರು ಮಹತ್ವದ ಕವಿಗಳ ಗದ್ಯ ಮತ್ತು ಪದ್ಯರೂಪೀ ಮಾತುಗಳನ್ನು ಒಟ್ಟಿಗೇ ಇಟ್ಟು ನನ್ನ ಟಿಪ್ಪಣಿಯನ್ನು ಮುಗಿಸುತ್ತೇನೆ. ಅಡಿಗರು ಮಾಸ್ತಿಯವರ ಕವಿತೆಯನ್ನು ಕುರಿತು ಬರೆಯುತ್ತಾರೆ: "ಬಾಳಿನ ವೈವಿಧ್ಯದಲ್ಲಿ, ಸುಖ ದುಃಖಗಳಲ್ಲಿ, ಉಬ್ಬರ ಇಳಿತಗಳಲ್ಲಿ, ಏರು ತಗ್ಗುಗಳಲ್ಲಿ, ಎಲ್ಲೂ ತೂಕ ತಪ್ಪದಂತೆ, ಧೃತಿಗೆಡದಂತೆ, ಶಾಂತವಾಗಿ, ಪ್ರಜೆಯ ಬೆಳಕಿನಲ್ಲಿ ಶುದ್ಧವಾಗಿ, ಸಮೃದ್ಧವಾಗಿ ವ್ಯಕ್ತವಾಗುವ ಮಾಸ್ತಿಯವರ ಅಂತರಂಗದ ಅನುಭವದ ಅಭಿವ್ಯಕ್ತಿಗೆ ಬೆಳದಿಂಗಳ ಪ್ರಶಾಂತಿ, ಹೂವುಗಳ ಮೃದತ್ವ, ಬಯಲಲ್ಲಿ ಹರಿಯುವ ಅಗಲ ಕಿರಿದಾದ ಹೊಳೆಯ ಸ್ಫಟಿಕ ನಿರ್ಮಲ ಜಲದ ಪಾರದರ್ಶಕತೆ ಇದೆ. ಇವರ ಸಾಹಿತ್ಯಕ್ಕೆ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸಬಲ್ಲ ಯುಗಾಂತರಕಾರಕ ಆವೇಶ, ತೀವ್ರತೆ, ತಲಸ್ಪರ್ಶಿತ್ವ, ಆಕಾಶೋಡ್ಡಯನ ಇಲ್ಲ. ಅದು ಪುರಾತನವಾದೊಂದು ಸಮಾಜದ ಸ್ಥಿರ ಮೌಲ್ಯಗಳಲ್ಲಿ ಬೇರೂರಿ ನಿಂತದ್ದು. ಸಜ್ಜನನೊಬ್ಬನ ತುಂಬು ಬದುಕಿನ ಕೊಂಬೆ ಕೊಂಬೆಗಳಲ್ಲೂ ತುಂಬಿ ಮಾಗಿ ಹಣ್ಣಾಗಿರುವ ರೀತಿಯ ಕೃತಿರಾಶಿಯಿದು....ಮಾಸ್ತಿಯವರ ಕವಿತೆ ತಣಿಸುವ ಕವಿತೆ. ಇದು ಬಹಳ ಆಳಕ್ಕೆ ಇಳಿದು ಮನಸ್ಸಿನ ಮೂಲವನ್ನು ಕೆದಕಿ ಬೆದಕಿ ನೋಡುವುದಿಲ್ಲ. ಪ್ರಜೆಯ ಕೆಳಕ್ಕೆ ಇರುವ ದಾನವತ್ವ ಪಶುತ್ವಗಳಿಗೆ ಮುಖಾಮುಖಿ ಆಗುವುದಿಲ್ಲ. ಕನಸುಗಳ ರೆಕ್ಕೆ ಬಿಚ್ಚಿ ನಮಗೆ ದೂರದ ಅಂತರಾಳಗಳ ಯಾತ್ರೆ ಮಾಡಿಸುವುದಿಲ್ಲ. ರುದ್ರವೂ ಭೀಕರವೂ ಆದ ತಮಸ್ಸನ್ನು ಮರೆಸಿ ಬದುಕಿನಲ್ಲಿರುವ ಚೆಲುವನ್ನೂ ನಲಿವನ್ನೂ ನಗುವನ್ನೂ ಬೆಳಕನ್ನೂ ತೋರಿಸುತ್ತದೆ. ಆದ ಕಾರಣವೇ ಈ ಕವಿತೆ ನಮಗೆ ಸಂಪೂರ್ಣ ತೃಪ್ತಿಯನ್ನು ಕೊಡುವುದಿಲ್ಲ. ಆದರೆ ಎಷ್ಟನ್ನು ಕೊಡಲು ಉದ್ದೇಶಿಸಿರುತ್ತದೋ ಅಷ್ಟನ್ನು ಮಾತ್ರ ಕೊಟ್ಟೇಕೊಡುತ್ತದೆ. ಅದು ಎಷ್ಟನ್ನು ನೀಡುತ್ತದೋ ಅಷ್ಟೂ ಮಹತ್ವದ್ದು. ಮರೆಯಬಾರದ್ದು. ಆದಕಾರಣ ಮಾಸ್ತಿಯವರ ಕಾವ್ಯಾಭ್ಯಾಸ ಮನಸ್ಸಿಗೆ ತಂಪನ್ನು ನೀಡುವುದಲ್ಲದೆ ನಮ್ಮ ಅರಕೆಗಳನ್ನೆಷ್ಟೋ ತುಂಬಲೂ ಸಮರ್ಥವಾಗಿದೆ. ಎಲ್ಲ ಕಾಲಗಳಲ್ಲೂ ಕಾವ್ಯಾಭ್ಯಾಸಿಗಳು , ಸಾಹಿತ್ಯಪ್ರಿಯರು ಮತ್ತೆ ಮತ್ತೆ ಮಾಸ್ತಿಯವರ ಕವಿತೆಗಳ ಕಡೆ ಬರುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ."

ಕನ್ನಡದ ಇನ್ನೊಬ್ಬ ಮಹತ್ವದ ಕವಿ ಕೆ.ಎಸ್.ನ ಅವರು ಮಾಸ್ತಿಯವರ ಬಗ್ಗೆ ಬರೆದ ಕವಿತೆ, ಮಾಸ್ತಿಯವರ ಕಾವ್ಯವನ್ನು ಇನ್ನೊಂದು ನೆಲೆಯಲ್ಲಿ ಕೈವಾರಿಸುತ್ತದೆ.


ಮಾಸ್ತಿಯವರ ಕವಿತೆ
ಮಾಸ್ತಿಯವರಾಸ್ತಿ ಆ ಸಣ್ಣಕತೆಗಳೇ ಎಂದು
ಸಾಂಬಶಾಸ್ತ್ರಿಯ ಸಿದ್ಧಾಂತ. ಕೇಶವಮೂರ್ತಿ
ಶ್ರೀನಿವಾಸರ ಕವಿತೆ ಒಣ ಗದ್ಯವೇ ಎಂದು
ಎಗರಿ ಬೀಳುವನು. ಈ ಸಂಶಯವೇ ಕವಿಕೀರ್ತಿ.
ಪರಿಚಿತ ಕವಿಗಳೆಲ್ಲ ಬರಿದೆ ರಾರಾಜಿಪರು
ಪ್ರಾಚೀನ ಪ್ರಾರಬ್ಧ ಹೊತ್ತು. ಅದ ಹೊಗಳುವರು
ಶ್ರೀನಿವಾಸರ ಕೃತಿಯನೇನೆಂದು ಮೆಚ್ಚುವರು?
ಗಡವಿಲ್ಲ, ದಲ್ಲಿಲ್ಲ, ಮೇಣ್-ಬತ್ತಿ ಹೊಗೆಯಿಲ್ಲ.
ಅಪ್ರಕೃತ ಸಂಸ್ಕೃತದವಾಂತರದ ಧಗೆಯಿಲ್ಲ.
ಇಲ್ಲಿ ಜೀವನದಂತೆ ಕವಿತೆ; ಜೀವದ ಉಸಿರು.
ಮಳೆಬಿದ್ದ ಸಂಜೆ ಬೀದಿಯಲಿ ಸಾವಿರ ಬೆಳಕು,
ಹಸುರು ನಗೆ, ಕೆಂಪು ಗಾಯಗಳು. ಬಂಡೆಯನ್ನುತ್ತು
ಬೆಳೆದ ಮೂಗಿಂಗೆ ಈ ಸಹಜ ಕವಿತೆಯ ಮುತ್ತು
ಗ್ರಾಹ್ಯವಾದೀತೆ? ಇದಕಿಲ್ಲ ಕವಿತೆಯ ಹೆಸರು!


ಅಡಿಗರದ್ದು ವಿಮರ್ಶಾತ್ಮಕ ಮೆಚ್ಚುಗೆ. ಕೆ ಎಸ್ ನ ಅವರದ್ದು ಕಾವ್ಯಾದರದ ಮೆಚ್ಚುಗೆ. ಈ ಇಬ್ಬಗೆಯ ಮಾತುಗಳ ಅಖಂಡ ಗ್ರಹಿಕೆ ಮಾಸ್ತಿಯವ ಕಾವ್ಯದ ಅನುಸಂಧಾನಕ್ಕೆ ಹದವಾದ ನೆಲೆಯೊಂದನ್ನು ಕಲ್ಪಿಸಬಲ್ಲದೆಂಬುದು ನನ್ನ ವಿಶ್ವಾಸ.

8 comments:

  1. ಮಾಸ್ತಿಯವರ ಬಗ್ಗೆ ಒಳ್ಳೆಯ ಲೇಖನ,
    ಬಹಳಷ್ಟು ಉಪಯುಕ್ತ ಮಾಹಿತಿ ಇರುವ ಸಂಗ್ರಹಯೋಗ್ಯ ಬರಹ

    ReplyDelete
  2. ಮಾಸ್ತಿಯವರ ಬಗ್ಗೆ ಉತ್ತಮ ಲೇಖನ, ಅವರ ಸಣ್ಣ ಕಥೆಗಳಲ್ಲಿ ಅವರು ಕಟ್ಟಿಕೊಡುತ್ತಿದ್ದ ಅನನ್ಯ ಕಥಾ ಲೋಕ ಕಣ್ಣ ಮು೦ದೆ ಬ೦ದ೦ತಾಯ್ತು

    ReplyDelete
  3. ಸರ್, ತಮ್ಮ ಬ್ಲಾಗ್ ನೋಡಿ ಬಹಳ ಖುಷಿ ಆಯ್ತು, ನಮ್ಮಂತವರನ್ನು ತಾವು ಆಶೀರ್ವದಿಸಿ ಬೆಳೆಸಬೇಕು,ತಮ್ಮ ವಿಮರ್ಶೆಗಳಿಗೆ ಮತ್ತೆ ಕಾಮೆಂಟ್ಸ್ ಅವಹ್ಸ್ಯಕತೆ ಇದೆಯೇ ?

    ReplyDelete
  4. ಸರ್, ನಿನ್ನೆ ಹೇಳಿದ ಹಾಗೇ ತಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ, ನನ್ನದೊಂದು ಸಣ್ಣ ಭಿನ್ನಹ - ನನ್ನ ಬ್ಲಾಗಿಗೆ ಚಿತ್ತೈಸಿ ನನ್ನನ್ನು ಒಮೆ ಹರಸುವಿರೇ ?

    ReplyDelete
  5. ದಯವಿಟ್ಟು ನಿಮ್ಮ ಮಿಂಚಂಚೆಯ- email-ತಿಳಿಸಿ. ಹರಿಪ್ರಸಾದ ನಾಡಿಗರು ಸಂಪದಕ್ಕಾಗಿ ನಿಮ್ಮೊಂದಿಗೆ ಮಾತನಾಡಿದ್ದನ್ನು ಸಂಪದದಲ್ಲಿ podcast ಹಾಕುವುದಕ್ಕೆ ನಿಮ್ಮ ಕಾವ್ಯೋದ್ಯೋಗವನ್ನು ಕುರಿತಂತೆ ನನ್ನ ಸಣ್ಣ ಟಿಪ್ಪಣಿ ಬರೆಸಿದ್ದಾರೆ. ಪ್ರಕಟವಾಗುವ ಮುನ್ನ ನೀವದನ್ನು ನೋಡಲಿ ಅಂಬ ಕಾರಣಕ್ಕೆ ನಿಮ್ಮ ಮಿಂಚಂಚೆ ವಿಳಾಸ ಅತ್ಯಗತ್ಯವಾಗಿದೆ. ತಿಳಿಸಿ.

    ReplyDelete
  6. ಹಿರಿಯರೂ, ಜ್ಞಾನಿಗಳೂ ಆದ ತಾವು ಬಂದು ಹರಸಿದ್ದಕ್ಕೆ ಬಹಳ ಖುಷಿಯಾಯ್ತು ಸರ್, ತಮಗೆ ಅನಂತ ನಮನಗಳು.

    ReplyDelete
  7. ಮಾಸ್ತಿಯವರ ಅಪರಿಚಿತ ಮಗ್ಗುಲೊಂದನ್ನು ಅನಾವರಣ ಮಾಡಿ ಪರಿಚಯ ಮಾಡಿದ್ದೀರಿ. ಸಾಹಿತ್ಯ - ಬದುಕಿಗೆ ಹಿಡಿಯುವ ಕನ್ನಡಿ. ಹಲವಾರು ಕೋನಗಳಲ್ಲಿ ಕನ್ನಡಿ ಹಿಡಿದಾಗ ಅದರ ಸೌಂದರ್ಯ ಬೇರೆಯದೇ ತೆರನಾಗಿರುತ್ತದೆ ಹಾಗೂ ಹೆಚ್ಚು ಕಲಾತ್ಮಕವಾಗಿರುತ್ತದೆ. ಮಾಸ್ತಿಯವರ ಪ್ರಸೆಂಟೇಶನ್ ಕಲಾತ್ಮಕತೆಗಿಂತ ಕಥನಾತ್ಮಕ ಕಾರಣದಿಂದಾಗಿಯೇ ಹೆಚ್ಚು ವಿಶೇಷವಾಗಿದೆ ಎನ್ನಿಸುತ್ತದೆ.

    ReplyDelete
  8. Dear Dr. HSV murthy avare:

    We met in AKKA events and also in Silicon Valley area in Madhu KrishnaMurthy's house, when you were an honored guest.

    Please send me your email address to my email: drkrsmurthy2012@gmail.com

    http://about.me/drkrsmurthy

    http://murthypen.blogspot.com/

    http://about.me/srimurthy

    http://paradigmurthy.blogspot.com/

    http://drkrsmurthy.blogspot.com/

    http://musicology-murthy.blogspot.com/

    ReplyDelete