ನನ್ನ ಪ್ರಾರಂಭದ ಕಾವ್ಯಾಭಾಸಗಳೆಲ್ಲಾ ರಚಿತವಾದದ್ದು ನಾನು ಮಲ್ಲಾಡಿಹಳ್ಳಿಯಲ್ಲಿ ಟೆಕ್ನಿಕಲ್ ಅಸಿಸ್ಟಂಟ್ ಆಗಿದ್ದಾಗ. ಏನು ಈ ಟೆಕ್ನಿಕಲ್ ಅಸ್ಸಿಸ್ಟಂಟ್ ಎಂದರೆ? ಅದಕ್ಕೆ ಸ್ವಲ್ಪ ಹಿನ್ನೆಲೆ ಕೊಡುವುದು ಅವಶ್ಯಕ. ನಾನು ಭದ್ರಾವತಿಯಲ್ಲಿ ಮೆಕಾನಿಕಲ್ ಇಂಜಿನೀರಿಂಗ್ ಡಿಪ್ಲೊಮೊ ಮಾಡಿದೆ. ಎಲ್ಲೂ ಕೆಲಸ ಸಿಗಲೊಲ್ಲದು. ಕೆಲಸವಿಲ್ಲದೆ ಮನೆಯಲ್ಲಿ ಕೂಡುವುದಕ್ಕೆ ನನಗೆ ಹಿಂಸೆ. ಆಗ ಚಿತ್ರದುರ್ಗದಲ್ಲಿ ಒಂದು ವರ್ಕ್ಷಾಪಿನಲ್ಲಿ ದಿನಗೂಲಿಯಾಗಿ ಒಂದು ವರ್ಷ ಕೆಲಸ ಮಾಡಿದೆ. ಆಗ ಮಲ್ಲಾಡಿಹಳ್ಳಿಯಲ್ಲಿ ವಿವಿಧೋದ್ದೇಶ ಪ್ರೌಢಶಾಲೆ ಇರುವುದೂ, ಅಲ್ಲಿ ಡಿಪ್ಲೊಮೊ ಮಾಡಿರುವ ಒಬ್ಬರನ್ನು ಕ್ರಾಫ್ಟ್ ಟೀಚರ್ ಆಗಿ ತೆಗೆದುಕೊಳ್ಳುತ್ತಾರೆಂಬುದೂ, ಸದ್ಯ ಆ ಹುದ್ದೆ ಮಲ್ಲಾಡಿಹಳ್ಳಿಯಲ್ಲಿ ಖಾಲಿ ಇರುವುದೂ ತಿಳಿದು, ಮಲ್ಲಾಡಿಹಳ್ಳಿಗೆ ದೌಡುಹೊಡೆದೆ. ರಾಘವೇಂದ್ರಸ್ವಾಮೀಜಿಯವರನ್ನು(ಅವರು ತಿರುಕ ಎಂದು ಪ್ರಸಿದ್ಧರು)ಭೆಟ್ಟಿ ಮಾಡಿ ನನ್ನ ಪಾಡು ತೋಡಿಕೊಂಡೆ. ಹಾಗೇ ಮಾತಾಡುತ್ತಾ ಮಾತಾಡುತ್ತಾ ಅವರ ಅನೇಕ ಪುಸ್ತಕಗಳ ಪ್ರಸ್ತಾಪವೂ ಬಂದಿತು. ಓದಿನ ಹುಚ್ಚು ಹಚ್ಚಿಕೊಂಡ ನಾನು ಆ ವೇಳೆಗೆ ಕೈಗೆ ಸಿಕ್ಕಿದ್ದೆಲ್ಲಾ ಓದುವ ಚಟ ಇದ್ದವನಾದುದರಿಂದ ಸ್ವಾಮೀಜಿಯವರ ಮೂರು ನಾಲಕ್ಕು ಪುಸ್ತಕಗಳನ್ನೂ ಅದೃಷ್ಟವಶಾತ್ ಓದಿದ್ದೆ. ನಾನು ಅವರ ಪುಸ್ತಕ ಓದಿರುವುದು ತಿಳಿದು ಸ್ವಾಮೀಜಿ ಅವರಿಗೆ ಸಹಜವಾಗಿಯೇ ಖುಷಿಯಾಯಿತು. ಲೇಖಕರೆಲ್ಲರ ದೌರ್ಬಲ್ಯವಲ್ಲವೇ ಅದು?! ನನ್ನ ಡಿಪ್ಲೊಮೋದ ಅಂಕಗಳಿಗಿಂತ ನಾನು ಒಬ್ಬ ಸಾಹಿತ್ಯದ ಹುಚ್ಚ ಎಂಬುದು, ಅದರಲ್ಲೂ ನಾನು ಸ್ವಾಮೀಜಿ ಅವರ ಅನೇಕ ಪುಸ್ತಕ ಓದಿದವನು ಎಂಬುದೂ ನನ್ನ ಬಗ್ಗೆ ಅವರಿಗೆ ಸದಭಿಪ್ರಾಯ ಹುಟ್ಟುವಂತೆ ಮಾಡಿತೇನೋ! ಈ ಟೆಕ್ನಿಕಲ್ ಅಸ್ಸಿಸ್ಟಂಟ್ ಎಂಬ ಹುದ್ದೆ ನನಗೆ ಸಿಕ್ಕೇ ಬಿಟ್ಟಿತು. ಮುನ್ನೂರು ರೂಪಾಯಿ ಮಾಹೆಯಾನೆ ಸಂಬಳ. ಸ್ವರ್ಗ ಒಂದೇ ಗೇಣು ಎಂಬಂತಾಯಿತು. ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ಕಬ್ಬಿಣ ಕೆಲಸ, ಮರಗೆಲಸ, ಲೇತ್ ವರ್ಕ್, ಇಂಜಿನೀರಿಂಗ್ ಡ್ರಾಯಿಂಗ್ ಮೊದಲಾದುವನ್ನು ಕಲಿಸುವ ಕೆಲಸ ಅದು. ಮುಖ್ಯೋಪಾಧ್ಯಾಯರು ಟಿ.ಎಸ್.ಆರ್. ನನ್ನ ಸಾಹಿತ್ಯದ ಆಸಕ್ತಿ ಅವರ ಗಮನಕ್ಕೂ ಬಂತು. ಗಣಿತದಲ್ಲೂ ನನಗೆ ತುಂಬಾ ಅಸಕ್ತಿ ಇತ್ತು.(ನನಗೆ ಗಣಿತ ಕಲಿಸಿದ ಅರ್.ಎಸ್.ಎಂ ಕೃಪೆ). ಟಿ ಎಸ್ ಆರ್ ಹೇಳಿದರು: ನೀವು ಕನ್ನಡ ಮತ್ತು ಗಣಿತದ ಕ್ಲಾಸುಗಳನ್ನೂ ತೆಗೆದುಕೊಳ್ಳಿ! ಹೀಗೆ ನಾನು ನನಗೆ ಬಹು ಪ್ರಿಯವಾದ ವಿಷಯಗಳಾದ ಕನ್ನಡ ಮತ್ತು ಗಣಿತ ಎಂಟನೇ ಕ್ಲಾಸಿಗೆ ಕಲಿಸುವ ಮೇಷ್ಟ್ರೂ ಆದೆ. ಇದು ಮಕ್ಕಳಿಗೆ ಕಲಿಸುವ ನನ್ನ ಹುಚ್ಚನ್ನು ನೂರ್ಮಡಿಗೊಳಿಸಿತು. ಈಗ ಖ್ಯಾತ ವೈದ್ಯರಾಗಿರುವ ಡಾ ಎಚ್ ಎಸ್ ವೆಂಕಟೇಶ ಮೂರ್ತಿ( ವಿಮರ್ಶಕ ರಾಘವೇಂದ್ರರಾವ್ ಅವರ ಸೋದರ), ಚಲನಚಿತ್ರ ಜಗತ್ತಲ್ಲಿ ಹೆಸರು ಮಾಡಿರುವ ರಾಮದಾಸ ನಾಯ್ಡು ನನ್ನ ವಿದ್ಯಾರ್ಥಿಗಳಾದದ್ದು ಆ ದಿನಗಳಲ್ಲೇ! ನಾನು ಅವರಿಗೆ ಈವತ್ತೂ ಪ್ರೀತಿಯ ಮೇಷ್ಟ್ರಾಗಿದ್ದರೆ ಅದಕ್ಕೆ ಕಾರಣ ಕನ್ನಡ ಮತ್ತು ಗಣಿತದ ನನ್ನ ತರಗತಿಗಳು! ನಮ್ಮ ಮುಖ್ಯೋಪಾಧ್ಯಾಯರಾಗಿದ್ದ ಟಿ ಎಸ್ ರಾಮಚಂದ್ರಮೂರ್ತಿಗಳು, ಅದೇ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಜಿ.ಎಲ್.ರಾಮಪ್ಪ, ಇಂಗ್ಲಿಷ್ ಮೇಷ್ಟ್ರಾಗಿದ್ದ ಕತೆಗಾರ ಎನ್ ಎಸ್ ಚಿದಂಬರ ರಾವ್ ಇವರೆಲ್ಲಾ ಪುಸ್ತಕದ ಹುಚ್ಚರೇ. ನಮ್ಮ ಶಾಲೆಯ ಲೈಬ್ರರಿಯಲ್ಲಿ ಅತ್ತ್ಯುತ್ತಮ ಕನ್ನಡ ಇಂಗ್ಲಿಷ್ ಗ್ರಂಥಗಳು ಸಾವಿರಾರು ಸಂಖ್ಯೆಯಲ್ಲಿ ಶೇಖರಗೊಂಡಿದ್ದವು. ನನ್ನ ವರ್ಕ್ಷಾಪಿನ ಪಕ್ಕದಲ್ಲೇ ಲೈಬ್ರರಿ. ಸರಿ. ನಾನು ಅಲ್ಲಿ ಹೊಕ್ಕೆನೆಂದರೆ ಮುಗಿಯಿತು. ಕಾರಂತರು, ರಾವ್ಬಹದ್ದೂರ್, ಅನಕೃ, ತರಾಸು, ಕಟ್ಟೀಮನಿ, ಆನಂದಕಂದ , ಗೊರೂರು, ಮುಂತಾದ ಅನೇಕ ಮಹನೀಯರು ನನಗೆ ಆಪ್ತರಾಗಿ ಪರಿಣಮಿಸಿದ್ದು ಆ ಲೈಬ್ರರಿಯಲ್ಲಿ. ದೇವತೆಗಳಂತೆ ಈ ಲೇಖಕರೂ ಪರೋಕ್ಷಪ್ರಿಯರೇ! ಇವರೆಲ್ಲ ನಮ್ಮ ಮನೆಯ ಹಿರಿಯರು ಎಂಬಂತೆ ಆಗಿಬಿಟ್ಟರು! ಮಲ್ಲಾಡಿಹಳ್ಳಿಯ ಆಶ್ರಮದಲ್ಲಿ ಪ್ರತಿವರ್ಷ ಗಣೇಶೋತ್ಸವ ಭರ್ಜರಿಯಾಗಿ ನಡೆಯುತ್ತಾ ಇತ್ತು. ದೊಡ್ಡ ದೊಡ್ಡ ಸಾಹಿತಿಗಳೂ, ಸಂಗೀತಗಾರರೂ ಅಲ್ಲಿಗೆ ಬರುತ್ತಾ ಇದ್ದರು. ನಾನು ಮೊಟ್ಟಮೊದಲು ಎಸ್.ವಿ.ರಂಗಣ್ಣ, ರಂ ಶ್ರೀ ಮುಗಳಿ, ಕೆ ವೆಂಕಟರಾಮಪ್ಪ, ಪುತಿನ, ತರಾಸು, ಅನಂತಮೂರ್ತಿ, ಮೊದಲಾದವರನ್ನು ಹತ್ತಿರದಿಂದ ನೋಡಿದ್ದು ಮಲ್ಲಾಡಿಹಳ್ಳಿಯ ಹೈಸ್ಕೂಲಿನಲ್ಲಿ ಈ ಟೆಕ್ನಿಕಲ್ ಅಸಿಸ್ಟಂಟ್ ಎಂಬ ನನ್ನ ಜೀವಾಧಾರ ವೃತ್ತಿಯನ್ನು ಆಶ್ರಯಿಸಿದ್ದಾಗಲೇ! ಆ ಕಾಲದಲ್ಲಿ ನಾನು ಕಂಡ ಅತ್ಯದ್ಭುತ ಭಾಷಣಕಾರರೆಂದರೆ ಕೆ ವೆಂಕಟರಾಮಪ್ಪನವರು.ಎಂಥ ಪ್ರಾಸಾದಿಕ ವಾಣಿ ಅವರದ್ದು. ಕುಮಾರವ್ಯಾಸ ಕಾವ್ಯದ ಬಗ್ಗೆ ಅವರ ಅನೇಕ ಉಪನ್ಯಾಸಗಳನ್ನು ಕೇಳಿ ನಾನು ಮರುಳಾಗಿಯೇ ಹೋಗಿದ್ದೆ! ಪದ್ಯಗಳು ಪುಂಖಾನುಪುಂಖವಾಗಿ ಅವರ ಬಾಯಿಂದ ಹೊರಹೊಮ್ಮುತ್ತಾ ಇದ್ದವು. ಕಂಚಿನ ಕಂಠ. ಅಸ್ಖಲಿತ ವಾಣಿ. ಅವರ ಉಪನ್ಯಾಸವೆಂದರೆ ದೊಡ್ಡವರಿರಲಿ ಮಕ್ಕಳು ಕೂಡಾ ಮಂತ್ರಮುಗ್ಧರಾಗಿ ಆಲಿಸುತ್ತಾ ಇದ್ದರು. ಮಾತಿನಿಂದಲೂ ನೂರಾರು ಮಂದಿಯನ್ನು ಹೀಗೆ ಮಂತ್ರಮುಗ್ಧಗೊಳಿಸಬಹುದೆಂಬುದು ನನಗೆ ತಿಳಿದಿದ್ದು ಕೆ ವೆಂಕಟರಾಮಪ್ಪನವರ ಮಾತುಗಳನ್ನು ಕೇಳಿದ ಮೇಲೆಯೇ! ಆ ಕಾಲದಲ್ಲಿ ಅವರೇ ನನ್ನ ಆದರ್ಶ ವಾಗ್ಮಿ. ಪುತಿನ ತಮ್ಮ ದಿವ್ಯವಾದ ತೇಜಸ್ಸಿನಿಂದ ನನ್ನನ್ನು ಆಕರ್ಷಿಸಿದ್ದರು. ಕೆಂಪಗೆ ಅವರ ತುಟಿಗಳು ಬಣ್ಣ ಬಳಿದ ಹಾಗೆ ಇರುತ್ತಾ ಇದ್ದವು. ತಲೆಯ ಮೇಲೆ ಒಂದು ಖಾದಿ ಟೋಪಿ. ಅವರೂ ಗೊರೂರೂ ಒಟ್ಟಿಗೇ ಮಲ್ಲಾಡಿಹಳ್ಳಿಗೆ ಬಂದಿದ್ದರು. ಅವರಿಬ್ಬರನ್ನೂ ಕರೆದುಕೊಂಡು ಹೋಗಿ ನಮ್ಮ ಹುಡುಗರು ಬರೆದಿದ್ದ ಕೆಲವು ಬರೆಹ ತೋರಿಸುವ ಜವಾಬುದಾರಿಯನ್ನು ಟಿ ಎಸ್ ಆರ್ ನನಗೆ ಒಪ್ಪಿಸಿದರು. ಜೀಕ್ ಜೀಕ್ ಜೋಡಿನ ಸದ್ದು ಮಾಡುತ್ತಾ ಗಟ್ಟಿಯಾಗಿ ದಶ ದಿಕ್ಕುಗಳಲ್ಲೂ ತಮ್ಮ ಧ್ವನಿ ಮೊಳಗುವಂತೆ ಗೊರೂರು ಮಾತಾಡುತ್ತಿದ್ದರೆ, ಪುತಿನ ಅತಿ ಮೆಲ್ಲಗೆ, ತಮ್ಮ ಮಾತು ಬಹಳ ಪ್ರಶಸ್ತವಾದುದು, ಅದರಿಂದ ಅದು ಯಾರಿಗೂ ಕೇಳಿಸಲೇ ಬಾರದು ಎಂಬಂತೆ ಮಾತಾಡುತ್ತಾ ಇದ್ದರು. ಹುಡುಗರ ಪದ್ಯಗಳನ್ನು ಸುಮ್ಮನೆ ತಿರುವಿ ಹಾಕಿ ಗೊರೂರು ಮುಂದೆ ನಡೆದರೆ, ಪುತಿನ ಒಂದು ಪದ್ಯ ಹಿಡಿದುಕೊಂಡು ನಿಂತಲ್ಲೇ ನಿಂತು ಬಿಟ್ಟರು. ಈ ಸಾಲು ತುಂಬ ಚೆನ್ನಾಗಿದೆ. ಯಾರು ಈ ಹುಡುಗಿ? ಅವಳನ್ನು ಕರೆಸಿ. ನಾನು ನೋಡಬೇಕು- ಎಂದು ಪುತಿನ ನನಗೆ ದುಂಬಾಲು ಬಿದ್ದರು. ಆ ಹುಡುಗಿ ಕಲ್ಪನಾ . ನನ್ನ ಮಿತ್ರರಾಗಿದ್ದ ಪೋಸ್ಟ್ ಮಾಸ್ಟರ್ ಕಾಮತ್ತರ ತಂಗಿ. ಒಂಭತ್ತನೇ ಕ್ಲಾಸಿನ ವಿದ್ಯಾರ್ಥಿನಿ. ಅವಳನ್ನು ಕರೆಸಿ ಪುತಿನ ಮುಂದೆ ನಿಲ್ಲಿಸಿದೆವು. ಪುತಿನ ಆ ಹುಡುಗಿಯ ಬೆನ್ನು ತಟ್ಟಿ, ಚೆನ್ನಾಗಿ ಬರೀತೀ ನೀನು. ಎಷ್ಟು ಮಾತ್ರಕ್ಕೂ ಬರೆಯೋದು ನಿಲ್ಲಿಸ ಬೇಡ. ಇನ್ನೊಬ್ಬ ಗೌರಮ್ಮ ಆಗುತೀ ನೀನು! ಎಂದು ಏನೇನೋ ಮಾತಾಡಿದರು. ಹುಡುಗಿ ನಾಚಿಕೆಯಿಂದ ಕುಗ್ಗಿಹೋಗಿದ್ದಳು. ಸಂಜೆ ವ್ಯಾಸಪೀಠದಲ್ಲಿ ಪುತಿನ ಭಾಷಣ.(ಇದು ೧೯೬೭ ಅಥವಾ ೬೮ ನೇ ಇಸವಿ ಇರಬಹುದು). ಪುತಿನ ಮಾತಾಡಲಿಕ್ಕೆ ಶುರು ಮಾಡಿದರು. ಅವರ ಧ್ವನಿ ಯಾರುಗೂ ಕೇಳಿಸುತ್ತಿಲ್ಲ. ವಾಲ್ಯೂಮ್ ಜಾಸ್ತಿ ಮಾಡಿದ ನಮ್ಮ ಸೌಂಡ್ ಸಿಸ್ಟಮ್ ಎಕ್ಸ್ಪರ್ಟ್ ಗುಡ್ಡಪ್ಪ. ಮೈಕ್ ಬೇಸರದಿಂದ ಜೋರಾಗಿ ಕಿರುಚಿಕೊಳ್ಳ ತೊಡಗಿತು. ಟಿ ಎಸ್ ಆರ್ ಗುಡ್ಡಪ್ಪನ ಮೇಲೆ ಕಣ್ಣು ಕಣ್ಣು ಬಿಡತೊಡಗಿದರು. ವಾಲ್ಯೂಮ್ ಕಮ್ಮಿ ಮಾಡಿದ್ದಾಯಿತು. ಪುತಿನ ನಿಮಿರಿ ನಿಮಿರಿ ಅಂಗಾಲಲ್ಲಿ ನಿಲ್ಲುತ್ತಾ, ಮುಂಗಾಲಲ್ಲಿ ನಿಲ್ಲುತ್ತಾ ಏನೂ ಸ್ವಗತ ಸಂಭಾಷನೇ ನಡೆಸೇ ಇದ್ದರು. ಅದು ಯಾರಿಗೂ ಕೇಳುವಂತಿಲ್ಲ. ಮಹಾಕವಿಯ ವಾಣಿ ಕೇಳಬೇಕೆಂದು ಎಲ್ಲರಿಗೂ ಆಸಕ್ತಿ. ಆದರೆ ಮೈಕಿಗೂ ಕವಿಗೂ ಹೊಂದಾಣಿಕೆಯೇ ಆಗವಲ್ಲದು. ಗುಡ್ಡಪ್ಪನಿಗೆ ಸಹಾಯ ಮಾಡಲು ಮತ್ತೆ ಕೆಲವರು ಬಂದರು. ಈ ಹಿಂಸೆ ತಾಳಲಾರದೆ ಮೈಕ್ ಮತ್ತೆ ಕೀರಲು ಧ್ವನಿಯಲ್ಲಿ ಆರ್ತನಾದ ಮಾಡತೊಡಗಿತು. ಈ ಯಾವುದರ ಪರಿವೆಯೇ ಇಲ್ಲದೆ ಪುತಿನ ತಮ್ಮ ಪಾಡಿಗೆ ತಾವು ಮಾತಾಡುತ್ತಲೇ ಇದ್ದಾರೆ. ಮೈಕ್ ಆಫೇ ಮಾಡಿಬಿಡಿ ಎಂದು ಸ್ವಾಮೀಜಿ ಆಜ್ಞಾಪಿಸಿದರು. ಪುತಿನ ಮಾತಾಡುವುದು ಈಗ ಸ್ವತಃ ಅವರಿಗೂ ಕೇಳದಾಯಿತು. ಹೀಗೆ ಕವಿವರ್ಯರ ಮೊದಲ ಭಾಷಣ ಒಂದು ನಿಗೂಢ ಪಾತಳಿಯಲ್ಲಿ ಸಂಭವಿಸಿತೆಂಬುದನ್ನು ನಾನು ಮರೆಯುವಂತೆಯೇ ಇಲ್ಲ! ಅನಂತಮೂರ್ತಿಗಳು ಬಂದಾಗ ವ್ಯಾಸಪೀಠದ ಪಬ್ಲಿಕ್ ಭಾಷಣ ಮಾಡಿದ್ದಾದ ಮೇಲೆ, ವಿದ್ಯಾರ್ಥಿಗಳನ್ನೇ ಕುರಿತು ಮಾತಾಡುವ ಅಪೇಕ್ಷೆ ವ್ಯಕ್ತಪಡಿಸಿದರು. ನಮ್ಮ ಹುಡುಗರಿಗೆ ಅನಂತಮೂರ್ತಿ ಏನು ಮಾತಾಡುತ್ತಾರೆ ಎಂದು ನನಗೆ ಕುತೂಹಲ. ನಾನು ಅಡಿಗರ ರಾಮನವಮಿಯ ದಿವಸ ಪದ್ಯದ ಬಗ್ಗೆ ಹುಡುಗರಿಗೆ ಮಾತಾಡಲೋ ಎಂದು ಅನಂತಮೂರ್ತಿ ಕೇಳಿದರು. ಹುಡುಗರಿಗೆ ರಾಮನವಮಿ ದಿವಸ ಹೇಗೆ ವಿವರಿಸುತ್ತಾರೆ ಅಂತ ನನಗೆ ಕುತೂಹಲ. ಆ ಪದ್ಯ ನಿಮ್ಮ ಲೈಬ್ರರಿಯಲ್ಲಿ ಸಿಕ್ಕರೆ ತಂದುಕೊಡಿ ಎಂದು ಅನಂತಮೂರ್ತಿ ಹೇಳಿದರು. ಪದ್ಯವೇನೋ ನನ್ನ ಬಳಿಯೇ ಇದೆ ಎಂದೆ ನಾನು! ಏನು ನೀವು ಇಲ್ಲಿ ಸಾಹಿತ್ಯ ಕಲಿಸೋ ಮೇಷ್ಟ್ರ್‍ಏ ಎಂದರು ಅನಂತಮೂರ್ತಿ. ಅಲ್ಲ. ನಾನು ಕ್ರಾಪ್ಟ್ ಟೀಚರ್ ಎಂದೆ. ನೀವು ಅಡಿಗರನ್ನು ಓದುತ್ತೀರಾ ಎಂದರು! ಸಾಕ್ಷಿ ಕೂಡಾ ನಾನು ತರಿಸುತ್ತೇನೆ ಎಂದೆ. ಅನಂತಮೂರ್ತಿ ಪ್ರೀತಿಯಿಂದ ನನ್ನ ಬೆನ್ನು ತಟ್ಟಿ ನಡೀರಿ ನಿಮ್ಮ ಮನೆಗೆ ಹೋಗೋಣ ಎಂದರು. ಆಶ್ರಮದಲ್ಲಿ ರೈಲ್ವೇ ಕ್ಯಾಬನ್ನಿನಂತಹ ಅಧ್ಯಾಪಕರ ವಸತಿಗೃಹಗಳಿದ್ದವು. ನಾನು ಅನಂತಮೂರ್ತಿಗಳನ್ನು ನಮ್ಮ ಮನೆಗೆ ಕರೆದೊಯ್ದೆ! ನನ್ನ ಪುಸ್ತಕ ಸಂಗ್ರಹ ನೋಡಿ ಅವರಿಗೆ ಸಂತೋಷವಾಯಿತು. ಆ ವೇಳೆಗೆ ನನ್ನ ಪರಿವೃತ್ತ ಎಂಬ ಮೊದಲ ಕವಿತಾ ಸಂಗ್ರಹ ಹೊರಬಿದ್ದಿತ್ತು! ಅಡಿಗರ ರಾಮನವಮಿ ಜೊತೆಗೆ ನನ್ನ ಪುಸ್ತಕವನ್ನೂ ಅನಂತಮೂರ್ತಿ ಕೈಗೆ ಹಾಕಿದೆ. ಅವರು ಪದ್ಯಗಳನ್ನು ಒಮ್ಮೆ ತಿರುವಿ ನೋಡಿ, ಬರೀತಾ ಹೋಗಿ ಎಂದರು! ನನ್ನ ಪದ್ಯಗಳು ಅವರಲ್ಲಿ ಯಾವ ಉತ್ಸಾಹವನ್ನೂ ಮೂಡಿಸಿಲ್ಲ ಎನ್ನುವುದು ಗೊತ್ತಾಗಿ ನನಗೆ ಸ್ವಲ್ಪ ಉತ್ಸಾಹ ಭಂಗವಾಯಿತಾದರೂ, ಸದ್ಯ, ಬರೆಯುವುದು ನಿಲ್ಲಿಸಿ ಎಂದು ಅವರು ಹೇಳಲಿಲ್ಲವಲ್ಲ. ಸದ್ಯ ಬಚಾವಾದೆ ಅಂದುಕೊಂಡೆ! ಹೈಸ್ಕೂಲಲ್ಲಿ ಲೈಬ್ರರಿಯ ಮುಂದಿದ್ದ ದೊಡ್ಡ ಹಾಲಲ್ಲಿ ಎಲ್ಲ ತರಗತಿಯ ಹುಡುಗರನ್ನೂ ಜಮಾಯಿಸಿದೆವು. ನಮ್ಮ ಅಧ್ಯಾಪಕರಲ್ಲಿ ಮಹಾನ್ ವಾಗ್ಮಿ ಎಂದು ಹೆಸರಾಗಿದ್ದ ಜಿ ಎಲ್ ಆರ್, ಅನಂತಮೂರ್ತಿಯನ್ನು ಸ್ವಾಗತಿಸಿ ಅವರಿಗೆ ಮಾತಾದಲಿಕ್ಕೆ ವೇದಿಕೆ ತೆರವು ಮಾಡಿದರು. ಅನಂತಮೂರ್ತಿ ರಾಮನವಮಿ ದಿವಸ ಕವಿತೆ ಬಗ್ಗೆ ಒಂದು ಗಂಟೆ ನಮ್ಮ ಹಳ್ಳಿಯ ಹುಡುಗರ ಎದುರು ಮಾತಾಡಿದರು. ಯಾರಿಗೆ ಎಷ್ಟು ಅರ್ಥವಾಯಿತೋ!? ನನಗೆ ಅರ್ಥವಾದದ್ದು ಇಷ್ಟು: ಈ ವ್ಯಕ್ತಿಗೆ ಕಾವ್ಯ ಅಂದರೆ ಜೀವ!
*****
Friday, March 19, 2010
Subscribe to:
Post Comments (Atom)
Bahala chennagi moodi bamdide, dhanyavaadagalu.
ReplyDeleteಆತ್ಮೀಯ
ReplyDeleteನೆನಹುಗಳು ಚೆನ್ನಾಗಿದೆ.
ಅ೦ಥ ಕವಿಗಳು ಬರಹಗಾರರು ಶಾಲೆಗಳಿಗೆ ಹೋಗಿ ತಮ್ಮಮಾತುಗಳಿ೦ದ ವಿದ್ಯಾರ್ಥಿಗಳನ್ನು ಪ್ರಭಾವಿತಗೊಳಿಸುತ್ತಿದ್ದರು. ಈಗ ಬರಹಗಾರರು ಶಾಲೆಗೆ ಹೋಗುವುದಿರಲಿ ಅತ್ತ ಮುಖ ಹಾಕುವುದೂ ಇಲ್ಲ.ಏಕೆ೦ದರೆ ಅದರಿ೦ದ ಅವರಿಗೆ ಲಾಭವಿಲ್ಲ.ಪ್ರಚಾರ ಸಿಕ್ಕುವುದಿಲ್ಲ
ಈಗಿನ ಶಿಕ್ಷಕರಿಗೇನಾಗಿದೆ ಎ೦ತಲೇ ತಿಳಿಯುತ್ತಿಲ್ಲ
ಮೊದಲನೆಯದಾಗಿ ಅಧ್ಯಯನ ಪ್ರವ್ರುತ್ತಿ ಕಡಿಮೆಯಾಗಿದೆ.ತಾವೂ ಓದುವುದಿಲ್ಲ ಮಕ್ಕಳಿಗೂ ಓದಿ ಎ೦ದು ಹೇಳುವುದಿಲ್ಲ
ಬರಿಯ ಪಠ್ಯ ಪುಸ್ತಕವನ್ನು ಮಾತ್ರ್ ಓದಲು ತಿಳಿಸುತ್ತಾರೆ.ಶಿಕ್ಷಕನೊಬ್ಬ ಅಧ್ಯಯನ ನಿರತನಾದರೆ ಮಕ್ಕಳಿಗೆ ಲಾಭವಲ್ಲವೇ?
ಐದು ವರ್ಷಕ್ಕೊಮ್ಮೆ ಪಠ್ಯ ಬದಲಾಗುತ್ತೆ ಎಷ್ಟೋ ಜನ ಮೇಷ್ಟ್ರುಗಳು ಪುಸ್ತಕ ನೋಡದೇ ಪಾಠ ಮಾಡಿಬಿಡುತ್ತಾರೆ. ಅವರಿಗೆ ಬಾಯಿಪಾಠ ಆಗಿಬಿಟ್ಟಿರುತ್ತದೆ ಆ ಪಠ್ಯ.
ಹೊಸದನ್ನು ಹೇಳಲು ಅವರಿಗೂ ಉತ್ಸಾಹವಿಲ್ಲ ಕಲಿಯಲು ಹುಡುಗರಿಗೂ ಆಸಕ್ತಿಯಿಲ್ಲ
ಹರೀಶ ಆತ್ರೇಯ
http://ananyaspandana.blogspot.com/
ಕೆಲವೊಮ್ಮೆ ಶ್ರೋತೃಗಳನ್ನು, ಪ್ರೇಕ್ಷಕರನ್ನು ನೋಡಿ ಆಮೇಲೆ ಅವರ ನಾಡಿಮಿಡಿತ ಹಿಡಿದು ಮಾತಾಡಬೇಕೇನೋ ಅಂತ ಅನ್ನಿಸುತ್ತದೆ-ಇದನ್ನು ಅನಂತಮೂರ್ತಿಯವರ ಭಾಷಣದ ಬಗ್ಗೆ ಹೇಳಿದೆ, ತಮ್ಮ ಈ ಬದುಕಿನ ಮಜಲು ತುಂಬಾ ಹಿಡಿಸಿತು, ವಿವರಣೆ ಎಂದಿನಂತೆ ತುಂಬಾ ಆಪ್ತ, ತಮಗೆ ಹಲವು ನೆನಕೆಗಳು
ReplyDeleteಸರ್
ReplyDeleteನಿಮ್ಮ ನಿರೂಪಣೆ ಕಣ್ಣಿಗೆ ಕಟ್ಟಿದಂತಿದೆ
ನಿಮ್ಮ ಮುಂದಿನ ಕಂತನ್ನು ಕಾತುರದಿಂದ ಕಾಯುತಿದ್ದೇನೆ.
ಧನ್ಯವಾದಗಳು
ರಘುನಂದನ