Saturday, February 13, 2010

ಕವಿತೆ,ಕಥೆ,ನಾಟಕ,ಇತ್ಯಾದಿ.....

ಪ್ರಿಯ ಓದುಗಾ,

ನಾಳೆ ನನ್ನ ಸಮಗ್ರ ಕಾವ್ಯ, ಸಮಗ್ರ ಕಥೆ, ಸಮಗ್ರ ಮಕ್ಕಳ ನಾಟಕ ಬಿಡುಗಡೆಯಾಗಲಿವೆ. ಸ್ಥಳ: ರವೀಂದ್ರ ಕಲಾಕ್ಷೇತ್ರ. ಸಮಯ: ಬೆಳಿಗ್ಗೆ ಹತ್ತು. ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ: ಡಾ ಜಿಎಸ್ಸೆಸ್, ಡಾ ಅನಂತಮೂರ್ತಿ, ಡಾ ಸಿ ಎನ್ ರಾಮಚಂದ್ರನ್, ಪ್ರೊ ಗೋವಿಂದ ರಾವ್, ಜಿ.ಎನ್.ಮೋಹನ್, ಸಿ.ಆರ್.ಸಿಂಹ, ಎಂ ಡಿ ಪಲ್ಲವಿ, ರಾಘವೇಂದ್ರ ಪಾಟೀಲ, ಡಾ ಬೈರೇಗೌಡ, ಟಿ ಎಸ್ ಛಾಯಾಪತಿ. ನಿಮ್ಮಲ್ಲಿ ಪ್ರೀತಿಯ ಕೋರಿಕೆ: ದಯಮಾಡಿ ನೀವೂ ಬನ್ನಿ.


ತಾನು ಬರೆದದ್ದನ್ನು ಒಟ್ಟಿಗೇ ಹೀಗೆ ಜೋಡಿಸಿಕೊಡುವವಾಗ ತಾನು ಇಷ್ಟೆಲ್ಲಾ ಬರೆದದ್ದುಂಟಾ ಎಂದು ಲೇಖಕನಿಗೇ ಆಶ್ಚರ್ಯವಾಗುತ್ತದೆ. ಒಟ್ಟು ಸಂಗ್ರಹಗಳು ಬಂದ ಮೇಲೆ ಆಸಕ್ತರು ದಶಕಗಳ ಹಿಂದಿನ ಬಿಡಿಪ್ರತಿಗಳಿಗಾಗಿ ತಡಕಾಡುವ ಅಗತ್ಯವಿರುವುದಿಲ್ಲ. ದಪ್ಪ ಪುಸ್ತಕ ರ್‍ಯಾಕಿನಲ್ಲಿ ಇದ್ದಾಗ ಅದು ಕಣ್ಣುತಪ್ಪಿಹೋಗುವ ಭಯವಿಲ್ಲ! ಬೇಡವೆಂದರೆ ನಾವೇ ಮರೆಸಿ ಇಡಬೇಕಷ್ಟೆ!


ಈ ಕೃತಿಗಳನ್ನು ಕಣ್ಣ ಮುಂದೆ ಹರಡಿಕೊಂಡು ಕೂತಾಗ, ನನ್ನ ಅನೇಕ ಹಳೆಯ ನೆನಪುಗಳು ಅಜ್ಞಾತದಿಂದ ನಿಧಾನಕ್ಕೆ ಮೇಲೇಳುವ ಬೆರಗು ವಿಶೇಷ ಖುಷಿ ಕೊಡುತ್ತದೆ. ಸಿಂದಾಬಾದನ ಆತ್ಮಕಥೆ ಸಾಕ್ಷಿಯಲ್ಲಿ ಪ್ರಕಟವಾದಾಗ ನನ್ನ ಪ್ರಿಯ ಮಿತ್ರ ಉಪಾಧ್ಯ(ಆಗಿನ್ನೂ ಡಾ ಆನಂದರಾಮ ಉಪಾಧ್ಯ ಆಗಿರಲಿಲ್ಲ) ನನ್ನ ಮನೆಗೆ ಬಂದು-"ಸಾಕ್ಷಿಯಲ್ಲಿ ನಿಮ್ಮ ಸಿಂದಾಬಾದನ ಆತ್ಮಕಥೆ ಓದಿ ನನ್ನ ಪರಿಚಯದ ಗೆಳೆಯರೊಬ್ಬರು ತುಂಬಾ ಇಷ್ಟಪಟ್ಟಿದ್ದಾರೆ. ನಿಮ್ಮನ್ನು ಪರಿಚಯಮಾಡಿಕೊಡಲು ಕೇಳಿದ್ದಾರೆ" ಎಂದರು. ಹೀಗೆ ಪದ್ಯವೊಂದರ ಮೂಲಕ ನನಗೆ ಹತ್ತಿರವಾದ ಗೆಳೆಯ ಕೆ.ಸತ್ಯನಾರಾಯಣ. ಆಗ ಅವರು ರಿಸರ್ವ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ಬಸವನಗುಡಿ ಪಾರ್ಕ್ ಬಳಿ ಒಂದು ವಟಾರದ ಮನೆಯಲ್ಲಿ ಅವರು ಗೆಳೆಯರೊಂದಿಗೆ ವಾಸವಾಗಿದ್ದರು(೧೯೭೭ರ ಸುಮಾರು). ಆಮೇಲೆ ಅದೆಷ್ಟು ಬಾರಿ ನಾವು ಆ ಪುಟ್ಟ ಮನೆಯಲ್ಲಿ ಕೂತು ಸಾಹಿತ್ಯದ ಬಗ್ಗೆ ಚರ್ಚಿಸಿದ್ದೇವೆಯೋ!
ತುಷಾರದಲ್ಲಿ ನನ್ನ ಪುಟ್ಟಾರಿಯ ಮತಾಂತರ ಪ್ರಕಟವಾಯಿತು. ಆ ಪುಟ್ಟಾರಿಯ ಮತಾಂತರ ಬರೆದದ್ದು ಚನ್ನಗಿರಿ ತಾಲ್ಲೋಕಿನ ತಾವರಕೆರೆ ಎಂಬ ಸಣ್ಣ ಊರಿನಲ್ಲಿ. ಅಲ್ಲಿ ನನ್ನ ಷಡ್ಕ ಎನ್ ಆರ್ ಕೆ ಶಾಲಾ ಅಧ್ಯಾಪಕರಾಗಿದ್ದರು. ನಾನು ರಜಾಕಾಲದಲ್ಲಿ ಬಂದು ಅವರಲ್ಲಿ ವಾರೊಪ್ಪತ್ತು ಇದ್ದು ಅಲ್ಲೇ ಒಂದು ಕಥೆಗಿತೆ ಬರೆಯಬೇಕೆಂಬುದು ಅವರ ಅಪೇಕ್ಷೆ!ಅದಕ್ಕಾಗಿ ಆ ಮಹಾರಾಯರು ಏನೆಲ್ಲಾ ಸಿದ್ಧತೆ ಮಾಡಿದ್ದರು! ನನಗಾಗಿ ಒಂದು ಖಾಲಿ ಮನೆಯನ್ನು ತೆರವುಗೊಳಿಸಿದ್ದರು. ಅಲ್ಲಿಗೆ ಹೊತ್ತು ಹೊತ್ತಿಗೆ ನನಗೆ ತಿಂಡಿ ಕಾಫಿ ಬರುತ್ತಾ ಇತ್ತು. ದಿನವೆಲ್ಲಾ ಬರೆಯುತ್ತಾ ಇದ್ದೆ. ರಾತ್ರಿ ಆಗಿನ್ನೂ ಚಿಕ್ಕವರಾಗಿದ್ದ ನನ್ನ ಷಡ್ಕರ ಮಕ್ಕಳು ಬರೆದದ್ದಷ್ಟನ್ನೂ ಓದಿ ಮತ್ತೆ ನಾಳೆ ಕಥೆಯ ಮುಂದಿನ ಭಾಗವನ್ನು ಓದುವುದಕ್ಕೆ ಕಾತರತೆಯಿಂದ ಸಿದ್ಧರಾಗುತ್ತಾ ಇದ್ದರು! ಆ ಕಥೆಯಲ್ಲಿ ಬರುವ ಸಾಹಸೀ ರೈತ ಭೋಜಣ್ಣ ಅಲ್ಲಿಯೇ ನಾನು ಕಂಡವರು! ತಮ್ಮ ಪಾತ್ರ ಕಥೆಯಲ್ಲಿ ಮೂಡುವುದನ್ನು ಓದಿ ಓದಿ ಅವರೂ ರೋಮಾಂಚಿತರಾಗುತ್ತಿದ್ದರು. ಹೀಗೆ ವಾಸ್ತವ ಕಲ್ಪನೆ ಎಲ್ಲವನ್ನೂ ಮಿದ್ದುಕೊಂಡು ನಿರ್ಮಾಣವಾದ ಕಥೆಯದು. ಅದನ್ನು ಮುಗಿಸಲಿಕ್ಕೆ ನಾನು ತೆಗೆದುಕೊಂಡ ಸಮಯ ಸರಿಯಾಗಿ ಒಂದು ವಾರ. ಮುಂದೆ ಪುಟ್ಟಾರಿಯ ಮತಾಂತರ ಪತ್ರಿಕೆಯಲ್ಲಿ ಪ್ರಕಟವಾದಾಗ , ಮೈಸೂರಿಂದ ಅನಿರೀಕ್ಷಿತವಾಗಿ ಕಾಳೇಗೌಡ ನಾಗವಾರರು ಪತ್ರವೊಂದನ್ನು ಬರೆದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾವು ಬೇರೆ ಬೇರೆ ತಾತ್ವಿಕತೆಯ ಲೇಖಕರಾಗಿದ್ದರೂ ಪರಸ್ಪರ ಮೆಚ್ಚುವ ಸೌಹಾರ್ದತೆ ಇದ್ದದ್ದು ನನಗೆ ಈವತ್ತೂ ತುಂಬ ಪ್ರಿಯವಾದ ಸಂಗತಿ ಅನ್ನಿಸುತ್ತಿದೆ.


ನನ್ನ ಒಣಮರದ ಗಿಳಿಗಳು ಎಂಬ ಕೃತಿಯ ಬಹಳಷ್ಟು ಕವಿತೆಗಳನ್ನು ಹುಚ್ಚುಹಿಡಿದವನ ಹಾಗೆ ನಾನು ಪರೀಕ್ಷೆಯ ಬಿಡುವಿನಲ್ಲಿ ಸ್ಟಾಫ್ ರೂಮಿನ ಏಕಾಂತದಲ್ಲಿ ಬರೆದದ್ದು. ಬರೆದ ಪದ್ಯಗಳನ್ನೆಲ್ಲಾ ಜೋಡಿಸಿ, ಕೀರ್ತನಾಥ ಕುರ್ತಕೋಟಿಯವರಿಗೆ ಮುನ್ನುಡಿ ಕೇಳಿ ಪದ್ಯಗಳನ್ನು ಕಳಿಸಿಕೊಟ್ಟೆ. ಆಗ ನನ್ನ ನೇರ ಪರಿಚಯವೂ ಅವರಿಗೆ ಇರಲಿಲ್ಲ. ಬರೆದರೆ ಬರೆಯುತ್ತಾರೆ, ಇಲ್ಲವಾದರೆ ಆಗುವುದಿಲ್ಲ ಎನ್ನುತ್ತಾರೆ! ಅಷ್ಟೇ ತಾನೆ ಎಂದುಕೊಂಡು ಒಂದು ಮೊಂಡು ಧೈರ್ಯದಲ್ಲಿ ಕವಿತೆಗಳನ್ನ ಕೀರ್ತಿಯವರಿಗೆ ಕಳಿಸಿ, ಈ ವಿಷಯ ನನ್ನ ಆಪ್ತಗೆಳೆಯರಿಗೂ ಹೇಳದೆ ತೆಪ್ಪಗೆ ನನ್ನ ದೈನಿಕದಲ್ಲಿ ತೊಡಗಿಕೊಂಡಿದ್ದೆ. ನಾನು ಕವಿತೆಗಳನ್ನು ಕಳಿಸಿ ಒಂದು ತಿಂಗಳಾಗಿರಬಹುದು. ಆವತ್ತು ನಮ್ಮ ಮನೆಗೆ ಪ್ರಿಯ ಮಿತ್ರರಾದ ಎಚ್.ಎಸ್.ಮಾಧವರಾವ್, ಮತ್ತು ನನ್ನ ಅತ್ಯಂತ ಪ್ರೀತಿಯ ವಿದ್ಯಾರ್ಥಿಮಿತ್ರ ಡಾ ಮೂರ್ತಿ ಊಟಕ್ಕೆ ಬಂದಿದ್ದರು. ಮೂರ್ತಿ ಲಂಡನ್ನಿನಲ್ಲಿ ಉನ್ನತ ವ್ಯಾಸಂಗ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದ್ದ ಸಂದರ್ಭ. ತ್ಯಾಗರಾಜನಗರದಲ್ಲಿ ಒಂದು ಸಣ್ಣ ಮನೆಯಲ್ಲಿ ಬಾಡಿಗೆಗಿದ್ದೆ. ನನ್ನ ಇಬ್ಬರು ಅಜ್ಜಿಯರು, ನನ್ನ ನಾಲ್ವರು ಮಕ್ಕಳು, ಪತ್ನಿ-ಎಲ್ಲಾ ಆ ಕಿಷ್ಕಿಂಧೆಯಲ್ಲಿ ಹೇಗೆ ಬದುಕುತ್ತಿದ್ದೆವೋ ಈವತ್ತು ಆಶ್ಚರ್ಯವಾಗುತ್ತದೆ. ಒಳಗೆ ಕೂತು ಬರೆಯುವುದಕ್ಕೆ ಜಾಗವಿರಲಿಲ್ಲ. ಹಾಗಾಗಿ ನನ್ನ ಬಹುಪಾಲು ಬರವಣಿಗೆಯನ್ನು ಒಂದು ಕಡ್ಡಿ ಚಾಪೆ ಹಾಕಿಕೊಂಡು ನಾಕಡಿ ಅಗಲದ ಕಾಂಪೌಂಡಿನ ಜಾಗದಲ್ಲಿ ಬರೆಯುತ್ತಾ ಇದ್ದೆ. ಆ ಪಾರಿವಾಳದ ಗೂಡಿಗೆ ಅಡಿಗರು, ಅನಂತಮೂರ್ತಿ, ಕಿರಂ, ಬಾಲು, ಸತ್ಯನಾರಾಯಣ, ಉಪಾಧ್ಯ, ರಾಮಚಂದ್ರಶರ್ಮ, ಎನ್.ಎಸ್.ಎಲ್, ಸುಬ್ಬಣ್ಣ, ಸಿ.ಅಶ್ವಥ್-ಇಂಥಾ ಘಟಾನುಘಟಿಗಳೆಲ್ಲಾ ಬಂದುಹೋಗಿದ್ದಾರೆ. ಆ ವಿಷಯ ಇರಲಿ. ಮಾಧು ಮತ್ತು ಡಾ ಮೂರ್ತಿ ನಮ್ಮ ಮನೆಗೆ ಊಟಕ್ಕೆ ಬಂದ ವಿಷಯ ಹೇಳುತ್ತಾ ಇದ್ದೆ. ಮುಂಬಾಗಿಲು ಹಾಕಿದ್ದೆವೇ? ಪೋಸ್ಟಿನವನು ಒಂದು ಭಾರವಾದ ಲಕೋಟೆಯನ್ನು ಕಿಟಕಿಯಲ್ಲಿ ತೂರಿಸಿ ನಾವು ಊಟಮಾಡುತ್ತಾ ಕೂತಿದ್ದ ಹಾಲಿಗೇ ಇಳಿಬಿಟ್ಟ. ಧೊಪ್ಪೆಂದು ಸಶಬ್ದವಾಗಿ ನೆಲಕ್ಕೆ ಬಿದ್ದ ಆ ಲಕೋಟೆಯನ್ನು ಒಡೆದು ನೋಡುತ್ತೇನೆ: ಕೀರ್ತಿ ತಮ್ಮ ಮುನ್ನುಡಿ ಬರೆದು ಕಳಿಸಿದ್ದಾರೆ! ಆಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ಮುನ್ನುಡಿಯನ್ನು ಮೊಟ್ಟ ಮೊದಲು ಓದಿದವರು ಮಾಧು ಮತ್ತು ಮೂರ್ತಿ.
ನನಗೆ ಹೆಸರು ಮತ್ತು ಪ್ರತಿಷ್ಠೆ ತಂದುಕೊಟ್ಟ ಋತುವಿಲಾಸ ನಾನು ಬರೆದದ್ದು ತ್ಯಾಗರಾಜನಗರದ ಮನೆಯ ಕಾಂಪೌಂಡಿನಲ್ಲಿ ಕೂತು! ನಾನೂ ಡಾ ಶ್ರೀರಾಮ ಭಟ್ಟರು ಋತುಸಂಹಾರ ಅಭ್ಯಾಸ ಮಾಡಿದ್ದು ಅದೇ ಜಾಗದಲ್ಲಿ. ಕೆಲವು ಬಾರಿ ಭಟ್ಟರ ಅವ್ಟ್ ಹೌಸಿನ ಪುಟ್ಟ ಮನೆಯಲ್ಲಿ. ಇಡೀ ಋತುವಿಲಾಸ ೧೦೧ ನಂಬರಿನ ಆ ಮನೆಯ ಉಸಿರುಕಟ್ಟಿಸುವ ಕಿರುಕೋಣೆಯಲ್ಲಿ ಓದಿ ಎನ್.ಎಸ್.ಎಲ್ ಶಹಬಾಸ್ ಹೇಳಿದ್ದು ಅದೇ ಮನೆಯಲ್ಲಿ!


ನನ್ನ ಅನೇಕ ಬರವಣಿಗೆಯ ಹಿಂದೆ ಇರುವ ದಾರುಣ ನೆನಪುಗಳೂ ಆ ನೂರೊಂದನೇ ನಂಬರಿನ ಮನೆಯನ್ನ ಧ್ಯಾನಕ್ಕೆ ತರುತ್ತಾ ಇವೆ. ಸದ್ಯಕ್ಕೆ ಆ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳದೆ, ಒಂದು ಖುಷಿಯ ನೆನಪನ್ನು ನಿಮ್ಮ ಎದುರಿಗಿಟ್ಟು ಈ ಬರವಣಿಗೆ ಮುಗಿಸುತ್ತೇನೆ. ಕ್ರಿಯಾಪರ್ವ ಬರೆದು ಮುಗಿಸಿದ್ದೆ(೧೯೮೦). ಆ ಪದ್ಯವನ್ನ ಅನಂತಮೂರ್ತಿಗಳಿಗೆ ಓದಬೇಕೆಂದು ನಾನು ಮತ್ತು ಬಾಲು ಮೈಸೂರಿಗೆ ಹೋಗಿದ್ದೆವು. ಕಂಚಿನ ತೇರು ಮೊದಲಾದ ಪದ್ಯಗಳನ್ನು ಕ್ರಿಯಾಪರ್ವದೊಂದಿಗೆ ಅನಂತಮೂರ್ತಿಯವರಿಗೆ ಓದಿ ಮುನ್ನುಡಿ ಬರೆಯಲು ಕೇಳಿದ್ದಾಯಿತು. ಅವರು ಮುಗುಳ್ನಕ್ಕು ಸ್ವಲ್ಪ ಕಾಲಾವಕಾಶ ಬೇಕು! ಪರವಾಗಿಲ್ಲ ತಾನೇ?ಎಂದರು. ಆಯಿತು-ಎಂದು ನಾವು ಬೆಂಗಳೂರಿಗೆ ಹಿಂದಿರುಗಿದೆವು. ಆಮೇಲೆ ಪ್ರತಿದಿನ ಮುನ್ನುಡಿಯಿರುವ ಲಕೋಟೆಯನ್ನು ಕಾಯುತ್ತಾ ಇದ್ದೆ. ಲಕೋಟೆ ಬರಲಿಲ್ಲ. ಒಂದು ರಾತ್ರಿ ಕಾಲೇಜಿನಿಂದ ಮನೆಗೆ ಬಂದಾಗ ನನ್ನ ಹೆಂಡತಿ ಸಂಭ್ರಮದಿಂದ ಅನಂತಮೂರ್ತಿಯವರು ಬಂದು ಮುನ್ನುಡಿ ಕೊಟ್ಟು ಹೋಗಿದ್ದಾರೆ. ಸ್ವಲ್ಪಹೊತ್ತು ಕಿರಂ ಮನೆಯಲ್ಲಿ ಇರುತ್ತಾರಂತೆ. ಹೋಗಿ ನೋಡಿ. ಇದ್ದರೂ ಇರಬಹುದು-ಎಂದಳು. ಆಗ ಮೊಬೈಲ್ ಇತ್ಯಾದಿ ಸೌಕರ್ಯವಿರಲಿಲ್ಲ. ನನ್ನ ಸುವೇಗ ಹತ್ತಿಕೊಂಡು ನಾಗಸಂದ್ರದ ಬಳಿ ಇದ್ದ ಕಿರಂ ಮನೆಗೆ ದೌಡಾಯಿಸಿದೆ. ಅನಂತಮೂರ್ತಿ ಅಲ್ಲಿ ಇದ್ದರು. ಬಹಳಹೊತ್ತು ಅನಂತಮೂರ್ತಿ, ಕಿರಂ ಜೊತೆ ಮಾತಾಡಿ ನಾನು ಮನೆಗೆ ಹಿಂದಿರುಗಿದಾಗ ರಾತ್ರಿ ಹನ್ನೊಂದೇ ಆಗಿ ಹೋಗಿತ್ತು.


ಉಳಿದದ್ದು ನಾಳೆ ನಿಮ್ಮನ್ನು ಭೇಟಿ ಮಾಡಿದಾಗ...!

5 comments:

  1. ಸರ್,
    ನಿಮ್ಮ ಆಮಂತ್ರಣ ಓದಿ ಒಮ್ಮೆಲೇ ಬೆರಗಾದೆ
    ಒಂದು ಪುಸ್ತಕ ಬರೆಯಲು ಕಷ್ಟ ಪಡುವ ನಮ್ಮಂಥವರಿಗೆ ನೀವು ಒಂದು ಆದರ್ಶ,
    ಒಮ್ಮೆಲೇ ಅಷ್ಟೊಂದು ಕ್ರತಿಗಳು ಬಿಡುಗಡೆ ಆಗುತ್ತಿವೆ
    ನಾನು ಸ್ವೀಡನ್ನಿನಲ್ಲಿ ಇಲ್ಲದಿದ್ದರೆ ಖಂಡಿತ ನಿಮ್ಮ ಕಾರ್ಯಕ್ರಮಕ್ಕೆ ಬರುತ್ತಿದ್ದೆ
    ಇದೊಂದು ಸುಯೋಗ
    ಎಲ್ಲ ಕಾರ್ಯಕ್ರಮಗಳು ಯಶಸ್ವೀ ಯಾಗಲಿ ಎಂದು ಆ ಭಾಗವನತನಲ್ಲಿ ಬೇಡಿಕೊಳ್ಳುವೆ
    ನಿಮ್ಮ ಸಾಹಿತ್ಯ ಸೇವೆ ಮುಂದುವರೆಯಲಿ
    ಇನ್ನಷ್ಟು ಕ್ರತಿಗಳು ಹೊಮ್ಮಲಿ

    ReplyDelete
  2. ಕಾರಣಾಂತರಗಳಿಂದ ಊರಲಿಲ್ಲದ ಕಾರಣ, ತಮ್ಮ ಆಮಂತ್ರಣ ಸಿಕ್ಕರೂ ಬರಲಾಗುತ್ತಿಲ್ಲ, ದಯವಿಟ್ಟು ಕ್ಷಮಿಸಿ, ತಮ್ಮ ಕೃತಿಗಳನ್ನು ಸಾದರದಿಂದ ಸ್ವೀಕರಿಸುತ್ತೇನೆ.

    ReplyDelete
  3. ದಯವಿಟ್ಟು ಸಮಗ್ರ ಕಾವ್ಯ ಬಿಡುಗಡೆ ಆಯಿತು ಅಂತ ಕುಮಾರಸಂಭವ ಮರೆಯಬೇಡಿ!!

    --ಕೃಷ್ಣಪ್ರಿಯ

    ReplyDelete
  4. ಸಮಗ್ರ ಕಾವ್ಯ ಬಿಡುಗಡೆಯಾಗುತ್ತಿರುವುದಕ್ಕೆ ಅಭಿನಂದನೆಗಳು ಸಾರ್.

    ReplyDelete
  5. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

    ReplyDelete