Friday, November 20, 2009

ವಿರಾಟಪರ್ವ...

ಅಲ್ಲಾಡಿ ರುದ್ರಣ್ಣನವರ ಪತ್ರ ನನ್ನನ್ನು ಆತಂಕಕ್ಕೆ ಈಡುಮಾಡಿತು. ಎರಡೇ ಸಾಲು. ಭದ್ರಕ್ಕ ನೆಲ ಹಿಡಿದಿದ್ದಾಳೆ. ಅವಳ ಕೊನೆಯ ಆಸೆಯಂತೆ ಗೊಂಬೆ ಮ್ಯಾಳ ಏರ್ಪಡಿಸಲಾಗಿದೆ. ತಕ್ಷಣ ಹೊರಟು ಬರತಕ್ಕದ್ದು. ಭದ್ರಕ್ಕ ನೆಲ ಹಿಡಿದಿದ್ದಾಳೆ ಎನ್ನುವ ಮಾತು ನನ್ನ ಕರುಳನ್ನು ಕಿವುಚಿತು. ಬದ್ರಕ್ಕ ನಮ್ಮ ಮನೆತನಕ್ಕೆ ಮೊದಲಿಂದ ಹತ್ತಿರದವಳು. ಆಕೆಯೂ ನಮ್ಮ ಅಜ್ಜಿಯೂ ಆಪ್ತ ಗೆಳತಿಯರು. ನಮ್ಮ ಕೇರಿಯಲ್ಲೇ ಭದ್ರಕ್ಕನ ಮನೆಯೂ ಇತ್ತು. ಓಣಿಯಾಕಾರದ ದೊಡ್ಡ ಮನೆ. ಅದರಲ್ಲಿ, ಪಾಪ, ಒಬ್ಬಳೇ ಮುದುಕಿ ವಾಸವಾಗಿದ್ದಳು. ಕ್ಷಮಿಸಿ. ಒಬ್ಬಳೇ ಅನ್ನುವುದು ತಪ್ಪು. ಅವಳ ಜೊತೆಗೆ ಅವಳ ಹತ್ತು ರಾಸುಗಳೂ ಆ ಮನೆಯಲ್ಲಿ ಇದ್ದವು. ಒಂದೆರಡು ಒದ್ದುಕೊಂಡಿದ್ದರೂ ಏಳೆಂಟು ಎಮ್ಮೆಗಳಾದರೂ ಅವಳ ಮನೆಯಲ್ಲಿ ಹಾಲು ಕರೆಯುತ್ತಲೇ ಇದ್ದವು. ಜೊತೆಗೆ ಒಂದೆರಡು ಮಣಕ. ನಾಕಾರು ಸಣ್ಣ ಕರುಗಳು. ದೊಡ್ಡ ಸಂಸಾರ ಭದ್ರಕ್ಕನದು. ನಮ್ಮ ಊರಿನ ಹೆಚ್ಚಿನ ಮನೆಗಳಿಗೆ ಭದ್ರಕ್ಕನ ಮನೆಯಿಂದಲೇ ಹಾಲು ಸರಬರಾಜು ಆಗುತಿತ್ತು. ಮನೆಗಳು ಮಾತ್ರವಲ್ಲ ರುದ್ರಣ್ಣನ ಹೋಟೆಲ್ಲಿಗೂ ಭದ್ರಕ್ಕನೇ ಹಾಲು ಕಳಿಸುತ್ತಿದ್ದಳು. ರಾಸು ಸಾಕುವುದರಲ್ಲಾಗಲಿ, ಅವಕ್ಕೆ ಬ್ಯಾನೆ ಬೇಸರಿಕೆ ಆದಾಗ ಔಷಧೋಪಚಾರ ಮಾಡುವುದರಲ್ಲಾಗಲೀ, ಟೊಂಕದ ಮೇಲೆ ಬೆನ್ನನ್ನು ಒತ್ತಿ ಹಿಡಿದು ಅದು ಈದಮೇಲೆ ಎಷ್ಟು ಹಾಲು ಕೊಡಬಹುದು ಎಂಬುದನ್ನು ಕರಾರುವಾಕ್ಕಾಗಿ ಊಹಿಸುವುದರಲ್ಲಾಗಲೀ, ಹಲ್ಲುಬಿಡಿಸಿ ಅವುಗಳ ವಯಸ್ಸು ಹೇಳುವುದರಲ್ಲಾಗಲೀ, ಅವುಗಳ ಸುಳಿ ನೋಡಿ ಶುಭ ಅಶುಭ ಹೇಳುವುದರಲ್ಲಾಗಲೀ ಭದ್ರಕ್ಕನನ್ನು ಮೀರಿಸುವರೇ ಆಸುಪಾಸಲ್ಲಿ ಇರಲಿಲ್ಲ ಎಂದರೆ ನೀವು ನಂಬಬೇಕು. ತಾನಾಯಿತು ತನ್ನ ಎಮ್ಮೆಗಳಾಯಿತು, ಅವುಗಳ ಕರುಗಳಾಯಿತು...ಈ ಪ್ರಪಂಚದಲ್ಲಿ ಇಡೀ ದಿನ ಭದ್ರಕ್ಕನ ಸಮಯ ಕಳೆದು ಹೋಗುತ್ತಿತ್ತು. ಬೆಳಗಾದರೆ ಅವನ್ನು ಮನೆಯಿಂದ ಹಿತ್ತಲಿಗೆ ಒಯ್ದು ಅವುಗಳ ಮೈ ತೊಳೆಯುವುದು, ಆಮೇಲೆ ಕೊಟ್ಟಿಗೆ ಕ್ಲೀನು ಮಾಡಿ ಹೊಸ ಹುಲ್ಲು ಹಾಕಿ ದನಗಳನ್ನು ಒಳಗೆ ಕಟ್ಟುವುದು, ಬಳಿಕ ತಾನು ಮೈತೊಳಕೊಂಡು, ಶಿವಪೂಜೆ ಮುಗಿಸಿ, ಕರುಬಿಟ್ಟು, ಆಮೇಲೆ ಹಾಲು ಕರೆದು, ಮುಖದ ತುಂಬ ಬೆವರ ಹನಿ ಮುಡಕೊಂಡು ಹೊರಕ್ಕೆ ಬಂದು, ಗುಪ್ಪೆ ಮಂಚದ ಮೇಲೆ ಕಾಲು ಚಾಚಿ ಕೂತು ಶಿವನೇ ಎಂದು ಅವಳು ಉದ್ಗಾರ ತೆಗೆಯುವುದು. ಅಷ್ಟರಲ್ಲಿ ಹಾಲಿಗಾಗಿ ವರ್ತನೆಯ ಮನೆಯವರು ಬರಲು ಶುರುವಾಗುತ್ತಿತ್ತು. ಆ ವೇಳೆಗಾಗಲೇ ಭದ್ರಕ್ಕ ಧರ್ಮ ಕರ್ಮ ನೋಡಿ ಹಾಲಿಗೆ ಎಷ್ಟು ನೀರು ಬೆರೆಸಿದರೆ ಅನ್ಯಾಯವಾಗುವುದಿಲ್ಲವೋ ಅಷ್ಟು ಮಾತ್ರ ನೀರು ಬೆರೆಸಿ ವರ್ತನೆಯವರಿಗೆ ಹಾಲು ಅಳೆದು ಕೊಡುತ್ತಿದ್ದಳು. ಭದ್ರಕ್ಕನ ಮನೆಯಷ್ಟು ಗಟ್ಟಿ ಹಾಲು, ಹಾಲು ಹೈನಿಗೆ ಪ್ರಸಿದ್ಧವಾಗಿದ್ದ ಎರಗಟ್ಟೀಹಳ್ಳಿಯಲ್ಲೂ ಸಿಕ್ಕುವುದಿಲ್ಲ ಎಂದು ಆ ಕಾಲದಲ್ಲಿ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಎಮ್ಮೆ ಸಾಕುವುದು, ಹಾಲು ಮಾರುವುದು ಅಷ್ಟೇ ಭದ್ರಕ್ಕನ ಜೀವನವಾಗಿದ್ದರೆ ಅವಳ ನೆನಪು ನನ್ನಲ್ಲಿ ಇಷ್ಟು ಗಾಢವಾಗಿ ಉಳಿಯುತ್ತಿರಲೇ ಇಲ್ಲ. ದನಗಳನ್ನು ಜಂಗ್ಲಿಗೆ ಹೊಡೆದ ಮೇಲೆ ಬೇಗ ಬೇಗ ನಾಷ್ಟ ಮುಗಿಸಿ ಭದ್ರಕ್ಕ ಒಂದು ಸಣ್ಣ ಸರ್ಕೀಟು ಹೊಡೆಯುತ್ತಿದ್ದಳು. ಭದ್ರಕ್ಕ ಆರಡಿಯ ಆಜಾನುಬಾಹು ಆಳು. ಸೀರೆ ಸ್ವಲ್ಪ ಮೇಲಕ್ಕೇ ಉಟ್ಟುಕೊಳ್ಳುತ್ತಿದ್ದಳು. ಅಥವಾ ಹೀಗೆ ಹೇಳೋಣ. ಎಂಥ ದೊಡ್ಡ ಪನ್ನದ ಸೀರೆ ತಂದರೂ ಅದು ಭದ್ರಕ್ಕನ ಎತ್ತರಕ್ಕೆ ಒಂದು ಗೇಣು ಕಮ್ಮಿಯೇ ಆಗುತ್ತಿತ್ತು. ಸರಿ. ಆ ಸೀರೆ ಸೆರಗನ್ನು ಭದ್ರಕ್ಕ ತಲೆ ಅರ್ಧ ಮುಚ್ಚುವಂತೆ ಹೊದ್ದು, ಸೆರಗಿನ ಚುಂಗನ್ನು ಹಲ್ಲಲ್ಲಿ ಕಚ್ಚಿಕೊಂಡು , ಎರಡೂ ಕೈ ರಮ ರಮ ಬೀಸಿಕೊಂಡು ಬೀದಿಯಲ್ಲಿ ಬರುತ್ತಿದ್ದರೆ ಅದೊಂದು ವೈಭವ . ಅವಳ ನಡಿಗೆಯಲ್ಲಿ ಹೆಣ್ತನದ ನಯನಾಜೂಕು ಇರುತ್ತಿದ್ದಿಲ್ಲ. ಜೀಕು ಮೆಟ್ಟು ಹಾಕಿಕೊಂಡು ಜೀಕು ಜೀಕು ಸದ್ದು ಮಾಡುತ್ತಾ ಅವಳು ಬರುತ್ತಾ , ಗಟ್ಟಿಯಾಗಿ ನಗುತ್ತಾ, ತನ್ನ ಗಂಡು ಧ್ವನಿಯಲ್ಲಿ "ಅಕ್ಕಾ...ಕಾಫೀ ಆತೇನೇ?" ಎಂದು ಗಟ್ಟಿಯಾಗಿ ಕೂಗುತಾ ಇದ್ದಳು. ನಮ್ಮಜ್ಜಿ ಬಾರೇ ಬಾರೇ ಭದ್ರಕ್ಕ ಎಂದು ಭದ್ರಕ್ಕನನ್ನು ಕರೆದು, ಅವಳಿಗೆ ಚಾಪೆ ಕೊಡವಿ ಹಾಸಿ-ನಿನ್ನ ಹಾಲಿನ ಉಸಾಬರಿ ಎಲ್ಲಾ ಮುಗೀತಾ ? ಎಂದು ಕೇಳುತ್ತಿದ್ದಳು. "ಹಾಲು ಕಳಿಸೇ ಮತ್ತೆ ನಿಮ್ಮ ಹಟ್ಟೀಗೆ ಕಾಫೀ ನೀರಿಗೆ ಬಂದದ್ದು..!" ಎಂದು ಭದ್ರಕ್ಕ ಗಟ್ಟಿಯಾಗಿ ನಗುತ್ತಾ ಇದ್ದಳು. ಆ ಧ್ವನಿ ಕೇಳಿ ಭದ್ರಕ್ಕ ಬಂದಳೂ ಅಂತ ಕಾಣತ್ತೆ ಎಂದು ಇನ್ನೂ ಹಾಸಗೆಯಲ್ಲಿ ಗುಬುರಿಕೊಂಡಿರುತ್ತಾ ಇದ್ದ ನಾನು ಹೊರಗೆ ಓಡಿ ಬರುತಾ ಇದ್ದೆ. ಭದ್ರಕ್ಕ ನನ್ನನ್ನು ನೋಡಿ-"ಯವ್ವ ನನ್ನ ಚಂದುಳ್ಳಿ ಚಲುವರಾಯ ಬಂತಲ್ಲಪ್ಪಾ... ಏ ನನ್ನ ಬಂಗಾರದ್ ಬುಗುಡಿ...ಯಾವತ್ತೋ ನನ್ನಾನಿನ್ನಾ ಮದವೀ ಮುಹೂರ್ತ?" ಎಂದು ನಗೆಸಾರ ಮಾಡುತ್ತಾ ಅಟ್ಟಿಸಿಕೊಂಡು ಬರುತ್ತಾ ಇದ್ದಳು. ಇಬ್ಬರ ನಡುವೆ ಒಂದು ಸಣ್ಣ ಸ್ಪರ್ಧೆ ನಡೆದು ಕೊನೆಗೆ ನಾನು ಭದ್ರಕ್ಕನ ಕೈವಶವಾಗದೆ ನಿರ್ವಾಹವಿರಲಿಲ್ಲ. ಭದ್ರಕ್ಕ ನನ್ನನ್ನು ಎತ್ತಿಕೊಂಡು ತನ್ನ ಎರಡು ದಿನದ ಗಡ್ಡದ ಮೊಳಕೆ ಕೆನ್ನೆಗೆ ಚುಚ್ಚುತ್ತಾ ಬುಳು ಬುಳು ಮಾಡುತಾ ಇದ್ದಳು.
ಹೀಗೆ ಹಾಸ್ಯ, ನಗೆಚಾಟಿಕೆ, ಜೀವನೋತ್ಸಾಹಗಳಿಂದ ನಮ್ಮ ಸಣ್ಣ ಹಳ್ಳಿಯಲ್ಲಿ ಭದ್ರಕ್ಕ ಎಲ್ಲರ ಮನೆಯ ಹೆಣ್ಣುಮಗಳಾಗಿದ್ದಳು. ಆಕೆಯನ್ನು ಕಂಡರೆ ಎಲ್ಲರಿಗೂ ಒಂದು ಬಗೆಯ ಮಮಕಾರ. ಊರೊಟ್ಟಿನ ಬಾಳಲ್ಲಿ ಭದ್ರಕ್ಕನಿಲ್ಲದೆ ಯಾವುದೂ ನಡೆಯುವಂತಿರಲಿಲ್ಲ. ಜಾತ್ರೆಯಾಗಲೀ, ತೆಪ್ಪವಾಗಲೀ, ಬಯಲುಬಸವನ ನೀರ್ಮಜ್ಜನವಾಗಲೀ ಭದ್ರಕ್ಕ ಗಟ್ಟಿ ದನಿಯಲ್ಲಿ ಕೂಗುತ್ತಾ ನಗುತ್ತಾ ಮುಂದೆ ಇರಲೇ ಬೇಕು. ಗೌಡರು, ಶಾನುಭೋಗರೂ ಎಲ್ಲರ ಜತೆಗೂ ಅವಳಿಗೆ ಬಹಳ ಸಲುಗೆ. ವಯೋವೃದ್ಢರಾದ ಪುರೋಹಿತರ ಕೈ ಹಿಡಿದು ಎಳೆದು ನಗೆಚಾಟಿಕೆ ಮಾಡುವ ಸಲುಗೆ ನಮ್ಮೂರಲ್ಲಿ ಭದ್ರಕ್ಕನಿಗಲ್ಲದೆ ಬೇರೆ ಯಾರಿಗೆ ಇತ್ತು?
ಜೊತೆಗೆ ಭದ್ರಕ್ಕ ಮಹಾ ಕಲಾಪ್ರೇಮಿಯಾಗಿದ್ದಳು. ಚನ್ನಗಿರಿಯ ಟೆಂಟಿಗೆ ಯಾವ ಸಿನಿಮಾ ಬಂದಿದೆ ಎಂಬುದು ಎಲ್ಲರಿಗಿಂತಾ ಮುಂಚೆ ಅವಳಿಗೆ ಗೊತ್ತಾಗುತ್ತಾ ಇತ್ತು. "ಅಕ್ಕಾ...ಮದಾಲಸೆ ಅಂತ ಸಿನಿಮಾ ಬಂದೈತಂತೆ...ಭೋ ಚಂದಾಗದಂತೆ...ಹೋಗೋಣೇನ್ರಿ ಚನ್ನಗಿರಿಗೆ?" ಎಂದು ಸಂಜೆ ನಾಕಕ್ಕೇ ಬಂದು ನಮ್ಮ ಅಜ್ಜಿಗೆ ದುಂಬಾಲು ಬೀಳುತ್ತಿದ್ದಳು. ಗಾಡಿ ಸಿಗಬೇಕಲ್ಲವ್ವಾ ಎಂದು ನಮ್ಮ ಅಜ್ಜಿ ರಾಗ ಎಳೆಯುತ್ತಿದ್ದಳು. "ಬಸಣ್ಣಂದು ಕಾರಿಲ್ವಾ ನಮ್ಮ ತಾವು?". ಎಂದು ಭದ್ರಕ್ಕ ಯಥಾಪ್ರಕಾರ ಗಟ್ಟಿಯಾಗಿ ನಗುತಾ ಇದ್ದಳು. ಅಲ್ಲಿಗೆ ನಾವು ಚನ್ನಗಿರಿಗೆ ಹೋಗೋದು ಖಾತ್ರಿಯಾದಂತೆ. ಬಸಣ್ಣ ಕೀಲು ಹೆರೆದು ಬಂಡಿ ರೆಡಿ ಮಾಡೋನು. ಇನ್ನೂ ಒಂದೆರಡು ಮನೆಯವರು ನಮ್ಮೊಟ್ಟಿಗೆ ಸೇರಿಕೊಳ್ಳುತಾ ಇದ್ದರು. ಬುತ್ತಿಕಟ್ಟಿಕೊಂಡು ಆರುಗಂಟೆಗೆ ನಾವು ನಮ್ಮ ಹಳ್ಳಿಯಿಂದ ಹೊರಟೆವೆಂದರೆ, ಕಣಿವೆ ದಾಟುವಾಗ ಹುಡುಗರಾದ ನಮಗೆಲ್ಲಾ ಪುಕುಪುಕು ಅನ್ನುತಾ ಇತ್ತು. ಎರಡೂ ಪಕ್ಕ ಎತ್ತರೆತ್ತರಕ್ಕೆ ಬೆಳೆದ ಸಾಲ್ಮರಗಳು. ಪಕ್ಕದಲ್ಲೇ ಮಟ್ಟಿಯ ಕಾಡು. ಅಲ್ಲಿ ಹುಲಿ ಚಿರತೆಗಳು ಇವೆ ಅಂತ ನನ್ನ ಸಹಪಾಠಿಗಳು ಯಾವಾಗಲೂ ನನ್ನನ್ನು ಹೆದರಿಸುತ್ತಾ ಇದ್ದರು. ನಾನು ಭದ್ರಕ್ಕನ ತೊಡೆಯ ಮೇಲೆ ತಲೆಯಿಟ್ಟು ಗಟ್ಟಿಯಾಗಿ ಕಣ್ಮುಚ್ಚಿಕೊಂಡು ಮಲಗಿಬಿಡುತ್ತಾ ಇದ್ದೆ. ಘುಲು ಘುಲು ಕೊರಳ ಗಂಟೆಯ ಸದ್ದು ಮಾಡುತ್ತಾ, ಏರ್‍ಇನಲ್ಲಿ ಮುಸುಕರೆಯುತ್ತಾ ಎತ್ತುಗಳು ಗಾಡಿ ಎಳೆಯುತ್ತಾ ಇದ್ದವು. ಪಶ್ಚಿಮದಿಂದ ಗಾಳಿಬೀಸುತ್ತಾ , ಚಕ್ರದ ಧೂಳು ಗಾಡಿಯಮೇಲೆ ಇದ್ದವರ ಕಣ್ಣಿಗೇ ಬರುತ್ತಾ ಇತ್ತು. ಎಲ್ಲಾ ಪೂರ್ವಾಭಿಮುಖವಾಗಿ ತಿರುಗಿ ಕುಳಿತುಕೊಳ್ಳುತ್ತಾ ಇದ್ದರು. ಬಸಣ್ಣ ಎತ್ತಿನ ಬಾಲ ಮುರಿಯುತ್ತಾ -ಏ ಈರಾ... ಹುಲಿಯಾ ..ಎಂದು ಅವನ್ನು ಬೀಸುಹೆಜ್ಜೆಯಲ್ಲಿ ನಡೆಯಲಿಕ್ಕೆ ಹುರಿದುಂಬಿಸುತ್ತಾ ಇದ್ದನು. ನಮ್ಮ ಗಾಡಿ ಚನ್ನಗಿರಿಯ ಟೋಲ್ ಗೇಟು ದಾಟುವ ವೇಳೆಗೆ ಎಂಟುಗಂಟೆಯಾಗಿರೋದು. ಚನ್ನಗಿರಿಯ ವಿದ್ಯುದ್ ದೀಪಗಳು ಆಕಾಶದ ನಕ್ಷತ್ರಗಳೊಂದಿಗೆ ಸ್ಪರ್ಧಿಸುತ್ತಾ ಹುಡುಗರಾದ ನಮ್ಮನ್ನು ನಿಬ್ಬೆರಗುಗೊಳಿಸುತ್ತಾ ಇದ್ದವು. ಅಲ್ಲೇ ಎಡಕ್ಕೆ ತಣ್ಣೀರು ಹೊಂಡ. ಅಲ್ಲಿ ಮೆಟ್ಟಿಲು ಇಳಿದು ಬುತ್ತಿ ಊಟ ಮುಗಿಸುತ್ತಿದ್ದೆವು. ಆಮೇಲೆ ಮತ್ತೆ ಎತ್ತುಹೂಡಿಕೊಂಡು ಟೆಂಟಿನ ಬಳಿಹೋಗಿ ಅಲ್ಲಿ ಕೊಳ್ಳು ಹರಿದು, ಸಿನಿಮಾ ಟೆಂಟಿಗೆ ನುಗ್ಗುತ್ತಾ ಇದ್ದೆವು. ನೆಲ, ಚಾಪೆ, ಬೆಂಚು ಅಂತ ಮೂರು ವಿಭಾಗ. ನಾವು ಚಾಪೆ ಟಿಕೆಟ್ಟು ಸಾಮಾನ್ಯವಾಗಿ ತೆಗೆದುಕೊಳ್ಳುತ್ತಾ ಇದ್ದೆವು. ಮೊದಲು, "ಬರುತ್ತದೆ", "ಶೀಘ್ರದಲ್ಲಿ ನಿರೀಕ್ಷಿಸಿ" ಎಂದು ಕೆಲವು ಸಿನಿಮಾಗಳ ಪ್ರಕಟಣೆ. ಅಲ್ಲಿ ಪರಿಚಿತರಾದ ಹೊನ್ನಪ್ಪಭಾಗವತರೋ, ಪ್ರೇಮ್ ನಜೀರೋ, ಇಂದುಶೇಖರ್ರೋ ಕಂಡಾಗ ಸಿಳ್ಳೆ ಹೊಡೆಯುವುದು, ಅರಚುವುದು ಆಗುತ್ತಿತ್ತು. ಕೊನೆಗೆ ಮದಾಲಸೆ ಶುರುವಾಯಿತು. ಮಂತ್ರ ತಂತ್ರದ ರೋಮಾಂಚಕಾರೀ ಕಥೆ. ಮಂತ್ರವಾದಿ ಬಂದಾಗಂತೂ ನಾನು ಅಜ್ಜಿಯ ಸೆರಗಲ್ಲಿ ಮುಸುಕು ಹಾಕಿಕೊಂಡು ಮಲಗಿ ಬಿಟ್ಟೆ. ಯಾವ ಮಾಯದಲ್ಲಿ ನಿದ್ದೆ ಬರುತ್ತಾ ಇತ್ತೋ! ಮತ್ತೆ ಯಾವಾಗಲೋ ಎಚ್ಚರವಾದಾಗ ಕಣಿವೆಯ ದಾರಿಯಲ್ಲಿ, ಗವ್ವೆನ್ನುವ ಕತ್ತಲಲ್ಲಿ, ಮೂಕಿಗೆ ಲಾಟೀನು ಕಟ್ಟಿಕೊಂಡ ನಮ್ಮ ಬಂಡಿ ಧಡ ಬಡ ಸಾಗುತಾ ಇರುತ್ತಿತ್ತು. ಸಾಲುಮರಗಳ ಭಯ ಹುಟ್ಟಿಸುವ ಕಪ್ಪು ನೆರಳು. ಮಧ್ಯೆ ಮಧ್ಯೆ ನಕ್ಷತ್ರಗಳ ಮಿನುಕು. ಮತ್ತೆ ಕಣ್ಣನ್ನು ಒತ್ತಿಕೊಂಡು ಬರುವ ನಿದ್ದೆ! ಮತ್ತೆ ನಮಗೆ ಎಚ್ಚರಾಗುತ್ತಿದ್ದುದು ಮರು ದಿನ ಬೆಳಿಗ್ಗೆಯೇ!
ಸಿನಿಮಾ ಭದ್ರಕ್ಕನಿಗೆ ಬರೀ ರಂಜನೆಯ ವಿಷಯವಾಗಿತ್ತು,ಅಷ್ಟೆ! ಅವಳ ನಿಜವಾದ ಕಲಾಪ್ರೇಮ ಆರಾಧನೆಯ ನೆಲೆಯಲ್ಲಿ ವ್ಯಕ್ತವಾಗುವುದನ್ನು ನೋಡಬೇಕೆಂದರೆ ಗೊಂಬೆ ಮ್ಯಾಳದಲ್ಲಿ ಅವಳು ತೊಡಗಿಕೊಳ್ಳುತ್ತಿದ್ದ ರೀತಿಯನ್ನು ಗಮನಿಸಬೇಕು.ಅವಳ ದನಗಳಲ್ಲಿ ಯಾವುದಾದರೂ ಒಂದಕ್ಕೆ ಕಾಲುಜ್ವರವೋ, ಬಾಯಿಜ್ವರವೋ ಬಂತೂ ಎನ್ನಿ, ಭದ್ರಕ್ಕ ಮಟ್ಟೀರಂಗಪ್ಪನಿಗೆ ಹರಕೆ ಹೊರುತ್ತಿದ್ದಳು. ತಾನು ವೀರಶೈವಳು, ವೈಷ್ಣವದೇವರಾದ ರಂಗನಾಥನಿಗೆ ಹರಸಿಕೊಳ್ಳುವುದು ಯುಕ್ತವೇ ಇತ್ಯಾದಿ ಧರ್ಮಸೂಕ್ಷ್ಮಗಳು ಮುಗ್ಧೆಯಾದ ಆಕೆಗೆ ಹೊಳೆಯುತ್ತಲೇ ಇರಲಿಲ್ಲ. ಅವಳು ದೇವರುಗಳ ಸಂಬಂಧವನ್ನು ವಿವರಿಸುವ ರೀತಿಯನ್ನು ಅವಳ ಬಾಯಲ್ಲೇ ಕೇಳಬೇಕು. ಅವಳ ಪ್ರಕಾರ ಮಟ್ಟಿರಂಗ, ಕಲ್ಲುಗುಡಿ ಈಶ್ವರನ ಅಣ್ಣ. ಗ್ರಾಮದೇವತೆ ಕೆಂಚಮ್ಮ ಇಬ್ಬರಿಗೂ ತಂಗಿ. ಬೆಂಕೀಕೆರೆ ಕರಿಯವ್ವ ಕೆಂಚಮ್ಮನ ವಾರಗಿತ್ತಿ. ತಾನು ಕಪ್ಪಾಗಿರುವುದೂ, ಕೆಂಚಮ್ಮ ಕೆಂಪಾಗಿರುವುದೂ ಅವಳಿಗೆ ಸಹಿಸದು. ಆದುದರಿಂದ ಇಬ್ಬರಲ್ಲೂ ಸ್ವಲ್ಪ ತಿಕ್ಕಾಟವಿದೆ. ಆದರೆ ರಂಗಪ್ಪ ಮತ್ತು ಕಲ್ಲುಗುಡಿ ಈಶ್ವರ ಈ ದೇವಿಯರಿಗೆ ಬುದ್ಧಿಹೇಳಿ ಪ್ರತೀ ಯುಗಾದಿಗೊಮ್ಮೆ ಅವರನ್ನು ಒಟ್ಟುಗೂಡಿಸುತ್ತಾರೆ. ಸುಲಭಕ್ಕೆ ಅವರು ರಾಜಿಗೆ ಒಪ್ಪುವುದಿಲ್ಲ. ಆದರೆ ಮಟ್ಟಿರಂಗ ಮತ್ತೂ ಕಲ್ಲುಗುಡಿ ಈಶ್ವರ ಅಷ್ಟು ಸುಲಭಕ್ಕೆ ಬಿಡುವ ಪೈಕಿ ಅಲ್ಲ. ಅವರು ಇಬ್ಬರು ಹೆಣ್ಣು ದೇವತೆಗಳಿಗೂ ಬೈದು ಬುದ್ಧಿ ಹೇಳಿ ಕೊನೆಗೂ ಅವರನ್ನು ಒಂದೇ ಮಂಟಪದಲ್ಲಿ ಕುಳಿತುಕೊಳ್ಳಲು ಮನಸ್ಸು ಒಲಿಸುತ್ತಾರೆ. ಇದೇ ಯುಗಾದಿಯ ಬೆಳಿಗ್ಗೆ ನಮ್ಮೂರಲ್ಲಿ ನಡೆಯುವ ದೊಡ್ಡ ಹಗರಣ! ಇದನ್ನೆಲ್ಲಾ ನಮ್ಮೂರ ಭಕ್ತರು ಬಹಳು ತಮಾಷೆಯಾಗಿ, ಖುಷಿಯಾಗಿ, ಭಯಭೀತಿಗಳ ಸಮೇತ ನೋಡಿ ನೋಡಿ ಆನಂದಿಸುತ್ತಾ ಇದ್ದರು. ನಮ್ಮ ಭದ್ರಕ್ಕ ಕಲ್ಲುಗುಡಿಯ ಈಶ್ವರನ ಭಕ್ತೆಯಾಗಿರುವಂತೇ, ಮಟ್ಟೀರಂಗನ ಅಂತರಂಗದ ಒಕ್ಕಲೂ ಹೌದು! ಹಾಗಾಗಿ ಅವಳು ಮಟ್ಟಿರಂಗನಿಗೆ ಹರಕೆ ಒಪ್ಪಿಸುವುದರಲ್ಲಿ ಏನೂ ತಪ್ಪಿಲ್ಲ. ಕೆಲವುಬಾರು ಕಲ್ಲುಗುಡಿ ಈಶ್ವರನೇ ಮಟ್ಟೀ ರಂಗನಿಗೆ ಹರಕೆ ಒಪ್ಪಿಸುವಂತೆ ಸೂಚಿಸುವುದೂ ಉಂಟು. ಹೀಗೆ ನಮ್ಮ ಊರಿನ ದೇವತೆಗಳು ತಮ್ಮ ತಮ್ಮ ಜಾತಿ ಪಂಥ ಮರೆತು ತುಂಬ ಅನ್ಯೋನ್ಯವಾಗಿ ಹೊಂದಿಕೊಂಡು ಬಾಳುವೆ ಮಾಡುತ್ತಿದ್ದವು. ಸಾಬರ ದೇವರೂ ಕಲ್ಲುಗುಡಿ ಈಶ್ವರನ ಹಿಂದಿನ ಪೌಳಿಯಲ್ಲೇ ವಾಸವಾಗಿರುತ್ತಾ ಅವರಿಬ್ಬರೂ ಆಪ್ತಮಿತ್ರರೆಂದೂ, ರಾತ್ರಿ ನಿದ್ದೆ ಬರದಿದ್ದಾಗ ಇಬ್ಬರೂ ಚಾವಡಿಯಲ್ಲಿ ಕೂತು ಪಗಡೆ ಆಡುತ್ತಾರೆಂದೂ, ನಮ್ಮ ಹಳ್ಳಿಯಲ್ಲಿ ಹಳೇ ಮುದುಕರು ಕಥೆ ಹೇಳುತಾ ಇದ್ದರು. ಗೀಬಿನ ಹಾಲು ಮತ್ತು ಸಕ್ಕರೆ ಈಶ್ವರ ಮತ್ತು ಸಾಬರದೇವರಿಗೆ ಓದಿಸಿ ಭದ್ರಕ್ಕ ಮೀಸಲು ಮುರಿಯುತ್ತಾ ಇದ್ದಳು.
ಭದ್ರಕ್ಕ ಹರಕೆ ಆಟ ಆಡಿಸಲಿಕ್ಕೆ ಅಕ್ಕಿ,ಕಾಯಿ,ಬೆಲ್ಲ, ವೀಳ್ಯ(ಜೊತೆಗೆ ನೂರಾಒಂದು ರೂಪಾಯಿ)ಸಮೇತ ಗಂಗೂರಿಗೆ ಹೋಗಿ ಅಲ್ಲಿದ್ದ ಗೊಂಬೇಮೇಳದ ಗೋಪಾಲಯ್ಯನವರಿಗೆ ವೀಳ್ಯಕೊಟ್ಟು ಬರುತ್ತಿದ್ದಳು. ಭದ್ರಕ್ಕ ಗಂಗೂರಿಗೆ ಹೋಗಿಬಂದದ್ದು ರಾತ್ರಿಯೊಳಗಾಗಿ ಊರಿನ ತುಂಬಾ ಢಾಣಾ ಡಂಗುರವಾಗಿ ಹೋಗುತ್ತಿತ್ತು. ಭಾನುವಾರ ಆಟ ಎಂದರೆ ಶನಿವಾರವೇ ಚಟುವಟಿಕೆ ಶುರು. ತುಟಿದಪ್ಪದ ನಿಂಗಣ್ಣ ತನ್ನ ಗರಡಿ ಹೈಕಳ ಸಮೇತ ಊರ ಹೊರಗಿನ ಕಣಗಳಿಗೆ ಹೋಗಿ, ಅಲ್ಲಿ ಸುಗ್ಗಿಯನ್ನು ಕಾಯುತ್ತಾ ಬಿಸಿಲಲ್ಲಿ ಬಿದ್ದಿರುತ್ತಿದ್ದ ಭಾರೀ ಗಾತ್ರದ ರೋಂಡುಗಲ್ಲುಗಳನ್ನು ಉರುಳಿಸಿಕೊಂಡು ಕಲ್ಲುಗುಡಿಯ ಬಳಿ ಬರುತಾ ಇದ್ದ.ಕಣದಿಂದ ರೋಂಡುಗಲ್ಲುಗಳು ಹೀಗೆ ಊರೊಳಕ್ಕೆ ಬಂದವೂ ಅಂದರೆ ಗೊಂಬೇ ಆಟ ಖಾತ್ರಿ.ನಾವು ಹುಡುಗರೆಲ್ಲಾ ಹೋ ಅಂತ ಅರಚುತ್ತಾ ಗುಡುಗುಡು ಉರುಳುತ್ತಿದ್ದ ರೋಂಡುಗಲ್ಲನ್ನು ಹಿಂಬಾಲಿಸುತ್ತಾ ಇದ್ದೆವು.ಗುಡಿಯ ಮುಂದೆ ರೋಂಡುಗಲ್ಲು ಬಂದಮೇಲೆ ನಾಕು ಮೂಲೆಗೂ ನಾಕು ಕಲ್ಲು ಇಟ್ಟು. ಅವು ಅಲುಗಾಡದಂತೆ ತಳಕ್ಕೆ ಚಪ್ಪೆಕಲ್ಲು ಕೊಟ್ಟು, ಅವುಗಳ ಮೇಲೆ ಅಡಕೆ ಬೊಂಬುಹಾಸಿ. ತುಟಿದಪ್ಪ ಮಂತು ಸಿದ್ಧಪಡಿಸುತ್ತಿದ್ದ.ಸುತ್ತಾ ಚಚ್ಚೌಕಾಕಾರದ ಚಪ್ಪರ. ಅದರ ಮೇಲೆ ತೆಂಗಿನ ಗರಿ. ನಾಕೂ ಕಂಬಕ್ಕೆ ಬಾಳೇ ಕಂದು. ಚಪ್ಪರದ ಮೇಲೆ ಮಾವಿನ ತೋರಣ. ಮಂತಿನ ಅರ್ಧಭಾಗಕ್ಕೆ ಅಡ್ಡ ತರೆ. ಕೆಳಗಿಂದ ಒಂದು ಮೇಲಕ್ಕೆ. ಮೇಲಿಂದ ಒಂದು ಕೆಳಕ್ಕೆ. ಅವೆರಡರ ಮಧ್ಯೆ ಒಂದಡಿ ಜಾಗ. ಅಲ್ಲಿಂದ ಮೇಳದವರು ಬೊಂಬೆಗಳನ್ನು ಮಂತಿನ ಮೇಲೆ ಇಳಿಸಿ ಪ್ರಸಂಗ ನಡೆಸುತ್ತಿದ್ದರು. ಬೊಂಬೆ ಕುಣಿಸುವ ಸೂತ್ರಧಾರಿಗಳು ಪ್ರೇಕ್ಷಕರಿಗೆ ಕಾಣುವುದಿಲ್ಲ. ಬೊಂಬೆಗಳು ಮಾತ್ರ ಕಾಣುತ್ತವೆ. ಇಷ್ಟೆಲ್ಲಾ ಸಿದ್ಧತೆಯಾಗುವಾಗ ನಾವುಗಳು ಸ್ಕೂಲಿಗೂ ಚಕ್ಕರ್ ಹಾಕಿ ಗುಡಿಯ ಮುಂದೇ ಠಿಕಾಣಿ ಹಾಕುತಾ ಇದ್ದೆವು. ನಮಗೆ ಆ ವೇಳೆ ಹಸಿವು ನೀರಡಿಕೆ ಏನೂ ಆಗದು.ಸಂಜೆಯ ವೇಳೆಗೆ ಮಂತು ಕಟ್ಟುವುದು ಮುಗಿಯುತ್ತಿತ್ತು.ಭಾನುವಾರ ಹೇಗೂ ಶಾಲೆಗೆ ಚುಟ್ಟಿ. ಬೆಳಗಿನಿಂದ ಹಳ್ಳಿಯಲ್ಲಿ ನಾವು ಪೇರಿಹೊಡೆಯುವುದು ಶುರುವಾಗುತ್ತಿತ್ತು.ಕೆಂಚಲಿಂಗಪ್ಪ, ಟಿ.ಕೆಂಚಣ್ಣ, ಗಿಡ್ಡ ನಿಂಗಪ್ಪ, ದಳವಾಯಿ, ಕಂಠಮಾಲೆ ಮಲ್ಲಣ್ಣ ಎಲ್ಲರೂ ಕೂಡಿ ಕಲ್ಲುಗುಡಿಯ ಬಳಿ ಹೋಗುತ್ತಿದ್ದೆವು. ಕಲ್ಲುಗುಡಿಯ ಪಕ್ಕದಲ್ಲೇ ಭದ್ರಕ್ಕನ ಮನೆ. ಅಲ್ಲಿಗೆ ತಾನೆ ಗಂಗೂರಿನ ಮೇಳದವರ ಎತ್ತಿನ ಬಂಡಿ ಬರಬೇಕು? ಸಾಮಾನ್ಯವಾಗಿ ಎರಡು ಗಾಡಿಯಲ್ಲಿ ಮೇಳದವರು ಬರುತ್ತಿದ್ದರು. ಒಂದೊಂದು ಗಾಡಿಯಲ್ಲಿ ಒಂದೊಂದು ದೊಡ್ಡ ಪೆಟ್ಟಿಗೆ. ಅವುಗಳಲ್ಲಿ ಗೊಂಬೆಗಳಿರುತ್ತಿದ್ದವು. ಮುಂದಿನ ಗಾಡಿಯಲ್ಲಿ ಪಾಂಡವರ ಪೆಟ್ಟಿಗೆ. ಹಿಂದಿನ ಗಾಡಿಯಲ್ಲಿ ಕೌರವರ ಪೆಟ್ಟಿಗೆ.ಮೊದಲೆಲ್ಲಾ ಪಾಂಡವರು ಮತ್ತು ಕೌರವರ ಬೊಂಬೆಗಳನ್ನು ಒಂದೇ ಪೆಟ್ಟಿಗೆಯಲ್ಲಿ ಇಡುತ್ತಾ ಇದ್ದರಂತೆ. ಹುಣ್ಣೀಮೆ ಅಮಾವಾಸ್ಯೆ ಬಂತೆಂದರೆ ಸರುವೊತ್ತಿನಲ್ಲಿ ಮ್ಯಾಳದವರ ಮನೆಯಲ್ಲಿ ಧಬ ಧಬ ಸದ್ದು ಶುರುವಾಗುತ್ತಿತ್ತು. ಒಬ್ಬರನ್ನೊಬ್ಬರು ಗುದ್ದುವ ಸದ್ದು ಅದು. ಏನಪ್ಪ ಅಂತ ನೋಡಿದರೆ ಸದ್ದು ಗೊಂಬೆ ಪೆಟ್ಟಿಗೆಯಿಂದ ಬರುತ್ತಾ ಇದೆ. ಮ್ಯಾಳದವರಿಗೆ ಗೊತ್ತಾಯಿತು. ರಾತ್ರಿಯಾದ ಮೇಲೆ ಕೌರವರು ಪಾಂಡವರು ಜಗಳ ಶುರು ಹಚ್ಚುತ್ತಾರೆ ಅಂತ. ಕೆಲವು ಗೊಂಬೆಗಳ ಕೈಕಾಲೇ ಮುರಿದು ಹೋಗಿರೋವಂತೆ. ಈ ಅನಾಹುತ ತಪ್ಪಿಸಲಿಕ್ಕಾಗಿ ಎರಡು ಪೆಟ್ಟಿಗೆ ಮಾಡಿ, ಒಂದರಲ್ಲಿ ಕೌರವರನ್ನೂ, ಇನ್ನೊಂದರಲ್ಲಿ ಪಾಂಡವರನ್ನೂ ಇಡುವ ಸಂಪ್ರದಾಯ ರೂಢಿಗೆ ಬಂತಂತೆ. ಇದನ್ನು ನಮಗೆ ಹೇಳಿದ್ದು ಉಷ್ಟುಮರ ಗೋವಿಂದಣ್ಣ. ನಮಗಂತೂ ಈ ವಿಷಯದಲ್ಲಿ ಯಾವುದೇ ಅಪನಂಬಿಕೆ ಇಲ್ಲ. ಕೌರವರು ಪಾಂಡವರು ಒಂದೇ ಪೆಟ್ಟಿಗೆಯಲ್ಲಿ ಹೇಗೆ ತಾನೇ ತಣ್ಣಗೆ ಮಲಗಿರೋದು ಸಾಧ್ಯ?
ಸಂಜೆ ಏಳು ಗಂಟೆ ವೇಳೆಗೆ ಗಂಗೂರಿನವರ ಮೇಳದ ಬಂಡಿಗಳು ಬರುತ್ತಾ ಇದ್ದವು. ಆಗ ನಾವೆಲ್ಲಾ ಕೂಡಿ ಒಮ್ಮೆ ಗಟ್ಟಿಯಾಗಿ ಅರಚಿಕೊಳ್ಳುತ್ತಿದ್ದೆವು. ಆಟ ರಾತ್ರಿ ಇದೆ ಎನ್ನುವುದು ಖಾತ್ರಿಯಾಯಿತಲ್ಲ, ಓಡುತ್ತಿದ್ದೆವು ನೋಡು ಹಾರಿಗ್ಗಾಲು! ನಮ್ಮ ನಮ್ಮ ಜಗಲಿಯ ಮೇಲೆ ಚಾಪೆ, ಜಮಖಾನ ಬಿಡಿಸಿ ಜಾಗ ಕಾದಿರಿಸುವುದಕ್ಕಾಗಿ ಈ ಓಟ. ನಮ್ಮ ಕೇರಿಯಲ್ಲಿ ಗುಂಡಾ ಶಾಸ್ತ್ರಿಗಳು ಬಹಳ ಮಡೀ ಮೈಲಿಗೆ ನೋಡುವ ಜನ. ಯಾರು ಯಾರೋ ಬಂದು ರಾತ್ರಿ ಜಗಲಿಯಮೇಲೆ ಕೂತು, ಕಟ್ಟೆಯ ಕೆಳಗೆಲ್ಲಾ ತಂಬುಲ ಉಗಿದು, ಹೊಲಸು ಮಾಡುತ್ತಾರೆ ಅಂತ ಈ ಪುಣ್ಯಾತ್ಮ, ಕಟ್ಟೆಯ ಮೇಲೆ ಕೊಡಗಟ್ಟಲೆ ನೀರುಸುರಿಯುತ್ತಾ ಇದ್ದರು! ಥೂ! ಎಂಥಾ ಜನವಪ್ಪಾ ಇವರು! ತಾವೂ ನೋಡುವುದಿಲ್ಲ, ಬೇರೆಯವರು ನೋಡಲಿಕ್ಕೂ ಬಿಡುವುದಿಲ್ಲ ಎಂದು ನಾವು ಹುಡುಗರು ಶಾಸ್ತ್ರಿಗಳನ್ನು ಮನಸ್ಸಲ್ಲೇ ಬಯ್ಯುತ್ತಾ ಇದ್ದೆವು.ಇತ್ತ ನಾಡಿಗರ ಮನೆಯಲ್ಲಿ ಮ್ಯಾಳದವರಿಗೆ ರಾತ್ರಿಯೆಲ್ಲಾ ಕಾಫಿ ಸರಬರಾಜು ಮಾಡಲಿಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಾ ಇದ್ದವು. ಭದ್ರಕ್ಕನ ಮನೆಯಿಂದ ಒಂದು ತಪ್ಪಲೆ ಹಾಲು ಬರುತಾ ಇತ್ತು. ಅಂಗಡಿ ಸಾಂಶಿವಣ್ಣ ಎರಡು ದೊಡ್ಡ ಪೊಟ್ಟಣ ಕಾಫೀ ಪುಡಿ, ಆರು ಬೆಲ್ಲದಚ್ಚು ಕಳಿಸುತಾ ಇದ್ದ. ದೊಡ್ಡ ತಪ್ಪಲೆಯಲ್ಲಿ ನೀರು ಕುದಿಯಲಿಕ್ಕೆ ಇಡುತಾ ಇದ್ದರು. ಇಡೀ ರಾತ್ರಿ ಮ್ಯಾಳದವರಿಗೆ ಕಾಫಿ ಸರಬರಾಜು ಆಗಬೇಕಾಗಿತ್ತು. ಮತ್ತೆ, ರಾತ್ರಿಯೆಲ್ಲಾ ಅವರು ನಿದ್ದೆಗೆಟ್ಟು ಕುಣಿಯ ಬೇಕಲ್ಲ? ಅಗೋ! ಭದ್ರಕ್ಕ ಗಟ್ಟಿಯಾಗಿ ಕೈ ಬೀಸಿಕೊಂಡು ನಾಡಿಗರ ಮನೆಯತ್ತ ಬರುತ್ತಾ ಇದ್ದಾಳೆ. "ಅಕ್ಕಾವರೇ... ಹಾಲು ಬೇಕಾದರೆ ಹೇಳ್ರಿ ಮತ್ತೆ...ಭೋ ಚಂದ ಆಗಬೇಕು ನೋಡ್ರಿ ಮತ್ತೆ... ಇಲ್ಲಾ ಅಂದರೆ ಈ ಮ್ಯಾಳದವರು ನನ್ನ ಮಾನ ತೆಗೆದು ಬಿಡ್ತಾರೆ! ಹೋದ ಸಾರಿ ಏನಾಯ್ತು ಗೊತ್ತಾ?" ಎಂದು ಹಳೆಯ ಪ್ರಸಂಗ ನಾಡಿಗರ ಮನೆಯಲ್ಲಿ ಬಿಚ್ಚುತಾ ಇದ್ದಳು. ಗೊಂಬೇ ಮ್ಯಾಳದಲ್ಲಿ ವಿದೂಷಕನದು ಒಂದು ಖಾಯಮ್ ಪಾತ್ರ ಇರುತ್ತದೆ. ಹನುಮನಾಯಕ ಅಂತ ಅವನ ಹೆಸರು. ಅವನ ಹೆಂಡತಿ ಅಕ್ಕಾಸಾಬಿ ಅಂತ. ಅಕ್ಕಾಸಾಬಿಗೆ ಪುಂಡೀನಾರಿನ ಜಡೇ! ಕಾಳಗಪ್ಪು ಬಣ್ಣ. ಅವಳು ರಂಗದ ಮೇಲೆ ಬರಬೇಕಾದರೆ ಎಷ್ಟು ವಯ್ಯಾರ ಮಾಡುತ್ತಾಳೆ ಗೊತ್ತಾ? ಭಾಗವತಣ್ಣಾ...ಬರಲಾ...ಬರಲಾ? ಅಂತ ಮತ್ತೆ ಮತ್ತೆ ಕೇಳುತ್ತಾಳೆ. ಗೌಡರ ಸಾಂಬಣ್ಣ ಇಲ್ಲ ತಾನೇ? ಗಡ್ಡದ ಬುಡೇನ್ ಸಾಬ್ರು ಇಲ್ಲಾ ತಾನೆ? ಅಂತ ಕೇಳುತ್ತಾಳೆ. ಗೌಡರ ಸಾಂಬಣ್ಣ, ಬುಡೇನ್ ಸಾಬ್ರು ಇವರೆಲ್ಲ ನಮ್ಮ ಹಳ್ಳಿಯ ಮುಖ್ಯಸ್ಥರು. ಅಕ್ಕಾಸಾಬಿ ಅವರ ಹೆಸರು ಹಿಡಿದು ಕಿಚಾಯಿಸುತ್ತಾಳೆ. ಅವರಿಬ್ಬರಿಗೂ ಕಚ್ಚೆ ಸ್ವಲ್ಪ ಸಡಿಲು ಭಾಗ್ವತಣ್ಣಾ... ನನ್ನ ನೋಡಿದರೂ ಅಂದರೆ ಮನೆ ಮಾರು ಆಸ್ತಿ ಪಾಸ್ತಿ ಎಲ್ಲಾ ಬಿಟ್ಟು ನನ್ನ ಹಿಂದೇ ಓಡಿ ಬಂದುಬಿಡ್ತಾರೆ! ಎಂದು ಅಕ್ಕಾ ಸಾಬಿ ಹಾಸ್ಯ ಮಾಡುತ್ತಾಳೆ. ಜನ ಎಲ್ಲಾ ಹೋ ಎಂದು ಕಿರುಚುತ್ತಾ ನಗುತ್ತಾರೆ. ಸಾಂಬಣ್ಣಾ... ಅಂತ ಕೆಲವರು ಕೂಗುತ್ತಾರೆ. ಹೋದ ಸಾರಿ ಏನಾಯಿತು ಅಂದರೆ, ಅಕ್ಕಾಸಾಬಿ ಬಹಳ ವಯ್ಯಾರ ಮಾಡಿ ರಂಗದ ಮೇಲೆ ಬಂದ ಮೇಲೆ ಭಾವತಣ್ಣ ಆಕೆಯನ್ನು" ಯಾಕವ್ವಾ ನೀನು ಇಷ್ಟು ಕಪ್ಪಾಗಿದ್ದೀ.. ಹೋದ ಸಾರಿ ಎಷ್ಟೊ ಬೆಳ್ಳಗಿದ್ದೆಯಲ್ಲ?" ಎನ್ನುತ್ತಾನೆ. ಆಗ ಅಕ್ಕಾ ಸಾಬಿ "ಈ ಸಾರಿ ಭದ್ರಕ್ಕ ಮಾಡಿಸಿದ ಕಾಫಿ ಕುಡಿದೆ ನೋಡು ಹಿಂಗಾಗಿ ಹೋತು ನನ್ನ ಕಲ್ಲರ್ರು!" ಅಂದು ಬಿಡೋದೆ?
ಭದ್ರಕ್ಕನಿಗೆ ಮ್ಯಾಳದ ದಿವಸ ಕಾಲೇ ನಿಲ್ಲೋದಿಲ್ಲ. ಮನೆ ಮನೆಗೂ ಅವಳು ಆವತ್ತು ಎಡಕಾಡುತ್ತಾಳೆ. ಕಂಠಮಾಲೆಯವರ ಮನೆಗೆ ಹೋಗಿ, ಈರಕ್ಕಾ...ದ್ರೌಪದಿಗೆ ನಿನ್ನ ಬುಟ್ಟಾ ಹೂವಿನ ರೇಷ್ಮೆ ಸೀರೇನೇ ಆಗಬೇಕು! ಅಂತ ಅದನ್ನ ಇಸಿದುಕೊಂಡು ಶ್ಯಾನುಭೋಗರ ಮನೆಗೆ ಬರುತ್ತಾಳೆ. ಪಾರ್ವತಮ್ಮನೋರೇ ಈವತ್ತು ಕೃಷ್ಣನಿಗೆ ನಿಮ್ಮ ಆನಂದ ಕಲರ್ ಸೀರೇ ಬೇಕು ಕಣ್ರೀ! ಎಂದು ಅವರಿಂದ ಕಡ ಪಡೆಯುತ್ತಾಳೆ. ಹೀಗೆ ಬೇರೆ ಬೇರೆ ಮನೆಯವರ ನಾನಾ ಬಗೆಯ ಸೀರೆಗಳು ಭದ್ರಕ್ಕನ ಮನೆ ಸೇರುತ್ತವೆ. ಇತ್ತ ಭದ್ರಕ್ಕನ ಮನೆಯಲ್ಲಿ ಮ್ಯಾಳದವರು ಹಗ್ಗ ಕಟ್ಟಿ ಸಾಲಾಗಿ ಗೊಂಬೆಗಳನ್ನು ನೇತು ಹಾಕಿದ್ದಾರೆ. ಮ್ಯಾಳದ ಯಜಮಾನರಾದ ನಾರಣಪ್ಪನವರು ಒಂದೊಂದೇ ಗೊಂಬೆಗೆ ಸೀರೆ ಉಡಿಸಿ ರೆಡಿ ಮಾಡುತ್ತಾರೆ. ಗಂಡು ಬೊಂಬೆಗಳ ವೇಷ ಬಹಳ ಸುಲಭ. ಸುಮ್ಮನೆ ಹೆಗಲಿಂದ ಮೂರು ಬಣ್ಣ ಬಣ್ಣದ ಸೀರೆ ಮಡಿಸಿ ಇಳಿಬಿಟ್ಟರೆ ಮುಗಿಯಿತು. ಇನ್ನು ನಮ್ಮ ಅಕ್ಕಾಸಾಬಿಗೆ ಭದ್ರಕ್ಕ ತನ್ನದೇ ಪಟ್ಟಾಪಟ್ಟಿ ಇಳಕಲ್ಲು ಸೀರೆ ಕೊಟ್ಟಿದ್ದಾಳೆ. ಗೊಂಬೆಗಳಿಗೆ ಅಲಂಕಾರ ಮಾಡುವುದು, ಹೂ ಮುಡಿಸುವುದು ಎಲ್ಲಾ ಸಾಂಗೋಪಾಂಗವಾಗಿ ನಡೆಯುತ್ತದೆ. ಒಂಬತ್ತು ಗಂಟೆಗೆ ಇದೆಲ್ಲಾ ಮುಗಿಯಿತು ಎಂದರೆ ಭಾವತರು ಬಂದು ಗೊಂಬೆಗಳಿಗೆ ಪೂಜೆ ಮಾಡಿ ಕರ್ಪೂರದಾರತಿ ಎತ್ತುತ್ತಾರೆ. ಅಲ್ಲಿಗೆ ಆಟಕ್ಕೆ ಎಲ್ಲವೂ ಸಿದ್ಧವಾದಂತೆ ಆಯಿತು. ಆ ರಾತ್ರಿ ಮ್ಯಾಳದವರು ಯಾರೂ ಊಟ ಮಾಡುವುದಿಲ್ಲ. ಊಟ ಮೈಲಿಗೆ ಅಂತ ಕೇವಲ ಉಪ್ಪಿಟ್ಟು ಅಥವಾ ಮಂಡಕ್ಕಿ ಉಸುಳಿಯ ಫಲಾಹಾರ ತೆಗೆದುಕೊಳ್ಳುತ್ತಾರೆ. ಠಾಕೋ ಠೀಕು ಹತ್ತು ಗಂಟೆಗೆ ಮಂತಿನ ಮುಂದೆ ಜನಸಾಗರವೇ ನೆರೆದುಬಿಟ್ಟಿರುತ್ತದೆ. ನಾವು ರಾತ್ರಿಯೆಲ್ಲಾ ಬಯಲಲ್ಲೇ ಕಳೆಯಲು ಮನೆಯಿಂದ ಸಿದ್ಧರಾಗಿಯೇ ಬಂದಿರುತ್ತೇವೆ. ತಲೆಗೆ ಮಂಕೀಕ್ಯಾಪು. ಮೈತುಂಬ ಸ್ವೆಟ್ಟರ್ರು. ನಿದ್ದೆ ಬಂದರೆ ಅಲ್ಲೇ ಮಲಗಲಿಕ್ಕೆ ಒಂದು ದುಪಟಿ! ಇದು ನಮ್ಮ ಸಿದ್ಧತೆಯಾದರೆ ನಮ್ಮಜ್ಜಿ ಹುರಿಗಾಳು, ಚಕ್ಕುಲಿ, ಕೋಡಬಳೆಯ ಡಬ್ಬವನ್ನೇ ತಂದಿಟ್ಟುಕೊಂಡಿದ್ದಾಳೆ! ಬೀದಿಯ ತುದಿಯಲ್ಲಿ ಒಡೆಮಲ್ಲಣ್ಣ ಆಗಲೇ ಬಿಸಿಬಿಸಿ ಒಡೆ ಕರಿಯಲಿಕ್ಕೆ ಶುರು ಹಚ್ಚಿದ್ದಾನೆ. ಒಡೇ ಮಂಡಕ್ಕಿ ಕೊಂಡು ಜನ ಆಟ ನೋಡಲು ಜಮಾಯಿಸುತ್ತಿದ್ದಾರೆ. ಆ ಗಮ್ಮು, ಆ ವಾಸನೆ ಇವೆಲ್ಲಾ ವರ್ಣಿಸಲಿಕ್ಕೆ ಸಾಧ್ಯವೇ ಇಲ್ಲ. ಯಾವಾಗ ಆಟ ಶುರುವಾಗುವುದೋ ಎಂದು ನಾವೆಲ್ಲಾ ಕಣ್ಣಲ್ಲಿ ಎಣ್ಣೆಬಿಟ್ಟುಕೊಂಡು ಕೂತಿದ್ದೇವೆ!

***
ಅಲ್ಲಾಡಿರುದ್ರಣ್ಣನವರ ಪತ್ರ ಬಂದಾಗ ಈ ನನ್ನ ಬಾಲ್ಯದ ನೆನಪುಗಳೆಲ್ಲಾ ಒಂದೊಂದಾಗಿ ಸಿನಿಮಾದಂತೆ ನನ್ನ ಕಣ್ಣುಮುಂದೆ ಸುಳಿದು ಹೋದವು.ನನ್ನ ಹೆಂಡತಿ ಬಂದು"ಏನು? ಹಿಂಗೆ ಗರಬಡಿದಹಂಗೆ ಕೂತಿದ್ದೀರಿ?"ಎಂದು ಕೇಳಿದಾಗಲೇ ನಾನು ಜಾಗೃತ ಪ್ರಪಂಚಕ್ಕೆ ಬಂದದ್ದು. ನಾನು ಊರಿಗೆ ಹೋಗಬೇಕು ಕಣೇ...ಭದ್ರಕ್ಕ ನೆಲ ಹಿಡಿದು ಬಿಟ್ಟಿದ್ದಾಳಂತೆ.ಅವಳ ಕೊನೇ ಆಸೆಯಂತೆ ಗೊಂಬೆ ಮ್ಯಾಳ ಏರ್ಪಾಡುಮಾಡಿದಾರಂತೆ..ನೋಡು...ಅಲ್ಲಾಡಿರುದ್ರಣ್ಣನೋರ ಕಾಗದ ಬಂದಿದೆ ಎಂದು ಪತ್ರವನ್ನು ಅವಳ ಕೈಗೆ ಕೊಡುತ್ತೇನೆ. ಭದ್ರಕ್ಕಾ ಅಂದರೆ ಮೊದಲಿಂದಲೂ ನಿಮಗೆ ಜೀವ. ಹೋಗಿ ಬನ್ನಿ...ಪಾಪ... ನಾವು ಮದುವೆಯಾದ ಹೊಸದರಲ್ಲಿ ನನ್ನನ್ನ ಮನೆಗೆ ಕರೆದು ಜರಿಯಂಚಿನ ಕ್ರೇಪು ಸೀರೆ ಕೊಟ್ಟಿದ್ದಳು..ಎಂದು ನನ್ನ ಹೆಂಡತಿ ನೆನಪು ಮಾಡಿಕೊಳ್ಳುತ್ತಾಳೆ.
ರಾತ್ರಿ ಆಟ ಎನ್ನುವಾಗ ಬೆಳಿಗ್ಗೆ ನಾನು ಮೇಲ್ ಟ್ರೇನ್ ಹಿಡಿದು ಊರು ತಲಪಿದೆ. ಹೋದವನೇ ಹಣ್ಣು ಹೂ ಹಿಡಿದುಕೊಂಡು ಭದ್ರಕ್ಕನ ಮನೆಗೆ ಹೋದೆ. ಭದ್ರಕ್ಕ ತನ್ನ ಗುಪ್ಪೆಮಂಚದಮೇಲೆ ಮಲಗಿಕೊಂಡಿದ್ದಳು. ನನ್ನ ನೋಡಿದವಳೇ ಗುರುತು ಹಿಡಿದು...ಯಂಟೇಶಣ್ಣಾ..ಬಾ..ಬಾ..ಕುಂತ್ಕಾ...ಎಂದು ಪ್ರಯಾಸದಿಂದ ಎದ್ದು ಕುಳಿತಳು. ಭದ್ರಕ್ಕಾ ..ಆಯಾಸ ಮಾಡಿಕೋ ಬ್ಯಾಡ..ನೀನು ಮಲಗೂ ಅಂದರೂ ಕೇಳದೆ ಅವಳು ಗೋಡೆಗೆ ಒರಗಿ ಕುಳಿತಳು. ಆ ಆಜಾನುಬಾಹು ಹೆಂಗಸು ಒಂದು ಹಿಡಿಯಾಗಿ ಬಿಟ್ಟಿದ್ದಳು. ಕಣ್ಣಲ್ಲಿ ಮಂಕು ಕಳೆ. ಮುಖದ ಮೇಲೆ ಮೂರುದಿನದ ಕೂಳೆ. ತಲೆ ಕೂಡಾ ಬಾಚಿಕೊಂಡಿರಲಿಲ್ಲ. ಕೆನ್ನೆಯ ಮೂಳೆಗಳು ಹಾದು ಮುಖ ಒಂದಂಗೈ ಅಗಲ ಆಗಿಹೋಗಿತ್ತು. ನಾನು ಭದ್ರಕ್ಕನ ಕೈ ಹಿಡಿದುಕೊಂಡು ಹೇಗಾಗಿ ಬಿಟ್ಟಿದೀಯಲ್ಲ ಭದ್ರಕ್ಕಾ...ಎಂದಾಗ ಅವಳು ನಕ್ಕು, ಸಂತೇ ಪಯಣ ಹಿಂಚುಮುಂಚು ಅಂತ ವೈರಾಗ್ಯದ ಮಾತಾಡಿದಳು.
ರಾತ್ರಿ ಭದ್ರಕ್ಕನ ಆಸೆಯಂತೆ ಊರ್ವಶೀ ಪ್ರಸಂಗ ಇಡಿಸಿದ್ದರು. ಯಾವುದಾದರೂ ಭಕ್ತಿಯ ಪ್ರಸಂಗ ಇಡಿಸದೆ, ಭದ್ರಕ್ಕ, ಊರ್ವಶೀ ಪ್ರಸಂಗ ಯಾಕೆ ಬಯಸಿದಳು ಎಂಬುದು ನನಗೆ ಹೊಳೆಯಲಿಲ್ಲ. ಆಟ ಶುರುವಾಗುವ ವೇಳೆಗೆ ಭದ್ರಕ್ಕನನ್ನು ಅನಾಮತ್ತಾಗಿ ಎತ್ತಿಕೊಂಡು ವೀರಾಚಾರ್ಯರ ಜಗಲಿಗೆ ತಂದರು. ಹಿಂದೆ ಹಾಸಿಗೆ ಸುರುಳಿ ಇರಿಸಿ ವರಗಿಕೊಳ್ಳುವುದಕ್ಕೆ ಏರ್ಪಾಡು ಮಾಡಿದ್ದರು. ನಾನೂ ಮತ್ತು ಅಲ್ಲಾಡಿ ರುದ್ರಣ್ಣ ತನ್ನ ಪಕ್ಕವೇ ಕುಳಿತುಕೊಳ್ಳಬೇಕೆಂದು ಭದ್ರಕ್ಕ ಬಯಸಿದ್ದರಿಂದ ನಾವೂ ಅವಳ ಪಕ್ಕದಲ್ಲೇ ಕುಳಿತುಕೊಂಡೆವು. ಆಟ ಶುರುವಾಯಿತು. ಭದ್ರಕ್ಕನ ಸ್ಥಿತಿ ಭಾವವತರಿಗೂ ಗೊತ್ತಿದ್ದುದರಿಂದ , ಹನುಮನಾಯಕ ಮತ್ತು ಅಕ್ಕಾಸಾಬಿಯ ಹಾಸ್ಯ ಪ್ರಸಂಗಗಳನ್ನು ಕಟ್ಟು ಮಾಡಿ ನೇರವಾಗಿ ಮುಖ್ಯ ಪ್ರಸಂಗವನ್ನೇ ಭಾಗವತರು ಶುರು ಮಾಡಿದರು.
ಧರೆಯೊಳು ಹೆಸರಾದ ಗಂಗೂರ ಪುರವಾಸಿ-ಎಂದು ಭಾಗವತರು ಪ್ರಾರ್ಥನಾ ಗೀತೆಯನ್ನು ತಮ್ಮ ಕಂಚು ಕಂಠದಲ್ಲಿ ಮೊಳಗಿಸಿಯಾದ ಮೇಲೆ ಇಂದ್ರನ ಒಡ್ಡೋಲಗ. ಊರ್ವಶಿಯ ನರ್ತನ. ಊರ್ವಶಿಯನ್ನ ನಿಬ್ಬೆರಗಿಂದ ಅರ್ಜುನ ನೋಡುವುದು. ರಾತ್ರಿ ಇಂದ್ರ ಊರ್ವಶಿಯನ್ನ ಅರ್ಜುನನ ಶಯನ ಗೃಹಕ್ಕೆ ಕಳಿಸುವುದು. ಅರ್ಜುನ , ಊರ್ವಶಿಯು ತನ್ನ ವಂಶದ ಹಿರೀಕನಾದ ಪುರೂರವನ ರಾಣಿಯಾಗಿದ್ದುದರಿಂದ ತನಗೆ ತಾಯಿ ಸಮಾನಳೆಂದು ಹೇಳಿ, ಆಕೆಯನ್ನು ತಿರಸ್ಕರಿಸುವುದು, ಊರ್ವಶಿ ರೋಷಭೀಷಣಳಾಗಿ ನಪುಂಸಕನಾಗೆಂದು ಅರ್ಜುನನಿಗೆ ಶಾಪ ಕೊಡುವುದು, ಅರ್ಜುನ ಭೂಮಿಗೆ ಹಿಂದಿರುಗಿ ವಿರಾಟನ ಮನೆಯಲ್ಲಿ ವೇಷ ಮರೆಸುವಾಗ ಹೆಣ್ಣುಡುಗೆ ತೊಟ್ಟು ನಪುಂಸಕನಾಗುವುದು..ಈ ದೃಶ್ಯ ಬಂದಾಗ ಭದ್ರಕ್ಕ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳನ್ನು ಸಮಾಧಾನ ಪಡಿಸುವುದು ನಮಗ್ಯಾರಿಗೂ ಸಾಧ್ಯವಾಗಲಿಲ್ಲ. ಆಕೆಯನ್ನು ಮತ್ತೆ ಎತ್ತಿಕೊಂಡು ಮನೆಗೆ ಸಾಗಿಸಬೇಕಾಯಿತು.
ಆಮೇಲೆ ಬಹಳ ದಿನಗಳೇನೂ ಭದ್ರಕ್ಕ ಬದುಕಿರಲಿಲ್ಲ. ಅವಳು ಮೃತಳಾದಾಗ ಯಥಾಪ್ರಕಾರ ಅಲ್ಲಾಡಿರುದ್ರಣ್ಣನವರ ಎರಡು ಸಾಲಿನ ಪತ್ರ ಬಂತು. ಅರ್ಜುನ ಹೆಣ್ಣುಡುಗೆ ತೊಡುವಾಗ ಭದ್ರಕ್ಕ ಬಿಕ್ಕಿಬಿಕ್ಕಿ ಅತ್ತದ್ದು ನೆನಪಾಗುತ್ತಾ, ಮೂಗು ಕಣ್ಣಿಂದ ನೀರು ಸುರಿಯುತ್ತಿದ್ದ ಆಕೆಯ ಮುಖ ಮತ್ತೆ ನನ್ನ ಕಣ್ಣ ಮುಂದೆ ಬಂದು, ನಾನು ಕರವಸ್ತ್ರದಿಂದ ಕಣ್ಣನ್ನು ಒತ್ತಿಕೊಂಡೆ.

(ಉದಯವಾಣಿ ದೀಪಾವಳಿ ಸಂಚಿಕೆಯಲ್ಲಿ ಪ್ರಕಟಿತ)

****

5 comments:

  1. ಸರ್ ಭದ್ರಕ್ಕನ ಕಥೆ ಓದಿ ನನ್ನೂರಿನ ಹಲವಾರು ರೈತ-ಪಶುತಜ್ಞರ ಚಿತ್ರಗಳು ಕಣ್ಣ ಮುಂದೆ ಹಾದು ಹೋದವು. ನನ್ನಜ್ಜನೂ ತುರುಗುಳ ಹಲವಾರು ಖಾಯಿಲೆಗಳಿಗೆ ಔಷಧಿ ಕೊಡುತ್ತಿದ್ದರು. ಅವುಗಳ ಹಲ್ಲು ಸುಳಿ ಬಾಲ ನೋಡಿ ಅವುಗಳ ಗುಣಾವಗುಣಗಳನ್ನು ನಿರ್ಧರಿಸುತ್ತಿದ್ದರು. ನನ್ನೂರಿನಲ್ಲಿ ಈಗಲೂ ಹಲವು ಜನ ದನ-ಎಮ್ಮೆಗಳಿಗೆ ಹಸಿರು ಔಷಧಿಗಳನ್ನು ಕೊಡುತ್ತಾರೆ. ನನ್ನ ತಾಯಿಯೂ ನನ್ನಜ್ಜನ ಕಡೆಯಿಂದ ತಿಳಿದುಕೊಂಡಿದ್ದ ಹಲವಾರು ಔಷಧಗಳನ್ನು ಕೇಳಿಕೊಂಡು ಬಂದ ರೈತರಿಗೆ ಕೊಡುವುದು ಉಂಟು. ಕೆಲವೊಮ್ಮೆ ನಮ್ಮಗಳ ಸಣ್ಣ ಪುಟ್ಟ ಖಾಯಿಲೆಗಳಿಗೆ ಮನೆಔಷಧವನ್ನೂ ಕೊಡುತ್ತಾರೆ. ಇದನ್ನು ಯಾವಾಗಲೋ ಗಮನಿಸಿದ್ದ ನನ್ನ ಐದೂವರೆ ವರ್ಷದ ಮಗಳು, ಬೆಂಗಳೂರಿನಲ್ಲಿ ಹೊಟ್ಟೆನೋವು ಬಂದಿದ್ದಕ್ಕೆ, ಫೋನ್ ಮಾಡಿ ಅಜ್ಜಿ ಹೊಟ್ಟೆನೋವಿಗೆ ಏನಾದರೂ ಔಷಧಿ ಹೇಳಿ ಎಂದು ಕೇಳುತ್ತಿದ್ದಳು!
    ಕಥೆ ಇಷ್ಟವಾಯಿತು. ಭದ್ರಕ್ಕ ನಮ್ಮ ನೆರೆಹೊರೆಯವಳು ಹಾಗೂ ಇದು ನನ್ನ ಊರಿನ ಕಥೆಯೇ ಆಗಿದೆ ಅನ್ನಿಸುತ್ತಿದೆ.

    ReplyDelete
  2. Bhadrakka, ondu kaadambariya paatradantiddaale sir. nanna sannajji nenapaadalu.. Thank u sir.
    -sunanda kadame

    ReplyDelete
  3. ಸರ್
    ಎಂಥಹ ಕಥೆ ಸರ್
    ಓದಿ ಮುಗಿಯೋ ತನಕ ತುಟಿ ಬಿಚ್ಚದೆ ಕುಳಿತಿದ್ದೆ
    ತುಂಬಾ ಸುನದರವಾದ ಶೈಲಿ ನಿಮ್ಮದು

    ReplyDelete
  4. ಆತ್ಮೀಯ
    ಅದ್ಭುತವಾದ ಕಥೆ ಶೈಲಿ ತು೦ಬಾ ಚೆನ್ನಾಗಿದೆ ನಿಮ್ಮ ಕಥೆಗಳನ್ನ ವಿಮರ್ಷೆ ಮಾಡೋವಷ್ಟು ದೊಡ್ಡವ ನಾನಲ್ಲ ತು೦ಬಾ ಹಿಡಿಸ್ತು ಸರ್
    ಹರೀಶ ಆತ್ರೇಯ

    ReplyDelete
  5. sir indu matra nimma blog noodide, bhari khushi
    yayitu. Avashya oodi pratikriyisuttene



    Dhanyavadagalu subraya mattihalli

    ReplyDelete