Friday, September 11, 2009

ಬಾರೋ...ಬಾರೋ...ಮಳೆರಾಯ...


ಕರ್ಣಾಟ ಮಾತೆಯಾ ಮಕ್ಕಳಿರ ಕೂಡಿ
ತಾಯ್ನುಡಿಯ ಸೇವೆಯನು ಮನಸಿಟ್ಟು ಮಾಡಿ!
-ಕುವೆಂಪು


ಇದೇ ತಿಂಗಳ ಐದನೇ ತಾರೀಖು ಭಾನುವಾರ ಬೆಳಿಗ್ಗೆ (೫.೯.೨೦೦೯) ನನ್ನ ಹೊಸ ಪುಸ್ತಕ ಬಾರೋ ಬಾರೋ ಮಳೆರಾಯ ಬಿಡುಗಡೆ ಆಯಿತು. ಮಕ್ಕಳಿಗಾಗಿ ನಾನು ಈವರೆಗೆ ಬರೆದಿರುವ ಎಲ್ಲ ಕವಿತೆಗಳ ಸಮಗ್ರ ಸಂಪುಟ ಅದು. ಅಂಕಿತ ಪುಸ್ತಕದ ಗೆಳೆಯರು ತುಂಬ ಚೆನ್ನಾಗಿ ಪುಸ್ತಕವನ್ನು ಪ್ರಕಟಿಸಿದ್ದಾರೆ. ಬಾರೋಬಾರೋ ಮಳೆರಾಯ ಒಂದೇ ಅಲ್ಲ. ಈಚೆಗೆ ನಿರಂತರವಾಗಿ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಾ ಇವೆ. ಮಕ್ಕಳಿಗಾಗಿ ಬರೆಯಬೇಕೆಂಬ ಉಮೇದು ಮತ್ತೆ ನಮ್ಮ ಲೇಖಕರಲ್ಲಿ ಮೂಡುತ್ತಾ ಇದೆ. ಇದು ಶುಭ ಲಕ್ಷಣ. ಹಿರಿಯ ಕವಿಗಳಾದ ಚೆನ್ನವೀರ ಕಣವಿಯವರ ಮಕ್ಕಳ ಕವಿತಾ ಸಂಗ್ರಹ ಈಚೆಗೆ ಹೊರಬಂದಿದೆ. ಶ್ರೀನಿವಾಸ ಉಡುಪ, ಎನ್.ಎಸ್.ಎಲ್, ನಾಡಿಗ, ವೈದೇಹಿ, ಆನಂದ ಪಾಟೀಲ, ಲಕ್ಷ್ಮೀಶ ತೋಳ್ಪಾಡಿ ಮತ್ತಿತರ ಮುಖ್ಯ ಲೇಖಕರು ಮಕ್ಕಳಿಗಾಗಿ ನಿರಂತರ ಬರೆಯುತ್ತಾ ಇದ್ದಾರೆ.ಜೊತೆಗೆ ಮಕ್ಕಳ ಸಾಹಿತ್ಯ ಹರಿಗಡಿಯದಂತೆ ಯಾವತ್ತಿನಿಂದಲೂ ನೋಡಿಕೊಂಡಿರುವ ಉತ್ತರಕರ್ನಾಟಕದ ಅಧ್ಯಾಪಕ ಕವಿಗಳು. ಇದೆಲ್ಲಾ ಸಂತೋಷಪಡಬೇಕಾದ ಸಂಗತಿಯೇ. ಆದರೆ ಈ ಸಂತೋಷದ ಮಧ್ಯೆ ನನ್ನನ್ನು ಚಿಂತೆಗೆ ಹಚ್ಚುವ ಸಂಗತಿಯೆಂದರೆ, ಯಾರಿಗಾಗಿ ನಾವು ಮಕ್ಕಳ ಸಾಹಿತ್ಯವನ್ನು ನಿರ್ಮಿಸುತ್ತಿದ್ದೇವೆಯೋ ಆ ಮಕ್ಕಳು ಕನ್ನಡದಿಂದ ದೂರವಾಗುತ್ತಿರುವುದು. ನಗರಗಳಲ್ಲಂತೂ ನೂರಕ್ಕೆ ತೊಂಭತ್ತು ಭಾಗ ಮಕ್ಕಳಿಗೆ ಕನ್ನಡ ಈಗ ಓದುವ ಭಾಷೆಯಾಗಿಲ್ಲ. ಅದು ಕೇವಲ ಮಾತಾಡುವ ಭಾಷೆ. ಅವರೀಗ ಇಂಗ್ಲಿಷ್ ರೈಮ್ಸ್ ಓದುತ್ತಾರೆ. ಹ್ಯಾರೀಪಾಟ್ಟರ್ ಓದುತ್ತಾರೆ. ಕಾಮಿಕ್ಸ್ ನೋಡುತ್ತಾರೆ. ಪಂಜೆ, ಕುವೆಂಪು, ರಾಜರತ್ನಂ, ಹೊಯಿಸಳರ ಹೆಸರೂ ಅವರಿಗೆ ಗೊತ್ತಿಲ್ಲ. ತಪ್ಪು ಮಕ್ಕಳದಲ್ಲ. ಮಕ್ಕಳನ್ನು ಹಾಗೆ ಬೆಳೆಸುತ್ತಿರುವ ಪೋಷಕರದ್ದೂ ಅಲ್ಲ. ಈವತ್ತಿನ ಸಾಮಾಜಿಕ, ಶೈಕ್ಷಣಿಕ ಒತ್ತಡಗಳು ಹಾಗಿವೆ. ಕನ್ನಡದ ಬಗ್ಗೆ ಪ್ರೀತಿಯುಳ್ಳವರೂ ಈಗ ಅಸಾಹಯಕರಾಗಿದ್ದೇವೆ. ಶಾಲೆಗಳಲ್ಲಿ ಮಕ್ಕಳು ಕನ್ನಡ ಕಲಿಯುವ ಅವಕಾಶ ಕಡಿಮೆಯಾಗುತ್ತಾ ಇದೆ. ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಸುವಷ್ಟು ವ್ಯವಧಾನ ಈವತ್ತಿನ ತುರ್ತು ಜಗತ್ತಿನಲ್ಲಿ ತಂದೆ ತಾಯಿಯರಿಗೆ ಇಲ್ಲ. ನಗರಗಳಿರಲಿ ಹಳ್ಳಿ ಹಳ್ಳಿಗಳಲ್ಲೂ ಇಂಗ್ಲಿಷ್ ಶಾಲೆಗಳು ತಲೆಯೆತ್ತುತ್ತಾ ಇವೆ. ಕನ್ನಡವನ್ನು ಮಕ್ಕಳಿಗೆ ಕಲಿಸಲು ಈಗ ನಾವು ಯಾವುದಾದರೂ ಪರ್ಯಾಯವ್ಯವಸ್ಥೆಯನ್ನೇ ಕಲ್ಪಿಸಿಕೊಳ್ಳಬೇಕಾಗಿದೆ. ಅಮೆರಿಕೆಯಲ್ಲಿ ನಮ್ಮ ಕನ್ನಡ ಬಂಧುಗಳು ತಮ್ಮ ಮಕ್ಕಳಿಗೆ ಹೇಗಾದರೂ ಮಾಡಿ ಕನ್ನಡ ಕಲಿಸ ಬೇಕೆಂಬ ಸಂಕಲ್ಪದಿಂದ ರಜಾದಿನಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಶಾಲೆಗಳನ್ನು(ಏಕೋಪಾಧ್ಯಾಯ ಶಾಲೆಗಳು) ಪ್ರಾರಂಭಿಸಿದ್ದಾರೆ. ಇದರಿಂದ ಕನ್ನಡ ಓದುವುದು ಮಕ್ಕಳಿಗೆ ತಕ್ಕಮಟ್ಟಿಗಾದರೂ ಪರಿಚಯ ಆಗುತ್ತದೆ. ಹತ್ತಾರು ವರ್ಷಗಳಿಂದ ಇಂಥ ಕನ್ನಡ ಶಾಲೆ ನಡೆಸುತ್ತಿರುವ ಕನ್ನಡಾಭಿಮಾನಿಗಳು ಅಮೆರಿಕಾದಲ್ಲಿ ಇದ್ದಾರೆ. ಹೊರಗೆ ಪಕ್ಕಾ ಇಂಗ್ಲಿಷ್ ವಾತಾವರಣ. ಹಾಗಾಗಿ ಮಕ್ಕಳನ್ನು ಕನ್ನಡದ ಕಡೆ ಸೆಳೆಯುವ ಪ್ರಯತ್ನಗಳು ಅಮೆರಿಕೆಯಲ್ಲಿ ಹೆಚ್ಚು ಫಲಕಾರಿಯಾಗಿಲ್ಲ ಎಂಬುದನ್ನು ಅಲ್ಲಿನ ಗೆಳೆಯರು ವಿಷಾದದಿಂದ ಹೇಳುತ್ತಾರೆ. ಮತ್ತೆ ಕೆಲವರು ಮಕ್ಕಳಿಗೆ ಕನ್ನಡ ಸಂಪರ್ಕ ಉಳಿಯಬೇಕು ಎಂಬ ಸಂಕಲ್ಪದಿಂದ ಅವರನ್ನು ರಜಾದಿನಗಳಲ್ಲಿ ಬೆಂಗಳೂರಿಗೋ, ಧಾರವಾಡಕ್ಕೋ, ಮೈಸೂರಿಗೋ ಕಳಿಸಿಕೊಡುತ್ತಾರೆ. ಇಲ್ಲಿ ಆ ಮಕ್ಕಳು ತಿಂಗಳು ಒಪ್ಪತ್ತು ಇರುವಂತೆ ನೋಡಿಕೊಳ್ಳುತ್ತಾರೆ. ಈ ಉಪಾಯ ತಕ್ಕಮಟ್ಟಿಗೆ ಧನಾತ್ಮಕ ಫಲಿತಾಂಶ ಕೊಟ್ಟಿದೆ. ಪ್ರತಿವರ್ಷವೂ ಮಕ್ಕಳನ್ನು ಹೀಗೆ ಸೀಮಿತ ಕಾಲಾವಧಿಗೆ ಇಂಡಿಯಾಕ್ಕೆ ಕಳಿಸುವುದರಿಂದ ಆ ಮಕ್ಕಳು ಸುಲಲಿತವಾಗಿ ಕನ್ನಡ ಮಾತಾಡುವಂತಾಗಿದೆ. ಅನಿವಾಸೀಭಾರತೀಯರಾದ ನನ್ನ ಮಿತ್ರರೊಬ್ಬರ ಮಗಳು ಅಮೆರಿಕೆಯಲ್ಲಿದ್ದೂ ಸೊಗಸಾಗಿ ಕನ್ನಡ ಮಾತಾಡುತ್ತಾಳೆ. ಈ ಪ್ರಯೋಗವನ್ನು ಇನ್ನೊಂದು ಬಗೆಯಲ್ಲಿ ಬೆಂಗಳೂರು ನಿವಾಸಿಗಳಾದ ನಾವೂ ಮಾಡಬಹುದೇ? ಮಕ್ಕಳನ್ನು ರಜಾದಿನಗಳಲ್ಲಿ ಹಳ್ಳಿಗಳಿಗೆ ಕಳುಹಿಸುವುದು. ಅಲ್ಲಿ ಅವರು ಅಜ್ಜ ಅಜ್ಜಿಯರೊಂದಿಗೋ. ಅತ್ತೆಮಾವಂದಿರೊಂದಿಗೋ ತಿಂಗಳೊಪ್ಪತ್ತು ಇದ್ದು ಬರಲಿ. ಮೂರು ನಾಲಕ್ಕು ವರ್ಷ ಈ ಪ್ರಯೋಗ ಮಾಡುವುದರಿಂದ ಕನ್ನಡ ಮಾತಾಡುವುದು, ಓದುವುದು ಅವರಿಗೆ ಸಾಧ್ಯವಾಗಬಹುದು. ಗ್ರಾಮಗಳು ಹೀಗೆ ನಮ್ಮ ದೇಸೀಯತೆಯನ್ನು ಉತ್ಪಾದಿಸುವ, ಉಳಿಸುವ, ಪ್ರಚೋದಿಸುವ ಕಾರ್ಯಾಗಾರಗಳಾಗಬೇಕಾಗಿದೆ. ಹಳ್ಳಿಯಿಂದ ಮಕ್ಕಳು ರಜಾದಿನಗಳನ್ನು ಮುಗಿಸಿ ಬೆಂಗಳೂರಿಗೆ ಬಂದ ಮೇಲೆ, ಕನ್ನಡ ಹಾಡುಗಳನ್ನು ಕೇಳಲು, ಕನ್ನಡ ನಾಟಕಗಳನ್ನು, ಚಲನಚಿತ್ರಗಳನ್ನು ನೋಡಲು ನಾವು ಅವರನ್ನು ಪ್ರೋತ್ಸಾಹಿಸೋಣ. ಅವರು ಓದುತ್ತಾರೋ ಬಿಡುತ್ತಾರೋ ಒಂದು ಕನ್ನಡ ಪತ್ರಿಕೆ ನಮ್ಮ ಮನೆಗೆ ಬಂದು ಬೀಳುತ್ತಾ ಇರಲಿ. ನಾವು ಮನೆಯಲ್ಲಿ ಹಠತೊಟ್ಟವರಂತೆ ಕನ್ನಡ ಮಾತಾಡೋಣ. ಮಕ್ಕಳು ಕನ್ನಡದಲ್ಲಿ ಮಾತಾಡುವ ವಾತಾವರಣ ಕಲ್ಪಿಸೋಣ. ಶಾಲೆಯಲ್ಲಿ ಅವರು ಹೇಗೂ ಇಂಗ್ಲಿಷ್ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ! ಅವರು ಎಲ್ಲಿ ಸಮಕಾಲೀನ ಸಂದರ್ಭಕ್ಕೆ ನಿರುಪಯುಕ್ತರಾಗಿಬಿಡುತ್ತಾರೋ ಎಂಬ ಆತಂಕ ಬೇಡ. ಶಾಲೆಗಳಲ್ಲಿ ತಪ್ಪಿಯೂ ಅವರು ಕನ್ನಡ ಮಾತಾಡುವುದಿಲ್ಲ. ಮಾತಾಡಿದರೆ ದಂಡ ವಿಧಿಸುವ, ಛೀಮಾರಿ ಹಾಕುವ ವ್ಯವಸ್ಥೆ(!)ಯೂ ಇದೆ ಅಂತ ಕೇಳಿದ್ದೇನೆ. ನನ್ನ ಹೊಸ ಮಕ್ಕಳ ಕವಿತಾ ಸಂಗ್ರಹ ಪ್ರಕಟವಾದ ಬಗ್ಗೆ ತಿಳಿಸಿದೆನಲ್ಲಾ? ಆ ಪುಸ್ತಕದ ಒಂದು ಪ್ರತಿಯನ್ನು ನಿಮ್ಮ ಶಾಲೆಯ ಪುಸ್ತಕಭಂಡಾರಕ್ಕೆ ಕೊಡು ಎಂದು ನಾನು ನನ್ನ ಮೊಮ್ಮಗಳಿಗೆ ಹೇಳಿದಾಗ ಅವಳು ತಕ್ಷಣ ಉತ್ತರಿಸಿದ್ದು: ನಮ್ಮ ಸ್ಕೂಲಲ್ಲಿ ಕನ್ನಡ ಪುಸ್ತಕ ಲೈಬ್ರರಿಯಲ್ಲಿ ಇಡುವಂತಿಲ್ಲ! ಸರ್ಕಾರ ಇಂಥ ಕಡೆ ಮಧ್ಯೆ ಪ್ರವೇಶಿಸಬೇಕಾದ ಅಗತ್ಯವಿದೆ. ಶಿಕ್ಷಣ ಇಲಾಖೆ ಈ ಕೆಲಸವನ್ನು ತಕ್ಕ ಮಟ್ಟಿಗೆ ಮಾಡುತ್ತಾ ಇದೆ. ಆಯ್ದ ಪುಸ್ತಕಗಳನ್ನು ಹಳ್ಳಿ ಹಳ್ಳಿಯ ಶಾಲೆಗಳಿಗೆ ಉಚಿತವಾಗಿ ಹಂಚುವ ಕಾರ್ಯಕ್ರಮ. ಈ ಯೋಜನೆ ಇನ್ನೂ ವಿಸ್ತೃತವಾಗಬೇಕು. ಬೆಂಗಳೂರಿನ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಿಗೂ ಕನ್ನಡ ಪುಸ್ತಕಗಳನ್ನು ಹಂಚಬೇಕು. ಬಿಟ್ಟಿ ಸಿಕ್ಕುವಾಗ ಯಾರೂ ಬೇಡಾ ಅನ್ನಲಾರರು. ಕನ್ನಡ ಭಾಷೆಯನ್ನ ಒಂದು ಭಾಷೆಯಾಗಿಯಾದರೂ ಕಲಿತ ಮಕ್ಕಳಿಗೆ ವಿಶೇಷ ಅನುಕೂಲಗಳನ್ನು ಸರ್ಕಾರ ಕಲ್ಪಿಸಬೇಕು. ಶಿಷ್ಯವೇತನಗಳನ್ನು ಕೊಡಬೇಕು. ಮುಂದೆ ಅವರು ವೈದ್ಯಕೀಯ, ತಾಂತ್ರಿಕ ಕಾಲೇಜುಗಳಲ್ಲಿ ಓದುವ ಅವಕಾಶ ಕಲ್ಪಿಸಬೇಕು...(ಈಗ ಕಲ್ಪಿಸಿರುವ ಪ್ರೋತ್ಸಾಹ ಏನೇನೂ ಸಾಲದು)!ಇದೆಲ್ಲಾ ಇನ್ನೊಬ್ಬರು ಮಾಡಬೇಕಾದದ್ದು. ಸ್ವತಃ ನಾವು ಮಾಡಬಹುದಾದದ್ದು ಏನು? ಮಕ್ಕಳಿಗೆ ಮನೆಯಲ್ಲೇ ಕನ್ನಡ ಓದಲು ಬರೆಯಲು ಹೇಗಾದರೂ ಮಾಡಿ ಕಲಿಸುವುದು. ಅವರಿಗೆ ಅತ್ತ್ಯುತ್ತಮ ಕನ್ನಡ ಪುಸ್ತಕಗಳನ್ನು ಕೊಂಡುಕೊಟ್ಟು ಅವರ ಕೋಣೆಯಲ್ಲಿ ಪುಟ್ಟ ಒಂದು ಕನ್ನಡ ಪುಸ್ತಕ ಭಂಡಾರ ತೆರೆಯುವುದು.ನಮ್ಮ ಭಾಷೆಯನ್ನು ಮೊದಲು ನಾವು ಪ್ರೀತಿಸತೊಡಗುವುದು. ನಾವು ನಮ್ಮ ಭಾಷೆಯನ್ನು ಪ್ರೀತಿಸ ತೊಡಗಿದರೆ ಮಕ್ಕಳಿಗೂ ನಮ್ಮ ಭಾಷೆಯ ಬಗ್ಗೆ ಗೌರವ ಅಭಿಮಾನ ಆದರ ಮೂಡುವುದು.....ಮಕ್ಕಳೊಂದಿಗೆ ಅಗಾಗ ನಾವು ಕನ್ನಡ ಪುಸ್ತಕದ ಅಂಗಡಿಗಳಿಗೆ ಭೆಟ್ಟಿಕೊಡುವುದು ಒಳ್ಳೆಯ ಪರಿಣಾಮ ಬೀರಬಲ್ಲುದು...ಯಾವುದೇ ಭಾಷೆ ಒಂದು ಸಾಮಾಜಿಕ ಪ್ರತಿಷ್ಠೆಯ ಸೂಚಿಯಾಗುವುದನ್ನು ಮಾತ್ರ ಹೇಗಾದರೂ ಮಾಡಿ ತಪ್ಪಿಸ ಬೇಕಾದದ್ದು ನಾವು ಮುಖ್ಯವಾಗಿ ಮಾಡಬೇಕಾದ ಕೆಲಸ....ಕೊನೆಗೂ ಕನ್ನಡ ಉಳಿಯಬೇಕಾದದ್ದು ಪುಸ್ತಕಗಳಲ್ಲಿ ಅಲ್ಲ; ನಮ್ಮ ಮಕ್ಕಳ ನಾಲಗೆ ಮೇಲೆ.
"ಉಳಿವುದು ಕನ್ನಡ ನಾಳೆ, ಉಳಿದರೆ ಮಕ್ಕಳ ನಾಲಗೆ ಮೇಲೆ"

7 comments:

  1. ನಮಸ್ಕಾರ ಸರ್,
    ಕರ್ನಾಟಕದಲ್ಲಿ (ಅದರಲ್ಲೂ ಬೆಂಗಳೂರಲ್ಲಿ) ಕನ್ನಡ ನವೆಂಬರ್ ತಿಂಗಳಲ್ಲಿ ಮಾತ್ರ ಧ್ವನಿವರ್ಧಕಗಳ ಮೂಲಕ ಉಸಿರಾಡಿಸುತ್ತದೆ. ಅದು ಬೇಸರದ ಸಂಗತಿ. ನಿಮ್ಮ ಪುಸ್ತಕ ಬಿಡುಗಡೆಯಾದ ನೆವದಲ್ಲಿ ಕನ್ನಡ ಕಾಳಜಿಯನು ಅಕ್ಕರೆಯಿಂದ ಅಕ್ಷರಕ್ಕಿಳಿಸಿದ ನಿಮ್ಮ ಪ್ರೀತಿಗೆ, ಅದರ ಸಂದೇಶಕ್ಕೆ ವಂದನೆಗಳು.

    ಪರದೇಶದಲ್ಲಿದ್ದೂ ಮಕ್ಕಳಿಗೆ ಮನೆಯಲ್ಲೇ ಕನ್ನಡ ಕಲಿಸುವುದರ ಜೊತೆಗೆ, ಮಕ್ಕಳು ಮನೆ ಬಿಟ್ಟು ಕಾಲೇಜಿಗೆ ಹೋದ ಮೇಲೂ ಅದನ್ನವರು ಮರೆಯದಂತೆ ಉಳಿಸಿಕೊಂಡು ಹೋಗಲು ನಾನು ಕಂಡ/ ನಡೆಸಿಕೊಂಡು ಬರುತ್ತಿರುವ ಒಂದುಪಾಯ: ಇಂಟರ‍್ನೆಟ್ ಮೂಲಕ ಮಗನ ಜೊತೆ chat ಮಾಡುವಾಗ ಕನ್ನಡದಲ್ಲೇ ಬರೆಯುವುದು. ಅವನಿಗೆ, ಅವನ ಕೆಲಸ ಮಾಡಿಕೊಂಡೂ ಕನ್ನಡ-ಇಂಗ್ಲಿಷ್ ಬದಲಾಯಿಸಿಕೊಂಡು, ನನಗೆ ಉತ್ತರಿಸಲು ಕಷ್ಟ ಎನ್ನುವ ಕಾರಣಕ್ಕೆ ಅವನು ಕನ್ನಡದಲ್ಲಿ ಉತ್ತರ ಬರೆಯುವುದಿಲ್ಲವಾದರೂ ನಾನು ಬರೆದದ್ದನ್ನು ಅರ್ಥೈಸಿಕೊಳ್ಳುತ್ತಾನೆ. ತಾಯಿಯಾಗಿ ಸದ್ಯಕ್ಕೆ ಅವನಿಂದ ಇದಕ್ಕಿಂತ ಹೆಚ್ಚಿನದನ್ನು ಅಪೇಕ್ಷಿಸಲಾರೆ (ಕಲಿಕೆಯಲ್ಲಿರುವ ಅವನ ಮೇಲೆ ಒತ್ತಡ ಹೇರುವ ಇಷ್ಟವಿಲ್ಲ).

    ReplyDelete
  2. ತಾಯಂದಿರು ಮನಸ್ಸು ಮಾಡಿದರೆ ಮಕ್ಕಳಲ್ಲಿ ಕನ್ನಡ ಪ್ರೀತಿ ಹುಟ್ಟಿಸುವುದು ಸಾಧ್ಯ.ಸರಳ ಕನ್ನಡ ಪದ್ಯಗಳನ್ನು ಹಾಡುವುದು,ಓದಿ ಅರ್ಥ ಹೇಳುವುದು,ಮನೆಯಲ್ಲಿ ಕಡ್ಡಾಯವಾಗಿ ಕನ್ನಡದಲ್ಲೆ ಮಾತನಾಡುವುದು,ಕನ್ನಡದಲ್ಲೆ ಕಥೆಗಳನ್ನು ಹೇಳುವುದು ಇವು ನಮ್ಮ ಮಗಳಿಗೆ ಕನ್ನಡದಲ್ಲಿ ಆಸಕ್ತಿ ಹುಟ್ಟಿಸಲು ನಾವು ಮಾಡಿದ ಉಪಾಯ.ನಮ್ಮ ಈ ಉಪಾಯ ಫಲ ಕೊಟ್ಟಿದೆ . ೧೦ ವರ್ಷದ ಮಗಳು ಈಗ ಕನ್ನಡದಲ್ಲಿ ಕೆಲವು ಚುಟುಕಗಳನ್ನು ಬರೆಯಲು ಪ್ರಾರಂಭಿಸಿದ್ದಾಳೆ.

    ReplyDelete
  3. ಕನ್ನಡ ನನ್ನ ಭಾಷೆ ಎಂಬುದು,ನನ್ನ ಅರಿವಿಗೆ ಬರಬೇಕು ಹಾಗೇ ಆದಾಗ ಎಲ್ಲರ ನಾಲಗೆಯ ಮೇಲು ಕನ್ನಡ ನಲಿದಾಡುವುದು. ಆ ದಿಸೆಯಲಿ ನಾವೆಲ್ಲಾ ಕೆಲಸ ಮಾಡಿದರೆ,ಕನ್ನಡದ ಸೇವೆಯಾದರು ಆದೀತು ಕಿಂಚ್ಚಿತ್ತು.ನಮ್ಮ ಕಡೆಯಿಂದ. ಧನ್ಯವಾದಗಳು.

    ReplyDelete
  4. ನಮಸ್ತೆ ಸಾರ್,
    ಪುಸ್ತಕ ಬಿಡುಗಡೆ ಸಮಾರಂಬಕ್ಕೆ ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. ಆದರೆ ಇಡೀ ಸಮಾರಂಬದ ಬಗ್ಗೆ ಒಂದು ಚಿತ್ರಣವನ್ನು ಒಬ್ಬರಿಂದ ಕೇಳಿ ಸಂತೋಷ ಪಟ್ಟೆವು. ಇಡೀ ಸಮಾರಂಬದ ಚಿತ್ರಣವನ್ನು ನಮ್ಮ ಕಣ್ಣ ಮುಂದೆ ಬರುವಂತೆ ವಿವರಿಸಿದ್ದು, ನಿಮ್ಮ ಬಾಲ್ಯದ ಗೆಳೆಯರಾದ ಶಂಕರ (ಜಿ.ಎಸ್.ಎಸ್.ರಾವ್) ಅವರು! ಈ ಪುಸ್ತಕದ ಹಲವಾರು ಹಾಡುಗಳನ್ನು ಈಗಾಗಲೇ ಓದಿ ಕೇಳಿ ಖುಷಿ ಪಟ್ಟಿದ್ದೇವೆ. ಈಗ ಸಮಗ್ರವಾಗಹಿ ಓದುವ ಅವಕಾಶ ಬಂದಿದೆ.

    ReplyDelete
  5. ಎಚ್ಚೆಸ್ವಿ ಸಾರ್, ನಿಮ್ಮನ್ನು ಬ್ಲಾಗ್ ಮನೆಯಲ್ಲಿ ನೋಡಿ, ನಿಮ್ಮನ್ನು ನಿಮ್ಮ ಮನೆಯಲ್ಲಿ ನೋಡಿದಷ್ಟೇ ಸಂತೋಷವಾಗುತ್ತಿದೆ.

    - ತ್ರಿವೇಣಿ

    ReplyDelete
  6. ಬ್ಲಾಗಿನಲ್ಲಿ ನಿಮ್ಮಂತಹ ಹಿರಿಯರನ್ನು ನೋಡುವುದೇ ಖುಷಿಯ ವಿಷಯ ಸರ್.

    ReplyDelete
  7. Harrah's Cherokee Casino - Mapyro
    Find Harrah's Cherokee Casino, 오산 출장샵 profile picture. Harrah's 통영 출장마사지 Cherokee Casino, 포항 출장마사지 profile picture. 경상남도 출장안마 Harrah's Cherokee 익산 출장마사지 Casino, profile picture.

    ReplyDelete