Saturday, October 17, 2009
ಅಶ್ವತ್ಥ ಎಂಬ ಅಯಸ್ಕಾಂತ...
***
ಅಶ್ವಥ್ ಅವರನ್ನು ಮೊಟ್ಟಮೊದಲಬಾರಿ ನಾನು ನೋಡಿದ್ದು ಯವನಿಕಾ ಕಲಾಮಂದಿರದಲ್ಲಿ. ಗೆಳೆಯ ವ್ಯಾಸರಾವ್, ಅವರನ್ನು ನನಗೆ ಪರಿಚಯಿಸಿದರು. ಅಶ್ವಥ್, ನಾನು ಮತ್ತು ಬಿ.ಆರ್.ಎಲ್. ಅವರನ್ನು ನೋಡಲಿಕ್ಕಾಗಿ ಯವನಿಕಾಕ್ಕೆ ಬಂದಿದ್ದರು. ಯವನಿಕಾದ ಮುಂಭಾಗದ ಅಂಗಳದಲ್ಲಿ ಸುತ್ತ ಇರುವ ಮಂದಿಯ ಗಮನವೇ ಇಲ್ಲದೆ ಅಶ್ವಥ್ ತಮ್ಮ ಒಂದು ಕನಸನ್ನು ನಮ್ಮ ಮುಂದೆ ತೆರೆದಿಡತೊಡಗಿದರು! ಹೀಗೆ ಒಂದು ಕನಸಿನ ಸಮೇತವೇ ಅಶ್ವಥ್ ಅವರನ್ನು ನಾನು ಮೊಟ್ಟಮೊದಲು ನೋಡಿದ್ದು. ಮುಂದೆ ಅದೆಷ್ಟು ಬಾರಿ ನಾನು ಅವರು ಸೇರಿ ಮಾತಾಡಿದ್ದೇವೋ. ಕನಸಿಲ್ಲದ ಬರಿಗಣ್ ಅಶ್ವಥ್ ಯಾವತ್ತೂ ನನ್ನ ಕಣ್ಣಿಗೆ ಬಿದ್ದಿಲ್ಲ. ಮೊದ ಮೊದಲು ಸಣ್ಣಪುಟ್ಟ ಕನಸುಗಳನ್ನು ಅಶ್ವಥ್ ಕಾಣುತ್ತಿದ್ದರು. ಬರು ಬರುತ್ತಾ ಅವು ವಿಶ್ವೋವಿಶಾಲವಾಗತೊಡಗಿದವು! ಅವರ ಕನಸಿನ ಪ್ರಪಂಚ ಅಳತೆಮೀರಿ ದೊಡ್ಡದಾಗತೊಡಗಿತು. ಅಸಂಖ್ಯ ಅನಾಮಿಕ ಮುಖಗಳು ಆ ಕನಸುಗಳಲ್ಲಿ ಕಿಕ್ಕಿರಿಯತೊಡಗಿದವು. ಅದೆಲ್ಲಾ ಅಶ್ವಥ್ ಅವರ ಆಯಸ್ಕಾಂತಪ್ರತಿಭೆಯಿಂದ ದೋಚಲ್ಪಟ್ಟ ಅನಾಮಿಕ ಅಭಿಮಾನಿಗಳ ಸಾಂದ್ರ ದಟ್ಟಣೆ. ಅಶ್ವಥ್..ಅಶ್ವಥ್..ಅಶ್ವಥ್..ಎಂದು ಅಭಿಮಾನದಿಂದ ಒಕ್ಕೊರಳಲ್ಲಿ ಘೋಷಿಸುವ ಅಭಿಮಾನಿಗಳು ಅವರು. ಇಂಥ ಒಂದು ವಿಶ್ವವ್ಯಾಪೀ ಕನಸು ಕನ್ನಡವೇ ಸತ್ಯ ಕಾರ್ಯಕ್ರಮದ್ದು! ಎಂಥಾ ಜನ ಸಾಗರ ನೆರೆದಿತ್ತು ಅಲ್ಲಿ! ಒಂದು ಸುಗಮಸಂಗೀತ ಕಾರ್ಯಕ್ರಮಕ್ಕೆ ಆಪಾಟಿ ಮಂದಿ ಸೇರುತ್ತಾರೆಂದು ನಾವು ಕಲ್ಪಿಸುವುದೇ ಸಾಧ್ಯವಿರಲಿಲ್ಲ. ಅದು ಅಶ್ವಥ್ ಕಲ್ಪಿಸಿದ್ದ ಅತ್ಯಂತ ಬೃಹತ್ ಆದ ಕನಸಾಗಿತ್ತು. ಆ ಅಸಾಧ್ಯವೆನಿಸುವ ಕನಸನ್ನು ಅವರು ಈ ನೆಲದ ಪಾತಳಿಗೇ ಎಳೆದು ತಂದಿದ್ದರು. ಇದೊಂದು ಅದ್ಭುತ ಪ್ರಮಾಣಾತ್ಮಕ ಕನಸು.
***
ಅಶ್ವಥ್ ಕಂಡ ಬೇರೆ ಬಗೆಯ ಕನಸುಗಳೂ ನನ್ನ ಕಣ್ಮುಂದೆ ಇವೆ. ನಿರ್ಜನವಾದ ಒಂದು ಅರಣ್ಯಪ್ರದೇಶ. ಇರುಳು ಮೆಲ್ಲಗೆ ತಾಯ ಮುಸುಕಿನಂತೆ ಭೂಮಿಯ ಮೇಲೆ ಇಳಿಬಿದ್ದಿದೆ. ಒಂದು ದೊಡ್ಡ ಹಸಿರುಕಪ್ಪು ಮರದ ಕೆಳಗೆ ಅಶ್ವಥ್ ಕುಳಿತಿದ್ದಾರೆ. ಕೆಲವರು ಕವಿಗಳು, ಕಾವ್ಯರಸಿಕರು, ಆಪ್ತೇಷ್ಟರು, ಅಶ್ವಥ್ ಅವರ ಮಿತ್ರಬಾಂಧವರು ಅಲ್ಲಿ ನೆರೆದಿದ್ದಾರೆ. ಪ್ರಖರವಾದ ಬೆಳಕೂ ಇಲ್ಲ. ಸಣ್ಣಗೆ ಒಂದು ಹಣತೆಯ ದೀಪ. ಅಷ್ಟೆ. ಅಶ್ವಥ್ ತಂಬೂರಿಯ ಮಂಗಲಶ್ರುತಿಯ ಹಿನ್ನೆಲೆಯಲ್ಲಿ ಮೆಲ್ಲಗೆ ಹಾಡ ತೊಡಗುತ್ತಾರೆ. ವಿಲಂಬ ಗತಿಯ ಗಂಭೀರವಾದ ಕವಿತೆಗಳು. ಸಾವಧಾನದ ಗಾಯನ. ಗಾಯಕ ಮತ್ತು ಕೇಳುಗ ಇಬ್ಬರೂ ಆ ಗಾಯನದಲ್ಲಿ ತನ್ಮಯರಾಗಿಬಿಟ್ಟಿದ್ದಾರೆ. ರಾತ್ರಿ ಎಷ್ಟುಹೊತ್ತಿನವರೆಗೆ ಈ ಕಾರ್ಯಕ್ರಮ ನಡೆಯಿತೋ...ಯಾರ ಅರಿವಿಗೂ ಬರುವುದಿಲ್ಲ. ಬೇಂದ್ರೆ, ಕುವೆಂಪು, ಕೆ.ಎಸ್.ನ, ಷರೀಫ್ ಇವರ ಗೀತೆಗಳು ಕೇಳುಗರ ಮನದ ಆಳಕ್ಕೆ ಇಳಿಯುತ್ತಾ ಗಾಢವಾದ ಸಂವೇದನೆಯನ್ನು ನಿರ್ಮಿಸುತ್ತಾ ಇವೆ...ಕೆಲವರು ಕೇಳುಗರ ಕಣ್ಣಂಚು ಕೂಡಾ ಒದ್ದೆಯಾಗುತ್ತಾ ಇದೆ. ಇದು ಇನ್ನೊಂದು ಬಗೆಯ ಕನಸು. ಈ ಕನಸನ್ನು ನಮ್ಮ ಕಣ್ಣಮುಂದೆ ನೆಲಕ್ಕಿಳಿಸಿದವರು ಅಶ್ವಥ್ ಅವರೇ!
***
ತಮ್ಮ ಮಾಧ್ಯಮ ಕೇವಲ ಒಪ್ಪಿಸುವ ಮಾಧ್ಯಮವಲ್ಲ; ಚಿಂತಿಸುವ ಮಾಧ್ಯಮ ಎಂದು ದೃಢವಾಗಿ ನಂಬಿದವರು ಅಶ್ವಥ್. ತನ್ನದೇ ಕಾವ್ಯ ಮೀಮಾಂಸೆಯನ್ನು ಬೆಳೆಸದೆ ಒಬ್ಬ ಕವಿ ಹೇಗೆ ಬೆಳೆಯಲಾರನೋ, ಹಾಗೇ ತನ್ನ ಗಾಯನ ಮೀಮಾಂಸೆಯನ್ನು ಬೆಳೆಸದೆ ಒಬ್ಬ ಗಾಯಕನೂ ಬೆಳೆಯಲಾರ. ತಮ್ಮ ಮಾಧ್ಯಮದ ವ್ಯಾಕರಣದ ಬಗ್ಗೆ ಆಳವಾಗಿ ಚಿಂತಿಸುವ ಒಬ್ಬನೇ ಗಾಯಕ ಸಿ.ಅಶ್ವಥ್. ಅಶ್ವಥ್ ಚಾಲ್ತಿಗೆ ಬರುವ ತನಕ , ರಾಗ ಸಂಯೋಜನೆ ಎನ್ನುವ ಮಾತೇ ನಮ್ಮಲ್ಲಿ ರೂಢಿಯಲ್ಲಿದ್ದುದು. ಅಶ್ವಥ್ "ಸ್ವರ ಸಂಯೋಜನೆ " ಎಂಬ ಹೊಸ ವ್ಯಾಕರಣ ಸೂತ್ರವನ್ನು ಹುಟ್ಟು ಹಾಕಿದರು. ಇದು ಸುಲಭಸಾಧ್ಯವಾದುದಲ್ಲ. ಹಗಲೂ ಇರುಳೂ ತನ್ನ ಮಾಧ್ಯಮವನ್ನ ಹಚ್ಚಿಕೊಂಡು ಚಿಂತಿಸದೆ ಹೊಸ ಕಲ್ಪನೆಗಳು ಆವಿರ್ಭವಿಸಲಾರವು.ಸ್ವರ ಸಂಯೋಜನೆ ಎಂಬುದು ಸುಗಮ ಸಂಗೀತಕ್ಕೆ ಅಶ್ವಥ್ ಕೊಟ್ಟ ಬಹು ದೊಡ್ಡ ಕಾಣಿಕೆ. ಇದು ಸರ್ವ ಸಮ್ಮತವಾಗುವ ತನಕ ಚರ್ಚೆಗಳು ನಡೆಯಬಹುದು. ಆದರೆ ಇದು ಚರ್ಚೆಗೆ ಯೋಗ್ಯವಾದ ನವೋನವ ಕಲ್ಪನೆ. ಈಚಿನ ದಿನಗಳಲ್ಲಿ ಅಶ್ವಥ್ ಹಾಡುತ್ತಾರೆ ಅಥವಾ ಹಾಡಿನ ಶಾಸ್ತ್ರವನ್ನು ಚಿಂತಿಸಿ, ತಮ್ಮ ಹೊಸ ಹೊಳಹುಗಳನ್ನು ಭಾಷೀಕರಿಸಲು ಹರಸಾಹಸ ಮಾಡುತ್ತಾರೆ. ಮಂಗಳೂರು ಸಾಹಿತ್ಯ ಸಮ್ಮೇಳನದಲ್ಲಿ ಅವರು ನೀಡಿದ ಸೋದಾಹರಣ ಉಪನ್ಯಾಸ ನನ್ನ ನೆನಪಲ್ಲಿದೆ. ಅಷ್ಟು ದೊಡ್ಡ ಸಭೆಗೆ ಸೂಕ್ಷ್ಮವಾದ ಸುಗಮಸಂಗೀತದ ವ್ಯಾಕರಣವನ್ನು ತಿಳಿಸಲು ಅಶ್ವಥ್ ಹೇಗೆ ಸಮರ್ಥರಾದರು? ಇದು ನನಗೆ ಇವತ್ತೂ ಆಶ್ಚರ್ಯ ಹುಟ್ಟಿಸುವ ಸಂಗತಿ. ಇದು ವಾಗ್ಮಿತೆಯ ಬಲವಲ್ಲ. ಹೊಸದನ್ನು ಹೊಸದಾಗಿ ಹೇಳಬೇಕೆಂಬ ಒಬ್ಬ ಆಳಚಿಂತಕನ ಮನಸ್ಸಿನ ಒಳಾಂದೋಳನದ ಕೊಡುಗೆ. ಬುದ್ಧಿ ಮತ್ತು ಭಾವ ಇವುಗಳ ಬೆಸುಗೆಗಾರನಾಗಿ ಹೀಗೆ ಅಶ್ವಥ್ ನನಗೆ ಪ್ರಿಯರಾದ ಕಲಾವಿದರಾಗಿದ್ದಾರೆ.
***
ಅಶ್ವಥ್ ಒಬ್ಬ ಮೋಡಿಕಾರ ಎಂಬುದು ಸಾಮಾನ್ಯವಾಗಿ ಹೇಳಲಾಗುವ ಮಾತು. ಹಾಗೇ ಅವರು ಮೂಡಿಕಾರನೂ ಹೌದು! ಈ ಮೋಡಿ ಮತ್ತು ಮೂಡಿ ಎಷ್ಟು ಹತ್ತಿರದ ಪದಗಳಾಗಿವೆ! ಮೊದಲನೆಯದು ಕನ್ನಡದ ಮೋಡಿ. ಎರಡನೆಯದು ಇಂಗ್ಲಿಷ್ ಮೂಡಿ! ಕಲಾವಿದರೆಲ್ಲಾ ಸಾಮಾನ್ಯವಾಗಿ ಮೂಡಿ ಮನುಷ್ಯರೇ! ಅಶ್ವಥ್ ಅತಿ ಎನ್ನಬಹುದಾದಷ್ಟು ಮೂಡಿ. ಶೀಘ್ರಕೋಪಿ; ಅಪರಿಮಿತ ಭಾವುಕ; ಮಹಾನ್ ಹಠಗಾರ; ಸ್ವಕೇಂದ್ರಿತವ್ಯಕ್ತಿ. ಈ ಎಲ್ಲ ಮಾತಿಗೂ ವಿರುದ್ಧವಾದುದನ್ನೂ ಅವರ ಬಗ್ಗೆ ಹೇಳ ಬಹುದು. ಮಹಾ ಮುಗ್ಧ; ತಕ್ಷಣ ಕರಗಿಬಿಡುವ ಸ್ವಭಾವ; ವಿಮರ್ಶೆ, ಟೀಕೆಗಳಿಗೆ ಅತಿಯಾಗಿ ಘಾಸಿಗೊಳ್ಳುವ ಮನಸ್ಸು; ಮಹಾ ಸ್ನೇಹಜೀವಿ; ಬೀಸುಗೈ ಧಾರಾಳಿ! ಎಂಥಾ ಕಲಸುಮೇಲೋಗರ ವ್ಯಕ್ತಿತ್ವ ಈ ಮನುಷ್ಯನದ್ದು! ಈ ವಿಕ್ಷಿಪ್ತತೆಗಳ ನಡುವೆ ಅಶ್ವಥ್ ಅವರನ್ನು ಗರಿಷ್ಠ ಪ್ರಮಾಣದಲ್ಲಿ ನಾವು ನೋಡ ಬಹುದಾದದ್ದು ಎಲ್ಲಿ?
ನಾನು ಕಂಡಂತೆ ನಾನು ಅತ್ಯಂತ ಆಳದಲ್ಲಿ ಪ್ರೀತಿಸುವ ಅಶ್ವಥ್ ವ್ಯಕ್ತಿತ್ವದ ಅಭಿವ್ಯಕ್ತಿ ಕೆಳಕಂಡಂತೆ:
"ಅಶ್ವಥ್ ಮಸುಕು ಬೆಳಕಿನ ಕೋಣೆಯೊಂದರಲ್ಲಿ ತಮ್ಮ ಹಾರ್ಮೋನಿಯಮ್ಮಿನ ಹಿಂದೆ ಕೂತು ಅರೆಗಣ್ಣಿನಲ್ಲಿ ತನ್ಮಯರಾಗಿ ಹೋಗಿದ್ದಾರೆ. ಕೆಲವರೇ ಅತ್ಯಾಪ್ತ ಗೆಳೆಯರು ಅವರ ಎದುರು ಕೂತಿದ್ದಾರೆ. ಅಶ್ವಥ್ ಕವಿತೆಯೊಂದಕ್ಕೆ ಸ್ವರ ಸಂಯೋಜಿಸುವ ಸೃಷ್ಟಿಶೀಲ ಕ್ಷಣವದು. ಎಲ್ಲರೂ ತುಟಿಪಿಟ್ಟೆನ್ನದೆ ಕಾಯುತ್ತಾ ಇದ್ದಾರೆ. ಕಾಯುತ್ತಿದ್ದಾರೆ-ಗೆಳೆಯರು. ಕಾಯುತ್ತಿದ್ದಾರೆ-ಪಕ್ಕವಾದ್ಯದ ಆತ್ಮೀಯರು. ಕಾಯುತ್ತಿದ್ದಾರೆ-ಸ್ವತಃ ಅಶ್ವಥ್. ಕಾಯುತ್ತಿದ್ದಾರೆ ಬೇಂದ್ರೆ, ಕುವೆಂಪು, ಕೆ.ಎಸ್.ನ.,ಜಿ.ಎಸ್.ಎಸ್., ಷರೀಫ್....ಮೆಲ್ಲಗೆ ಏನೋ ಒಡಲಾಳದಿಂದ ಒಡಮುರಿದು ಮೇಲೇಳುತ್ತಾ ಇದೆ. ಏನೋ ಸಿಕ್ಕಂತೆ ತಕ್ಷಣ ಇಷ್ಟಗಲ ಕಣ್ಣರಳಿಸುತ್ತಾರೆ ಅಶ್ವಥ್. ಅದೊಂದು ವಿಲಕ್ಷಣ ಕ್ಷಣ; ಹೆಚ್ಚೂ ಕಮ್ಮಿ ಸಮಾಧಿ ಸ್ಥಿತಿ. ಅಶ್ವಥ್ ತಮಗೆ ತಾವೇ ಎಂಬಂತೆ ಮೆಲ್ಲಗೆ ಹಾಡ ತೊಡಗುತ್ತಾರೆ....ಷ್! ಸುಮ್ಮನಿರಿ. ಇದು ಕವಿತೆ ಮತ್ತು ಗೀತೆ ಸಂಲಗ್ನಗೊಳ್ಳುತ್ತಿರುವ ಶುಭ ಮುಹೂರ್ತ..!"
******
Tuesday, September 29, 2009
ಸ್ನೇಹ ಪ್ರೀತಿಗಳನ್ನೇ ದೇವರೆಂದು ನಂಬಿರುವ ಜಿ.ಎಸ್.ಎಸ್.
ಪ್ರಾಯಃ ಇದು ಸಹಜ ಕವಿ ಒಬ್ಬರು ಮಾತ್ರ ನೀಡಬಹುದಾದ ಪ್ರತಿಕ್ರಿಯೆ. ಜಿಎಸೆಸ್ ತಮ್ಮ ಗುರುಗಳಾದ ಕುವೆಂಪು ಅವರನ್ನು ರಾಷ್ಟ್ರಕವಿಯೆಂದು ಗೌರವಿಸಿದ್ದನ್ನು ನೆನೆಸಿಕೊಂಡರು.ಅಂಥ ಗೌರವ ತಮಗೆ ಅನ್ನುವುದು ಅವರಿಗೆ ಸುಲಭವಾಗಿ ಒಪ್ಪಿಕೊಳ್ಳಬಹುದಾದ ಸಂಗತಿಯಾಗಿರಲಿಲ್ಲ. ಅದು ಅವರ ಸ್ವಭಾವಕ್ಕೆ ಸಹಜವಾದ ವಿನಯದ ಅಭಿವ್ಯಕ್ತಿಯಾಗಿತ್ತು.ಆದರೆ ಸದ್ಯದ ಸಂದರ್ಭದಲ್ಲಿ ಒಬ್ಬ ಕವಿ,ವಿಮರ್ಶಕ,ಕಾವ್ಯಚಿಂತಕರಾಗಿ ಜಿಎಸ್ಸೆಸ್ ಬಹು ಎತ್ತರದ ವ್ಯಕ್ತಿಯಾಗಿದ್ದಾರೆ ಅನ್ನುವುದು ನಿರ್ವಿವಾದದ ಸಂಗತಿ.ಜೊತೆಗೆ ಅವರು ಒಬ್ಬ ಸಾಂಸ್ಕೃತಿಕ ನಾಯಕರಾಗಿ ರೂಪಗೊಂಡಿದ್ದಾರೆ ಎನ್ನುವುದು ಇನ್ನೂ ಮಹತ್ವದ ಸಂಗತಿ. ಎಷ್ಟೋ ಜನ ಮಹತ್ವದ ಲೇಖಕರಿಗೆ ಈ ಸಾಂಸ್ಕೃತಿಕ ನಾಯಕತ್ವದ ಪ್ರಭಾವಲಿ ಸಿದ್ಧಿಸಿರುವುದಿಲ್ಲ! ಜಿ.ಎಸ್.ಎಸ್. ತಮ್ಮ ಸುದೀರ್ಘ ಜೀವಿತದ ಹರಹಿನಲ್ಲಿ ಉದ್ದಕ್ಕೂ ತಾವು ತೆಗೆದುಕೊಂಡ ರಾಜಕೀಯ ಸಾಂಸ್ಕೃತಿಕ ನಿಲುವುಗಳಿಂದ ಕರ್ನಾಟಕ ಒಂದು ಎಚ್ಚರದ ಪ್ರಜೆಯಾಗಿ ರೂಪಗೊಂಡಿದ್ದಾರೆ. ಇಂಥ ವ್ಯಕ್ತಿ ಅಖಂಡ ಕರ್ನಾಟಕದ ಬಿಕ್ಕಟ್ಟು ಮತ್ತು ಉಲ್ಲಾಸದ ಘಳಿಗೆಗಳಿಗೆ ಸಾಕ್ಷಿ ಮಿಡಿತಗಳನ್ನು ನೀಡುತ್ತಾ ಬಂದಿರಬೇಕಾಗುತ್ತದೆ.ಕರ್ನಾಟಕದ ಒಟ್ಟಾರೆ ಹಿತ ಈ ಬಗೆಯ ವ್ಯಕ್ತಿತ್ವದ ನಿರಂತರ ನಿಲುವಿನ ಅವಿಭಾಜ್ಯ ಅಂಗವಾಗಿರುತ್ತದೆ. ಒಂದು ಧರ್ಮ, ಒಂದು ರಾಜಕೀಯ ಪಕ್ಷ, ಒಂದು ನಿರ್ದಿಷ್ಟ ಸಂಸ್ಥೆ ,ಒಂದು ಸಾಹಿತ್ಯಕ ಗುಂಪು-ಇವುಗಳೊಂದಿಗೆ ತನ್ನನ್ನು ಸಮೀಕರಿಸಿಕೊಳ್ಳದೆ ಅನಿಕೇತನತ್ವ ಸಾಧಿಸದ ಹೊರತು ಅಖಂಡ ಕರ್ನಾಟಕದ ಸಾಕ್ಷೀಪ್ರಜೆಯಾಗಿ ರೂಪಗೊಳ್ಳುವುದು ಸಾಧ್ಯವಾಗುವುದಿಲ್ಲ.ತಮ್ಮ ವೈಯಕ್ತಿಕ ಅಭಿಪ್ರಾಯಗಳು ಏನೇ ಇರಲಿ ಅವನ್ನು ಸಮಷ್ಟಿಯ ಹಿತಕ್ಕಾಗಿ ಮೀರಿನಿಲ್ಲುವುದು ಅಗತ್ಯವಾಗುತ್ತದೆ. ತಾವು ನವೋದಯ ಕಾವ್ಯವನ್ನು ಮೆಚ್ಚುವವರಾಗಿರಬಹುದು. ಆದರೆ ನವ್ಯದ ಸತ್ವ ಸಾಮರ್ಥ್ಯಗಳಿಗೆ ತೆರೆದ ಮನಸ್ಸುಳ್ಳವರಾಗಿರಬೇಕಾಗುತ್ತದೆ. ಹೊಸದಾಗಿ ಕಾಣಿಸಿಕೊಳ್ಳುವ ಬಂಡಾಯ ದಲಿತ ಚಳುವಳಿಗಳು ಸಾಮಾಜಿಕ ಸಾಂಸ್ಕೃತಿಕ ನೆಲೆಯಲ್ಲಿ ಅನಿವಾರ್ಯವೆನಿಸಿದಾಗ ಅವನ್ನು ಮೆಚ್ಚಿ ಪ್ರೋತ್ಸಾಹಿಸುವ ಭವಿಷ್ಯದ್ ಹಿತಾಕಾಂಕ್ಷಿಯಾದ ನಿಲುವನ್ನು ಹೊಂದಿರಬೇಕಾಗುತ್ತದೆ. ಇಂತಹ ನಿರ್ಮಮ ನಿಷ್ಠುರತೆ ಕೇವಲ ಸಾಹಿತ್ಯಕ ಸಂದರ್ಭಕ್ಕೆ ಅನ್ವಯಿಸಿ ಮಾತ್ರವಲ್ಲ. ಸಾಮಾಜಿಕ ಸಾಂಸ್ಕೃತಿಕ ಸಂದರ್ಭಗಳಲ್ಲೂ ಜಿ.ಎಸ್.ಎಸ್ ಅವರು ಹೇಗೆ ತಮ್ಮ ನಿರ್ಮಮ ನಿಷ್ಠುರ ಪ್ರಜೆಯನ್ನು ಕಾಯ್ದುಕೊಂಡು ಬಂದಿದ್ದಾರೆ ಅನ್ನುವುದನ್ನು ಇಡೀ ಕನ್ನಡ ನಾಡೇ ಬಲ್ಲುದು.ಅದು ಜಾತಿವಿಷಯದಲ್ಲಿ ಆಗಿರಬಹುದು; ಧರ್ಮದ ವಿಷಯದಲ್ಲಿ ಆಗಿರಬಹುದು; ಭಾಷೆಯ ವಿಷಯದಲ್ಲಿ ಆಗಿರಬಹುದು. ನಮ್ಮಲ್ಲಿ ತೀವ್ರವಾದ ಅಭಿಪ್ರಾಯಭೇದಗಳು ಇರಬಹುದು. ಆದರೆ ನಾವೆಲ್ಲ ಒಟ್ಟು ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಹೊಣೆಗಾರಿಕೆ ಹೊತ್ತಿರುವವರು. ಆದಕಾರಣ ನಾವು ಒಂದುಕಡೆ ಸೇರಿ ಕೂತು ಚರ್ಚೆ ಮಾಡೋಣ. ಸಾಧ್ಯವಾದರೆ ಒಮ್ಮತದ ನಿಲುವಿಗೆ ಬರೋಣ. ಸಾಧ್ಯವಾಗದಿದ್ದರೆ ಪರಸ್ಪರ ಗೌರವ ಇಟ್ಟುಕೊಂಡೆ ಅಭಿಪ್ರಾಯ ಭೇದಗಳನ್ನು ಹೊಂದೋಣ ಎನ್ನುವ ಪ್ರಜಾಪ್ರಭುತ್ವವಾದೀ ನಿಲುವನ್ನು ತಮ್ಮ ಬದುಕಿನ ಉದ್ದಕ್ಕೂ ಪ್ರಕಟಿಸುತ್ತಾ, ನಿತ್ಯದ ಆಚರಣೆಯಲ್ಲಿ ರೂಢಿಸುತ್ತಾ ಬಂದಿರುವವರು ಡಾಜಿ.ಎಸ್.ಶಿವರುದ್ರಪ್ಪನವರು. ರಾಜಕೀಯ ,ಸಾಹಿತ್ಯಕ, ಧಾರ್ಮಿಕ, ಸಾಂಸ್ಕೃತಿಕ ವಲಯಗಳ ವಿರೋಧೀನೆಲೆಯ ವಕ್ತಾರರೂ ಜಿ.ಎಸ್.ಎಸ್ ಬಗ್ಗೆ ಪ್ರೀತಿ ಗೌರವ ಇಟ್ಟುಕೊಂಡು ಬಂದಿರುವುದು ಇದೇ ಕಾರಣಕ್ಕೆ ಎಂದು ನಾನು ಭಾವಿಸುತ್ತೇನೆ. ಇಂಥ ಸರ್ವ ಸಮ್ಮತ ವ್ಯಕ್ತಿತ್ವವನ್ನು ಹೊಂದಿರುವವರು ಯಾವತ್ತೂ ವಿರಲವೇ. ಸದ್ಯದ ಸಂದರ್ಭದಲ್ಲಿ ಜಿ.ಎಸ್.ಎಸ್. ಅಂತಹ ವಿರಲ ವ್ಯಕ್ತಿಗಳಲ್ಲಿ ಒಬ್ಬರು...ಮತ್ತು ಮುಖ್ಯರು. ಹಾಗಾಗಿ ಅವರನ್ನು ರಾಷ್ಟ್ರಕವಿ ಎಂದು ಸರ್ಕಾರ ಗೌರವಿಸುತ್ತಿರುವುದು ಕನ್ನಡ ನಾಡಿನ ಸಮಷ್ಟಿಪ್ರಜೆಯ ಸಮ್ಮತಿಯ ಚಿಹ್ನೆ ಎಂದು ನಾನು ಭಾವಿಸುತ್ತೇನೆ.
*****
ಕೆಲವು ದೃಷ್ಟಿಯಲ್ಲಿ ನಾನು ತುಂಬಾ ಅದೃಷ್ಟಶಾಲಿ. ೧೯೭೧ರಲ್ಲಿ ನಾನು ಬೆಂಗಳೂರಿಗೆ ನನ್ನ ಹಳ್ಳಿಯಿಂದ ಒಲಸೆ ಬಂದಾಗ ಅನೇಕ ಸಾಹಿತ್ಯ ದಿಗ್ಗಜರು, ಸಾಂಸ್ಕೃತಿಕ ನಾಯಕರು ನನ್ನನ್ನು ತಮ್ಮ ಅಂತರ್ವಲಯಕ್ಕೆ ತೆಗೆದುಕೊಂಡರು. ನಾನು ಅವರ ಆಪ್ತವರ್ಗದಲ್ಲಿ ಒಬ್ಬನಾಗಿ ಹೋದೆ. ಡಾಪುತಿನ, ಡಾಗೋಪಾಲಕೃಷ್ಣ ಅಡಿಗ, ಶ್ರೀ ಕೆ.ಎಸ್.ನರಸಿಂಹಸ್ವಾಮಿ, ಪ್ರೊ.ಎಲ್.ಎಸ್.ಶೇಷಗಿರಿರಾವ್, ಡಾಜಿ.ಎಸ್.ಶಿವರುದ್ರಪ್ಪ -ಅವರಲ್ಲಿ ಮುಖ್ಯರು.ನಾನು ಎಂ.ಎ. ದಲ್ಲಿ ಜಿ.ಎಸ್.ಎಸ್.ಅವರ ವಿದ್ಯಾರ್ಥಿ. ಆಮೇಲೆ ಉದ್ದಕ್ಕೂ ಜಿ.ಎಸ್.ಎಸ್. ನನ್ನ ಜೀವನದಲ್ಲಿ ನಿರ್ಣಾಯಕ ಕ್ಷಣಗಳಲ್ಲಿ ಮಹತ್ವದ ಭೂಮಿಕೆ ನಿರ್ವಹಿಸುತ್ತಾ ಬಂದಿದ್ದಾರೆ. ವಿದ್ಯಾರ್ಥಿಯನ್ನು ಆಪ್ತ ಸ್ನೇಹಿತನಂತೆ ನಡೆಸಿಕೊಂಡಿದ್ದಾರೆ. ಸ್ನೇಹಿತನನ್ನು ಪರಮಬಂಧುವಿನಂತೆ ನಡೆಸಿಕೊಂಡಿದ್ದಾರೆ. ನನ್ನ ಸಾಹಿತ್ಯಕ ಜೀವನದ ಬಿಕ್ಕಟ್ಟುಗಳಲ್ಲಿ ನನಗೆ ಆಸರೆಯಾಗಿ ನಿಂತವರು ಅವರು. ಹಾಗೇ ಬದುಕಿನ ಕಷ್ಟ ನಿಷ್ಠುರದ ಸಂದರ್ಭಗಳಲ್ಲೂ. ವಿದ್ಯಾರ್ಥಿಗಳ ಬಗ್ಗೆ ಅವರ ಪ್ರೀತಿ ಅಪರಿಮಿತವಾದುದು. ನಮ್ಮ ಈವತ್ತಿನ ಅನೇಕ ಮುಖ್ಯ ಲೇಖಕರು ಜಿ.ಎಸ್.ಎಸ್. ಅವರ ಶಿಷ್ಯರು! ಆ ಶಿಷ್ಯರ ಬಗ್ಗೆ ಯುಕ್ತ ಸಂದರ್ಭಗಳಲ್ಲಿ ಅವರೇ ಸೊಗಸಾದ ಲೇಖನಗಳನ್ನು ಬರೆದು ತಮ್ಮ ಶಿಷ್ಯ ಪ್ರೀತಿಯನ್ನು ಮೆರೆದಿದ್ದಾರೆ.ತಮಗಿಂತ ಕಿರಿಯರ ವಿಷಯ ಇರಲಿ, ತಮ್ಮ ಸಮಕಾಲೀನ ಲೇಖಕರ ಬಗ್ಗೆ ಬರೆಯುವುದು ಕೂಡಾ ತಮ್ಮ ಘನತೆಗೆ ಕುಂದು ಎಂದು ಭಾವಿಸುವ ಅನೇಕ ಲೇಖಕರು ನಮ್ಮ ಸುತ್ತಾ ಇರುವಾಗ ಜಿ.ಎಸ್.ಎಸ್. ಅವರಂತೆ ಶಿಷ್ಯರ ಬಗ್ಗೆ ಪತ್ರಿಕೆಗಳಲ್ಲಿ ಲೇಖನ ಬರೆಯುವುದು ಆಶ್ಚರ್ಯಕರ ವಿದ್ಯಮಾನವೇ ಸೈ!
ಈ ಶಿಷ್ಯ ಪ್ರೀತಿಗೆ ಶಿವರುದ್ರಪ್ಪನವರು ತಮ್ಮ ಮೂವರು ಮಹಾಗುರುಗಳಿಂದ ಪಡೆದ ಸ್ಫೂರ್ತಿಯೇ ಮುಖ್ಯ ಪ್ರೇರಣೆ ಎಂದು ನಾನು ಭಾವಿಸುತ್ತೇನೆ. ಜಿ.ಎಸ್.ಎಸ್. ಮತ್ತೆ ಮತ್ತೆ ನೆನೆಯುವ ಅವರ ಮೂವರು ಗುರುಗಳೆಂದರೆ ಶ್ರೀ ಕುವೆಂಪು, ಪ್ರೊ.ತೀನಂಶ್ರೀ , ಮತ್ತು ಪ್ರೊ.ತ.ಸು.ಶ್ಯಾಮರಾಯರು! ಕುವೆಂಪು ಎಂದರೆ ಜಿ.ಎಸ್.ಎಸ್. ಅವರಿಗೆ ಎಣೆಯಿಲ್ಲದ ಪ್ರೀತಿ ಗೌರವ. ಕುವೆಂಪು ಬಗ್ಗೆ ಅವರು ಬರೆದಿರುವ ಈ ಪದ್ಯ ಅದನ್ನು ಅತ್ಯಂತ ಸ್ವಾರಸ್ಯಕರವಾಗಿ ನಿರೂಪಿಸಬಲ್ಲುದು:
ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ ಗುಟ್ಟುಗಳ.
ನೀವು ಕಲಿಸಿದಿರಿ ನನಗೆ ತಲೆ ಎತ್ತಿ ನಿಲ್ಲುವದನ್ನು,
ಕಿರಿಕುಳಗಳಿಗೆ ಜಗ್ಗದೆ ನಿರ್ಭಯವಾಗಿ ನಡೆವುದನ್ನು,
ಸದ್ದಿರದೆ ಬದುಕುವುದನ್ನು.
ಎಷ್ಟೊಂದು ಕೀಲಿ ಕೈಗಳನ್ನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನ್ನು ತೆರೆದಿದ್ದೀರಿ ನನ್ನೊಳಗೆ;
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ
ಸದ್ದು ಗದ್ದಲದ ತುತ್ತೂರಿ ದನಿಗಳಾಚೆಗೆ ನಿಂತು
ನಿಶ್ಶಬದಲ್ಲಿ ನೆನೆಯುತ್ತೇನೆ
ಗೌರವದಿಂದ.
ನಕ್ಷತ್ರಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ
ನನ್ನ ಸುತ್ತ
ಪಟಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ.
ಕುವೆಂಪು ಅವರ ಬಗ್ಗೆ ಒಂದು ಸಮಗ್ರ ವಿಮರ್ಶಾಗ್ರಂಥವನ್ನು ಬರೆಯಬೇಕೆಂಬುದು ಜಿ.ಎಸ್.ಎಸ್.ಅವರ ಬಹುದಿನದ ಆಶೆಯಾಗಿತ್ತು. ಜಿ.ಎಸ್.ಎಸ್. ಇತ್ತೀಚೆಗೆ ತಮ್ಮ ಆರೋಗ್ಯ ಅಷ್ಟು ಚೆನ್ನಾಗಿರದಿದ್ದರೂ ತಮ್ಮ ನಚ್ಚಿನ ಗುರು ಕುವೆಂಪು ಅವರ ಬಗ್ಗೆ ಒಂದು ಅಚ್ಚುಕಟ್ಟಾದ ವಿಮರ್ಶಾಕೃತಿಯನ್ನು ಬರೆದು ಪ್ರಕಟಿಸಿದ್ದಾರೆ.
ಜಿ.ಎಸ್.ಎಸ್.ಅವರ ಮೇಲೆ ತೀವ್ರವಾದ ಪ್ರಭಾವ ಬೀರಿದ ಅವರ ಇನ್ನೊಬ್ಬ ಗುರು ತೀ.ನಂ.ಶ್ರೀಕಂಠಯ್ಯನವರು. ಕನ್ನದದ ಕೊರಳಲ್ಲಿ ಶ್ರೀಕಂಠಿಕೆ ಎಂದು ತೀ.ನಂ.ಶ್ರೀ ಅವರನ್ನು ಜಿ.ಎಸ್.ಎಸ್. ಕೈವಾರಿಸುತ್ತಾರೆ.ಅಚ್ಚುಕಟ್ಟಿನ ಸ್ವಚ್ಛತೆಯ ಸಂಕೇತವಾದ ತೀನಂಶ್ರೀ ಅವರ ಒಂದೊಂದು ಕೃತಿಯೂ ಕೃತಾರ್ಥ. ಅವರು ಪರಿಪೂರ್ಣತೆಯ ಅತೃಪ್ತ ಅನ್ವೇಷಕ ಮತ್ತು ಪಾಂಡಿತ್ಯ ಪ್ರತಿಭೆಗಳ ಹದವಾದ ಪಾಕ ಎಂಬುದಾಗಿ ತಮ್ಮ ಗುರುಗಳನ್ನು ಮೆಚ್ಚಿಕೊಳ್ಳುತ್ತಾರೆ. ಜಿ.ಎಸ್.ಎಸ್. ವವರ ವ್ಯಕ್ತಿತ್ವ ನಿರ್ಮಿತಿಯಲ್ಲಿ ತೀನಂಶ್ರೀ ಅವರದ್ದು ಗಾಢವಾದ ಪ್ರಭಾವ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.ಇನ್ನು ತಸು ಶ್ಯಾಮರಾಯರಂತೂ ಜಿ.ಎಸ್.ಎಸ್. ಅವರಿಗೆ ತಾಯ್ತನದ ವಾತ್ಸಲ್ಯವನ್ನು ಧಾರೆಯೆರೆದ ಮಹಾನುಭಾವರು. ಶ್ಯಾಮರಾಯರು ಬದುಕಿರುವವರೆಗೂ ಅವರ ಹುಟ್ಟುಹಬ್ಬದ ದಿನ ಜಿ.ಎಸ್.ಎಸ್. ಎಲ್ಲೇ ಇರಲಿ ಮೈಸೂರಿಗೆ ಧಾವಿಸುತ್ತಿದ್ದರು.ಅನೇಕರಿಗೆ ಗೊತ್ತಿರುವಂತೆ ಜಿ.ಎಸ್.ಎಸ್. ಅವರ ಜನಪ್ರಿಯ ಗೀತೆ "ಎದೆತುಂಬಿ ಹಾಡಿದೆನು" ಈ ಶ್ಯಾಮರಾಯರನ್ನು ಉದ್ದೇಶಿಸಿ ಬರೆದ ಹಾಡು.ಅದೀಗ ಸುಗಮ ಸಂಗೀತ ಕಛೇರಿಗಳ ಮಂಗಳ ಗೀತೆಯಾಗಿ ಪರಿಣಮಿಸಿದೆ.ಮೈಸೂರು ಅನಂತಸ್ವಾಮಿಯವರ ಅತ್ಯದ್ಭುತ ಸಂಯೋಜನೆಯಾದ ಎದೆತುಂಬಿ ಹಾಡಿದೆನು ಸುಗಮಸಂಗೀತದ ಮನೋಹರ ಮಂಜುಲ ಗೀತೆಗಳಲ್ಲಿ ಒಂದು.ಜಿ.ಎಸ್.ಎಸ್. ಆಗಾಗ ಹೇಳುತ್ತಿರುತ್ತಾರೆ: "ಇಂಥ ಒಂದು ಗೀತೆ ಜನತೆಯ ಹೃದಯದಲ್ಲಿ ಸ್ಥಾನ ಗಿಟ್ಟಿಸಿತು ಎಂದರೆ ಕವಿಯ ಹೆಸರು ಅಜರಾಮರವಾಗಿಬಿಡುತ್ತದೆ! ಈ ಗೀತೆಗೆ ರಾಗ ಸಂಯೋಜನೆ ಮಾಡಿದ ಅನಂತಸ್ವಾಮಿಅವರನ್ನು ಜಿ.ಎಸ್.ಎಸ್. ಬಹಳ ಪ್ರೀತಿಯಿಂದ ನೆನೆಯುತ್ತಾರೆ.(ಅನಂತಸ್ವಾಮಿ ಅವರು ಆಸ್ಪತ್ರೆಯಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಿದ್ದಾಗ ಜಿ.ಎಸ್.ಎಸ್.ಅವರಿಗೆ ಬಹುಪ್ರಿಯರಾದ ಇನ್ನೊಬ್ಬ ಸಂಗೀತ ನಿರ್ದೇಶಕ ಸಿ.ಅಶ್ವಥ್ ಅವರು ಜಿ.ಎಸ್.ಎಸ್. ಮತ್ತು ನನ್ನನ್ನು ಅನಂತಸ್ವಾಮಿ ಅವರನ್ನು ನೋಡಲು ಕರೆದೊಯ್ದಿದ್ದು ನೆನಪಾಗುತ್ತಿದೆ).ಎದೆ ತುಂಬಿ ಹಾಡಿದೆನು ಎಂಬ ಈ ಗೀತೆಯನ್ನು ರತ್ನಮಾಲಾಪ್ರಕಾಶ್ ಅವರ ಕೊರಳಲ್ಲಿ ಕೇಳುವುದೆಂದರೆ ಜಿ.ಎಸ್.ಎಸ್.ಅವರಿಗೆ ಇಂದಿಗೂ ತುಂಬ ಇಷ್ಟ.
ಕುವೆಂಪು ಅವರ ನಂತರ ಬೇಂದ್ರೆ ಮತ್ತು ಪುತಿನ -ಜಿ.ಎಸ್.ಎಸ್ ಅವರಿಗೆ ಬಹು ಪ್ರಿಯರಾದ ಕವಿಗಳು. ಪುತಿನ ಅವರ ಎಣೆಯಿಲ್ಲದ ಪ್ರೀತಿಗೆ ಜಿ.ಎಸ್.ಎಸ್ ಮಾರುಹೋಗಿದ್ದರು. ಅನೇಕ ಬಾರಿ ಜಿ.ಎಸ್.ಎಸ್. ಮತ್ತು ನಾನು ಒಟ್ಟಿಗೇ ಪುತಿನ ಅವರ ಮನೆಗೆ ಹೋಗಿದ್ದೇವೆ. (ಮೊಟ್ಟಮೊದಲು ನನ್ನನ್ನು ಕುವೆಂಪು ಮತ್ತು ಪುತಿನ ಅವರ ಮನೆಗೆ ಕರೆದುಕೊಂಡು ಹೋದವರು ಜಿ.ಎಸ್.ಎಸ್.ಅವರೇ). ಗಂಟೆ ಗಟ್ಟಲೆ ಪುತಿನ ವರೊಂದಿಗೆ ಸರಸ ಸಂಭಾಷಣೆ ನಡೆಸಿದ್ದೇವೆ.ಸಾಯುವ ಕೆಲವು ತಿಂಗಳು ಮುನ್ನ ಪುತಿನ ಅವರು ತಮ್ಮ ಹೆಸರಿನಲ್ಲಿ ಸರ್ಕಾರ ಸ್ಥಾಪಿಸಲಿರುವ ಟ್ರಸ್ಟ್ ನಲ್ಲಿ ಅವರಿಗೆ ತುಂಬ ಪ್ರಿಯರಾದ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರೂ, ಜಿ.ಎಸ್.ಶಿವರುದ್ರಪ್ಪನವರೂ ಇರಬೇಕೆಂದು ಸೂಚಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಒಮ್ಮೆ ನನ್ನ ಬಳಿ ಮಾತಾಡುವಾಗ "ನಮ್ಮ ಶಿವರುದ್ರಪ್ಪ ತುಂಬಾ ಗಟ್ಟಿಗ ಕಾಣಯ್ಯ ..!"ಎಂದು ಪುತಿನ ತುಂಬು ಪ್ರೀತಿಯಿಂದ ನುಡಿದದ್ದು ನನಗೆ ನೆನಪಾಗುತ್ತಿದೆ.
ಜಿ.ಎಸ್.ಎಸ್. ಪುತಿನ ಟ್ರಸ್ಟ್ ನ ಅಧ್ಯಕ್ಷರಾದ ಮೇಲೆ ಏನೆಲ್ಲ ಕೆಲಸ ಮಾಡಿದ್ದಾರೆ ಎಂಬುದನ್ನು ನಾನು ಹತ್ತಿರದಿಂದ ಬಲ್ಲೆ. ಮೇಲುಕೋಟೆಯ ಪುತಿನ ಮನೆಯನ್ನು ಪುನಾರಚಿಸಿ ನಾಡಿಗೆ ಸಾಂಸ್ಕೃತಿಕ ನೆನಪಾಗಿ ನೀಡುವಾಗ ಒಂದು ದಿನ ಮೊದಲೇ ಜಿ.ಎಸ್.ಎಸ್., ಚೆನ್ನವೀರ ಕನವಿ, ಅಚ್ಯುತಕಾದ್ರಿ, ಕಮಲೇಶ್ ಮತ್ತು ನಾನು ಮೇಲುಕೋಟೆಗೆ ಹೋಗಿದ್ದೆವು.ಇಡೀ ರಾತ್ರಿ ನಾವು ಪುತಿನ ಮನೆಯ ಅಲಂಕರಣ ಕಾರ್ಯದಲ್ಲಿ ತೊಡಗಿದ್ದೆವು. ಯಾವ ಫೋಟೊ ಎಲ್ಲಿರಬೇಕು, ಪುತಿನ ಅವರ ಯಾವ ಕವಿತೆಯ ಸಾಲು ಯಾವ ಗೋಡೆಯ ಮೇಲೆ ಇರಬೇಕು ಎಲ್ಲದರಲ್ಲೂ ಜಿ.ಎಸ್.ಎಸ್. ಅವರ ಮಾರ್ಗದರ್ಶನ! ಮಾರ್ಗದರ್ಶನ ಎಂಬ ಮಾತು ತಪ್ಪು. ಮೊದಲು ಸ್ವತಹ ಅವರು ಮಾಡಲು ಹೊರಡುವುದು. ಆಮೇಲೆ ನಾವು ಅವರಿಗೆ ಅಸರೆಯಾಗಿ ನಿಲ್ಲುವುದು. ದೂರದಿಂದ ನೋಡಿ , ತಲೆದೂಗುತ್ತಾ ಕಣವಿಯವರು(ಇವರು ಜಿಎಸ್ಸೆಸ್ ಅವರ ಪರಮಾಪ್ತ ಗೆಳೆಯರು ಎಂಬುದನ್ನು ಕನ್ನದ ಸಾರಸ್ವತ ಲೋಕ ಬಲ್ಲುದು): " ಈಗ ಅಗ್ದೀ ಚಲು ಆತು ನೋಡ್ರಿ..!" ಎಂದು ಉದ್ಗರಿಸುವುದು. ಹೀಗೆ ಜಿ.ಎಸ್.ಎಸ್ ಕಾರ್ಯಶ್ರದ್ಧೆ, ಸ್ನೇಹಪ್ರೀತಿ, ರುಚಿಶುದ್ಧಿ ಎಲ್ಲಕ್ಕೂ ನಮಗೆ ಆದರ್ಶವಾಗಿ ನಿಂತವರು!
ಊಟ ತಿಂಡಿಗಳಲ್ಲಿ ಜಿ.ಎಸ್.ಎಸ್. ಅವರು ಒಳ್ಳೇ ರಸಿಕರು! ಹೂರಣದ ಹೋಳಿಗೆಯ ಊಟವನ್ನು ಅವರ ಮನೆಯಲ್ಲೇ ಮಾಡಬೇಕು.ಹೋಳಿಗೆ ಹಾಕಿಸಿಕೊಂಡು, ಅದರಮೇಲೆ ತುಪ್ಪ ಸುರುವಿಕೊಂಡು, ಅದಕ್ಕೆ ಕಸಿಮಾವಿನ ಸೀಕರಣೆ ಬೆರೆಸಿಕೊಂಡು ಅದನ್ನೆಲ್ಲಾ ಹದವಾಗಿ ಕಿವುಚಿ ರಸಪಾಕ ಮಾಡಿಕೊಂಡು ಸಶಬ್ದವಾಗಿ ಅದನ್ನು ತಿನ್ನಿವುದು ಜಿ.ಎಸ್.ಎಸ್.ಕ್ರಮ!. " ಹೀಗೆ ....ಹೋಳಿಗೆ ತಿನ್ನಬೇಕಾದ್ದು..!" ಎಂದು ಅವರು ನಮ್ಮತ್ತ ನೋಡುತ್ತಾ ಪಾಪ ತಿಳಿಯದ ಮುಗ್ಧರು ನೀವು ಎಂದು ಅನುಕಂಪೆ ತೋರುವ ಗತ್ತನ್ನು ನೋಡಿಯೇ ಅನುಭವಿಸಬೇಕು! ಹಾಗೇ ವಿದ್ಯಾರ್ಥಿಭವನದ ದೋಸೆ ಅವರಿಗೆ ಪ್ರಿಯವಾದುದು! ಮೈಸೂರಿಗೆ ಹೋದಾಗ ಮೈಲಾರಿ ಹೋಟೆಲ್ ಗೆ ಅವರೇ ನಮ್ಮನ್ನು ಕರೆದೊಯ್ದಾರು! ಆರೋಗ್ಯಕ್ಕೆ ತೊಂದರೆಯಿಲ್ಲ ತಗೊಳ್ಳಿ ತಗೊಳ್ಳಿ ಎಂದು ಉಪಚಾರಮಾಡುವುದು ಬೇರೆ! ಕೊನೆಗೆ ಮಾಣಿ ಬಂದು ಬಿಲ್ಲು ಬಡಿಯುತ್ತಾನೆ. ಅದನ್ನು ಜಿ.ಎಸ್.ಎಸ್. ಇರುವಾಗ ಅವರ ವಿದ್ಯಾರ್ಥಿಗಳು ಹೇಗೆ ತಾನೆ ಮುಟ್ಟುವ ಧೈರ್ಯ ಮಾಡಬಲ್ಲರು! ಚಿಕ್ಕವರಿಗೆ ತಿನ್ನಿಸುವುದು ದೊಡ್ಡವರ ಆಜನ್ಮ ಸಿದ್ಧ ಹಕ್ಕು ಎಂಬ ಘೋಷಣೆಯಲ್ಲಿ ದೃಢವಾದ ವಿಶ್ವಾಸ ಉಳ್ಳವರು ನಮ್ಮ ಮೇಷ್ಟ್ರು! ಅಥವಾ ಆ ಘೋಷಣೆಯನ್ನು ಹುಟ್ಟಿ ಹಾಕಿದವರು ಅವರೇ ಎನ್ನೋಣ!
ಕನ್ನದ ಕಾವ್ಯದಲ್ಲಿ ನಮ್ಮ ಪ್ರತಿಯೊಬ್ಬ ಮುಖ್ಯ ಕವಿಯನ್ನೂ ಒಂದಲ್ಲ ಒಂದು ದನಿ ಕಾಡುತ್ತಾ ಹೋಗುತ್ತದೆ. ಅದು ಮೋಹನ ಮುರಲಿ ಆಗಬಹುದು! ವನಮಾಲಿಯ ವೇಣು ವಾದನ ಇರಬಹುದು. ಅಸರಂತ ಒಂದೇ ಸಮ ಕೂಗುವ ಕೋಗಿಲೆಯ ಕಾಡುವ ಧ್ವನಿ ಇರಬಹುದು! ಜಿ.ಎಸ್.ಎಸ್. ಅವರನ್ನೂ ಒಂದು ಧ್ವನಿ ಕಾಡುತ್ತಾ ಇದೆ! ಅದು ಒಂದು ಒಂದು ಮಗುವಿನ ನೀಳ್ದನಿಯ ರೋದನ!
ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ-
ದೂರದ ಬಿರುಗಾಳಿಯ ಮೊರೆಯಂತೆ
ಮುಗಿಲಿಂದಿಳಿಯುವ ಧಾರಾಕಾರದ
ಮಳೆಯಂತೆ
ದದವನು ಅಪ್ಪಳಿಸುವ ಅಲೆಯಂತೆ
ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ!
ಕೈಗೆಟುಕದ ರೊಟ್ಟಿಯ ಚೂರಾಗಿದೆಚಂದಿರ
ಬಾನಿನ ತಟ್ಟೆಯಲಿ!
ಹಸಿವಿನ ತುಣುಕುಗಳಂದದಿ ಚಿಕ್ಕೆಗಳುರಿಯುತ್ತಿವೆ
ಶೂನ್ಯದ ಹೊಟ್ಟೇಯಲಿ
ಸೊಕ್ಕಿದ ತೇಗಿನ ತೆರ ಝಗಝಗಿಸಿವೆ
ನಗರದ ಬೆಳಕಿನ ವಿಸ್ತಾರ
ಸುತ್ತಲು ಛಳಿಗಾಳಿಗೆ ನಡುಗತಲಿವೆ
ಎಲೆಯುದುರಿದ ಕೈ ಚಾಚಿದ
ಅನಾಥ ಮರಗಲ ಪರಿವಾರ!
ಪದ್ಯವನ್ನು ಪೂರ್ತಿ ಓದಿದ ಮೇಲೆ ಗೊತ್ತಾಗುತ್ತದೆ ಈ ಮಗು ಮನುಷ್ಯಕುಲದ ದೀನತೆಯ ಪ್ರತೀಕ ಎಂದು. ಈವತ್ತಿನ ಸಾಮಾಜಿಕ ವಿಷಮತೆಯ ಸಂದರ್ಭದಲ್ಲಿ ಮಾನವತೆ ದೀನವಾಗಿ ಅಳುತ್ತಿರುವುದನ್ನು ಈ ಕವಿತೆ ಅದ್ಭುತವಾಗಿ ವರ್ಣಿಸುತ್ತದೆ!
ಶೋಷಿತವರ್ಗದ ಪರವಾದ ಜಿ.ಎಸ್.ಎಸ್.ನಿಲುವು ಆರೋಪಿತವಾದುದಲ್ಲ. ಅವರ ರಕ್ತದ ದಮನಿಯಲ್ಲಿ ಸಹಜವಾಗಿ ಪ್ರವಹಿಸುವಂಥದ್ದು! ಜಿ.ಎಸ್.ಎಸ್.ಜಗತ್ತು ಕಾಯುವ ದೈವದಲ್ಲಿ ನಂಬಿಕೆ ಕಳೆದುಕೊಂಡ ಜಗತ್ತು. ಜಿ.ಎಸ್.ಎಸ್. ದೈವದ ಹಂಗಿಲ್ಲದ ಕವಿ ನಿಜ. ಮನುಷ್ಯನೇ ತನ್ನ ಕರ್ಮಕ್ಕೆ ಹೊಣೆಗಾರಿಕೆ ಒಪ್ಪಿಕೊಂಡು ಬದುಕಬೇಕಾದ ಜಗತ್ತು ಇದು ಎಂದು ಜಿ.ಎಸ್.ಎಸ್ ಕಾವ್ಯ ನಂಬಿದೆ.ಅವರ ಪ್ರಸಿದ್ಧವಾದ ಒಂದು ಕವಿತೆಯೇ ಇದೆಯಲ್ಲ!
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ -ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ!
ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೇ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ
ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ!
ಮೂವತ್ತೆರಡು ವರ್ಷಗಳ ಹಿಂದೆ ರಚಿತವಾದ ಈ ಗೀತೆ ಜಿ.ಎಸ್.ಎಸ್. ಕಾವ್ಯದ ಕೇಂದ್ರ ಸ್ಪಂದನವನ್ನು ಸೂಚಿಸಬಲ್ಲುದು. ಅಂತರದ ನಿವಾರಣೆ, ಪ್ರೀತಿ ಸ್ನೇಹಗಳ ಆವಾಹನೆ ಅವರ ಕಾವ್ಯದ ಬಹು ಮುಖ್ಯ ಆಶಯವಾಗಿದೆ.
ಸಿ.ಅಶ್ವಥ್ ಈ ಗೀತೆಗೆ ಅದ್ಭುತವಾಗಿ ಸ್ವರಸಂಯೋಜನೆ ಮಾಡಿದ್ದಾರೆ. ದೈವಶ್ರದ್ಧೆಯ ಅವರಿಗೆ ಇಲ್ಲದ ದೇವರು ಅನ್ನುವ ಮಾತು ಒಂದು ನುಂಗಲಾರದ ತುತ್ತು! ಅದನ್ನು ಕಾಣದ ದೇವರು ಕೆಲವರು ತಿದ್ದಿ ಹಾಡಿದ್ದೂ ಉಂಟು! ಜಿ.ಎಸ್.ಎಸ್. ಈ ಕವಿತೆಯಲ್ಲಿ ವ್ಯಕ್ತ ಪಡಿಸಿರುವ ಭಾವ ಸ್ಪಷ್ಟವಾಗಿದೆ. ಕಲ್ಲುಮಣ್ಣಿನ ಗುಡಿಯಲ್ಲಿ ದೇವರು ಇಲ್ಲ ಎಂಬುದೇ ಸೂಚ್ಯಾರ್ಥ! ದೇವರು ಇದ್ದರೆ ಅವನು ನಮ್ಮೊಳಗೇ ಇರುವ ಪ್ರೀತಿ ಸ್ನೇಹಗಳಲ್ಲಿ ಇದ್ದಾನೆ ಎನ್ನುತ್ತಾರೆ ಅವರು. ಇದು ದೈವವಿರೋಧೀ ನಿಲುವಲ್ಲ. ದೈವದ ವ್ಯಾಖ್ಯಾನದಲ್ಲಿ ಇರುವ ಭಿನ್ನತೆಯ ನಿಲುವು.
ಜಿ.ಎಸ್.ಎಸ್. ಕಾವ್ಯದ ಪರಮ ಲಕ್ಷಣವನ್ನೂ ಈ ಕವಿತೆಯ ಭಾಷಿಕ ಸ್ವರೂಪ ಪ್ರತಿನಿಧಿಸುವಂತಿದೆ. ಜಿ.ಎಸ್.ಎಸ್. ಅವರದ್ದು ವಚನಕಾರರಂತೆ(ಅದರಲ್ಲೂ ಬಸವಣ್ಣನವರಂತೆ) ನೇರವಾಗಿ ಹೃದಯಕ್ಕೆ ತಾಗುವ ಮಾತು. ಅವರ ಯಾವುದೇ ಜನಪ್ರಿಯ ಗೀತೆಯನ್ನು ತೆಗೆದುಕೊಳ್ಳಿ ಅದು ಹೀಗೆ ನೇರ ಮಾತು ಗಾರಿಕೆಯ ಫಲವಾಗಿದೆ. ಆ ನೇರ ಮಾತುಗಾರಿಕೆಗೆ ಕನ್ನಡ ಭಾಷೆಯ ಹೃದಯವನ್ನು ಬಲ್ಲ ನುಡುಗಾರಿಕೆ ಶಕ್ತಿಯನ್ನು ನೀಡುತ್ತದೆ. ಕನ್ನಡದ ಅಚ್ಚ ನುಡಿಗಟ್ಟನ್ನು ಜಿ.ಎಸ್.ಎಸ್. ಅಂತೆ ಬಳಸುವ ಕವಿಗಳು ವಿರಳ.ರಮ್ಯತೆಯನ್ನು ಅದರ ನುಡಿಗಟ್ಟಲ್ಲೇ ಛಿದ್ರಿಸಿ ಹೊಸ ಅರ್ಥವಂತಿಕೆಯನ್ನು ಅವರ ಕಾವ್ಯ ಕಟ್ಟಬಲ್ಲದು. ನಕ್ಷತ್ರಗಳನ್ನು ಶೂನ್ಯದ ಹೊಟ್ಟೆಯಲ್ಲಿ ಉರಿಯುವ ಹಸಿವಿನ ತುಣುಕುಗಳು ಎನ್ನುವಲ್ಲಿ ಇಂಥಾ ಪ್ರಯತ್ನವಿರುವುದನ್ನು ನೋಡಬಹುದು. ಅಸುಂದರವಾದುದನ್ನು ಹೀಗೆ ಕಾವ್ಯದಲ್ಲಿ ಒಳಗೊಳ್ಳಬಲ್ಲ ಕವಿ ರಮ್ಯಮಾರ್ಗದಲ್ಲಿ ಇದ್ದೂ ಒಳ ಬಂಡಾಯ ನಡೆಸುವ ಕವಿಯಾಗಿರುತ್ತಾನೆ. ಜಿ.ಎಸ್.ಎಸ್.ಅಂಥ ಕವಿಯಾಗಿದ್ದಾರೆ.ಖಾಸಗೀ ದುಗುಡ ದುಮ್ಮಾನಗಳನ್ನು ಅವರ ಕಾವ್ಯ ಸಾಮಾಜಿಕ ಪರಿಪ್ರೇಕ್ಷ್ಯದಲ್ಲೇ ಒಳಗೊಳ್ಳುವ ಯತ್ನ ಮಾಡುತ್ತದೆ. ಆದುದರಿಂದಲೇ ಅವರು ಅಖಂಡ ಕರ್ನಾಟಕದ ಹೃದಯಸ್ಪಂದನವನ್ನು ಹಿಡಿಯಬಲ್ಲ ಕವಿಯಾಗಿದ್ದಾರೆ. ಅವರು ರಾಷ್ಟ್ರ ಕವಿಯಾಗುವುದು ಈ ನೆಲೆಯಲ್ಲೂ ಯುಕ್ತವಾದುದು ಅನ್ನಿಸುತ್ತದೆ.ಈ ನೆಲೆಯಲ್ಲಿ ಅವರ ಕಾವ್ಯ ಮತ್ತು ಜೀವಿತದ ಅಧ್ಯಯನ ನಮ್ಮನ್ನು ನಮ್ಮ ನಾಡಿನ ಹೃದಯದ ಹತ್ತಿರಕ್ಕೆ ಕೊಂಡೊಯ್ಯಬಲ್ಲುದು.
**********************
ಜೀವನಪಥ:
ಜನನ:೧೯೨೬,ಫೆಬ್ರವರಿ ೭ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ
ಶಿಕ್ಷಣ:ಎಂ.ಎ.,ಪಿಎಚ್.ಡಿ,
ಡಾಕ್ಟರೇಟ್: ಸೌಂದರ್ಯಸಮೀಕ್ಷೆ-೧೯೬೦(ಕುವೆಂಪು ಮಾರ್ಗದರ್ಶನದಲ್ಲಿ)
೧೯೪೯ರಲ್ಲಿ ಮಹರಾಜಾ ಕಾಲೇಜಿನಲ್ಲಿ ಕನ್ನದ ಅಧ್ಯಾಪಕ ವೃತ್ತಿ ಪ್ರಾರಮ್ಭ
೧೯೬೩ ರಿಂದ ೧೯೬೬ ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ರೀಡರ್ ಮತ್ತು ಕನ್ನದ ವಿಭಾಗದ ಮುಖ್ಯರು
೧೯೭೦ ರಿಂದ ೧೯೮೬ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರು ಮತ್ತು ನಿರ್ದೇಶಕರು
೧೯೭೪-ಮಾಸ್ಕೋದಲ್ಲಿ ೨೨ದಿನ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ.
೧೯೮೨ರಲ್ಲಿ ರಾಜ್ಯಸಾಹಿತ್ಯ ಅಕಾಡೆಮಿ ಪುರಸ್ಕಾರ.
೧೯೮೪-ಕಾವ್ಯಾರ್ಥ ಚಿಂತನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
೧೯೮೭-ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪದವಿ
೧೯೮೭-೬೧ನೇ ಅ.ಭಾ.ಕನ್ನದ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪದವಿ.
೧೯೯೪-೯೫ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರು.
೧೯೯೮-ಪಂಪ ಪ್ರಶಸ್ತಿ.
Friday, September 18, 2009

ಮಲ್ಲಿ ಮಲ್ಲಿ ಎಲ್ಲಿಗೆ?
ಮಲ್ಲಿ ಮಲ್ಲಿ ಎಲ್ಲಿಗೆ? ಮಲ್ಲೀಪಟ್ಣದ ಗಲ್ಲಿಗೆ!
ಯಾತಕ್ಕಮ್ಮ ಅಲ್ಲಿಗೆ? ಗೋಲೀ ಮಾಡೋ ಕಲ್ಲಿಗೆ!
ಗೋಲೀಮಾಡೋ ಕಲ್ಲನ್ ತಂದು ಯಾರಿಗೆ ಕೊಡ್ತೀ ಮಲ್ಲಿಗೆ?
ರಾತ್ರಿ ಎಲ್ಲಾ ಅಳ್ತಾ ಇರೋ ಅಡುಗೇಮನೆ ನಲ್ಲಿಗೆ!
ಪೋಲೀ ಗುಂಡ!
ಪೋಲೀ ಗುಂಡ ಬಂದ! ಕೋಳೀವಾಡದಿಂದ!
ಬಗಲಲ್ಲೊಂದು ಕೋಳಿ! ಬೆಳಗಾಯ್ತಣ್ಣ ಏಳೀ!
ಕೂಗ್ತಾ ಇತ್ತು ಕೊಕ್ಕೋ! ಉದ್ರೀಗಾದ್ರೂ ತಕ್ಕೋ!
ರಾಣೀ ಬೆಕ್ಕು-ರಾಜಾ ಬೆಕ್ಕು
ರಾಣೀ ಬೆಕ್ಕು, ರಾಜಾ ಬೆಕ್ಕು ಸಿಕ್ಕಿದ ಇಲಿಗಾಗಿ
ರೇಗಾಡುತ್ತಾ ಕೂಗಾಡುತ್ತಾ ಜಗಳಕ್ಕೇ ರೆಡಿಯಾಗಿ
ನಿಂತಿದ್ದಾಗ ಅಲ್ಲಿಗೆ ಬಂತು ನಾಯಿ-ತೆರೆದೇ ಬಾಯಿ!
ಜಗಳ ಇಲ್ಲ, ಪಗಳ ಇಲ್ಲ ಎರಡೂ ಬೆಕ್ಕು ಮಾಯ!
ಹಿರಿಯೂರಲ್ಲಿ
ಹಿರಿಯೂರಲ್ಲಿ ಕರಿಯಣ್ಣೋರು ಕುರೀ ಕಾಯ್ತಾ ಇದ್ರು!
ಕುರಿ ಕಾಯ್ತಾ ಕಾಯ್ತಾ ಒಮ್ಮೆ ಕರೀ ಬಾವೀಲಿ ಬಿದ್ರು!
ಕರೀಬಾವೀಲಿಲ್ಲ ನೀರು. ಬರೀಕತ್ತಲ ಜೋರು!
ಮೊದಲೇ ಬಿದ್ದೋರ್ ಕೇಳ್ತಾ ಇದ್ರು: "ಈಗ ಬಿದ್ದೋರ್ ಯಾರು?"
ಪಾಪನ ಚಡ್ಡಿ!
ಪುಟ್ಟ ಕಂದ ಹೈ!
ಪಾಪ! ಬರೀ ಮೈ!
ಚಡ್ಡಿ ಕೂಡ ನೈ!
ಥೈ! ಥೈ! ಥೈ!
ತಾತ ಎನ್ನುತ
ಕಣ್ಣ ತಿಕ್ಕುತ
ಅಳುತ ಇದ್ದ ತಾ
ಛೆ! ಛೆ! ಛೆ!
ತಾತ ಬಂದರು!
ಕೊಟ್ಟು ಒಂದು ರೂ
ಚಡ್ಡಿ ತಂದರು!!
ಹ! ಹ! ಹ!
ತೊಡಿಸಿ ನಿಕ್ಕರು
ತಾತ ನಕ್ಕರು
ಝಿಪ್ಪೆ ಚಕ್ಕರ್ರು!!
ಹೊ! ಹೊ! ಹೊ!
ಧೋ ಧೋ ಎಂದು!
ಧೊ! ಧೊ! ಎಂದು ಮಳೆ ಸುರಿವಂದು
ಅರಳಿದ ನಾಯಿಕೊಡೆ!
ಮುರಿಯದ ಹಾಗೆ ಬೀದಿಯ ನಾಯಿ
ನಿಂತಿದೆ ಮೇಲುಗಡೇ!
ಇಂದು ಚಿಕ್ಕ ಕೊಡೆ ಬೆಳೆದರೆ ಮುಂದೆ
ಆಗುವುದೂರಗಲ!
ಚೂರೂ ತೊಯ್ಯದೆ ನಿಲ್ಲುವೆ ಕೆಳಗೆ
ಮುಂದಿನ ಮಳೆಗಾಲ!
ಗಿಲ್! ಗಿಲ್! ಗಿಲ್!
ಗಿಲ್! ಗಿಲ್! ಗಿಲ್!
ಹೋಗ್ಬೇಡ ನಿಲ್!
ಹನಿ ಹನಿ ಮಳೆ ಜತೆ
ತಲೆ ಮೇಲೆ ಕಲ್!!
ನಮ್ಮ ಚೋಟು ನಾಯಿಗೆ
ನಮ್ಮ ಚೋಟು ನಾಯಿಗೆ
ನಾಕು ಫೀಟು ನಾಲಗೆ!
ಈಗ ಚೋಟು ಬೌ ಅಂದರೆ
ಕೇಳಿಸುವುದು ನಾಳೆಗೆ!
ಬಾವಿಯಾಮೆಚಿಪ್ಪಲಿ
ಬಾವಿಯಾಮೆಚಿಪ್ಪಲಿ
ಮಾಡಿಕೊಂಡು ಚಪ್ಪಲಿ
ಉರ್ಅ ತಿರುಗುತಿತ್ತು ಕತ್ತೆ
ವಾಕಿಂಗಿನ ನೆಪ್ಪಲಿ!
ಓಟೇ ರೇಟು!
ಒಂದು ಹಳೇ ಕೋಟೆ; ಕೋಟೆ ಒಳಗೊಂದು ಪೇಟೆ;
ಪೇಟೆ ಉದ್ದಕ್ಕು ಮಾರ್ತಾ ಇದ್ದಾರೆ ಒಣಾ ಮಾವಿನ ಓಟೆ!
ಓಟೇ ರೇಟು ಜಾಸ್ತಿ ಅಂದ್ರ ಶ್ರೀಮಾನ್ ಜೆಮ್ ಷೆಡ್ ತಾತ!
"ಓಟೇ ರೇಟೇ ಹಾಗೇ" ಅಂತು ಕುರುಚಲು ಗಡ್ಡದ ಹೋತ!
ಮಿತ್ರರೆ,ಈ ಕವಿತೆಗಳನ್ನ ನಿಮ್ಮ ಮಕ್ಕಳಿಗೆ ಹೇಳಿಕೊಡಿ. ಶುಭಾಶಯಗಳೊಂದಿಗೆ -ಎಚ್.ಎಸ್.ವಿ.
Friday, September 11, 2009
ಬಾರೋ...ಬಾರೋ...ಮಳೆರಾಯ...

ಕರ್ಣಾಟ ಮಾತೆಯಾ ಮಕ್ಕಳಿರ ಕೂಡಿ
ತಾಯ್ನುಡಿಯ ಸೇವೆಯನು ಮನಸಿಟ್ಟು ಮಾಡಿ!
-ಕುವೆಂಪು
ಇದೇ ತಿಂಗಳ ಐದನೇ ತಾರೀಖು ಭಾನುವಾರ ಬೆಳಿಗ್ಗೆ (೫.೯.೨೦೦೯) ನನ್ನ ಹೊಸ ಪುಸ್ತಕ ಬಾರೋ ಬಾರೋ ಮಳೆರಾಯ ಬಿಡುಗಡೆ ಆಯಿತು. ಮಕ್ಕಳಿಗಾಗಿ ನಾನು ಈವರೆಗೆ ಬರೆದಿರುವ ಎಲ್ಲ ಕವಿತೆಗಳ ಸಮಗ್ರ ಸಂಪುಟ ಅದು. ಅಂಕಿತ ಪುಸ್ತಕದ ಗೆಳೆಯರು ತುಂಬ ಚೆನ್ನಾಗಿ ಪುಸ್ತಕವನ್ನು ಪ್ರಕಟಿಸಿದ್ದಾರೆ. ಬಾರೋಬಾರೋ ಮಳೆರಾಯ ಒಂದೇ ಅಲ್ಲ. ಈಚೆಗೆ ನಿರಂತರವಾಗಿ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಾ ಇವೆ. ಮಕ್ಕಳಿಗಾಗಿ ಬರೆಯಬೇಕೆಂಬ ಉಮೇದು ಮತ್ತೆ ನಮ್ಮ ಲೇಖಕರಲ್ಲಿ ಮೂಡುತ್ತಾ ಇದೆ. ಇದು ಶುಭ ಲಕ್ಷಣ. ಹಿರಿಯ ಕವಿಗಳಾದ ಚೆನ್ನವೀರ ಕಣವಿಯವರ ಮಕ್ಕಳ ಕವಿತಾ ಸಂಗ್ರಹ ಈಚೆಗೆ ಹೊರಬಂದಿದೆ. ಶ್ರೀನಿವಾಸ ಉಡುಪ, ಎನ್.ಎಸ್.ಎಲ್, ನಾಡಿಗ, ವೈದೇಹಿ, ಆನಂದ ಪಾಟೀಲ, ಲಕ್ಷ್ಮೀಶ ತೋಳ್ಪಾಡಿ ಮತ್ತಿತರ ಮುಖ್ಯ ಲೇಖಕರು ಮಕ್ಕಳಿಗಾಗಿ ನಿರಂತರ ಬರೆಯುತ್ತಾ ಇದ್ದಾರೆ.ಜೊತೆಗೆ ಮಕ್ಕಳ ಸಾಹಿತ್ಯ ಹರಿಗಡಿಯದಂತೆ ಯಾವತ್ತಿನಿಂದಲೂ ನೋಡಿಕೊಂಡಿರುವ ಉತ್ತರಕರ್ನಾಟಕದ ಅಧ್ಯಾಪಕ ಕವಿಗಳು. ಇದೆಲ್ಲಾ ಸಂತೋಷಪಡಬೇಕಾದ ಸಂಗತಿಯೇ. ಆದರೆ ಈ ಸಂತೋಷದ ಮಧ್ಯೆ ನನ್ನನ್ನು ಚಿಂತೆಗೆ ಹಚ್ಚುವ ಸಂಗತಿಯೆಂದರೆ, ಯಾರಿಗಾಗಿ ನಾವು ಮಕ್ಕಳ ಸಾಹಿತ್ಯವನ್ನು ನಿರ್ಮಿಸುತ್ತಿದ್ದೇವೆಯೋ ಆ ಮಕ್ಕಳು ಕನ್ನಡದಿಂದ ದೂರವಾಗುತ್ತಿರುವುದು. ನಗರಗಳಲ್ಲಂತೂ ನೂರಕ್ಕೆ ತೊಂಭತ್ತು ಭಾಗ ಮಕ್ಕಳಿಗೆ ಕನ್ನಡ ಈಗ ಓದುವ ಭಾಷೆಯಾಗಿಲ್ಲ. ಅದು ಕೇವಲ ಮಾತಾಡುವ ಭಾಷೆ. ಅವರೀಗ ಇಂಗ್ಲಿಷ್ ರೈಮ್ಸ್ ಓದುತ್ತಾರೆ. ಹ್ಯಾರೀಪಾಟ್ಟರ್ ಓದುತ್ತಾರೆ. ಕಾಮಿಕ್ಸ್ ನೋಡುತ್ತಾರೆ. ಪಂಜೆ, ಕುವೆಂಪು, ರಾಜರತ್ನಂ, ಹೊಯಿಸಳರ ಹೆಸರೂ ಅವರಿಗೆ ಗೊತ್ತಿಲ್ಲ. ತಪ್ಪು ಮಕ್ಕಳದಲ್ಲ. ಮಕ್ಕಳನ್ನು ಹಾಗೆ ಬೆಳೆಸುತ್ತಿರುವ ಪೋಷಕರದ್ದೂ ಅಲ್ಲ. ಈವತ್ತಿನ ಸಾಮಾಜಿಕ, ಶೈಕ್ಷಣಿಕ ಒತ್ತಡಗಳು ಹಾಗಿವೆ. ಕನ್ನಡದ ಬಗ್ಗೆ ಪ್ರೀತಿಯುಳ್ಳವರೂ ಈಗ ಅಸಾಹಯಕರಾಗಿದ್ದೇವೆ. ಶಾಲೆಗಳಲ್ಲಿ ಮಕ್ಕಳು ಕನ್ನಡ ಕಲಿಯುವ ಅವಕಾಶ ಕಡಿಮೆಯಾಗುತ್ತಾ ಇದೆ. ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಸುವಷ್ಟು ವ್ಯವಧಾನ ಈವತ್ತಿನ ತುರ್ತು ಜಗತ್ತಿನಲ್ಲಿ ತಂದೆ ತಾಯಿಯರಿಗೆ ಇಲ್ಲ. ನಗರಗಳಿರಲಿ ಹಳ್ಳಿ ಹಳ್ಳಿಗಳಲ್ಲೂ ಇಂಗ್ಲಿಷ್ ಶಾಲೆಗಳು ತಲೆಯೆತ್ತುತ್ತಾ ಇವೆ. ಕನ್ನಡವನ್ನು ಮಕ್ಕಳಿಗೆ ಕಲಿಸಲು ಈಗ ನಾವು ಯಾವುದಾದರೂ ಪರ್ಯಾಯವ್ಯವಸ್ಥೆಯನ್ನೇ ಕಲ್ಪಿಸಿಕೊಳ್ಳಬೇಕಾಗಿದೆ. ಅಮೆರಿಕೆಯಲ್ಲಿ ನಮ್ಮ ಕನ್ನಡ ಬಂಧುಗಳು ತಮ್ಮ ಮಕ್ಕಳಿಗೆ ಹೇಗಾದರೂ ಮಾಡಿ ಕನ್ನಡ ಕಲಿಸ ಬೇಕೆಂಬ ಸಂಕಲ್ಪದಿಂದ ರಜಾದಿನಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಶಾಲೆಗಳನ್ನು(ಏಕೋಪಾಧ್ಯಾಯ ಶಾಲೆಗಳು) ಪ್ರಾರಂಭಿಸಿದ್ದಾರೆ. ಇದರಿಂದ ಕನ್ನಡ ಓದುವುದು ಮಕ್ಕಳಿಗೆ ತಕ್ಕಮಟ್ಟಿಗಾದರೂ ಪರಿಚಯ ಆಗುತ್ತದೆ. ಹತ್ತಾರು ವರ್ಷಗಳಿಂದ ಇಂಥ ಕನ್ನಡ ಶಾಲೆ ನಡೆಸುತ್ತಿರುವ ಕನ್ನಡಾಭಿಮಾನಿಗಳು ಅಮೆರಿಕಾದಲ್ಲಿ ಇದ್ದಾರೆ. ಹೊರಗೆ ಪಕ್ಕಾ ಇಂಗ್ಲಿಷ್ ವಾತಾವರಣ. ಹಾಗಾಗಿ ಮಕ್ಕಳನ್ನು ಕನ್ನಡದ ಕಡೆ ಸೆಳೆಯುವ ಪ್ರಯತ್ನಗಳು ಅಮೆರಿಕೆಯಲ್ಲಿ ಹೆಚ್ಚು ಫಲಕಾರಿಯಾಗಿಲ್ಲ ಎಂಬುದನ್ನು ಅಲ್ಲಿನ ಗೆಳೆಯರು ವಿಷಾದದಿಂದ ಹೇಳುತ್ತಾರೆ. ಮತ್ತೆ ಕೆಲವರು ಮಕ್ಕಳಿಗೆ ಕನ್ನಡ ಸಂಪರ್ಕ ಉಳಿಯಬೇಕು ಎಂಬ ಸಂಕಲ್ಪದಿಂದ ಅವರನ್ನು ರಜಾದಿನಗಳಲ್ಲಿ ಬೆಂಗಳೂರಿಗೋ, ಧಾರವಾಡಕ್ಕೋ, ಮೈಸೂರಿಗೋ ಕಳಿಸಿಕೊಡುತ್ತಾರೆ. ಇಲ್ಲಿ ಆ ಮಕ್ಕಳು ತಿಂಗಳು ಒಪ್ಪತ್ತು ಇರುವಂತೆ ನೋಡಿಕೊಳ್ಳುತ್ತಾರೆ. ಈ ಉಪಾಯ ತಕ್ಕಮಟ್ಟಿಗೆ ಧನಾತ್ಮಕ ಫಲಿತಾಂಶ ಕೊಟ್ಟಿದೆ. ಪ್ರತಿವರ್ಷವೂ ಮಕ್ಕಳನ್ನು ಹೀಗೆ ಸೀಮಿತ ಕಾಲಾವಧಿಗೆ ಇಂಡಿಯಾಕ್ಕೆ ಕಳಿಸುವುದರಿಂದ ಆ ಮಕ್ಕಳು ಸುಲಲಿತವಾಗಿ ಕನ್ನಡ ಮಾತಾಡುವಂತಾಗಿದೆ. ಅನಿವಾಸೀಭಾರತೀಯರಾದ ನನ್ನ ಮಿತ್ರರೊಬ್ಬರ ಮಗಳು ಅಮೆರಿಕೆಯಲ್ಲಿದ್ದೂ ಸೊಗಸಾಗಿ ಕನ್ನಡ ಮಾತಾಡುತ್ತಾಳೆ. ಈ ಪ್ರಯೋಗವನ್ನು ಇನ್ನೊಂದು ಬಗೆಯಲ್ಲಿ ಬೆಂಗಳೂರು ನಿವಾಸಿಗಳಾದ ನಾವೂ ಮಾಡಬಹುದೇ? ಮಕ್ಕಳನ್ನು ರಜಾದಿನಗಳಲ್ಲಿ ಹಳ್ಳಿಗಳಿಗೆ ಕಳುಹಿಸುವುದು. ಅಲ್ಲಿ ಅವರು ಅಜ್ಜ ಅಜ್ಜಿಯರೊಂದಿಗೋ. ಅತ್ತೆಮಾವಂದಿರೊಂದಿಗೋ ತಿಂಗಳೊಪ್ಪತ್ತು ಇದ್ದು ಬರಲಿ. ಮೂರು ನಾಲಕ್ಕು ವರ್ಷ ಈ ಪ್ರಯೋಗ ಮಾಡುವುದರಿಂದ ಕನ್ನಡ ಮಾತಾಡುವುದು, ಓದುವುದು ಅವರಿಗೆ ಸಾಧ್ಯವಾಗಬಹುದು. ಗ್ರಾಮಗಳು ಹೀಗೆ ನಮ್ಮ ದೇಸೀಯತೆಯನ್ನು ಉತ್ಪಾದಿಸುವ, ಉಳಿಸುವ, ಪ್ರಚೋದಿಸುವ ಕಾರ್ಯಾಗಾರಗಳಾಗಬೇಕಾಗಿದೆ. ಹಳ್ಳಿಯಿಂದ ಮಕ್ಕಳು ರಜಾದಿನಗಳನ್ನು ಮುಗಿಸಿ ಬೆಂಗಳೂರಿಗೆ ಬಂದ ಮೇಲೆ, ಕನ್ನಡ ಹಾಡುಗಳನ್ನು ಕೇಳಲು, ಕನ್ನಡ ನಾಟಕಗಳನ್ನು, ಚಲನಚಿತ್ರಗಳನ್ನು ನೋಡಲು ನಾವು ಅವರನ್ನು ಪ್ರೋತ್ಸಾಹಿಸೋಣ. ಅವರು ಓದುತ್ತಾರೋ ಬಿಡುತ್ತಾರೋ ಒಂದು ಕನ್ನಡ ಪತ್ರಿಕೆ ನಮ್ಮ ಮನೆಗೆ ಬಂದು ಬೀಳುತ್ತಾ ಇರಲಿ. ನಾವು ಮನೆಯಲ್ಲಿ ಹಠತೊಟ್ಟವರಂತೆ ಕನ್ನಡ ಮಾತಾಡೋಣ. ಮಕ್ಕಳು ಕನ್ನಡದಲ್ಲಿ ಮಾತಾಡುವ ವಾತಾವರಣ ಕಲ್ಪಿಸೋಣ. ಶಾಲೆಯಲ್ಲಿ ಅವರು ಹೇಗೂ ಇಂಗ್ಲಿಷ್ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ! ಅವರು ಎಲ್ಲಿ ಸಮಕಾಲೀನ ಸಂದರ್ಭಕ್ಕೆ ನಿರುಪಯುಕ್ತರಾಗಿಬಿಡುತ್ತಾರೋ ಎಂಬ ಆತಂಕ ಬೇಡ. ಶಾಲೆಗಳಲ್ಲಿ ತಪ್ಪಿಯೂ ಅವರು ಕನ್ನಡ ಮಾತಾಡುವುದಿಲ್ಲ. ಮಾತಾಡಿದರೆ ದಂಡ ವಿಧಿಸುವ, ಛೀಮಾರಿ ಹಾಕುವ ವ್ಯವಸ್ಥೆ(!)ಯೂ ಇದೆ ಅಂತ ಕೇಳಿದ್ದೇನೆ. ನನ್ನ ಹೊಸ ಮಕ್ಕಳ ಕವಿತಾ ಸಂಗ್ರಹ ಪ್ರಕಟವಾದ ಬಗ್ಗೆ ತಿಳಿಸಿದೆನಲ್ಲಾ? ಆ ಪುಸ್ತಕದ ಒಂದು ಪ್ರತಿಯನ್ನು ನಿಮ್ಮ ಶಾಲೆಯ ಪುಸ್ತಕಭಂಡಾರಕ್ಕೆ ಕೊಡು ಎಂದು ನಾನು ನನ್ನ ಮೊಮ್ಮಗಳಿಗೆ ಹೇಳಿದಾಗ ಅವಳು ತಕ್ಷಣ ಉತ್ತರಿಸಿದ್ದು: ನಮ್ಮ ಸ್ಕೂಲಲ್ಲಿ ಕನ್ನಡ ಪುಸ್ತಕ ಲೈಬ್ರರಿಯಲ್ಲಿ ಇಡುವಂತಿಲ್ಲ! ಸರ್ಕಾರ ಇಂಥ ಕಡೆ ಮಧ್ಯೆ ಪ್ರವೇಶಿಸಬೇಕಾದ ಅಗತ್ಯವಿದೆ. ಶಿಕ್ಷಣ ಇಲಾಖೆ ಈ ಕೆಲಸವನ್ನು ತಕ್ಕ ಮಟ್ಟಿಗೆ ಮಾಡುತ್ತಾ ಇದೆ. ಆಯ್ದ ಪುಸ್ತಕಗಳನ್ನು ಹಳ್ಳಿ ಹಳ್ಳಿಯ ಶಾಲೆಗಳಿಗೆ ಉಚಿತವಾಗಿ ಹಂಚುವ ಕಾರ್ಯಕ್ರಮ. ಈ ಯೋಜನೆ ಇನ್ನೂ ವಿಸ್ತೃತವಾಗಬೇಕು. ಬೆಂಗಳೂರಿನ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಿಗೂ ಕನ್ನಡ ಪುಸ್ತಕಗಳನ್ನು ಹಂಚಬೇಕು. ಬಿಟ್ಟಿ ಸಿಕ್ಕುವಾಗ ಯಾರೂ ಬೇಡಾ ಅನ್ನಲಾರರು. ಕನ್ನಡ ಭಾಷೆಯನ್ನ ಒಂದು ಭಾಷೆಯಾಗಿಯಾದರೂ ಕಲಿತ ಮಕ್ಕಳಿಗೆ ವಿಶೇಷ ಅನುಕೂಲಗಳನ್ನು ಸರ್ಕಾರ ಕಲ್ಪಿಸಬೇಕು. ಶಿಷ್ಯವೇತನಗಳನ್ನು ಕೊಡಬೇಕು. ಮುಂದೆ ಅವರು ವೈದ್ಯಕೀಯ, ತಾಂತ್ರಿಕ ಕಾಲೇಜುಗಳಲ್ಲಿ ಓದುವ ಅವಕಾಶ ಕಲ್ಪಿಸಬೇಕು...(ಈಗ ಕಲ್ಪಿಸಿರುವ ಪ್ರೋತ್ಸಾಹ ಏನೇನೂ ಸಾಲದು)!ಇದೆಲ್ಲಾ ಇನ್ನೊಬ್ಬರು ಮಾಡಬೇಕಾದದ್ದು. ಸ್ವತಃ ನಾವು ಮಾಡಬಹುದಾದದ್ದು ಏನು? ಮಕ್ಕಳಿಗೆ ಮನೆಯಲ್ಲೇ ಕನ್ನಡ ಓದಲು ಬರೆಯಲು ಹೇಗಾದರೂ ಮಾಡಿ ಕಲಿಸುವುದು. ಅವರಿಗೆ ಅತ್ತ್ಯುತ್ತಮ ಕನ್ನಡ ಪುಸ್ತಕಗಳನ್ನು ಕೊಂಡುಕೊಟ್ಟು ಅವರ ಕೋಣೆಯಲ್ಲಿ ಪುಟ್ಟ ಒಂದು ಕನ್ನಡ ಪುಸ್ತಕ ಭಂಡಾರ ತೆರೆಯುವುದು.ನಮ್ಮ ಭಾಷೆಯನ್ನು ಮೊದಲು ನಾವು ಪ್ರೀತಿಸತೊಡಗುವುದು. ನಾವು ನಮ್ಮ ಭಾಷೆಯನ್ನು ಪ್ರೀತಿಸ ತೊಡಗಿದರೆ ಮಕ್ಕಳಿಗೂ ನಮ್ಮ ಭಾಷೆಯ ಬಗ್ಗೆ ಗೌರವ ಅಭಿಮಾನ ಆದರ ಮೂಡುವುದು.....ಮಕ್ಕಳೊಂದಿಗೆ ಅಗಾಗ ನಾವು ಕನ್ನಡ ಪುಸ್ತಕದ ಅಂಗಡಿಗಳಿಗೆ ಭೆಟ್ಟಿಕೊಡುವುದು ಒಳ್ಳೆಯ ಪರಿಣಾಮ ಬೀರಬಲ್ಲುದು...ಯಾವುದೇ ಭಾಷೆ ಒಂದು ಸಾಮಾಜಿಕ ಪ್ರತಿಷ್ಠೆಯ ಸೂಚಿಯಾಗುವುದನ್ನು ಮಾತ್ರ ಹೇಗಾದರೂ ಮಾಡಿ ತಪ್ಪಿಸ ಬೇಕಾದದ್ದು ನಾವು ಮುಖ್ಯವಾಗಿ ಮಾಡಬೇಕಾದ ಕೆಲಸ....ಕೊನೆಗೂ ಕನ್ನಡ ಉಳಿಯಬೇಕಾದದ್ದು ಪುಸ್ತಕಗಳಲ್ಲಿ ಅಲ್ಲ; ನಮ್ಮ ಮಕ್ಕಳ ನಾಲಗೆ ಮೇಲೆ.
"ಉಳಿವುದು ಕನ್ನಡ ನಾಳೆ, ಉಳಿದರೆ ಮಕ್ಕಳ ನಾಲಗೆ ಮೇಲೆ"
Thursday, September 3, 2009
ಅಡಿಗರ ನೆನಪು....
******
ಅಡಿಗರು ಜಯನಗರದ ಮನೆಯಿಂದ ಬನಶಂಕರಿಗೆ ತಮ್ಮ ಸ್ವಂತ ಮನೆಗೆ ಬಂದಮೇಲೆ ಒಮ್ಮೆ ಅವರ ಮನೆಗೆ ಹೋಗಿದ್ದಾಗ ಬಹಳ ಹೊತ್ತು ಅವರೊಂದಿಗೆ ಮಾತಾಡುತ್ತಾ ಕುಳಿತಿದ್ದರೂ ಅವರ ಪ್ರೀತಿಯ ಬೆಕ್ಕು ಕಾಣಿಸಲೇ ಇಲ್ಲ. ಸಾರ್...ನಿಮ್ಮ ಬೆಕ್ಕು ಕಾಣ್ತಾ ಇಲ್ಲವಲ್ಲಾ..? ಎಂದೆ. ಅಡಿಗರ ಮುಖ ಸ್ವಲ್ಪ ಸಪ್ಪಗಾಯಿತು. ಆ ಮನೆಯಿಂದ ಬರುವಾಗ ಅವನು ಎಲ್ಲೋ ಹೊರಗೆ ಹೋಗಿದ್ದ. ಎಷ್ಟು ಕಾದರೂ ಬರಲಿಲ್ಲ. ಇಲ್ಲಿಗೆ ಬಂದ ಮೇಲೆ ಅವನನ್ನು ಹುಡುಕಿಕೊಂಡು ಎಷ್ಟೋ ಬಾರಿ ಆ ಮನೆಯ ಹತ್ತಿರ ಹೋಗಿದ್ದೇವೆ. ಕೆಲವೊಮ್ಮೆ ಕಾಣುತ್ತಾನೆ. ಆದರೆ ಆ ಮನೆಯನ್ನು ಬಿಟ್ಟು ಬರಲು ಅವನಿಗೆ ಇಷ್ಟವಿಲ್ಲ. ಬೆಕ್ಕುಗಳಿಗೆ ಸಾಕಿದ ವ್ಯಕ್ತಿಗಳಿಗಿಂತ , ತಾನು ಬೆಳೆದ ಸ್ಥಳ ಮುಖ್ಯ ಎನ್ನುತ್ತಾರೆ. ನಮ್ಮನ್ನು ಬಿಟ್ಟಿರಲು ಅವನಿಗೂ ತುಂಬ ದುಃಖವಾಗಿರಬೇಕು. ಆದರೆ ಆ ಮನೆಯನ್ನು ಬಿಟ್ಟು ಬರುವುದು ಇನ್ನೂ ಹೆಚ್ಚುದುಃಖಕರ ಅನ್ನಿಸಿರಬೇಕು ಅವನಿಗೆ...!ಎಂದು ಸ್ವಲ್ಪ ಕಾಲ ಆ ಬೆಕ್ಕನ್ನು ನೆನೆಯುತ್ತಾ ಸುಮ್ಮನೆ ಮಾತಿಲ್ಲದೆ ಕುಳಿತರು.
*****
ಅಡಿಗರ ಪ್ರೀತಿಪಾತ್ರ ನಾಯಿಯೇನೋ ಅವರನ್ನು ಹೊಸಮನೆಗೆ ಹಿಂಬಾಲಿಸಿತ್ತು. ನಾನು ಯಾವಾಗ ಹೋದರೂ ಅದರ ಬಗುಳು, ಮತ್ತು ಸಂತೋಷಾಧಿಕ್ಯದಿಂದಲೋ, ಬೇಸರದಿಂದಲೋ ಗಿರಿಗಿಟ್ಟಲೆಸುತ್ತುವ ಸ್ವಾಗತ ನನಗೆ ದೊರಕುತ್ತಾ ಇತ್ತು. ಮನೆಯನ್ನು ಪ್ರವೇಶಿಸಿದ ಕೂಡಲೇ ಒಂದು ವರಾಂಡ. ಅದಕ್ಕೆ ಹೊಂದಿಕೊಂಡಂತೆ ಅಡಿಗರ ಬರೆಯುವ ಕೋಣೆ ಇತ್ತು. ಅವರ ಟೇಬಲ್ಲಿನ ಮೇಲೆ ಕಿಟ್ಟೆಲ್ಲಿಂದ ಹಿಡಿದು ಎಲ್ಲ ಡಿಕ್ಷ್ಣರಿಗಳೂ ಇರುತ್ತಿದ್ದವು. ಮಾತಾಡುವಾಗ ಯಾವುದೇ ಶಬ್ದದ ಬಗ್ಗೆ ಅನುಮಾನ ಉಂಟಾದರೂ ತಕ್ಷಣ ಡಿಕ್ಷ್ಣರಿ ತೆರೆದು ಆ ಪದವನ್ನು ಹುಡುಕಿ ಅನುಮಾನ ಬಗೆಹರಿಸಿಕೊಳ್ಳುವವರೆಗೂ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಆಗ ದೂರದರ್ಶನದಲ್ಲಿ ಇದೀಗ ದೆಹಲಿಗೆ ಎಂಬ ಪ್ರಕಟಣೆ ಪದೇ ಪದೇ ಬರುತ್ತಾ ಇತ್ತು. ಅಡಿಗರು ಆ ಪ್ರಕಟಣೆ ಬಂದಾಗ -ಇದೇನಯ್ಯಾ...? ಇದೀಗ ದೆಹಲಿಗೆ...! ಇದೀಗ ಎನ್ನುವುದು ತಪ್ಪು ಪ್ರಯೋಗ..ಈ ಬಗ್ಗೆ ದೂರದರ್ಶನದವರಿಗೆ ಬರೆದೆ ಕೂಡಾ. ಅವರೇನೂ ತಿದ್ದಿಕೊಳ್ಳಲಿಲ್ಲ...ಎಂದು ಬೇಸರ ವ್ಯಕ್ತಪಡಿಸಿದರು.
*******
ಹೆಚ್ಚುಕಮ್ಮಿ ಅದೇ ದಿನಗಳಲ್ಲಿ ನನ್ನ ಸಿಂದಬಾದನ ಆತ್ಮಕಥೆ ಎನ್ನುವ ಕವನಸಂಗ್ರಹ ಪ್ರಕಟವಾಯಿತು. ಆ ಪುಸ್ತಕವನ್ನು ಪ್ರಕಟಿಸಿದ ನರಹಳ್ಳಿಯವರು ಅದರ ಬಿಡುಗಡೆಯ ಕಾರ್ಯಕ್ರಮವನ್ನು ಶೇಷಾದ್ರಿಪುರಮ್ ಕಾಲೇಜಿನಲ್ಲಿ ಇಟ್ಟುಕೊಂಡಿದ್ದರು. ಅಡಿಗರು ಪುಸ್ತಕವನ್ನು ಬಿಡುಗಡೆ ಮಾಡಿದರು. ಸಿಂದಬಾದನ ಆತ್ಮಕಥೆ ಎಂದಿದ್ದರೆ ಸಾಕಾಗಿತ್ತು. ಸಿಂದಾಬಾದನ ಎಂದು ದೀರ್ಘ ಎಳೆಯುವ ಅಗತ್ಯವಿರಲಿಲ್ಲ ಎಂದು ನಗುತ್ತಾ ಹೇಳಿದರು.
********
ನಾನು ಎಂ.ಎ. ಓದುತ್ತಿರುವಾಗ(೧೯೭೨-೭೩) ಕರ್ನಾಟಕಸಂಘಕ್ಕೆ ಅಧ್ಯಕ್ಷನಾಗಿದ್ದೆ. ಅಡಿಗರನ್ನು ಒಮ್ಮೆ ವಿಶೇಷ ಉಪನ್ಯಾಸಕ್ಕೆ ಕರೆದಿದ್ದೆವು. ನನಗೆ ಆಗ ಸಭೆಯಲ್ಲಿ ಮಾತಾಡುವ ಅಭ್ಯಾಸವಿರಲಿಲ್ಲ. ಗಾಭರಿಯಲ್ಲಿ ಅಡಿಗರು ಉಪನ್ಯಾಸ ಮಾಡುತ್ತಾರೆ ಎನ್ನುವ ಬದಲು ಪ್ರವಚನ ಮಾಡುತ್ತಾರೆ ಎಂದುಬಿಟ್ಟೆ! ಅಡಿಗರು ತಾವು ಮಾತಾಡುವಾಗ -ನಾನು ಉಪನ್ಯಾಸ ನೀಡಲಿಕ್ಕೆ ಬಂದಿದ್ದೇನೆ; ಪ್ರವಚನ ಕೊಡಲಿಕ್ಕಲ್ಲ...! ಎಂದರು. ಇಂಥದೇ ಇನ್ನೊಂದು ಪ್ರಸಂಗ: ನನ್ನ ವಿಮುಕ್ತಿ ಕವಿತೆಯನ್ನು ಅವರಿಗೆ ಓದಲಿಕ್ಕೆ ಕೊಟ್ಟಿದ್ದೆ. ಓದಿ ಹಿಂದಿರುಗಿಸುವಾಗ ಕಾರ್ಮುಖ ಎನ್ನುವ ಪ್ರಯೋಗ ಸರಿಯೇ ಯೋಚನೆ ಮಾಡಿ ಎಂದರು. ಆ ರಾತ್ರಿ ಮತ್ತೆ ಅಡಿಗರಿಂದ ದೂರವಾಣಿ. ಕಾರ್ಮುಖ ಇಟ್ಟುಕೊಳ್ಳಿ..ಪರವಾಗಿಲ್ಲ...ಕಾವ್ಯದಲ್ಲಿ ಬರುವ ಅವನ ವ್ಯಕ್ತಿತ್ವಕ್ಕೆ ಈ ಅಪಪ್ರಯೋಗ ಧ್ವನಿಪೂರ್ಣವಾಗಿ ಹೊಂದಿಕೊಳ್ಳುತ್ತದೆ ಎಂದರು.
**********
ಅಡಿಗರಿಗೆ ಹೊಸದಾಗಿ ಏನಾದರೂ ಬರೆದಾಗ ಓದಲಿಕ್ಕೆ ಕೊಡುತ್ತಿದ್ದೆ. ಅವರು ಓದುವಾಗ ಕಾತರದಿಂದ ಅವರು ಏನನ್ನುವರೋ ಎಂದು ಕಾಯುತ್ತಾ ಕುಳಿತುಕೊಳ್ಳುತ್ತಿದ್ದೆ. ಪದ್ಯವಾದರೆ ಒಂದು ಸಲ ಮೇಲಿಂದ ಕೆಳಗೆ ಉದ್ದಕ್ಕೂ ಕಣ್ಣಾಡಿಸಿ...ಚೆನ್ನಾಗಿದೆ-ಎನ್ನುತ್ತಿದ್ದರು. ಅವರಿಗೆ ಇಷ್ಟವಾಗದಿದ್ದರೆ-ಏನೂ ಹೇಳದೆ ಸುಮ್ಮನೆ ತಲೆಕೊಡವುತ್ತಿದ್ದರು. ನನಗೆ ಪದ್ಯ ಅವರಿಗೆ ಹಿಡಿಸಲಿಲ್ಲ ಎಂಬುದು ಖಾತ್ರಿಯಾಗುತ್ತಿತ್ತು. ಅಡಿಗರೂ ತಾವು ಬರೆದದ್ದನ್ನು ಕಿರಿಯರಿಗೆ ತೋರಿಸಲಿಕ್ಕೆ ಸಂಕೋಚಪಡುತ್ತಿತಲಿಲ್ಲ. ಅವರ ಅನೇಕ ಪದ್ಯಗಳನ್ನು ಹಸ್ತಪ್ರತಿಯಲ್ಲೇ ಓದಿದ್ದೇನೆ. ನಮಗೆ ಅನ್ನಿಸಿದ್ದು ಏನೋ ಹೇಳಿದರೆ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು.
***********
ಆಗ ಅಡಿಗರು ಏನು ಬರೆದರೂ ರೋಮಾಂಚಿತರಾಗುವ ಓದುಗವರ್ಗವಿತ್ತು. ಒಮ್ಮೆ ನನ್ನ ಗೆಳೆಯರೊಬ್ಬರು ಬಂದು ಅಡಿಗರು ಹೊಸ ಪದ್ಯ ಬರೆದಿದ್ದಾರೆ. ಅದರಲ್ಲಿ ಗಂಗಾನದಿಯನ್ನು ಗಂಗಜ್ಜಿ ಎಂದು ಕರೆದಿದ್ದಾರೆ! ಎಂಥ ಅದ್ಭುತ ಪ್ರಯೋಗ ಅಲ್ವಾ?-ಎಂದು ಕಣ್ಣು ಬಾಯಿ ಅರಳಿಸಿದರು. ಅಡಿಗರ ಕೆಲವು ಪ್ರತಿಮೆಗಳು ನನ್ನನ್ನು ಸಹಜವಾಗಿಯೇ ಬೆರಗುಪಡಿಸುತ್ತಿದ್ದವು. ಒಮ್ಮೆ ಮುಗ್ಧವಾಗಿ ಇಂಥಾ ಪ್ರತಿಮೆಗಳು ನಿಮಗೆ ಹೇಗೆ ಹೊಳೆಯುತ್ತವೆ? ಎಂದು ಕೇಳಿದೆ. ಅವು ಧೊಪ್ಪನೆ ಆಕಾಶದಿಂದ ನನ್ನ ಮುಂದೆ ಬಂದು ಬೀಳುತ್ತವೆ! ಎಂದು ನಗುತ್ತಾ ಹೇಳಿದ್ದರು. ನನ್ನ ಸೌಗಂಧಿಕಾ ಕವಿತೆಯನ್ನು ಅಡಿಗರಿಂದ ಓದಿಸಿ ಅಭಿಪ್ರಾಯ ತಿಳಿಯಬೇಕು ಎಂದು ತುಸು ಅಧೈರ್ಯದಿಂದಲೇ ಅವರ ಮನೆಗೆ ಹೋಗಿದ್ದೆ. ಅಧೈರ್ಯ ಯಾಕೆ ಎಂದರೆ ಸೌಗಂಧಿಕಾ ಪದ್ಯವನ್ನು ನಾನು ಭಾಮಿನಿ ಷಟ್ಪದಿಯಲ್ಲಿ ಬರೆದಿದ್ದೆ. ಆ ಸಮಯದಲ್ಲಿ(೧೯೭೭) ಫ್ರೀವರ್ಸ್ ತುಂಬಾ ಚಲಾವಣೆಯಲ್ಲಿತ್ತು. ಅಡಿಗರು ಫ್ರೀವರ್ಸ್, ಮತ್ತು ಸಾಲಿನ ಕೊನೆಯಲ್ಲಿ ಮುಕ್ತಾಯವಾಗದೆ ಮುಂದಿನ ಸಾಲಿಗೆ ಪ್ರವಹಿಸುವ ರೀತಿಯ ಲಯಬದ್ಧ ಲಲಿತರಗಳೆಯ ಓಟದ ಚೌಪದಿಗಳನ್ನು ಬರೆಯುತ್ತಿದ್ದರು. ಷಟ್ಪದಿಯಲ್ಲಿ ಪದ್ಯ ಬರೆದಿದ್ದು ಹಿನ್ನೆಡೆಯಾಯಿತೇನೋ ಎನ್ನುವ ಆತಂಕ ನನಗಿತ್ತು. ಆದರೆ ಅಡಿಗರು ಪದ್ಯ ಓದಿ , ಗಂಭೀರವಾಗಿ ತಲೆದೂಗಿ -ಕೊಡಿ..ಇದನ್ನು ಸಾಕ್ಷಿಯಲ್ಲಿ ಹಾಕೋಣ ಎಂದರು. ಇದು ಸಸ್ಪೆನ್ಸಾಗಿ ಇರಲಿ ಸಾರ್...ನಾನು ಸಾಕ್ಷಿಗೆ ನೀವು ಓದಿ ಒಪ್ಪಿರುವ, ಸಿಂದಾಬಾದನ ಆತ್ಮಕಥೆ ಕೊಡುತ್ತೇನೆ -ಎಂದೆ.
********
ಕಡೆ ಕಡೆಯ ದಿನಗಳಲ್ಲಿ ಅಡಿಗರು ನನ್ನನ್ನು ತುಂಬಾ ಹಚ್ಚಿಕೊಂಡಿದ್ದರು. ಒಮ್ಮೆ ಅವರ ಮನೆಗೆ ಹೋಗಿದ್ದಾಗ ತಮ್ಮ ಕಥಾಸಂಗ್ರಹಕ್ಕೆ ಮುನ್ನುಡಿ ಬರೆಯಲು ಕೇಳಿದರು. ನಿಮಗೆ ಏನು ಅನ್ನಿಸುತ್ತೋ ಅದನ್ನು ಬರೆಯಿರಿ. ಸಂಕೋಚ ಬೇಡ..ಎಂದರು. ಅಡಿಗರು ನನಗೆ ಮುನ್ನುಡಿ ಬರೆಯಲು ಹೇಳಿದ್ದು ನನ್ನ ಮೇಲೆ ಅವರಿಗಿದ್ದ ಪ್ರೀತಿಯನ್ನು ತೋರಿಸುವುದಕ್ಕೆ ಅವರು ಕಂಡುಕೊಂಡ ದಾರಿ ಎಂಬುದು ನನ್ನ ತಿಳುವಳಿಕೆ. ಇಂಥಾ ಪ್ರೀತಿಯನ್ನು ಅನೇಕ ಸಾಹಿತ್ಯದಿಗ್ಗಜಗಳಿಂದ ನಾನು ಪಡೆದಿದ್ದೇನೆ. ಇದು ನನ್ನ ಭಾಗ್ಯ ಎನ್ನುವುದು ನನ್ನ ಭಾವನೆ.
*********
ಅಡಿಗರ ಆರೋಗ್ಯ ದಿನೇ ದಿನೇ ಹಸಗೆಡುತ್ತಿತ್ತು. ಅವರನ್ನು ಆ ಸ್ಥಿತಿಯಲ್ಲಿ ನೋಡುವಾಗ ಸಂಕಟವಾಗುತ್ತಿತ್ತು. ಯಾರಾದರೂ ಆಪ್ತರು ಹೋದಾಗ ಅವರ ಕಣ್ಣಿಂದ ನೀರು ಬರುತ್ತಿತ್ತು. ಅವರಿಗೆ ಸಮಾಧಾನ ಹೇಳುವಷ್ಟು ನಾವು ದೊಡ್ಡವರಾಗಿರಲಿಲ್ಲ. ದೂರವಾಣಿ ಮೂಲಕ ಕರೆ ಮಾಡಿ-ಬಂದು ಹೋಗಯ್ಯ ಎನ್ನುತ್ತಿದ್ದರು. ಒಮ್ಮೆ ಹೋದಾಗ ಉಪನಿಷತ್ತಿನ ಬಗ್ಗೆ ಇರುವ ಒಂದು ಪುಸ್ತಕವನ್ನು ಸಹಿಮಾಡಿ ನನಗೆ ಆಶೀರ್ವಾದ ರೂಪವಾಗಿ ಕೊಟ್ಟು, ಇದನ್ನ ಗಂಭೀರವಾಗಿ ಅಭ್ಯಾಸ ಮಾಡು ಎಂದರು. ಅಡಿಗರ ಆಶಿರ್ವಾದದ ಕುರುಹಾಗಿ ಆ ಪುಸ್ತಕವನ್ನು ಈಗಲೂ ಜತನವಾಗಿ ಇಟ್ಟುಕೊಂಡಿದ್ದೇನೆ.
---
Monday, August 31, 2009
Sunday, August 30, 2009
ಆಲಯವನ್ನು ಹೊಕ್ಕ ಆಕಾಶ : ಶ್ರೀರಾಮಚಂದ್ರ
ಬಿಸಿಲಧಗೆ ನಿಧಾನವಾಗಿ ಏರುತ್ತಿರುವಂತೆ ಮತ್ತೆ ರಾಮನವಮಿ ಬರುತ್ತಿದೆ.ತಕ್ಷಣ ನೆನಪು ನನ್ನ ಬಾಲ್ಯದ ದಿನಗಳತ್ತ ಹಾಯುತ್ತಿದೆ. ಚನ್ನಗಿರಿಯಲ್ಲಿ ಆ ಬೆಳಿಗ್ಗೆ ಬಂಡಿಗಳ ಹಿಂದೆ ಬಂಡಿ ಬೆಟ್ಟದ ಮೇಲಿನ ಆಂಜನೇಯನ ಗುಡಿಗೆ ಹೊರಟಿದ್ದವು. ನನ್ನ ಗೆಳೆಯರು ಹೇಳಿದರು. ಈವತ್ತು ಮಧ್ಯಾಹ್ನ ನಾವು ಬೆಟ್ಟದ ಗುಡಿಗೆ ಹೋಗೋಣ...ರಾಮನವಮಿ ಅಲ್ಲವಾ? ಅಲ್ಲಿ ರುಚಿರುಚಿಯಾದ ಕೋಸಂಬರಿ, ತಿಳಿಮಜ್ಜಿಗೆ, ಪಾನಕ ಕೊಡುತ್ತಾರೆ. ಓಹೋ....ನಾನೂ ಬರುತ್ತೇನೆ...!
ಮನೆಯಲ್ಲಿ ನಮ್ಮ ಅಜ್ಜಿ ಪೂಜೆಗೆ ಸಿದ್ಧಮಾಡುತ್ತಿದ್ದರು.ಹಸೆಹಾಕಿ ಹಾಕಿ, ನಡುಮನೆಯಲ್ಲೇ ರಾಮದೇವರ ಫಟ ಇಟ್ಟಿದ್ದರು! ಆ ಫಟ ಈ ರಾಮನವಮಿಗಾಗಿಯೇ ದಾವಣಗೆರೆಯಿಂದ ತಂದದ್ದು...!ಯಥಾಪ್ರಕಾರ ರಾಮದೇವರ ಫ಼್ಯಾಮಿಲಿ ಫೋಟೊ!ನಡುವೆ ರಾಮ.ಪಕ್ಕದಲ್ಲಿ ಸೀತಾದೇವಿ.ಹಿಂದೆ ಚಾಮರ ಹಾಕುತ್ತಿರುವ ಲಕ್ಷ್ಮಣ, ಶತ್ರುಘ್ನ. ಚತ್ರಿ ಹಿಡಿದಿರುವ ಭರತ. ಕಾಲ ಬುಡದಲ್ಲಿ ಪಾದಸೇವೆ ಮಾಡುತ್ತಿರುವ ಆಂಜನೇಯ.ಆ ಈ ಪಕ್ಕ ಲಂಕಾಧೀಶ ವಿಭೀಷಣ...ಸುಗ್ರೀವಾದಿ ಕಪಿವೀರರು....! ಇದನ್ನು ಫ್ಯಾಮಿಲಿ ಫೋಟೊ ಅನ್ನದೆ ಇನ್ನೇನೆಂದು ಕರೆಯೋಣ? ಭಾರತದ ಆದ್ಯಂತ ರಾಮ ಪೂಜಿತನಾಗುವುದೇ ಹೀಗೆ. ರಥದ ಮೇಲೆ ಕೂತು ಧನುಸ್ಸನ್ನು ಬಾಗಿಸಿ , ಬಾಣವನ್ನು ಯಾವುದೋ ಅಜಾತ ವೈರಕ್ಕೆ ಗುರಿಹೂಡಿ ನಿಂತಿರುವ ರಾಮ ಇತ್ತೀಚಿನ ಕಲ್ಪನೆ ! ಶ್ರೀ ರಾಮನನ್ನು ಹೀಗೆ ನಾನು ಕಲ್ಪಿಸಲೇ ಆರೆ. ಪತ್ನಿ, ತಮ್ಮಂದಿರು, ಗೆಳೆಯರು, ಆಳುಕಾಳುಗಳೊಂದಿಗೆ ಪೂಜೆ ಕೈಗೊಳ್ಳುವ ರಾಮ ನನ್ನ ದೃಷ್ಟಿಯಲ್ಲಿ ನಿಜವಾದ ಅರ್ಥದಲ್ಲಿ ಒಂದು ಕುಟುಂಬ ದೈವ. ರಾಮನ ಪೂಜೆ ಅಂದರೆ ಒಂದು ಕುಟುಂಬ ವ್ಯವಸ್ಥೆಯ ಆರಾಧನೆ!ಗಂಡ-ಹೆಂಡತಿ-ಮಗುವಿನ ಆಧುನಿಕ ವಿಭಿಜಿತ ಕುಟುಂಬವಲ್ಲ ಇದು!ತಮ್ಮಂದಿರು, ನಾದಿನಿಯರು, ಸೇವಕರು, ಗೆಳೆಯರು ಎಲ್ಲ ಒಟ್ಟಿಗೇ ನಗುನಗುತ್ತಾ ಸ್ಮಿತವದನರಾಗಿ ಒಗ್ಗೂಡಿರುವ ಅವಿಭಾಜ್ಯ ಕೂಡುಕುಟುಂಬ! ಈ ಕುಟುಂಬ ವಾನರ ಜಾತಿಯ ಆಂಜನೇಯ ಸುಗ್ರೀವರನ್ನು ಒಳಗೊಳ್ಳುತ್ತದೆ. ರಾಕ್ಷಸ ಮತದ ವಿಭೀಷಣನನ್ನೂ ಒಳಗೊಳ್ಳುತ್ತದೆ. ಭಲ್ಲೂಕ ಮತದ ಜಾಂಬವನಿಗೂ ಇಲ್ಲಿ ಗೌರವಾನ್ವಿತ ಸ್ಥಾನವಿದೆ.ಅಂದರೆ ರಾಮನ ಮನೆಯಲ್ಲಿ, ಮನೆಯ ಖಾಸಗಿ ಫಟದಲ್ಲಿ ಅಯೋಧ್ಯೆ ಮಾತ್ರ ಇಲ್ಲ. ಕಿಷ್ಕಿಂಧ, ಮತ್ತು ಸ್ವರ್ಣ ಲಂಕೆಯೂ ಇವೆ.ಆರ್ಯ, ದ್ರಾವಿಡ, ಗುಡ್ಡಗಾಡಿನ ಸಂಸ್ಕ್ರುತಿ ಎಲ್ಲ ಇವೆ. ಅದಕ್ಕೇ ಇದು ಆಕಾಶವನ್ನು ಒಳಗೊಂಡ ಆಲಯ ಅಂತ ಮತ್ತೆ ಮತ್ತೆ ನನಗೆ ಅನ್ನಿಸುತ್ತದೆ.ವಸುಧೈವಕ ಕುಟುಂಬ ಅಂದರೆ ಇದೇ ಇರಬಹುದೇ? ಬೇರೆ ಬೇರೆ ಸಮಾಜಗಳನ್ನು, ಬೇರೆ ಬೇರೆ ಜಾತಿಧರ್ಮಗಳನ್ನು ಒಪ್ಪಿಡಿಯಲ್ಲಿ ಹಿಡಿಯುವ ಹಸನ್ಮುಖಗಳ ಒಂದು ಅವಿಭಾಜ್ಯ ಕುಟುಂಬ! ರಕ್ತ ಸಂಬಂಧಿಗಳನ್ನು ಮಾತ್ರವಲ್ಲ , ಗೆಳೆಯರು , ಆಳು ಕಾಳುಗಳನ್ನೂ ಒಂದೇ ಪಂಕ್ತಿಯಲ್ಲಿ ಆಲಂಗಿಸಿಕೊಳ್ಳುವ ಕುಟುಂಬ ವ್ಯವಸ್ಥೆ!
ಬೇರೆ ದೇವರುಗಳ ದೇವಾಲಯಗಳಲ್ಲಿ ಇಂಥ ಚಿತ್ರವನ್ನು ನಾನು ನೋಡಿಲ್ಲ! ಗರ್ಭಾಂಕಣದಲ್ಲಿ ಪ್ರಧಾನ ದೈವ ಮಾತ್ರ ಆರಾಧಿತವಾಗುತ್ತದೆ ; ಪೂಜಾಕೈಂಕರ್ಯಗಳನ್ನು ಕೈಗೊಳ್ಳುತ್ತದೆ.ವಿಷ್ಣು ದೇವಾಲಯಗಳಲ್ಲಿ ಮೂರ್ತಿಯ ಎದೆಯಲ್ಲಾದರೂ ಲಕ್ಷ್ಮಿಯ ಸನ್ನಿಧಾನವಿರುತ್ತದೆ. ಲಿಂಗಾಕಾರಿಯಾದ ಶಿವನಂತೂ ನಿಜಕ್ಕೂ ಏಕಾಂಗಿ! ಗರ್ಭಾಂಕಣದ ಹೊರಗೆ ಮನೆಯ ಪೋರ್ಟಿಕೋದಲ್ಲಿ ಪಾರ್ಕ್ ಮಾಡಿರುವ ವಾಹನದಂತೆ ಬಸವಣ್ಣ ಕೂತಿದ್ದಾನೆ! ಅದು ಮನೆಯೊಳಗೆ ಮನೆಯೊಡೆಯ ಇದ್ದಾನೆ ಎಂಬುದಕ್ಕೆ ಗುರುತು!....ಏಕದೇವೋಪಾಸನೆಗೆ ರಾಮದೇವಾಲಯಗಳು ಒಂದು ಸಾಂಕೇತಿಕ ಅಸಮ್ಮತಿ ತೋರಿದ ಹಾಗೆ ಇವೆ. ಪುರಿಯ ಜಗನ್ನಾಥನ ಗುಡಿಯಲ್ಲಿ ಬಲರಾಮ, ಕೃಷ್ಣ, ಸುಭದ್ರೆಯರ ಪೂಜೆ ಒಟ್ಟಿಗೇ ನಡೆಯುತ್ತಿದೆ! ಅದನ್ನು ನೋಡಿ ನನಗೆ ನಿಜಕ್ಕೂ ಸಂತೋಷವಾಯಿತು. ಅಣ್ಣ -ತಮ್ಮ -ತಂಗಿ..ಈ ಸೋದರ ಪ್ರೇಮದ ಆರಾಧನೆ ಮೆಚ್ಚಬೇಕಾದ್ದೆ! ರಾಮನ ಗುಡಿಯಲ್ಲಿ ಇಡೀ ಕುಟುಂಬವೇ ಆರಾಧ್ಯದೈವವಾಗಿರುತ್ತಾ, ಬಹಳ ಹಿಂದೆಯೇ ಒಂದು ಹೊಸ ಮೌಲ್ಯವನ್ನು ನಮ್ಮ ಹಿರೀಕರು ಎತ್ತಿಹಿಡಿದಿದ್ದಾರೆ! ಅಣ್ಣ ತಮ್ಮಂದಿರ ಜಗಳವೇ ಮುಖ್ಯ ಸಂಘರ್ಷದ ವಿಷಯವಾಗಿರುವ ಮಹಾಭಾರತದ ಕಥೆ ನೆನಪಾಗುತ್ತಿದೆ. ಪಾಂಡವರು ಕೌರವರು ಹೀಗೆ ಒಟ್ಟಿಗೇ ಆರಾಧಿತವಾಗುವ ಚಿತ್ರ ಅನೂಹ್ಯವಾದುದು. ಇಂಥ ಚಿತ್ರವೊಂದನ್ನು ಕುಮಾರವ್ಯಾಸಭಾರತದಲ್ಲಿ ಕೃಷ್ಣನೇನೋ ಒಂದು ಕನಸು ಎಂಬ ಹಾಗೆ ನಮ್ಮ ಕಣ್ಣಮುಂದೆ ಚಿತ್ರಿಸುತ್ತಾನೆ! ಉದ್ಯೋಗ ಪರ್ವದಲ್ಲಿ ಅಂಥ ಒಂದು ಚಿತ್ರ ಬರುತ್ತದೆ. ಅದು ಕರ್ಣಭೇದನ ಸಂದರ್ಭ.ಒಂದು ವೇಳೆ ಕರ್ಣ ಪಾಂಡವರ ಪಕ್ಷಕ್ಕೆ ಬಂದರೆ ಪಾಂಡವರು ಹಿರಿಯಣ್ಣ ಎಂದು ಅವನನ್ನು ಗೌರವಿಸುತ್ತಾರೆ. ದುರ್ಯೋಧನ ಕರ್ಣನ ಪ್ರಾಣ ಮಿತ್ರನಾದ ಕಾರಣ ಅವನು ರಾಜ್ಯವನ್ನು ಕರ್ಣನಿಗೇ ಒಪ್ಪಿಸುತ್ತಾನೆ. ಕುರುಕ್ಷೇತ್ರ ಯುದ್ಧವೇ ನಡೆಯುವುದಿಲ್ಲ. ಆಗ ಅವರೆಲ್ಲಾ ಒಟ್ಟಿಗೇ ಕೂತ ಚಿತ್ರ ಹೇಗಿರುತ್ತದೆ?
ಕೃಷ್ಣ ವರ್ಣಿಸುತ್ತಾನೆ :
ಎಡದ ಮೈಯಲಿ ಕೌರವೇಂದ್ರರ
ಗಡಣ. ಬಲದಲಿ ಪಾಂಡುತನಯರ
ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು
ನಡುವೆ ನೀನೋಲಗದಲೊಪ್ಪುವ ಕಡುವಿಲಾಸವ ಬಿಸುಟು ಕುರುಪತಿ
ನುಡಿಸೆ ಜೀಯ ಹಸಾದವೆಂಬುದು ಕಷ್ಟನಿನಗೆಂದ
ಕೃಷ್ಣ ಕೊಡುವ ಈ ಕನಸಿನ ಚಿತ್ರ ಕರ್ಣನಿಗೆ ಅಪ್ರಿಯವಾದುದು. ಕೃಷ್ಣ ಕೂಡ ಈ ಕನಸು ಒಡೆಯಲಿಕ್ಕೇ ಹೊರಟವನು. ಅದು ಬೇರೆ ವಿಷಯ . ಆದರೆ ನನ್ನ ಮನಸ್ಸಿಗೆ ಹಿಡಿಸಿದ್ದು ಈ ಚಿತ್ರ ಮತ್ತು ರಾಮನ ಕುಟುಂಬಚಿತ್ರಕ್ಕೂ ಇರುವ ಸಾಮ್ಯ ಮತ್ತು ವೈಷಮ್ಯದ ಹೊಳಹು.ಮಹಾಭಾರತ ಇಂಥ ಒಂದು ಚಿತ್ರ ಅಸಾಧ್ಯ ಎನ್ನುತ್ತದೆ. ಏಕೆಂದರೆ ಯಾವುದೇ ಗದ್ದುಗೆಯಲ್ಲೂ ಇಬ್ಬರು ಕೂಡಲು ಅಸಾಧ್ಯ ಎನ್ನುತ್ತದೆ ಮಹಾಭಾರತ. ರಾಮಾಯಣ ಒಂದು ಗದ್ದುಗೆಯಲ್ಲಿ ನಾವೆಲ್ಲಾ ಒಟ್ಟಿಗೇ ಮಂದಸ್ಮಿತದೊಂದಿಗೆ ಆಸೀನರಾಗುವುದು ಸಾಧ್ಯ ಎನ್ನುತ್ತದೆ.
ಹಾಗೆ ನೋಡಿದರೆ ರಾಮನಿಗೆ ಗದ್ದುಗೆ ಅನಿವಾರ್ಯ ಎನ್ನಿಸಿಯೇ ಇಲ್ಲ. ಭರತನಿಗೆ ಎಷ್ಟು ಸುಲಭವಾಗಿ ಗದ್ದುಗೆಯನ್ನು ಬಿಟ್ಟುಕೊಟ್ಟು ವನವಾಸಕ್ಕೆ ಅವನು ಸಿದ್ಧನಾಗುತ್ತಾನೆ! ಹದಿನಾಲಕ್ಕು ವರ್ಷದ ಅವಧಿಯಲ್ಲಿ ಒಮ್ಮೆಯಾದರು ಸೀತೆಯಾಗಲೀ ರಾಮನಾಗಲಿ ಅಯೋಧ್ಯೆಯ ರಾಜಕಾರಣದ ಬಗ್ಗೆ ಚಿಂತಿಸುವುದಿಲ್ಲ. ಮಹಾಭಾರತದಲ್ಲಿ ಪಾಂಡವರನ್ನು ನೋಡಿ...!ಸದಾ ಅವರಿಗೆ ಹಸ್ತಿನಾವತಿಯ ಗದ್ದುಗೆಯದೇ ಚಿಂತೆ. ಸದಾ ಕಾಡುವ ಬೆಂಕಿಯ ನೆನಪು ಅದು. ಅದಕ್ಕೆ ಕೊಂಚ ಬೂದಿ ಮುಸುಕಿದರೂ ಅದನ್ನೂದಿ ಊದಿ ಗಾಳಿ ಹಾಕುವ ದ್ರೌಪದಿ!ಈ ಗಾಳಿಬೆಂಕಿಯ ಅಪವಿತ್ರ ಮೈತ್ರಿಯನ್ನು ಅದೆಷ್ಟು ಕೀರ್ತಿಸುತ್ತದೆ ಮಹಾಭಾರತ. ರನ್ನನ ಗದಾಯುದ್ಧ ಹೇಳುತ್ತದೆ: ದ್ರೌಪದಿ ಬೆಂಕಿಯ ಮಗಳು. ಭೀಮ ಗಾಳಿಯ ಮಗ. ಅವರಿಬ್ಬರೂ ಕೂಡಿದಾಗ ಕೌರವ ವಂಶವನ್ನು ದಹಿಸದೆ ಬಿಡುತ್ತಾರೆಯೇ? ದಾಂಪತ್ಯಕ್ಕೆ ಎಂತಹ ವಿಷಮ ರೂಪಕ. ಮನುಕುಲದ ತಂದೆ ತಾಯಿ ನಾವು ಆಗೋಣ ಎಂದು ಆಧುನಿಕ ಕನ್ನಡ ಕಾವ್ಯ ಹಪಹಪಿಸುತ್ತಿದೆ. ಮನುಕುಲದ ನಾಶ ಮಾಡುವ ಗಾಳಿಬೆಂಕಿಯ ಸಂಗಮ ನಾವಾಗೋಣ ಎಂದು ರನ್ನನ ಮಹಾಭಾರತದ ನಾಯಕ ನಾಯಕಿ ಆಶಿಸುತ್ತಾರೆ!
ರಾಮಾಯಣದ ಭರತನ ಬಗ್ಗೆ ಯೋಚಿಸೋಣ. ಎಂಥ ಮಹಾತ್ಮ ಅವನು! ಅಣ್ಣ ಬಿಟ್ಟುಕೊಟ್ಟರೂ ಗದ್ದುಗೆ ತನಗೆ ಬೇಡ ಅನ್ನುವವನು ಅವನು. ಗದ್ದುಗೆಯಮೇಲೆ ಅಣ್ಣನ ಪಾದುಕೆಗಳನ್ನು ಇಟ್ಟು ಪೂಜಿಸಿದವನು.ಇದು ಆದಿಪುರಾಣದ ಬಾಹುಬಲಿಯ ನಿಲುವಿಗಿಂತ ಭಿನ್ನವಾದುದು! ನನಗೆ ಗದ್ದುಗೆ ಬೇಡ, ಪ್ರಜಾಪರಿಪಾಲನೆಗೆ ಗದ್ದುಗೆಯ ಅಗತ್ಯವಿಲ್ಲ ಎನ್ನುತ್ತಾನೆ ಭರತ! ತನ್ನ ತಾಯಿ ಸಿಂಹಾಸನ ತನಗೆ ದೊರಕಿಸಲು ಮಾಡಿದ ಎಲ್ಲ ಯತ್ನಗಳಿಗೂ ಭರತನೇ ಪ್ರಥಮ ವಿರೋಧಿ! ಆಧುನಿಕ ಭಾರತದಲ್ಲಿ ಅಪರೂಪ ಅಲ್ಲವೇ ಇಂಥ ದೃಶ್ಯ?ತಾಯಿ ತಂದೆ ಮಕ್ಕಳಿಗೆ ಅಧಿಕಾರದ ಹಸ್ತಾಂತರವನ್ನು ಮಾಡಲಿಕ್ಕೆ ಎಂತೆಂಥಾ ರಾಜಕೀಯ ಚದುರಂಗದಾಟದಲ್ಲಿ ತೊಡಗುವುದಿಲ್ಲ ಈವತ್ತು? ಅಧಿಕಾರವನ್ನು ಧಿಕ್ಕರಿಸಿ ಹೊರಡುವ ರಾಮ , ಗದ್ದುಗೆ ಕೈನಿಲುಕಿನಲ್ಲಿದ್ದರೂ ಅದರ ಕಡೆ ಕಡೆಗಣ್ಣೂ ಹಾಯಿಸದ ಭರತ ಬಹಳ ದೊಡ್ಡ ಮೌಲ್ಯಗಳನ್ನು ಪ್ರತಿನಿಧಿಸುವಂತಿದ್ದಾರೆ!
ಕುಟುಂಬಸಂಘಟನೆ ರಾಮಾಯಣ ಎತ್ತಿಹಿಡಿಯುವ ಮೌಲ್ಯವಾಗಿದೆ. ಕುಟುಂಬ ವಿಘಟನೆ ಅನಿವಾರ್ಯವೆನ್ನುವುದನ್ನು ಮಹಾಭಾರತ ಧ್ವನಿಸುತ್ತಿದೆ. ಮಹಾಭಾರತದಲ್ಲಿ ಕೃಷ್ಣನಿಗೆ ನಡೆಯುವುದು ಅಗ್ರಪೂಜೆ.ಒಬ್ಬನನ್ನೇ ಒಂದು ಗದ್ದುಗೆಯಲ್ಲಿ ಕೂಡಿಸಿ ನಡೆಸುವ ಆರಾಧನೆ. ರಾಜಸೂಯಯಾಗದಲ್ಲಿ ಎಂತೆಂಥ ಉತ್ಪಾತಗಳಿಗೆ ಈ ಅಗ್ರಪೂಜೆ ಕಾರಣವಾಯಿತು ನೋಡಿ! ಪೂಜಾಗೃಹದಲ್ಲೇ ಕೃಷ್ಣನ ವೈರಿಯಾದ ಶಿಶುಪಾಲನ ಕೊಲೆಯೇ ಆಗಿಹೋಯಿತು! ಆ ಶಿಶುಪಾಲ ಮತ್ಯಾರೂ ಅಲ್ಲ. ಕೃಷ್ಣನ ಸೋದರತ್ತೆಯ ಮಗ. ಇಡಿ ಮಹಾಭಾರತವೇ ಬಂಧುವಿನಾಶದ ಕಥೆಯಾಗಿದೆ. ಕುರುಕ್ಷೇತ್ರದಲ್ಲಿ ಕೂಡ ಹೊರಗಿನವರು ಯಾರೂ ಇಲ್ಲ. ಅಲ್ಲಿ ನಂಟರು ಪರಸ್ಪರ ಹೊಡೆದಾಡಿಕೊಂಡು ಸತ್ತಿದ್ದಾರೆ. ಹಿರಿಯರ, ತಾಯಿ ತಂದೆಯರ, ಗುರುಗಳ ಮಾತನ್ನು ಅಲ್ಲಿ ಹೊಸಪೀಳಿಗೆಯ ಜನ ಕೇಳುತ್ತಿಲ್ಲ. ದುರ್ಯೋಧನ ತನಗೆ ತೋರಿದ್ದನ್ನೇ ಮಾಡುವವನಾಗಿದ್ದಾನೆ. ತಂದೆ ತಾಯಿ ಅಜ್ಜ ಗುರು ಯಾರ ಮಾತನ್ನು ಕೇಳಿದ್ದರು ಯುದ್ಧದ ವಿನಾಶ ತಪ್ಪುತ್ತಿತ್ತು!
ಪಿತೃವಾಕ್ಯಪರಿಪಾಲನೆ ಎನ್ನುವುದು ರಾಮನಿಗೆ ಅನುಲ್ಲಂಘನೀಯವಾದ ಜೀವ ಮೌಲ್ಯವಾಗಿದೆ. ತಾಯಿಯ ಬಗ್ಗೆ ಅವನಿಗೆ ಅದೆಂಥಾ ಗೌರವ. ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತ ಶ್ರೇಷ್ಠವಾದುದು ಅನ್ನುವವನು ಅವನು.ಕುಟುಂಬ ಎನ್ನುವ ವಿಶ್ವವನ್ನು ರಾಮಪ್ರಜೆ ಕೈವಾರಿಸುತ್ತದೆ. ಹಾಗೇ ವಿಶ್ವ ಎನ್ನುವ ಕುಟುಂಬವನ್ನು. ಅದಕ್ಕೇ ರಾಮ ಎಂದರೆ ಆಲಯವನ್ನು ಹೊಕ್ಕ ಆಕಾಶ ಎನ್ನುತ್ತೇನೆ ನಾನು! ರಾಮನದು ಬದ್ಧವ್ಯಕ್ತಿತ್ವ ಎನ್ನಲಾರೆ! ರಾಮನದು ಮೌಲ್ಯಬದ್ಧ ವ್ಯಕ್ತಿತ್ವ ಎನ್ನುತ್ತೇನೆ. ಅದಕ್ಕೆ ವಿರುದ್ಧವಾಗಿರುವ ರಾಮಜೀವನದ ಎಳೆಗಳನ್ನು ಈಗ ಪುನರ್ನೇಯ್ಗೆಗೆ ಒಳ ಪಡಿಸಿ ಪುರುಷೋತ್ತಮ ತತ್ವವನ್ನು ಮತ್ತೆ ಈ ಕಾಲಕ್ಕೆ ತಕ್ಕ ರೂಪಕವಾಗಿ ಕಡೆದುಕೊಳ್ಳ ಬೇಕಾಗಿದೆ.
ನನ್ನ ಅಳಿಲು ರಾಮಾಯಣದಲ್ಲಿ ರಾಮ ತನಗೆ ಸೇತುಬಂಧನ ಕಾರ್ಯದಲ್ಲಿ ಸಹಕರಿಸಿದ ಅಳಿಲಿನ ಪ್ರೀತಿಗೆ ಸೋತು ನಿನಗೆ ಬೇಕಾದ ವರ ಕೇಳು ಕೊಡುತ್ತೇನೆ ಅನ್ನುತ್ತಾನೆ. ಆಗ ಅಳಿಲುಮರಿ ನೀನು ನನ್ನ ಜೋಡಿ ಕಬಡಿ ಆಡುತ್ತೀಯ ಎಂದು ಕೇಳುತ್ತದೆ! ರಾಮ ಆಗ ನಕ್ಕು ಆಹಾ ಎಂಥಾ ಬೇಡಿಕೆ...ಎನ್ನುತ್ತಾ ತನ್ನ ಬತ್ತಳಿಕೆ ಬಿಲ್ಲು ಲಕ್ಷ್ಮಣನಿಗೆ ಹಿಡಿದುಕೊಳ್ಳಲು ಕೊಟ್ಟು ಅಳಿಲಿನೊಂದಿಗೆ ಕಬಡಿ ಆಡಲು ಸಿದ್ಧನಾಗುತ್ತಾನೆ! ಬಿಲ್ಲು ಬಾಣ ಮೈಯಿಂದ ಇಳಿಸಿದಾಗ ಎಷ್ಟು ಹಗುರ ಆಗುತ್ತದೆ ಅವನಿಗೆ . ಆಹಾ ಈಗ ಹಗುರಾಯಿತು ಅನ್ನುತ್ತಾನೆ. ಕೋದಂಡವನ್ನು ಕೆಳಗಿಟ್ಟು ಅಳಿಲನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ರಾಮ ನನ್ನ ಆದರ್ಶವಾಗಿದ್ದಾನೆ!
ರಾಮನ ಫೋಟೋದಲ್ಲಿ ಈಗ ಒಂದು ಖಾಲಿಬಿದ್ದ ಜಾಗವಿದೆ.ಅದು ಶ್ರೀರಾಮನ ಹೆಗಲು. ಆ ಹೆಗಲಿನ ಮೇಲೆ ಹಾವಿನ ಹೆಡೆಯ ಹಾಗೆ ಬಾಗಿರುವ ಕೋದಂಡದ ಕೊಂಕು ಕಾಣುತ್ತಿದೆ. ಫೋಟೋಗ್ರಾಫರ್ ಹೇಳುತ್ತಾನೆ. ಸರ್...ದಯವಿಟ್ಟು ಆ ಬಿಲ್ಲನ್ನು ತೆಗೆದು ಕೆಳಗಿಡಿ...ಅಲ್ಲಿ ಈ ಪುಟ್ಟ ಅಳಿಲುಮರಿ ಕೂಡಿಸಿಕೊಳ್ಳಿ...!
ಕುಟುಂಬಪೂಜೆಯ ಮೂರ್ತರೂಪವಾದ ರಾಮಸಂಸಾರದ ಪರ್ಯಾಯ ಪ್ರತೀಕವಾಗಿ ಈಗ ನಮ್ಮ ಭಾರತದ ಚಿತ್ರವನ್ನು ದಯವಿಟ್ಟು ಕಲ್ಪಿಸಿಕೊಳ್ಳಿ. ನಡುವೆ ತಾಯಿ ಭಾರತಿ. ಮಕ್ಕಳು ಮೊಮ್ಮಕ್ಕಳು ಬಂಧುಗಳು ಬಳಗದವರು ಬೀಗರು ಬಿಜ್ಜರು ಹೊರದೇಶದ ಅತಿಥಿಗಳು...ಸ್ವಲ್ಪ ನಗಿ ಪ್ಲೀಝ್...ಇದು ಸರ್ವ ಜನಾಂಗದ ಶಾಂತಿಯ ತೋಟ...ಇದೇ ನಮ್ಮ ಗ್ರೂಪ್ ಫೋಟೋದ ಶೀರ್ಷಿಕೆ ಕೂಡ...
