Friday, March 19, 2010

ಅಳಿಯಲಾರದ ನೆನಹು: ೧

ನನ್ನ ಪ್ರಾರಂಭದ ಕಾವ್ಯಾಭಾಸಗಳೆಲ್ಲಾ ರಚಿತವಾದದ್ದು ನಾನು ಮಲ್ಲಾಡಿಹಳ್ಳಿಯಲ್ಲಿ ಟೆಕ್ನಿಕಲ್ ಅಸಿಸ್ಟಂಟ್ ಆಗಿದ್ದಾಗ. ಏನು ಈ ಟೆಕ್ನಿಕಲ್ ಅಸ್ಸಿಸ್ಟಂಟ್ ಎಂದರೆ? ಅದಕ್ಕೆ ಸ್ವಲ್ಪ ಹಿನ್ನೆಲೆ ಕೊಡುವುದು ಅವಶ್ಯಕ. ನಾನು ಭದ್ರಾವತಿಯಲ್ಲಿ ಮೆಕಾನಿಕಲ್ ಇಂಜಿನೀರಿಂಗ್ ಡಿಪ್ಲೊಮೊ ಮಾಡಿದೆ. ಎಲ್ಲೂ ಕೆಲಸ ಸಿಗಲೊಲ್ಲದು. ಕೆಲಸವಿಲ್ಲದೆ ಮನೆಯಲ್ಲಿ ಕೂಡುವುದಕ್ಕೆ ನನಗೆ ಹಿಂಸೆ. ಆಗ ಚಿತ್ರದುರ್ಗದಲ್ಲಿ ಒಂದು ವರ್ಕ್ಷಾಪಿನಲ್ಲಿ ದಿನಗೂಲಿಯಾಗಿ ಒಂದು ವರ್ಷ ಕೆಲಸ ಮಾಡಿದೆ. ಆಗ ಮಲ್ಲಾಡಿಹಳ್ಳಿಯಲ್ಲಿ ವಿವಿಧೋದ್ದೇಶ ಪ್ರೌಢಶಾಲೆ ಇರುವುದೂ, ಅಲ್ಲಿ ಡಿಪ್ಲೊಮೊ ಮಾಡಿರುವ ಒಬ್ಬರನ್ನು ಕ್ರಾಫ್ಟ್ ಟೀಚರ್ ಆಗಿ ತೆಗೆದುಕೊಳ್ಳುತ್ತಾರೆಂಬುದೂ, ಸದ್ಯ ಆ ಹುದ್ದೆ ಮಲ್ಲಾಡಿಹಳ್ಳಿಯಲ್ಲಿ ಖಾಲಿ ಇರುವುದೂ ತಿಳಿದು, ಮಲ್ಲಾಡಿಹಳ್ಳಿಗೆ ದೌಡುಹೊಡೆದೆ. ರಾಘವೇಂದ್ರಸ್ವಾಮೀಜಿಯವರನ್ನು(ಅವರು ತಿರುಕ ಎಂದು ಪ್ರಸಿದ್ಧರು)ಭೆಟ್ಟಿ ಮಾಡಿ ನನ್ನ ಪಾಡು ತೋಡಿಕೊಂಡೆ. ಹಾಗೇ ಮಾತಾಡುತ್ತಾ ಮಾತಾಡುತ್ತಾ ಅವರ ಅನೇಕ ಪುಸ್ತಕಗಳ ಪ್ರಸ್ತಾಪವೂ ಬಂದಿತು. ಓದಿನ ಹುಚ್ಚು ಹಚ್ಚಿಕೊಂಡ ನಾನು ಆ ವೇಳೆಗೆ ಕೈಗೆ ಸಿಕ್ಕಿದ್ದೆಲ್ಲಾ ಓದುವ ಚಟ ಇದ್ದವನಾದುದರಿಂದ ಸ್ವಾಮೀಜಿಯವರ ಮೂರು ನಾಲಕ್ಕು ಪುಸ್ತಕಗಳನ್ನೂ ಅದೃಷ್ಟವಶಾತ್ ಓದಿದ್ದೆ. ನಾನು ಅವರ ಪುಸ್ತಕ ಓದಿರುವುದು ತಿಳಿದು ಸ್ವಾಮೀಜಿ ಅವರಿಗೆ ಸಹಜವಾಗಿಯೇ ಖುಷಿಯಾಯಿತು. ಲೇಖಕರೆಲ್ಲರ ದೌರ್ಬಲ್ಯವಲ್ಲವೇ ಅದು?! ನನ್ನ ಡಿಪ್ಲೊಮೋದ ಅಂಕಗಳಿಗಿಂತ ನಾನು ಒಬ್ಬ ಸಾಹಿತ್ಯದ ಹುಚ್ಚ ಎಂಬುದು, ಅದರಲ್ಲೂ ನಾನು ಸ್ವಾಮೀಜಿ ಅವರ ಅನೇಕ ಪುಸ್ತಕ ಓದಿದವನು ಎಂಬುದೂ ನನ್ನ ಬಗ್ಗೆ ಅವರಿಗೆ ಸದಭಿಪ್ರಾಯ ಹುಟ್ಟುವಂತೆ ಮಾಡಿತೇನೋ! ಈ ಟೆಕ್ನಿಕಲ್ ಅಸ್ಸಿಸ್ಟಂಟ್ ಎಂಬ ಹುದ್ದೆ ನನಗೆ ಸಿಕ್ಕೇ ಬಿಟ್ಟಿತು. ಮುನ್ನೂರು ರೂಪಾಯಿ ಮಾಹೆಯಾನೆ ಸಂಬಳ. ಸ್ವರ್ಗ ಒಂದೇ ಗೇಣು ಎಂಬಂತಾಯಿತು. ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ಕಬ್ಬಿಣ ಕೆಲಸ, ಮರಗೆಲಸ, ಲೇತ್ ವರ್ಕ್, ಇಂಜಿನೀರಿಂಗ್ ಡ್ರಾಯಿಂಗ್ ಮೊದಲಾದುವನ್ನು ಕಲಿಸುವ ಕೆಲಸ ಅದು. ಮುಖ್ಯೋಪಾಧ್ಯಾಯರು ಟಿ.ಎಸ್.ಆರ್. ನನ್ನ ಸಾಹಿತ್ಯದ ಆಸಕ್ತಿ ಅವರ ಗಮನಕ್ಕೂ ಬಂತು. ಗಣಿತದಲ್ಲೂ ನನಗೆ ತುಂಬಾ ಅಸಕ್ತಿ ಇತ್ತು.(ನನಗೆ ಗಣಿತ ಕಲಿಸಿದ ಅರ್.ಎಸ್.ಎಂ ಕೃಪೆ). ಟಿ ಎಸ್ ಆರ್ ಹೇಳಿದರು: ನೀವು ಕನ್ನಡ ಮತ್ತು ಗಣಿತದ ಕ್ಲಾಸುಗಳನ್ನೂ ತೆಗೆದುಕೊಳ್ಳಿ! ಹೀಗೆ ನಾನು ನನಗೆ ಬಹು ಪ್ರಿಯವಾದ ವಿಷಯಗಳಾದ ಕನ್ನಡ ಮತ್ತು ಗಣಿತ ಎಂಟನೇ ಕ್ಲಾಸಿಗೆ ಕಲಿಸುವ ಮೇಷ್ಟ್ರೂ ಆದೆ. ಇದು ಮಕ್ಕಳಿಗೆ ಕಲಿಸುವ ನನ್ನ ಹುಚ್ಚನ್ನು ನೂರ್ಮಡಿಗೊಳಿಸಿತು. ಈಗ ಖ್ಯಾತ ವೈದ್ಯರಾಗಿರುವ ಡಾ ಎಚ್ ಎಸ್ ವೆಂಕಟೇಶ ಮೂರ್ತಿ( ವಿಮರ್ಶಕ ರಾಘವೇಂದ್ರರಾವ್ ಅವರ ಸೋದರ), ಚಲನಚಿತ್ರ ಜಗತ್ತಲ್ಲಿ ಹೆಸರು ಮಾಡಿರುವ ರಾಮದಾಸ ನಾಯ್ಡು ನನ್ನ ವಿದ್ಯಾರ್ಥಿಗಳಾದದ್ದು ಆ ದಿನಗಳಲ್ಲೇ! ನಾನು ಅವರಿಗೆ ಈವತ್ತೂ ಪ್ರೀತಿಯ ಮೇಷ್ಟ್ರಾಗಿದ್ದರೆ ಅದಕ್ಕೆ ಕಾರಣ ಕನ್ನಡ ಮತ್ತು ಗಣಿತದ ನನ್ನ ತರಗತಿಗಳು! ನಮ್ಮ ಮುಖ್ಯೋಪಾಧ್ಯಾಯರಾಗಿದ್ದ ಟಿ ಎಸ್ ರಾಮಚಂದ್ರಮೂರ್ತಿಗಳು, ಅದೇ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಜಿ.ಎಲ್.ರಾಮಪ್ಪ, ಇಂಗ್ಲಿಷ್ ಮೇಷ್ಟ್ರಾಗಿದ್ದ ಕತೆಗಾರ ಎನ್ ಎಸ್ ಚಿದಂಬರ ರಾವ್ ಇವರೆಲ್ಲಾ ಪುಸ್ತಕದ ಹುಚ್ಚರೇ. ನಮ್ಮ ಶಾಲೆಯ ಲೈಬ್ರರಿಯಲ್ಲಿ ಅತ್ತ್ಯುತ್ತಮ ಕನ್ನಡ ಇಂಗ್ಲಿಷ್ ಗ್ರಂಥಗಳು ಸಾವಿರಾರು ಸಂಖ್ಯೆಯಲ್ಲಿ ಶೇಖರಗೊಂಡಿದ್ದವು. ನನ್ನ ವರ್ಕ್ಷಾಪಿನ ಪಕ್ಕದಲ್ಲೇ ಲೈಬ್ರರಿ. ಸರಿ. ನಾನು ಅಲ್ಲಿ ಹೊಕ್ಕೆನೆಂದರೆ ಮುಗಿಯಿತು. ಕಾರಂತರು, ರಾವ್ಬಹದ್ದೂರ್, ಅನಕೃ, ತರಾಸು, ಕಟ್ಟೀಮನಿ, ಆನಂದಕಂದ , ಗೊರೂರು, ಮುಂತಾದ ಅನೇಕ ಮಹನೀಯರು ನನಗೆ ಆಪ್ತರಾಗಿ ಪರಿಣಮಿಸಿದ್ದು ಆ ಲೈಬ್ರರಿಯಲ್ಲಿ. ದೇವತೆಗಳಂತೆ ಈ ಲೇಖಕರೂ ಪರೋಕ್ಷಪ್ರಿಯರೇ! ಇವರೆಲ್ಲ ನಮ್ಮ ಮನೆಯ ಹಿರಿಯರು ಎಂಬಂತೆ ಆಗಿಬಿಟ್ಟರು! ಮಲ್ಲಾಡಿಹಳ್ಳಿಯ ಆಶ್ರಮದಲ್ಲಿ ಪ್ರತಿವರ್ಷ ಗಣೇಶೋತ್ಸವ ಭರ್ಜರಿಯಾಗಿ ನಡೆಯುತ್ತಾ ಇತ್ತು. ದೊಡ್ಡ ದೊಡ್ಡ ಸಾಹಿತಿಗಳೂ, ಸಂಗೀತಗಾರರೂ ಅಲ್ಲಿಗೆ ಬರುತ್ತಾ ಇದ್ದರು. ನಾನು ಮೊಟ್ಟಮೊದಲು ಎಸ್.ವಿ.ರಂಗಣ್ಣ, ರಂ ಶ್ರೀ ಮುಗಳಿ, ಕೆ ವೆಂಕಟರಾಮಪ್ಪ, ಪುತಿನ, ತರಾಸು, ಅನಂತಮೂರ್ತಿ, ಮೊದಲಾದವರನ್ನು ಹತ್ತಿರದಿಂದ ನೋಡಿದ್ದು ಮಲ್ಲಾಡಿಹಳ್ಳಿಯ ಹೈಸ್ಕೂಲಿನಲ್ಲಿ ಈ ಟೆಕ್ನಿಕಲ್ ಅಸಿಸ್ಟಂಟ್ ಎಂಬ ನನ್ನ ಜೀವಾಧಾರ ವೃತ್ತಿಯನ್ನು ಆಶ್ರಯಿಸಿದ್ದಾಗಲೇ! ಆ ಕಾಲದಲ್ಲಿ ನಾನು ಕಂಡ ಅತ್ಯದ್ಭುತ ಭಾಷಣಕಾರರೆಂದರೆ ಕೆ ವೆಂಕಟರಾಮಪ್ಪನವರು.ಎಂಥ ಪ್ರಾಸಾದಿಕ ವಾಣಿ ಅವರದ್ದು. ಕುಮಾರವ್ಯಾಸ ಕಾವ್ಯದ ಬಗ್ಗೆ ಅವರ ಅನೇಕ ಉಪನ್ಯಾಸಗಳನ್ನು ಕೇಳಿ ನಾನು ಮರುಳಾಗಿಯೇ ಹೋಗಿದ್ದೆ! ಪದ್ಯಗಳು ಪುಂಖಾನುಪುಂಖವಾಗಿ ಅವರ ಬಾಯಿಂದ ಹೊರಹೊಮ್ಮುತ್ತಾ ಇದ್ದವು. ಕಂಚಿನ ಕಂಠ. ಅಸ್ಖಲಿತ ವಾಣಿ. ಅವರ ಉಪನ್ಯಾಸವೆಂದರೆ ದೊಡ್ಡವರಿರಲಿ ಮಕ್ಕಳು ಕೂಡಾ ಮಂತ್ರಮುಗ್ಧರಾಗಿ ಆಲಿಸುತ್ತಾ ಇದ್ದರು. ಮಾತಿನಿಂದಲೂ ನೂರಾರು ಮಂದಿಯನ್ನು ಹೀಗೆ ಮಂತ್ರಮುಗ್ಧಗೊಳಿಸಬಹುದೆಂಬುದು ನನಗೆ ತಿಳಿದಿದ್ದು ಕೆ ವೆಂಕಟರಾಮಪ್ಪನವರ ಮಾತುಗಳನ್ನು ಕೇಳಿದ ಮೇಲೆಯೇ! ಆ ಕಾಲದಲ್ಲಿ ಅವರೇ ನನ್ನ ಆದರ್ಶ ವಾಗ್ಮಿ. ಪುತಿನ ತಮ್ಮ ದಿವ್ಯವಾದ ತೇಜಸ್ಸಿನಿಂದ ನನ್ನನ್ನು ಆಕರ್ಷಿಸಿದ್ದರು. ಕೆಂಪಗೆ ಅವರ ತುಟಿಗಳು ಬಣ್ಣ ಬಳಿದ ಹಾಗೆ ಇರುತ್ತಾ ಇದ್ದವು. ತಲೆಯ ಮೇಲೆ ಒಂದು ಖಾದಿ ಟೋಪಿ. ಅವರೂ ಗೊರೂರೂ ಒಟ್ಟಿಗೇ ಮಲ್ಲಾಡಿಹಳ್ಳಿಗೆ ಬಂದಿದ್ದರು. ಅವರಿಬ್ಬರನ್ನೂ ಕರೆದುಕೊಂಡು ಹೋಗಿ ನಮ್ಮ ಹುಡುಗರು ಬರೆದಿದ್ದ ಕೆಲವು ಬರೆಹ ತೋರಿಸುವ ಜವಾಬುದಾರಿಯನ್ನು ಟಿ ಎಸ್ ಆರ್ ನನಗೆ ಒಪ್ಪಿಸಿದರು. ಜೀಕ್ ಜೀಕ್ ಜೋಡಿನ ಸದ್ದು ಮಾಡುತ್ತಾ ಗಟ್ಟಿಯಾಗಿ ದಶ ದಿಕ್ಕುಗಳಲ್ಲೂ ತಮ್ಮ ಧ್ವನಿ ಮೊಳಗುವಂತೆ ಗೊರೂರು ಮಾತಾಡುತ್ತಿದ್ದರೆ, ಪುತಿನ ಅತಿ ಮೆಲ್ಲಗೆ, ತಮ್ಮ ಮಾತು ಬಹಳ ಪ್ರಶಸ್ತವಾದುದು, ಅದರಿಂದ ಅದು ಯಾರಿಗೂ ಕೇಳಿಸಲೇ ಬಾರದು ಎಂಬಂತೆ ಮಾತಾಡುತ್ತಾ ಇದ್ದರು. ಹುಡುಗರ ಪದ್ಯಗಳನ್ನು ಸುಮ್ಮನೆ ತಿರುವಿ ಹಾಕಿ ಗೊರೂರು ಮುಂದೆ ನಡೆದರೆ, ಪುತಿನ ಒಂದು ಪದ್ಯ ಹಿಡಿದುಕೊಂಡು ನಿಂತಲ್ಲೇ ನಿಂತು ಬಿಟ್ಟರು. ಈ ಸಾಲು ತುಂಬ ಚೆನ್ನಾಗಿದೆ. ಯಾರು ಈ ಹುಡುಗಿ? ಅವಳನ್ನು ಕರೆಸಿ. ನಾನು ನೋಡಬೇಕು- ಎಂದು ಪುತಿನ ನನಗೆ ದುಂಬಾಲು ಬಿದ್ದರು. ಆ ಹುಡುಗಿ ಕಲ್ಪನಾ . ನನ್ನ ಮಿತ್ರರಾಗಿದ್ದ ಪೋಸ್ಟ್ ಮಾಸ್ಟರ್ ಕಾಮತ್ತರ ತಂಗಿ. ಒಂಭತ್ತನೇ ಕ್ಲಾಸಿನ ವಿದ್ಯಾರ್ಥಿನಿ. ಅವಳನ್ನು ಕರೆಸಿ ಪುತಿನ ಮುಂದೆ ನಿಲ್ಲಿಸಿದೆವು. ಪುತಿನ ಆ ಹುಡುಗಿಯ ಬೆನ್ನು ತಟ್ಟಿ, ಚೆನ್ನಾಗಿ ಬರೀತೀ ನೀನು. ಎಷ್ಟು ಮಾತ್ರಕ್ಕೂ ಬರೆಯೋದು ನಿಲ್ಲಿಸ ಬೇಡ. ಇನ್ನೊಬ್ಬ ಗೌರಮ್ಮ ಆಗುತೀ ನೀನು! ಎಂದು ಏನೇನೋ ಮಾತಾಡಿದರು. ಹುಡುಗಿ ನಾಚಿಕೆಯಿಂದ ಕುಗ್ಗಿಹೋಗಿದ್ದಳು. ಸಂಜೆ ವ್ಯಾಸಪೀಠದಲ್ಲಿ ಪುತಿನ ಭಾಷಣ.(ಇದು ೧೯೬೭ ಅಥವಾ ೬೮ ನೇ ಇಸವಿ ಇರಬಹುದು). ಪುತಿನ ಮಾತಾಡಲಿಕ್ಕೆ ಶುರು ಮಾಡಿದರು. ಅವರ ಧ್ವನಿ ಯಾರುಗೂ ಕೇಳಿಸುತ್ತಿಲ್ಲ. ವಾಲ್ಯೂಮ್ ಜಾಸ್ತಿ ಮಾಡಿದ ನಮ್ಮ ಸೌಂಡ್ ಸಿಸ್ಟಮ್ ಎಕ್ಸ್ಪರ್ಟ್ ಗುಡ್ಡಪ್ಪ. ಮೈಕ್ ಬೇಸರದಿಂದ ಜೋರಾಗಿ ಕಿರುಚಿಕೊಳ್ಳ ತೊಡಗಿತು. ಟಿ ಎಸ್ ಆರ್ ಗುಡ್ಡಪ್ಪನ ಮೇಲೆ ಕಣ್ಣು ಕಣ್ಣು ಬಿಡತೊಡಗಿದರು. ವಾಲ್ಯೂಮ್ ಕಮ್ಮಿ ಮಾಡಿದ್ದಾಯಿತು. ಪುತಿನ ನಿಮಿರಿ ನಿಮಿರಿ ಅಂಗಾಲಲ್ಲಿ ನಿಲ್ಲುತ್ತಾ, ಮುಂಗಾಲಲ್ಲಿ ನಿಲ್ಲುತ್ತಾ ಏನೂ ಸ್ವಗತ ಸಂಭಾಷನೇ ನಡೆಸೇ ಇದ್ದರು. ಅದು ಯಾರಿಗೂ ಕೇಳುವಂತಿಲ್ಲ. ಮಹಾಕವಿಯ ವಾಣಿ ಕೇಳಬೇಕೆಂದು ಎಲ್ಲರಿಗೂ ಆಸಕ್ತಿ. ಆದರೆ ಮೈಕಿಗೂ ಕವಿಗೂ ಹೊಂದಾಣಿಕೆಯೇ ಆಗವಲ್ಲದು. ಗುಡ್ಡಪ್ಪನಿಗೆ ಸಹಾಯ ಮಾಡಲು ಮತ್ತೆ ಕೆಲವರು ಬಂದರು. ಈ ಹಿಂಸೆ ತಾಳಲಾರದೆ ಮೈಕ್ ಮತ್ತೆ ಕೀರಲು ಧ್ವನಿಯಲ್ಲಿ ಆರ್ತನಾದ ಮಾಡತೊಡಗಿತು. ಈ ಯಾವುದರ ಪರಿವೆಯೇ ಇಲ್ಲದೆ ಪುತಿನ ತಮ್ಮ ಪಾಡಿಗೆ ತಾವು ಮಾತಾಡುತ್ತಲೇ ಇದ್ದಾರೆ. ಮೈಕ್ ಆಫೇ ಮಾಡಿಬಿಡಿ ಎಂದು ಸ್ವಾಮೀಜಿ ಆಜ್ಞಾಪಿಸಿದರು. ಪುತಿನ ಮಾತಾಡುವುದು ಈಗ ಸ್ವತಃ ಅವರಿಗೂ ಕೇಳದಾಯಿತು. ಹೀಗೆ ಕವಿವರ್ಯರ ಮೊದಲ ಭಾಷಣ ಒಂದು ನಿಗೂಢ ಪಾತಳಿಯಲ್ಲಿ ಸಂಭವಿಸಿತೆಂಬುದನ್ನು ನಾನು ಮರೆಯುವಂತೆಯೇ ಇಲ್ಲ! ಅನಂತಮೂರ್ತಿಗಳು ಬಂದಾಗ ವ್ಯಾಸಪೀಠದ ಪಬ್ಲಿಕ್ ಭಾಷಣ ಮಾಡಿದ್ದಾದ ಮೇಲೆ, ವಿದ್ಯಾರ್ಥಿಗಳನ್ನೇ ಕುರಿತು ಮಾತಾಡುವ ಅಪೇಕ್ಷೆ ವ್ಯಕ್ತಪಡಿಸಿದರು. ನಮ್ಮ ಹುಡುಗರಿಗೆ ಅನಂತಮೂರ್ತಿ ಏನು ಮಾತಾಡುತ್ತಾರೆ ಎಂದು ನನಗೆ ಕುತೂಹಲ. ನಾನು ಅಡಿಗರ ರಾಮನವಮಿಯ ದಿವಸ ಪದ್ಯದ ಬಗ್ಗೆ ಹುಡುಗರಿಗೆ ಮಾತಾಡಲೋ ಎಂದು ಅನಂತಮೂರ್ತಿ ಕೇಳಿದರು. ಹುಡುಗರಿಗೆ ರಾಮನವಮಿ ದಿವಸ ಹೇಗೆ ವಿವರಿಸುತ್ತಾರೆ ಅಂತ ನನಗೆ ಕುತೂಹಲ. ಆ ಪದ್ಯ ನಿಮ್ಮ ಲೈಬ್ರರಿಯಲ್ಲಿ ಸಿಕ್ಕರೆ ತಂದುಕೊಡಿ ಎಂದು ಅನಂತಮೂರ್ತಿ ಹೇಳಿದರು. ಪದ್ಯವೇನೋ ನನ್ನ ಬಳಿಯೇ ಇದೆ ಎಂದೆ ನಾನು! ಏನು ನೀವು ಇಲ್ಲಿ ಸಾಹಿತ್ಯ ಕಲಿಸೋ ಮೇಷ್ಟ್ರ್‍ಏ ಎಂದರು ಅನಂತಮೂರ್ತಿ. ಅಲ್ಲ. ನಾನು ಕ್ರಾಪ್ಟ್ ಟೀಚರ್ ಎಂದೆ. ನೀವು ಅಡಿಗರನ್ನು ಓದುತ್ತೀರಾ ಎಂದರು! ಸಾಕ್ಷಿ ಕೂಡಾ ನಾನು ತರಿಸುತ್ತೇನೆ ಎಂದೆ. ಅನಂತಮೂರ್ತಿ ಪ್ರೀತಿಯಿಂದ ನನ್ನ ಬೆನ್ನು ತಟ್ಟಿ ನಡೀರಿ ನಿಮ್ಮ ಮನೆಗೆ ಹೋಗೋಣ ಎಂದರು. ಆಶ್ರಮದಲ್ಲಿ ರೈಲ್ವೇ ಕ್ಯಾಬನ್ನಿನಂತಹ ಅಧ್ಯಾಪಕರ ವಸತಿಗೃಹಗಳಿದ್ದವು. ನಾನು ಅನಂತಮೂರ್ತಿಗಳನ್ನು ನಮ್ಮ ಮನೆಗೆ ಕರೆದೊಯ್ದೆ! ನನ್ನ ಪುಸ್ತಕ ಸಂಗ್ರಹ ನೋಡಿ ಅವರಿಗೆ ಸಂತೋಷವಾಯಿತು. ಆ ವೇಳೆಗೆ ನನ್ನ ಪರಿವೃತ್ತ ಎಂಬ ಮೊದಲ ಕವಿತಾ ಸಂಗ್ರಹ ಹೊರಬಿದ್ದಿತ್ತು! ಅಡಿಗರ ರಾಮನವಮಿ ಜೊತೆಗೆ ನನ್ನ ಪುಸ್ತಕವನ್ನೂ ಅನಂತಮೂರ್ತಿ ಕೈಗೆ ಹಾಕಿದೆ. ಅವರು ಪದ್ಯಗಳನ್ನು ಒಮ್ಮೆ ತಿರುವಿ ನೋಡಿ, ಬರೀತಾ ಹೋಗಿ ಎಂದರು! ನನ್ನ ಪದ್ಯಗಳು ಅವರಲ್ಲಿ ಯಾವ ಉತ್ಸಾಹವನ್ನೂ ಮೂಡಿಸಿಲ್ಲ ಎನ್ನುವುದು ಗೊತ್ತಾಗಿ ನನಗೆ ಸ್ವಲ್ಪ ಉತ್ಸಾಹ ಭಂಗವಾಯಿತಾದರೂ, ಸದ್ಯ, ಬರೆಯುವುದು ನಿಲ್ಲಿಸಿ ಎಂದು ಅವರು ಹೇಳಲಿಲ್ಲವಲ್ಲ. ಸದ್ಯ ಬಚಾವಾದೆ ಅಂದುಕೊಂಡೆ! ಹೈಸ್ಕೂಲಲ್ಲಿ ಲೈಬ್ರರಿಯ ಮುಂದಿದ್ದ ದೊಡ್ಡ ಹಾಲಲ್ಲಿ ಎಲ್ಲ ತರಗತಿಯ ಹುಡುಗರನ್ನೂ ಜಮಾಯಿಸಿದೆವು. ನಮ್ಮ ಅಧ್ಯಾಪಕರಲ್ಲಿ ಮಹಾನ್ ವಾಗ್ಮಿ ಎಂದು ಹೆಸರಾಗಿದ್ದ ಜಿ ಎಲ್ ಆರ್, ಅನಂತಮೂರ್ತಿಯನ್ನು ಸ್ವಾಗತಿಸಿ ಅವರಿಗೆ ಮಾತಾದಲಿಕ್ಕೆ ವೇದಿಕೆ ತೆರವು ಮಾಡಿದರು. ಅನಂತಮೂರ್ತಿ ರಾಮನವಮಿ ದಿವಸ ಕವಿತೆ ಬಗ್ಗೆ ಒಂದು ಗಂಟೆ ನಮ್ಮ ಹಳ್ಳಿಯ ಹುಡುಗರ ಎದುರು ಮಾತಾಡಿದರು. ಯಾರಿಗೆ ಎಷ್ಟು ಅರ್ಥವಾಯಿತೋ!? ನನಗೆ ಅರ್ಥವಾದದ್ದು ಇಷ್ಟು: ಈ ವ್ಯಕ್ತಿಗೆ ಕಾವ್ಯ ಅಂದರೆ ಜೀವ!
*****

Saturday, February 13, 2010

ಕವಿತೆ,ಕಥೆ,ನಾಟಕ,ಇತ್ಯಾದಿ.....

ಪ್ರಿಯ ಓದುಗಾ,

ನಾಳೆ ನನ್ನ ಸಮಗ್ರ ಕಾವ್ಯ, ಸಮಗ್ರ ಕಥೆ, ಸಮಗ್ರ ಮಕ್ಕಳ ನಾಟಕ ಬಿಡುಗಡೆಯಾಗಲಿವೆ. ಸ್ಥಳ: ರವೀಂದ್ರ ಕಲಾಕ್ಷೇತ್ರ. ಸಮಯ: ಬೆಳಿಗ್ಗೆ ಹತ್ತು. ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ: ಡಾ ಜಿಎಸ್ಸೆಸ್, ಡಾ ಅನಂತಮೂರ್ತಿ, ಡಾ ಸಿ ಎನ್ ರಾಮಚಂದ್ರನ್, ಪ್ರೊ ಗೋವಿಂದ ರಾವ್, ಜಿ.ಎನ್.ಮೋಹನ್, ಸಿ.ಆರ್.ಸಿಂಹ, ಎಂ ಡಿ ಪಲ್ಲವಿ, ರಾಘವೇಂದ್ರ ಪಾಟೀಲ, ಡಾ ಬೈರೇಗೌಡ, ಟಿ ಎಸ್ ಛಾಯಾಪತಿ. ನಿಮ್ಮಲ್ಲಿ ಪ್ರೀತಿಯ ಕೋರಿಕೆ: ದಯಮಾಡಿ ನೀವೂ ಬನ್ನಿ.


ತಾನು ಬರೆದದ್ದನ್ನು ಒಟ್ಟಿಗೇ ಹೀಗೆ ಜೋಡಿಸಿಕೊಡುವವಾಗ ತಾನು ಇಷ್ಟೆಲ್ಲಾ ಬರೆದದ್ದುಂಟಾ ಎಂದು ಲೇಖಕನಿಗೇ ಆಶ್ಚರ್ಯವಾಗುತ್ತದೆ. ಒಟ್ಟು ಸಂಗ್ರಹಗಳು ಬಂದ ಮೇಲೆ ಆಸಕ್ತರು ದಶಕಗಳ ಹಿಂದಿನ ಬಿಡಿಪ್ರತಿಗಳಿಗಾಗಿ ತಡಕಾಡುವ ಅಗತ್ಯವಿರುವುದಿಲ್ಲ. ದಪ್ಪ ಪುಸ್ತಕ ರ್‍ಯಾಕಿನಲ್ಲಿ ಇದ್ದಾಗ ಅದು ಕಣ್ಣುತಪ್ಪಿಹೋಗುವ ಭಯವಿಲ್ಲ! ಬೇಡವೆಂದರೆ ನಾವೇ ಮರೆಸಿ ಇಡಬೇಕಷ್ಟೆ!


ಈ ಕೃತಿಗಳನ್ನು ಕಣ್ಣ ಮುಂದೆ ಹರಡಿಕೊಂಡು ಕೂತಾಗ, ನನ್ನ ಅನೇಕ ಹಳೆಯ ನೆನಪುಗಳು ಅಜ್ಞಾತದಿಂದ ನಿಧಾನಕ್ಕೆ ಮೇಲೇಳುವ ಬೆರಗು ವಿಶೇಷ ಖುಷಿ ಕೊಡುತ್ತದೆ. ಸಿಂದಾಬಾದನ ಆತ್ಮಕಥೆ ಸಾಕ್ಷಿಯಲ್ಲಿ ಪ್ರಕಟವಾದಾಗ ನನ್ನ ಪ್ರಿಯ ಮಿತ್ರ ಉಪಾಧ್ಯ(ಆಗಿನ್ನೂ ಡಾ ಆನಂದರಾಮ ಉಪಾಧ್ಯ ಆಗಿರಲಿಲ್ಲ) ನನ್ನ ಮನೆಗೆ ಬಂದು-"ಸಾಕ್ಷಿಯಲ್ಲಿ ನಿಮ್ಮ ಸಿಂದಾಬಾದನ ಆತ್ಮಕಥೆ ಓದಿ ನನ್ನ ಪರಿಚಯದ ಗೆಳೆಯರೊಬ್ಬರು ತುಂಬಾ ಇಷ್ಟಪಟ್ಟಿದ್ದಾರೆ. ನಿಮ್ಮನ್ನು ಪರಿಚಯಮಾಡಿಕೊಡಲು ಕೇಳಿದ್ದಾರೆ" ಎಂದರು. ಹೀಗೆ ಪದ್ಯವೊಂದರ ಮೂಲಕ ನನಗೆ ಹತ್ತಿರವಾದ ಗೆಳೆಯ ಕೆ.ಸತ್ಯನಾರಾಯಣ. ಆಗ ಅವರು ರಿಸರ್ವ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ಬಸವನಗುಡಿ ಪಾರ್ಕ್ ಬಳಿ ಒಂದು ವಟಾರದ ಮನೆಯಲ್ಲಿ ಅವರು ಗೆಳೆಯರೊಂದಿಗೆ ವಾಸವಾಗಿದ್ದರು(೧೯೭೭ರ ಸುಮಾರು). ಆಮೇಲೆ ಅದೆಷ್ಟು ಬಾರಿ ನಾವು ಆ ಪುಟ್ಟ ಮನೆಯಲ್ಲಿ ಕೂತು ಸಾಹಿತ್ಯದ ಬಗ್ಗೆ ಚರ್ಚಿಸಿದ್ದೇವೆಯೋ!
ತುಷಾರದಲ್ಲಿ ನನ್ನ ಪುಟ್ಟಾರಿಯ ಮತಾಂತರ ಪ್ರಕಟವಾಯಿತು. ಆ ಪುಟ್ಟಾರಿಯ ಮತಾಂತರ ಬರೆದದ್ದು ಚನ್ನಗಿರಿ ತಾಲ್ಲೋಕಿನ ತಾವರಕೆರೆ ಎಂಬ ಸಣ್ಣ ಊರಿನಲ್ಲಿ. ಅಲ್ಲಿ ನನ್ನ ಷಡ್ಕ ಎನ್ ಆರ್ ಕೆ ಶಾಲಾ ಅಧ್ಯಾಪಕರಾಗಿದ್ದರು. ನಾನು ರಜಾಕಾಲದಲ್ಲಿ ಬಂದು ಅವರಲ್ಲಿ ವಾರೊಪ್ಪತ್ತು ಇದ್ದು ಅಲ್ಲೇ ಒಂದು ಕಥೆಗಿತೆ ಬರೆಯಬೇಕೆಂಬುದು ಅವರ ಅಪೇಕ್ಷೆ!ಅದಕ್ಕಾಗಿ ಆ ಮಹಾರಾಯರು ಏನೆಲ್ಲಾ ಸಿದ್ಧತೆ ಮಾಡಿದ್ದರು! ನನಗಾಗಿ ಒಂದು ಖಾಲಿ ಮನೆಯನ್ನು ತೆರವುಗೊಳಿಸಿದ್ದರು. ಅಲ್ಲಿಗೆ ಹೊತ್ತು ಹೊತ್ತಿಗೆ ನನಗೆ ತಿಂಡಿ ಕಾಫಿ ಬರುತ್ತಾ ಇತ್ತು. ದಿನವೆಲ್ಲಾ ಬರೆಯುತ್ತಾ ಇದ್ದೆ. ರಾತ್ರಿ ಆಗಿನ್ನೂ ಚಿಕ್ಕವರಾಗಿದ್ದ ನನ್ನ ಷಡ್ಕರ ಮಕ್ಕಳು ಬರೆದದ್ದಷ್ಟನ್ನೂ ಓದಿ ಮತ್ತೆ ನಾಳೆ ಕಥೆಯ ಮುಂದಿನ ಭಾಗವನ್ನು ಓದುವುದಕ್ಕೆ ಕಾತರತೆಯಿಂದ ಸಿದ್ಧರಾಗುತ್ತಾ ಇದ್ದರು! ಆ ಕಥೆಯಲ್ಲಿ ಬರುವ ಸಾಹಸೀ ರೈತ ಭೋಜಣ್ಣ ಅಲ್ಲಿಯೇ ನಾನು ಕಂಡವರು! ತಮ್ಮ ಪಾತ್ರ ಕಥೆಯಲ್ಲಿ ಮೂಡುವುದನ್ನು ಓದಿ ಓದಿ ಅವರೂ ರೋಮಾಂಚಿತರಾಗುತ್ತಿದ್ದರು. ಹೀಗೆ ವಾಸ್ತವ ಕಲ್ಪನೆ ಎಲ್ಲವನ್ನೂ ಮಿದ್ದುಕೊಂಡು ನಿರ್ಮಾಣವಾದ ಕಥೆಯದು. ಅದನ್ನು ಮುಗಿಸಲಿಕ್ಕೆ ನಾನು ತೆಗೆದುಕೊಂಡ ಸಮಯ ಸರಿಯಾಗಿ ಒಂದು ವಾರ. ಮುಂದೆ ಪುಟ್ಟಾರಿಯ ಮತಾಂತರ ಪತ್ರಿಕೆಯಲ್ಲಿ ಪ್ರಕಟವಾದಾಗ , ಮೈಸೂರಿಂದ ಅನಿರೀಕ್ಷಿತವಾಗಿ ಕಾಳೇಗೌಡ ನಾಗವಾರರು ಪತ್ರವೊಂದನ್ನು ಬರೆದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾವು ಬೇರೆ ಬೇರೆ ತಾತ್ವಿಕತೆಯ ಲೇಖಕರಾಗಿದ್ದರೂ ಪರಸ್ಪರ ಮೆಚ್ಚುವ ಸೌಹಾರ್ದತೆ ಇದ್ದದ್ದು ನನಗೆ ಈವತ್ತೂ ತುಂಬ ಪ್ರಿಯವಾದ ಸಂಗತಿ ಅನ್ನಿಸುತ್ತಿದೆ.


ನನ್ನ ಒಣಮರದ ಗಿಳಿಗಳು ಎಂಬ ಕೃತಿಯ ಬಹಳಷ್ಟು ಕವಿತೆಗಳನ್ನು ಹುಚ್ಚುಹಿಡಿದವನ ಹಾಗೆ ನಾನು ಪರೀಕ್ಷೆಯ ಬಿಡುವಿನಲ್ಲಿ ಸ್ಟಾಫ್ ರೂಮಿನ ಏಕಾಂತದಲ್ಲಿ ಬರೆದದ್ದು. ಬರೆದ ಪದ್ಯಗಳನ್ನೆಲ್ಲಾ ಜೋಡಿಸಿ, ಕೀರ್ತನಾಥ ಕುರ್ತಕೋಟಿಯವರಿಗೆ ಮುನ್ನುಡಿ ಕೇಳಿ ಪದ್ಯಗಳನ್ನು ಕಳಿಸಿಕೊಟ್ಟೆ. ಆಗ ನನ್ನ ನೇರ ಪರಿಚಯವೂ ಅವರಿಗೆ ಇರಲಿಲ್ಲ. ಬರೆದರೆ ಬರೆಯುತ್ತಾರೆ, ಇಲ್ಲವಾದರೆ ಆಗುವುದಿಲ್ಲ ಎನ್ನುತ್ತಾರೆ! ಅಷ್ಟೇ ತಾನೆ ಎಂದುಕೊಂಡು ಒಂದು ಮೊಂಡು ಧೈರ್ಯದಲ್ಲಿ ಕವಿತೆಗಳನ್ನ ಕೀರ್ತಿಯವರಿಗೆ ಕಳಿಸಿ, ಈ ವಿಷಯ ನನ್ನ ಆಪ್ತಗೆಳೆಯರಿಗೂ ಹೇಳದೆ ತೆಪ್ಪಗೆ ನನ್ನ ದೈನಿಕದಲ್ಲಿ ತೊಡಗಿಕೊಂಡಿದ್ದೆ. ನಾನು ಕವಿತೆಗಳನ್ನು ಕಳಿಸಿ ಒಂದು ತಿಂಗಳಾಗಿರಬಹುದು. ಆವತ್ತು ನಮ್ಮ ಮನೆಗೆ ಪ್ರಿಯ ಮಿತ್ರರಾದ ಎಚ್.ಎಸ್.ಮಾಧವರಾವ್, ಮತ್ತು ನನ್ನ ಅತ್ಯಂತ ಪ್ರೀತಿಯ ವಿದ್ಯಾರ್ಥಿಮಿತ್ರ ಡಾ ಮೂರ್ತಿ ಊಟಕ್ಕೆ ಬಂದಿದ್ದರು. ಮೂರ್ತಿ ಲಂಡನ್ನಿನಲ್ಲಿ ಉನ್ನತ ವ್ಯಾಸಂಗ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದ್ದ ಸಂದರ್ಭ. ತ್ಯಾಗರಾಜನಗರದಲ್ಲಿ ಒಂದು ಸಣ್ಣ ಮನೆಯಲ್ಲಿ ಬಾಡಿಗೆಗಿದ್ದೆ. ನನ್ನ ಇಬ್ಬರು ಅಜ್ಜಿಯರು, ನನ್ನ ನಾಲ್ವರು ಮಕ್ಕಳು, ಪತ್ನಿ-ಎಲ್ಲಾ ಆ ಕಿಷ್ಕಿಂಧೆಯಲ್ಲಿ ಹೇಗೆ ಬದುಕುತ್ತಿದ್ದೆವೋ ಈವತ್ತು ಆಶ್ಚರ್ಯವಾಗುತ್ತದೆ. ಒಳಗೆ ಕೂತು ಬರೆಯುವುದಕ್ಕೆ ಜಾಗವಿರಲಿಲ್ಲ. ಹಾಗಾಗಿ ನನ್ನ ಬಹುಪಾಲು ಬರವಣಿಗೆಯನ್ನು ಒಂದು ಕಡ್ಡಿ ಚಾಪೆ ಹಾಕಿಕೊಂಡು ನಾಕಡಿ ಅಗಲದ ಕಾಂಪೌಂಡಿನ ಜಾಗದಲ್ಲಿ ಬರೆಯುತ್ತಾ ಇದ್ದೆ. ಆ ಪಾರಿವಾಳದ ಗೂಡಿಗೆ ಅಡಿಗರು, ಅನಂತಮೂರ್ತಿ, ಕಿರಂ, ಬಾಲು, ಸತ್ಯನಾರಾಯಣ, ಉಪಾಧ್ಯ, ರಾಮಚಂದ್ರಶರ್ಮ, ಎನ್.ಎಸ್.ಎಲ್, ಸುಬ್ಬಣ್ಣ, ಸಿ.ಅಶ್ವಥ್-ಇಂಥಾ ಘಟಾನುಘಟಿಗಳೆಲ್ಲಾ ಬಂದುಹೋಗಿದ್ದಾರೆ. ಆ ವಿಷಯ ಇರಲಿ. ಮಾಧು ಮತ್ತು ಡಾ ಮೂರ್ತಿ ನಮ್ಮ ಮನೆಗೆ ಊಟಕ್ಕೆ ಬಂದ ವಿಷಯ ಹೇಳುತ್ತಾ ಇದ್ದೆ. ಮುಂಬಾಗಿಲು ಹಾಕಿದ್ದೆವೇ? ಪೋಸ್ಟಿನವನು ಒಂದು ಭಾರವಾದ ಲಕೋಟೆಯನ್ನು ಕಿಟಕಿಯಲ್ಲಿ ತೂರಿಸಿ ನಾವು ಊಟಮಾಡುತ್ತಾ ಕೂತಿದ್ದ ಹಾಲಿಗೇ ಇಳಿಬಿಟ್ಟ. ಧೊಪ್ಪೆಂದು ಸಶಬ್ದವಾಗಿ ನೆಲಕ್ಕೆ ಬಿದ್ದ ಆ ಲಕೋಟೆಯನ್ನು ಒಡೆದು ನೋಡುತ್ತೇನೆ: ಕೀರ್ತಿ ತಮ್ಮ ಮುನ್ನುಡಿ ಬರೆದು ಕಳಿಸಿದ್ದಾರೆ! ಆಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ಮುನ್ನುಡಿಯನ್ನು ಮೊಟ್ಟ ಮೊದಲು ಓದಿದವರು ಮಾಧು ಮತ್ತು ಮೂರ್ತಿ.
ನನಗೆ ಹೆಸರು ಮತ್ತು ಪ್ರತಿಷ್ಠೆ ತಂದುಕೊಟ್ಟ ಋತುವಿಲಾಸ ನಾನು ಬರೆದದ್ದು ತ್ಯಾಗರಾಜನಗರದ ಮನೆಯ ಕಾಂಪೌಂಡಿನಲ್ಲಿ ಕೂತು! ನಾನೂ ಡಾ ಶ್ರೀರಾಮ ಭಟ್ಟರು ಋತುಸಂಹಾರ ಅಭ್ಯಾಸ ಮಾಡಿದ್ದು ಅದೇ ಜಾಗದಲ್ಲಿ. ಕೆಲವು ಬಾರಿ ಭಟ್ಟರ ಅವ್ಟ್ ಹೌಸಿನ ಪುಟ್ಟ ಮನೆಯಲ್ಲಿ. ಇಡೀ ಋತುವಿಲಾಸ ೧೦೧ ನಂಬರಿನ ಆ ಮನೆಯ ಉಸಿರುಕಟ್ಟಿಸುವ ಕಿರುಕೋಣೆಯಲ್ಲಿ ಓದಿ ಎನ್.ಎಸ್.ಎಲ್ ಶಹಬಾಸ್ ಹೇಳಿದ್ದು ಅದೇ ಮನೆಯಲ್ಲಿ!


ನನ್ನ ಅನೇಕ ಬರವಣಿಗೆಯ ಹಿಂದೆ ಇರುವ ದಾರುಣ ನೆನಪುಗಳೂ ಆ ನೂರೊಂದನೇ ನಂಬರಿನ ಮನೆಯನ್ನ ಧ್ಯಾನಕ್ಕೆ ತರುತ್ತಾ ಇವೆ. ಸದ್ಯಕ್ಕೆ ಆ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳದೆ, ಒಂದು ಖುಷಿಯ ನೆನಪನ್ನು ನಿಮ್ಮ ಎದುರಿಗಿಟ್ಟು ಈ ಬರವಣಿಗೆ ಮುಗಿಸುತ್ತೇನೆ. ಕ್ರಿಯಾಪರ್ವ ಬರೆದು ಮುಗಿಸಿದ್ದೆ(೧೯೮೦). ಆ ಪದ್ಯವನ್ನ ಅನಂತಮೂರ್ತಿಗಳಿಗೆ ಓದಬೇಕೆಂದು ನಾನು ಮತ್ತು ಬಾಲು ಮೈಸೂರಿಗೆ ಹೋಗಿದ್ದೆವು. ಕಂಚಿನ ತೇರು ಮೊದಲಾದ ಪದ್ಯಗಳನ್ನು ಕ್ರಿಯಾಪರ್ವದೊಂದಿಗೆ ಅನಂತಮೂರ್ತಿಯವರಿಗೆ ಓದಿ ಮುನ್ನುಡಿ ಬರೆಯಲು ಕೇಳಿದ್ದಾಯಿತು. ಅವರು ಮುಗುಳ್ನಕ್ಕು ಸ್ವಲ್ಪ ಕಾಲಾವಕಾಶ ಬೇಕು! ಪರವಾಗಿಲ್ಲ ತಾನೇ?ಎಂದರು. ಆಯಿತು-ಎಂದು ನಾವು ಬೆಂಗಳೂರಿಗೆ ಹಿಂದಿರುಗಿದೆವು. ಆಮೇಲೆ ಪ್ರತಿದಿನ ಮುನ್ನುಡಿಯಿರುವ ಲಕೋಟೆಯನ್ನು ಕಾಯುತ್ತಾ ಇದ್ದೆ. ಲಕೋಟೆ ಬರಲಿಲ್ಲ. ಒಂದು ರಾತ್ರಿ ಕಾಲೇಜಿನಿಂದ ಮನೆಗೆ ಬಂದಾಗ ನನ್ನ ಹೆಂಡತಿ ಸಂಭ್ರಮದಿಂದ ಅನಂತಮೂರ್ತಿಯವರು ಬಂದು ಮುನ್ನುಡಿ ಕೊಟ್ಟು ಹೋಗಿದ್ದಾರೆ. ಸ್ವಲ್ಪಹೊತ್ತು ಕಿರಂ ಮನೆಯಲ್ಲಿ ಇರುತ್ತಾರಂತೆ. ಹೋಗಿ ನೋಡಿ. ಇದ್ದರೂ ಇರಬಹುದು-ಎಂದಳು. ಆಗ ಮೊಬೈಲ್ ಇತ್ಯಾದಿ ಸೌಕರ್ಯವಿರಲಿಲ್ಲ. ನನ್ನ ಸುವೇಗ ಹತ್ತಿಕೊಂಡು ನಾಗಸಂದ್ರದ ಬಳಿ ಇದ್ದ ಕಿರಂ ಮನೆಗೆ ದೌಡಾಯಿಸಿದೆ. ಅನಂತಮೂರ್ತಿ ಅಲ್ಲಿ ಇದ್ದರು. ಬಹಳಹೊತ್ತು ಅನಂತಮೂರ್ತಿ, ಕಿರಂ ಜೊತೆ ಮಾತಾಡಿ ನಾನು ಮನೆಗೆ ಹಿಂದಿರುಗಿದಾಗ ರಾತ್ರಿ ಹನ್ನೊಂದೇ ಆಗಿ ಹೋಗಿತ್ತು.


ಉಳಿದದ್ದು ನಾಳೆ ನಿಮ್ಮನ್ನು ಭೇಟಿ ಮಾಡಿದಾಗ...!

Wednesday, February 3, 2010

ಮಾಸ್ತಿಯವರ ಕಾವ್ಯ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡದ ಆದ್ಯ ಮತ್ತು ಅಭೂತಪೂರ್ವ ಕತೆಗಾರರು. ಅವರು ಗದ್ಯವನ್ನು ಬರೆಯಲಿ ಪದ್ಯವನ್ನು ಬರೆಯಲಿ ಮುಖ್ಯವಾಗಿ ನಮ್ಮ ಮನಸ್ಸನ್ನು ಸೆಳೆಯತಕ್ಕದ್ದು ಅವರ ಕಥನ ಪ್ರತಿಭೆಯೇ. ಅವರು ಮಾತಾಡುವಾಗ ಕೂಡಾ ಕತೆಗಾರಿಕೆಯ ವರಸೆಗಳೇ ಎದ್ದು ಕಾಣುತ್ತಿದ್ದವು. ಲೋಕಾಭಿರಾಮವಾಗಿ ಮಾತಾಡುವಾಗ ಇರಲಿ, ಸಭೆಗಳಲ್ಲಿ ಭಾಷಣ ಮಾಡುವಾಗಲೂ ಮಾಸ್ತಿ ಸಲೀಸಾಗಿ ಕಥನಕ್ಕೆ ಇಳಿದುಬಿಡುತ್ತಿದ್ದರು. ಹೀಗಾಗಿ ಕಥನ ಎಂಬುದು ಮಾಸ್ತಿಯವರ ಪಾಲಿಗೆ ಒಂದು ಅಭಿವ್ಯಕ್ತಿಕ್ರಮವಷ್ಟೇ ಅಲ್ಲ; ಅದು ಅವರ ಬದುಕಿನ ಅನುಸಂಧಾನದ ಮಾರ್ಗ. ಅದಕ್ಕೇ ನಾವು ಮುಖ್ಯವಾಗಿ ಹೇಳಬೇಕಾದದ್ದು ಮಾಸ್ತಿ ನೂರಕ್ಕೆ ನೂರು ಕತೆಗಾರ. ಬರೆಹ ಬದುಕು ಎರಡರಲ್ಲೂ ಕತೆಗಾರರಾಗಿಯೇ ಅವರು ಕಾಣಿಸಿಕೊಳ್ಳುತ್ತಾರೆ. ಕತೆಗಾರ ರಾಮಣ್ಣ ಎಂಬ ಅವರದೊಂದು ಉಕ್ತಿಯಿದೆ. ಆ ಮಾತು ಸ್ವತಃ ಮಾಸ್ತಿ ಅವರಿಗೇ ಹೆಚ್ಚಾಗಿ ಅನ್ವಯಿಸುತ್ತದೆ.

ಕಥೆಯ ಆಸಕ್ತಿ ಬದುಕನ್ನು ಸಂಬಂಧಿಸಿ ನೋಡುವುದರಲ್ಲಿ ಇದೆ. ವ್ಯಕ್ತಿಗಳ ಜೀವಿತ ಕ್ರಮವನ್ನು- ಪರಿಸರ , ಅವರು ಬದುಕುತ್ತಿರುವ ಸಮಾಜ, ಅವರು ನಂಬಿರುವ ಧರ್ಮ, ತತ್ವ, ಮತ್ತು ಜೀವನಾದರ್ಶಗಳೊಂದಿಗೆ ತಳುಕು ಹಾಕಿ ಮಾಸ್ತಿ ನೋಡುವುದರಿಂದ ಆಂಗ್ಲಕವಿ ಚಾಸರನಂತೆ ಮಾಸ್ತಿಯೂ ಒಬ್ಬ ಜೀವನ ವಿಜಾನಿಯಾಗಿದ್ದಾರೆ.(ಚಾಸರ್ ಒಬ್ಬ ಜೀವನ ವಿಜಾನಿ ಎಂಬುದು ಮಾಸ್ತಿಯವರದ್ದೇ ಮಾತು). ಕಥನಕ್ಕೆ ತೊಡಗುವುದು ಎಂದರೆ ಬದುಕಿನೊಂದಿಗೆ ಅನುಸಂಧಾನಕ್ಕೆ ತೊಡಗುವುದು ಮಾತ್ರವಲ್ಲ; ಕೇಳುಗನೊಬ್ಬನೊಂದಿಗೆ ಆತ್ಮೀಯ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು ಕೂಡ. ಮಾಸ್ತಿಯವರ ಕತೆಗಾರ ಪಂಡಿತಮಾನ್ಯರೊಂದಿಗೆ ಸಂವಾದಕ್ಕೆ ತೊಡಗಿಲ್ಲ. ಸಾಮಾನ್ಯ ಜನರೊಂದಿಗೆ ಸಂವಾದಕ್ಕೆ ತೊಡಗಿದ್ದಾನೆ. ಕಥನವು ಪ್ರೌಢವಾಗುವುದು ಅಥವ ಸರಳವಾಗುವುದು ಕತೆಗಾರನ "ಕೇಳುಗನ" ಕಲ್ಪನೆಯನ್ನು ಆಧರಿಸಿದೆ. ಪಂಪನಂಥ ಕವಿ ಆಸ್ಥಾನ ಪಂಡಿತರನ್ನು ಕೂರಿಸಿಕೊಂಡು ಅವರಿಗೆ ಕಥೆ ಹೇಳಲು ತೊಡಗಿದ್ದರಿಂದಲೇ ಅವನ ಭಾಷೆ, ಲಯ, ಅಭಿವ್ಯಕ್ತಿಯ ವರಸೆಗಳು ತಮ್ಮದೇ ಆದ ಒಂದು ವಿಶಿಷ್ಟ ಸ್ವಭಾವವನ್ನು ರೂಢಿಸಿಕೊಳ್ಳುತ್ತವೆ. ಕುಮಾರವ್ಯಾಸನ ಕೇಳುಗರು ಶ್ರೀಸಾಮಾಜಿಕರಾಗಿರುವುದರಿಂದ ಆತನ ಕಾವ್ಯದ ಹದ ಬೇರೆಯದೇ ಬಗೆಯದಾಗಿದೆ. ಮುದ್ದಣ ಆಧುನಿಕನಾಗಿಯೂ ರಾಮೇಶ್ವಮೇಧದಲ್ಲಿ ಒಂದು ಸ್ವಯಂಕಲ್ಪಿತ ರಾಜಾಸ್ಥಾನದಿಂದ ಮನೆಗೆ ಹಿಂದಿರುಗಿ, ಮನೆಯಲ್ಲಿ ತನ್ನ ಮನದರಸಿ ಮನೋರಮೆಯನ್ನು ಉದ್ದೇಶಿಸಿ ಕಥನಕ್ಕೆ ತೊಡಗುತ್ತಾನೆ. ಇದು ಓದುಗವರ್ಗದ ಪಲ್ಲಟತೆಯ ಸಂಘರ್ಷವಾಗಿದೆ. ಕುವೆಂಪು ತಮ್ಮ ಕಾವ್ಯಸಂದರ್ಭದಲ್ಲಿ ಎರಡು ಬಗೆಯ ಓದುಗ ವರ್ಗವನ್ನು ತಮ್ಮ ಕಣ್ಣ ಮುಂದೆ ಇರಿಕೊಂಡಿದ್ದಾರೆ. ಒಂದು, ಊಹಾ ನಿರ್ಮಿತಿಯಿಂದ ಕಲ್ಪಿಸಿಕೊಂಡ ಪಂಡಿತವರ್ಗವೊಂದರ ಕಾಲ್ಪನಿಕ ಸಮಷ್ಟಿ. ಇನ್ನೊಂದು, ವಾಸ್ತವವಾಗಿ ಕಣ್ಣೆದುರು ಇರುತ್ತಿರುವ ಶ್ರೀಸಾಮಾನ್ಯ ವರ್ಗ. ಕಿಂದರಜೋಗಿ ಮತ್ತು ಶ್ರೀರಾಮಾಯಣದರ್ಶನಂ ಕೃತಿಗಳು ಈ ಎರಡು ವರ್ಗದ ಓದುಗರನ್ನು ಪ್ರತ್ಯೇಕವಾಗಿ ಉದ್ದೇಶಿಸಿವೆ. ಪುತಿನ ಅವರ ಓದುಗವರ್ಗವೂ ಹೀಗೆ ಎರಡಾಗಿ ವಿಭಜಿತಗೊಂಡಿದೆ. ಆದರೆ ಮಾಸ್ತಿ ಉದ್ದೇಶಿಸಿರುವುದು ಒಂದೇ ಸಮಷ್ಟಿಯನ್ನು. ಅದು ಪ್ರಜಾಭುತ್ವದ ಸಂದರ್ಭದಲ್ಲಿ ಕತೆಗಾರ ತನ್ನ ನಿತ್ಯಜೀವನದ ಸಂದರ್ಭದಲ್ಲಿ ಮುಖಾಮುಖಿಯಾಗುತ್ತಿರುವ ಶ್ರೀಸಾಮಾನ್ಯವರ್ಗ. ಸಾಹಿತ್ಯದ ಸಂಸ್ಕಾರವುಳ್ಳ ಶ್ರೀಸಾಮಾನ್ಯ ವರ್ಗ. ಮಾಸ್ತಿಯವರ ಮದಲಿಂಗನ ಕಣಿವೆಯ ಓದುಗ ವರ್ಗ ಮತ್ತು ಶ್ರೀರಾಮಪಟ್ಟಾಭಿಷೇಕದ ಓದುಗ ವರ್ಗ ಒಂದೇ. ಅದು ಅವಿಭಜಿತವಾದ ಮತ್ತು ಸಾಹಿತ್ಯ ಸಂಸ್ಕಾರವುಳ್ಳ ಶ್ರೀಸಾಮಾನ್ಯ ಓದುಗ ವರ್ಗ. ಇದು ವಿಶೇಷವಾಗಿ ಗಮನಿಸಬೇಕಾದ ಅಂಶ. ಈ ಓದುಗ ವರ್ಗ ಮಾಸ್ತಿ ಅವರ ಕಥನ ಕಾವ್ಯದ ಭಾಷೆ ಶೈಲಿ ಲಯಗಳನ್ನು ನಿರ್ಧರಿಸುತ್ತದೆ. ಹೀಗಾಗಿಯೇ ಸ್ವಯಂ ವಿಜೃಂಭಣೆ ಮಾಸ್ತಿಗೆ ಮುಖ್ಯವಾಗುವುದಿಲ್ಲ. ಸರಳತೆ, ಸ್ವಭಾವೋಕ್ತಿ, ಸ್ಪಷ್ಟತೆ, ಸಾಮಾನ್ಯತೆ ಅವರ ಭಾಷೆ ಮತ್ತು ಕಥನವನ್ನು ರೂಪಿಸುತ್ತವೆ. ಮಾಸ್ತಿಯವರ ಕತೆಯಾಗಲಿ ಕಾವ್ಯವಾಗಲಿ ಮಂದ್ರಸ್ಥಾಯಿಯ ಬರವಣಿಗೆ ಯಾಗುವುದಕ್ಕೆ ಮುಖ್ಯ ಕಾರಣವಿದು. ತತ್ಕಾಲೀನ ಬಹುಸಂಖ್ಯಾಕ ಸಮಾಜದೊಂದಿಗೆ ಗೌರವಾದರ ಬೆರೆತ ಸಂಪನ್ನ ಸಂವಾದ ಮಾಸ್ತಿಯವರ ಮೂಲ ಶ್ರುತಿಯನ್ನು ನಿರ್ಧರಿಸಿದೆ. ಸಮಾನ ನೆಲೆಯೇ ಅಲ್ಲಿ ಹೇಳುಗ ಮತ್ತು ಕೇಳುಗರ ನಿಲುವು. ಹಾಗಾಗಿಯೇ ಅದು ಅಧಿಕಾರವಾಣಿಯೂ ಅಲ್ಲ; ಅಪ್ಪಣೆಕೊಡಿಸುವ ಗುರುವಾಣಿಯೂ ಅಲ್ಲ. ಸಹಪ್ರಯಾಣಿಗರೊಂದಿಗೆ ನಿಗರ್ವಿಯಾದ ಯಾತ್ರಿಕನ ಮಾತುಕತೆ. ಸಮಾನಸ್ಕಂಧತೆ ಮಾಸ್ತಿ ಅವರ ಕಥನದ ಶೈಲಿ ಮತ್ತು ಮನೋಧರ್ಮವನ್ನು ನಿಸ್ಸಂದಿಗ್ಧವಾಗಿ ರೂಪಿಸಿದೆ. ಈ ಸಮಾನಸ್ಕಂಧತೆಯ ನೆಲೆ ಅವರ ಸಾಹಿತ್ಯ ಜೀವಿತದ ಉದ್ದಕ್ಕೂ ಅವರ ಜೀವನಾನುಸಂಧಾನವನ್ನು ನಿಯೋಜಿಸಿದೆ. ಯಾವನೇ ಕತೆಗಾರ ಕೇಳುಗನೊಬ್ಬನಿಲ್ಲದೆ ತನ್ನ ಅಸ್ತಿತ್ವವನ್ನೇ ಪಡೆಯಲಾರ. ಮಾಸ್ತಿಯವರ ಭಾಷೆ ಮತ್ತು ಶೈಲಿ ಅಂತರ್ಮುಖಿಯಾಗದಿರುವುದಕ್ಕೆ ಕಾರಣ ಇಲ್ಲಿದೆ. ಪುತಿನ ಅವರ ಸ್ವಗತ ಅವರ ವ್ಯಕ್ತಿತ್ವಕ್ಕೆ ಸಹಜವಾದದ್ದು. ಸಭೆಯಲ್ಲೂ ಕೂಡ ಅವರು ಒಮ್ಮೆಗೇ ಏಕಾಂಗಿಯಾಗಿಬಿಡುತ್ತಿದ್ದರು. ಮಾತು ಸ್ವಗತವಾದಾಗ ಹೊರಗಿನ ಯಾವ ಉಪಾಧಿಯನ್ನೂ ಅದು ಲಕ್ಷಿಸುವುದಿಲ್ಲ. ಪುತಿನ ಪ್ರಧಾನವಾಗಿ ಸ್ವಗತದ ಕವಿ. ಕುವೆಂಪು ಏಕಾಂತ ಮತ್ತು ಲೋಕಾಂತ ಎರಡರಲ್ಲೂ ವ್ಯವಹರಿಸಬಲ್ಲರು. ಬೇಂದ್ರೆಯೂ ಹಾಗೇ ಏಕಾಂತ ಲೋಕಾಂತ ಎರಡರಲ್ಲೂ ಸಹಜವಾಗಿ ಪ್ರವರ್ತಿಸಬಲ್ಲರು. ಮಾಸ್ತಿ ಪ್ರಧಾನಾವಾಗಿ ಲೋಕಾಂತದ ಲೇಖಕರಾಗಿದ್ದಾರೆ. ಅವರಿಗೆ ಏಕಾಂತದ ಧ್ಯಾನವಿಲ್ಲ ಎಂಬುದು ನನ್ನ ಅಭಿಪ್ರಾಯವಲ್ಲ. ಅವರು ಏಕಾಂತದಲ್ಲಿ ಧ್ಯಾನಿಸುತ್ತಾರೆ. ಆದರೆ ಅವರ ಅಭಿವ್ಯಕ್ತಿ ಸಾಧ್ಯವಾಗುವುದು ಲೋಕಾಚರಣೆಯಲ್ಲೇ. ಸಮುದಾಯದ ಮುಖಾಮುಖಿಯಲ್ಲೇ. ಮಾಸ್ತಿ ಬಹಳ ಶಕ್ತಿಯುತ ಲೇಖಕರಾಗಿ ಕಾಣುವುದು ಕೂಡ ಅವರು ಬಹಿರ್ಮುಖಿಯಾದಾಗಲೇ. ಇದು ಕತೆಗಾರಿಕೆಯ ಪ್ರಾರಬ್ಧ.

ಮಾಸ್ತಿಯವರ ಕಾವ್ಯದಲ್ಲಿ ಎರಡು ಬಗೆಯ ರಚನೆಗಳಿವೆ. ಅದನ್ನು ನಮ್ಮ ವಿಮರ್ಶಕರೂ ಗುರುತಿಸಿದ್ದಾರೆ. ಭಕ್ತಿಭಾವ ಪೂರಿತವಾದ ಗೀತಾತ್ಮಕ ರಚನೆಗಳು ಒಂದು ಬಗೆ. ಓದುಗ ವರ್ಗವನ್ನು ಕುರಿತು ತೊಡಗುವ ಕಥನಾತ್ಮಕ ಬರವಣಿಗೆ ಎರಡನೆಯ ಬಗೆ. ಅವರು ಶಕ್ತಿಶಾಲಿ ಲೇಖಕರಾಗಿ ಕಾಣಿಸುವುದು ಎರಡನೆಯ ಬಗೆಯ ಬರವಣಿಗೆಯಲ್ಲಿ. ಮಾಸ್ತಿಯವರ ಭಾವಗೀತೆಗಳು ಬೇಂದ್ರೆ, ಕುವೆಂಪು, ಪುತಿನ ಅವರ ಭಾವಗೀತೆಗಳ ಹತ್ತಿರಕ್ಕೂ ಬರಲಾರವು. ಮಾಸ್ತಿ ಅವರ ಏಕಾಂತದ ಧ್ವನಿ ದೃಢವಾಗುವುದೇ ಇಲ್ಲ. ಮಧುರ ಭಕ್ತಿಯ ಆರ್ದ್ರತೆ ಮಾತ್ರ ಅಲ್ಲಿ ಕಾಣುತ್ತದೆ. ಅದೂ ನಿವೇದನೆಯ ಸ್ವರೂಪದ್ದು. ಮಧುರಚೆನ್ನರಲ್ಲಿ ಕಾಣುವಂತೆ ಜೀವವನ್ನೇ ಹಿಡಿದು ಅಲ್ಲಾಡಿಸುವಂಥದಲ್ಲ. ಅದಕ್ಕೆ ಆ ಬಗೆಯ ತೀವ್ರತೆಯೂ ಇಲ್ಲ; ನಿಗೂಢತೆಯೂ ಇಲ್ಲ. ಭಾವನಿಬಿಡವಾದ ಒಂದು ಪ್ರಪತ್ತಿ ಭಾವ ಅಲ್ಲಿ ಹೃದ್ಯವಾದ ಅಭಿವ್ಯಕ್ತಿಯನ್ನು ಪಡೆಯುವುದು. ಅಷ್ಟೆ. ಮಾಸ್ತಿಯವರ ಘನವಾದ ಕವಿತೆಗಳು ಅವರ ಕಥನಾತ್ಮಕ ಕವಿತೆಗಳೇ ಆಗಿವೆ. ಕಾರಣ ಅವು ಬದುಕನ್ನು ಅದರ ಎಲ್ಲ ಸೂಕ್ಷ್ಮತೆ ಮತ್ತು ಆಳದಲ್ಲಿ ಸ್ಪರ್ಶಿಸಲು ಹವಣಿಸುತ್ತವೆ. ರಾಮನವಮಿ, ಮೂಕನ ಮಕ್ಕಳು, ಗೌಡರ ಮಲ್ಲಿ ಮತ್ತು ನವರಾತ್ರಿಯ ಕೆಲವು ಕವನಗಳು ಮಾಸ್ತಿಯವರ ಘನವಾದ ಶಕ್ತಿಯ ಸಂಪರ್ಕಕ್ಕೆ ನಮ್ಮನ್ನು ತರುತ್ತವೆ. ಕಥನಕ್ಕೆ ಸಹಜವಾದ ಬಹಿರ್ಮುಖತೆ, ವಾಚಾಳತ್ವ ಅಲ್ಲಿ ಇದೆ ನಿಜ. ಹಾಗಾಗಿಯೇ ಅವರ ಅತ್ಯಂತ ಸಮರ್ಥವಾದ ರಾಮನವಮಿಯಲ್ಲೂ ಅತಿಮಾತಿನ ಜಾಳು ಇದೆ. ಎಂಥ ಬಿಗಿಯಾದ ಸಂದರ್ಭವನ್ನೂ ಮಾಸ್ತಿ ಅಳ್ಳಕ ಮಾಡಿಬಿಡುತ್ತಾರೆ ಎಂದು ಮತ್ತೆ ಮತ್ತೆ ಅನ್ನಿಸುತ್ತದೆ. ಆದರೆ ಒಟ್ಟಂದದಲ್ಲಿ ಆ ಕವಿತೆಗಳು ಮಾಡಿಸುವ ಜೀವನ ದರ್ಶನ ಘನವಾದುದಾಗಿರುತ್ತದೆ. ಅವರ ಗದ್ಯದ ಸದ್ಯತನ, ಮಾತಿನ ಸಹಜತೆ, ಲಯದ ಮಂದ್ರಸ್ಥಾಯಿ, ಯಾವತ್ತೂ ಅತಿಗೊಳ್ಳದ ಭಾವಕ್ಷಮತೆ ನಮ್ಮನ್ನು ಆದ್ಯಂತವಾಗಿ ಮತ್ತು ಸಾವಧಾನವಾಗಿ ಆವರಿಸಿಕೊಳ್ಳುತ್ತವೆ. ಮಾಸ್ತಿಯವರದ್ದು ಆರ್ಷೇಯ ನಂಬುಗೆಯ ಕಾವ್ಯವೋ , ಆಧುನಿಕ ಕಾವ್ಯವೋ?, ಮೌಲ್ಯಶೋಧಕ ಕಾವ್ಯವೋ, ಮೌಲ್ಯಾರಾಧಕ ಕಾವ್ಯವೋ? ಅವರಲ್ಲಿ ಕಾಣುವುದು ಧಾರ್ಮಿಕತೆಯೋ ಆಧ್ಯಾತ್ಮಿಕತೆಯೋ? ಅವರದ್ದು ಪ್ರತಿಮಾ ನಿರ್ಮಿತಿಯ ಕಾವ್ಯವೋ, ಸ್ವಭಾವೋಕ್ತಿಯ ಕಾವ್ಯವೋ? ಮಾಸ್ತಿಯವರದ್ದು ಸಮಾಧಾನದ ಕಾವ್ಯವೋ, ದುರಂತದ ಅರಿವಿನ ಕಾವ್ಯವೋ? ಅದು ಪರುಷವಾಕ್ಯದ ಕಾವ್ಯವೋ, ಪ್ರಸನ್ನ ಮಾತಿನ ಕಾವ್ಯವೋ? ಆಕಾಶಕ್ಕೆ ಜಿಗಿಯುವ ಕಾವ್ಯವೋ, ನೆಲಕ್ಕೆ ಅಂಟಿಕೊಂಡಿರುವ ಕಾವ್ಯವೋ? ಕೇಡಿನ ಎಚ್ಚರವುಳ್ಳ ಕಾವ್ಯವೋ, ಮಂಗಳಾಯತನದ ಕಾವ್ಯವೋ?- ಮುಂತಾದ ಯುಗಳ ಪ್ರಶ್ನೆಗಳನ್ನು ಎತ್ತಿಕೊಂಡು ಕನ್ನಡ ವಿಮರ್ಶೆ ಮೊದಲಿನಿಂದಲೂ ಚರ್ಚಿಸುತ್ತಾ ಬಂದಿದೆ. ಮುಗಳಿ, ಕೀರ್ತಿನಾಥ ಕುರ್ತಕೋಟಿ, ಚಂದ್ರಶೇಖರ ನಂಗಲಿಯಂಥ ವಿಮರ್ಶಕರೂ, ವಿಸೀ, ಅಡಿಗ, ಕೆ ಎಸ್ ನ ಮೊದಲಾದ ಕವಿಗಳೂ ಈ ಪ್ರಶ್ನೆಗಳನ್ನು ಎತ್ತಿಕೊಂಡು ಮಾಸ್ತಿಕಾವ್ಯದ ಬಗ್ಗೆ ಒಳನೋಟಗಳುಳ್ಳ ವಿಮರ್ಶೆಯನ್ನು ಬರೆದಿದ್ದಾರೆ. ಈ ಪ್ರಶ್ನೆಗಳು ಮಾಸ್ತಿಯವರ ಕಾವ್ಯ ಮತ್ತು ಮನೋಧರ್ಮಗಳನ್ನು ಆಳದಲ್ಲಿ ಪೃತ್ಥಕ್ಕರಿಸಿರುವುದರಿಂದ ಮುಖ್ಯವೆನಿಸುತ್ತವೆ. ಆದರೆ ನಾವು ಈವತ್ತು ಕೇಳಬೇಕಾದದ್ದು ಈ ನಿರ್ದಿಷ್ಟ ಸ್ವರೂಪದ ಕಾವ್ಯದಿಂದ ನಾವು ಪಡೆಯಬಹುದಾದದ್ದು ಏನನ್ನು ಎಂಬುದನ್ನು. ಕವಿಯ ಮತ್ತು ಕಾವ್ಯದ ಮನೋಧರ್ಮ ಮತ್ತು ಸ್ವರೂಪಗಳನ್ನು ಯಾರಿಗೂ ತೊಡೆದುಹಾಕಲಿಕ್ಕಾಗುವುದಿಲ್ಲ. ಆದರೆ ಈ ಮನೋಧರ್ಮ ಮತ್ತು ಈ ಮನೋಧರ್ಮ ನಿರ್ಮಿಸಿರುವ ಕಾವ್ಯ ಬದುಕಿನ ಪರಾಂಬರಿಕೆಗೆ ಓದುಗ ಸಮುದಾಯಕ್ಕೆ ನೀಡುವ ಒಳನೋಟಗಳು ಯಾವುವು ಎಂಬುದು ಕೇಳಿಕೊಳ್ಳಬೇಕಾದ ಪ್ರಶ್ನೆ. ಸಮಾಜ ಮತ್ತು ವ್ಯಕ್ತಿಜೀವಿತದ ಗರಿಷ್ಠ ಅರಳುವಿಕೆಗೆ ಆರ್ಷೇಯ ನಂಬಿಕೆ ಮತ್ತು ಶ್ರದ್ಧಾಜೀವನವು ಒಂದು ಬಗೆಯ ಸಂಪನ್ನವಾದ ಮಣ್ಣು ನೀರು ಬಿಸಿಲು ಒದಗಿಸುತ್ತದೆ ಎಂಬುದನ್ನು ಮಾಸ್ತಿ ಕಾವ್ಯ ಪ್ರತಿಪಾದಿಸುತ್ತಿದೆ. ಅದಕ್ಕಾಗಿ ಯುಕ್ತವಾದ ಮತ್ತು ನಂಬಿಕೆಗೆ ಅರ್ಹವಾದ ಕೆಲವು ಜೀವನ ದೃಷ್ಟಾಂತಗಳನ್ನು ಒದಗಿಸುವಲ್ಲಿ ಅವರ ಕಥನಕವಿತೆಗಳು ಅತ್ಯಂತ ಪ್ರಾಮಾಣಿಕ ಮತ್ತು ನಿರ್ವಂಚನೆಯ ನೆಲೆಯಲ್ಲಿ ತೊಡಗಿಕೊಂಡಿವೆ. ಸಮಾಜಮುಖತೆಯನ್ನೇ ಒಂದು ಗುಣಮೌಲ್ಯವಾಗಿ ರೂಪಿಸಿಕೊಳ್ಳುವಲ್ಲಿ ಮಾಸ್ತಿಯವರ ಕಾವ್ಯ ಘನವತ್ತಾದ ಸಾಧನೆ ಮಾಡಿದೆ. ಅವರಿಗೆ ಸಮಾಜಪುರುಷ ಮಾತ್ರವಲ್ಲ, ಅಂತರಂಗದ ದೈವವೂ ಕೂಡಾ ಬಹಿರಂಗದಲ್ಲೇ, ಆಪ್ತ ಸನ್ನಿಧಿಯಲ್ಲೇ ಆವಿರ್ಭವಿಸಬೇಕಾಗಿದೆ!(ಬ್ರಹ್ಮಾಂಡವನ್ನು ನೋಡದೆ ದೇವರ ಕಾಣ್ಬರೆ?).

ನನ್ನ ಈವರೆಗಿನ ಹೇಳಿಕೆಗಳನ್ನು ದೃಢೀಕರಿಸುವ ಕನ್ನಡದ ಇಬ್ಬರು ಮಹತ್ವದ ಕವಿಗಳ ಗದ್ಯ ಮತ್ತು ಪದ್ಯರೂಪೀ ಮಾತುಗಳನ್ನು ಒಟ್ಟಿಗೇ ಇಟ್ಟು ನನ್ನ ಟಿಪ್ಪಣಿಯನ್ನು ಮುಗಿಸುತ್ತೇನೆ. ಅಡಿಗರು ಮಾಸ್ತಿಯವರ ಕವಿತೆಯನ್ನು ಕುರಿತು ಬರೆಯುತ್ತಾರೆ: "ಬಾಳಿನ ವೈವಿಧ್ಯದಲ್ಲಿ, ಸುಖ ದುಃಖಗಳಲ್ಲಿ, ಉಬ್ಬರ ಇಳಿತಗಳಲ್ಲಿ, ಏರು ತಗ್ಗುಗಳಲ್ಲಿ, ಎಲ್ಲೂ ತೂಕ ತಪ್ಪದಂತೆ, ಧೃತಿಗೆಡದಂತೆ, ಶಾಂತವಾಗಿ, ಪ್ರಜೆಯ ಬೆಳಕಿನಲ್ಲಿ ಶುದ್ಧವಾಗಿ, ಸಮೃದ್ಧವಾಗಿ ವ್ಯಕ್ತವಾಗುವ ಮಾಸ್ತಿಯವರ ಅಂತರಂಗದ ಅನುಭವದ ಅಭಿವ್ಯಕ್ತಿಗೆ ಬೆಳದಿಂಗಳ ಪ್ರಶಾಂತಿ, ಹೂವುಗಳ ಮೃದತ್ವ, ಬಯಲಲ್ಲಿ ಹರಿಯುವ ಅಗಲ ಕಿರಿದಾದ ಹೊಳೆಯ ಸ್ಫಟಿಕ ನಿರ್ಮಲ ಜಲದ ಪಾರದರ್ಶಕತೆ ಇದೆ. ಇವರ ಸಾಹಿತ್ಯಕ್ಕೆ ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸಬಲ್ಲ ಯುಗಾಂತರಕಾರಕ ಆವೇಶ, ತೀವ್ರತೆ, ತಲಸ್ಪರ್ಶಿತ್ವ, ಆಕಾಶೋಡ್ಡಯನ ಇಲ್ಲ. ಅದು ಪುರಾತನವಾದೊಂದು ಸಮಾಜದ ಸ್ಥಿರ ಮೌಲ್ಯಗಳಲ್ಲಿ ಬೇರೂರಿ ನಿಂತದ್ದು. ಸಜ್ಜನನೊಬ್ಬನ ತುಂಬು ಬದುಕಿನ ಕೊಂಬೆ ಕೊಂಬೆಗಳಲ್ಲೂ ತುಂಬಿ ಮಾಗಿ ಹಣ್ಣಾಗಿರುವ ರೀತಿಯ ಕೃತಿರಾಶಿಯಿದು....ಮಾಸ್ತಿಯವರ ಕವಿತೆ ತಣಿಸುವ ಕವಿತೆ. ಇದು ಬಹಳ ಆಳಕ್ಕೆ ಇಳಿದು ಮನಸ್ಸಿನ ಮೂಲವನ್ನು ಕೆದಕಿ ಬೆದಕಿ ನೋಡುವುದಿಲ್ಲ. ಪ್ರಜೆಯ ಕೆಳಕ್ಕೆ ಇರುವ ದಾನವತ್ವ ಪಶುತ್ವಗಳಿಗೆ ಮುಖಾಮುಖಿ ಆಗುವುದಿಲ್ಲ. ಕನಸುಗಳ ರೆಕ್ಕೆ ಬಿಚ್ಚಿ ನಮಗೆ ದೂರದ ಅಂತರಾಳಗಳ ಯಾತ್ರೆ ಮಾಡಿಸುವುದಿಲ್ಲ. ರುದ್ರವೂ ಭೀಕರವೂ ಆದ ತಮಸ್ಸನ್ನು ಮರೆಸಿ ಬದುಕಿನಲ್ಲಿರುವ ಚೆಲುವನ್ನೂ ನಲಿವನ್ನೂ ನಗುವನ್ನೂ ಬೆಳಕನ್ನೂ ತೋರಿಸುತ್ತದೆ. ಆದ ಕಾರಣವೇ ಈ ಕವಿತೆ ನಮಗೆ ಸಂಪೂರ್ಣ ತೃಪ್ತಿಯನ್ನು ಕೊಡುವುದಿಲ್ಲ. ಆದರೆ ಎಷ್ಟನ್ನು ಕೊಡಲು ಉದ್ದೇಶಿಸಿರುತ್ತದೋ ಅಷ್ಟನ್ನು ಮಾತ್ರ ಕೊಟ್ಟೇಕೊಡುತ್ತದೆ. ಅದು ಎಷ್ಟನ್ನು ನೀಡುತ್ತದೋ ಅಷ್ಟೂ ಮಹತ್ವದ್ದು. ಮರೆಯಬಾರದ್ದು. ಆದಕಾರಣ ಮಾಸ್ತಿಯವರ ಕಾವ್ಯಾಭ್ಯಾಸ ಮನಸ್ಸಿಗೆ ತಂಪನ್ನು ನೀಡುವುದಲ್ಲದೆ ನಮ್ಮ ಅರಕೆಗಳನ್ನೆಷ್ಟೋ ತುಂಬಲೂ ಸಮರ್ಥವಾಗಿದೆ. ಎಲ್ಲ ಕಾಲಗಳಲ್ಲೂ ಕಾವ್ಯಾಭ್ಯಾಸಿಗಳು , ಸಾಹಿತ್ಯಪ್ರಿಯರು ಮತ್ತೆ ಮತ್ತೆ ಮಾಸ್ತಿಯವರ ಕವಿತೆಗಳ ಕಡೆ ಬರುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ."

ಕನ್ನಡದ ಇನ್ನೊಬ್ಬ ಮಹತ್ವದ ಕವಿ ಕೆ.ಎಸ್.ನ ಅವರು ಮಾಸ್ತಿಯವರ ಬಗ್ಗೆ ಬರೆದ ಕವಿತೆ, ಮಾಸ್ತಿಯವರ ಕಾವ್ಯವನ್ನು ಇನ್ನೊಂದು ನೆಲೆಯಲ್ಲಿ ಕೈವಾರಿಸುತ್ತದೆ.


ಮಾಸ್ತಿಯವರ ಕವಿತೆ
ಮಾಸ್ತಿಯವರಾಸ್ತಿ ಆ ಸಣ್ಣಕತೆಗಳೇ ಎಂದು
ಸಾಂಬಶಾಸ್ತ್ರಿಯ ಸಿದ್ಧಾಂತ. ಕೇಶವಮೂರ್ತಿ
ಶ್ರೀನಿವಾಸರ ಕವಿತೆ ಒಣ ಗದ್ಯವೇ ಎಂದು
ಎಗರಿ ಬೀಳುವನು. ಈ ಸಂಶಯವೇ ಕವಿಕೀರ್ತಿ.
ಪರಿಚಿತ ಕವಿಗಳೆಲ್ಲ ಬರಿದೆ ರಾರಾಜಿಪರು
ಪ್ರಾಚೀನ ಪ್ರಾರಬ್ಧ ಹೊತ್ತು. ಅದ ಹೊಗಳುವರು
ಶ್ರೀನಿವಾಸರ ಕೃತಿಯನೇನೆಂದು ಮೆಚ್ಚುವರು?
ಗಡವಿಲ್ಲ, ದಲ್ಲಿಲ್ಲ, ಮೇಣ್-ಬತ್ತಿ ಹೊಗೆಯಿಲ್ಲ.
ಅಪ್ರಕೃತ ಸಂಸ್ಕೃತದವಾಂತರದ ಧಗೆಯಿಲ್ಲ.
ಇಲ್ಲಿ ಜೀವನದಂತೆ ಕವಿತೆ; ಜೀವದ ಉಸಿರು.
ಮಳೆಬಿದ್ದ ಸಂಜೆ ಬೀದಿಯಲಿ ಸಾವಿರ ಬೆಳಕು,
ಹಸುರು ನಗೆ, ಕೆಂಪು ಗಾಯಗಳು. ಬಂಡೆಯನ್ನುತ್ತು
ಬೆಳೆದ ಮೂಗಿಂಗೆ ಈ ಸಹಜ ಕವಿತೆಯ ಮುತ್ತು
ಗ್ರಾಹ್ಯವಾದೀತೆ? ಇದಕಿಲ್ಲ ಕವಿತೆಯ ಹೆಸರು!


ಅಡಿಗರದ್ದು ವಿಮರ್ಶಾತ್ಮಕ ಮೆಚ್ಚುಗೆ. ಕೆ ಎಸ್ ನ ಅವರದ್ದು ಕಾವ್ಯಾದರದ ಮೆಚ್ಚುಗೆ. ಈ ಇಬ್ಬಗೆಯ ಮಾತುಗಳ ಅಖಂಡ ಗ್ರಹಿಕೆ ಮಾಸ್ತಿಯವ ಕಾವ್ಯದ ಅನುಸಂಧಾನಕ್ಕೆ ಹದವಾದ ನೆಲೆಯೊಂದನ್ನು ಕಲ್ಪಿಸಬಲ್ಲದೆಂಬುದು ನನ್ನ ವಿಶ್ವಾಸ.

Saturday, December 19, 2009

ಗಂಭೀರ ಕವಿಯ ಹಸನ್ಮುಖ...

ತಮ್ಮ ಶ್ರೀಮದ್ಗಾಂಭೀರ್ಯ, ಬಿಗುವು, ಎಷ್ಟು ಬೇಕೋ ಅಷ್ಟು ಮಾತು, ಸಲೀಸಾಗಿ ಯಾರೊಂದಿಗೂ ಬೆರೆಯದ ಸ್ವಭಾವ-ಇವುಗಳಿಂದ ಜಿಎಸ್ಸೆಸ್ ಜೊತೆ ಸಲುಗೆ ಅಸಾಧ್ಯ ಎಂದೇ ಜನಜನಿತ ಅಭಿಪ್ರಾಯ. ಆದರೆ ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು-ಅವರ ಹಾಸ್ಯ ಮನೋಧರ್ಮ. ಈ ಹಾಸ್ಯ ಸ್ವಭಾವ ತಾವೂ ನಗುತ್ತಾ ಇನ್ನೊಬ್ಬರನ್ನೂ ನಗಿಸುವಂಥ ಸ್ವರೂಪದ್ದು. ಕೆಲವೊಮ್ಮೆ ಅವರು ತರಗತಿಯಲ್ಲೂ ಹಾಸ್ಯ ಚಟಾಕಿ ಹಾರಿಸುತ್ತಿದ್ದುದು ಉಂಟು. ಮೈತುಂಬ ಆಭರಣ ಹೇರಿಕೊಂಡು ಅಡ್ಡಾಡುತ್ತಿದ್ದ ಮಹಿಳೆಯನ್ನು ನೋಡಿದಾಗ ಅವರು ಬರೆದ ಚುಟಕ-"ಇವಳೇನು ನಾರಿಯೋ-ಒಡವೆಗಳ ಲಾರಿಯೋ?". ಒಮ್ಮೆ ಈ ಚುಟುಕ ಕ್ಲಾಸಲ್ಲಿ ಹೇಳಿ ನಮಗಿಂತ ಜೋರಾಗಿ ಅವರೇ ನಗುತ್ತಾ ಕೂತ ದೃಶ್ಯ ನನ್ನ ಕಣ್ಣಿಗೆ ಕಟ್ಟಿದೆ. ಈ ನಮ್ಮ ಗಹನ ಗಂಭೀರ ಕವಿ ಒಂದು ಕಾಲದಲ್ಲಿ ಹಾಸ್ಯಪದ್ಯಗಳನ್ನು ಬರೆಯುತ್ತಿದ್ದರು ಎಂದರೆ ಯಾರು ನಂಬುತ್ತಾರೆ? ಜಿಎಸ್ಸೆಸ್ ದಾವಣಗೆರೆ ಕಾಲೇಜಿನಲ್ಲಿ ಕನ್ನಡ ರೀಡರ್ ಆಗಿದ್ದಾಗ ಕನ್ನಡದ ಪ್ರಸಿದ್ಧ ಹಾಸ್ಯ ಸಾಹಿತಿ ನಾ.ಕಸ್ತೂರಿ ಕಾಲೇಜಿನ ಸೂಪರಿಂಟೆಂಡೆಂಟರು. ಆಗ ಅವರು ಜಿಎಸ್ಸೆಸ್ ಅವರಿಂದಲೂ ಕೆಲವು ಕನ್ನಡ ಹಾಸ್ಯ ಪದ್ಯಗಳನ್ನು ಬರೆಸುತ್ತಾರೆ. ಸಂಜೆಯಾದರೆ ಜಿಎಸ್ಸೆಸ್ ಮತ್ತು ಅವರ ಗೆಳೆಯರಾದ ಪ್ರಭುಪ್ರಸಾದರು ದಾವಣಗೆರೆಯ ಊರಾಚೆಯ ಬಯಲಿನ ಕಡೆ ತಿರುಗಾಡಲು ಹೋಗುತ್ತಿದ್ದರಂತೆ. ಅಲ್ಲಿದ್ದ ದಿಬ್ಬವೊಂದರ ಮೇಲೆ ಇಬ್ಬರೂ ಕುಳಿತು ಹರಟೆ ಹೊಡೆಯುತ್ತಿದ್ದರಂತೆ. ಇದನ್ನು ಗಮನಿಸಿದ ನಾ.ಕಸ್ತೂರಿ ಜಿಎಸ್ಸೆಸ್ ಅವರಿಗೆ ದಿಬ್ಬಯ್ಯ ಎಂದು ನಾಮಕರಣ ಮಾಡುತ್ತಾರೆ. ಕೊರವಂಜಿಯಲ್ಲಿ ಜಿಎಸ್ಸೆಸ್ ಬರೆದ ಅನೇಕ ಹಾಸ್ಯ ಪದ್ಯಗಳು ದಿಬ್ಬಯ್ಯ ಎಂಬ ನಾಮಾಂಕಿತದಲ್ಲಿ ಪ್ರಕಟವಾಗುತ್ತವೆ. ಅವುಗಳಲ್ಲಿ ಒಂದು ಓದುಗರ ಗಮನಕ್ಕಾಗಿ:


ಇಂದ್ರ ಭವನದಲಿ ಚಂದ್ರ ಮೂಡಿತೋ

ದೋಸೆ ಹಂಚಿನಲ್ಲಿ.

ಮೂಡಿತೆಂದೆಯೊ, ಮತ್ತೆ ಮುಳುಗಿತೋ

ಉದರ ಗಗನದಲ್ಲಿ!

ರಾಶಿಯವರಿಗೆ ತುಂಬ ಮೆಚ್ಚುಗೆಯಾದ ಪದ್ಯವಂತೆ ಇದು!

ಜಿಎಸ್ಸೆಸ್ ತಮ್ಮ ಅಸಮಗ್ರ ಆತ್ಮಕಥೆ ಚತುರಂಗದಲ್ಲಿ ವರ್ಣಿಸಿರುವ ಈ ಪ್ರಸಂಗವನ್ನು ನೋಡಿ: "ಒಂದು ಮಧ್ಯಾಹ್ನ ತರಗತಿ ಮುಗಿಸಿಕೊಂಡು, ಕಸ್ತೂರಿಯವರನ್ನು ನೋಡೋಣವೆಂದು ಅವರ ಕೊಠಡಿ ಪ್ರವೇಶಿಸಿದೆ. ಸಾಮಾನ್ಯವಾಗಿ ತುಂಬ ಲವಲವಿಕೆಯಿಂದ ಇರುತ್ತಿದ್ದ ಅವರು ಅಂದು ಯಾಕೋ ಸ್ವಲ್ಪ ಸುಸ್ತಾದವರಂತೆ ತೋರಿದರು. ನನ್ನನ್ನು ಕಂಡು ಬಾರಯ್ಯಾ ಬಾ, ಕ್ಲಾಸು ಮುಗೀತು ಅಂತ ಕಾಣುತ್ತೆ ಅಂದರು. ನಾನು ಹೌದು ಸಾರ್, ಯಾಕೋ ಇವತ್ತು ಸ್ವಲ್ಪ ಆಯಾಸಗೊಂಡವರಂತೆ ಕಾಣಿಸುತ್ತೀರಲ್ಲಾ? ಎಂದೆ. "ಇವತ್ತು ಬೆಳಿಗ್ಗೆಯಿಂದ ಬರೀ ಪುರಂದರ ದಾಸರ ಕೀರ್ತನೆ ಕೇಳೀ ಕೇಳೀ ಸಾಕಾಗಿದೆ ಕಣಯ್ಯ" ಅಂದರು. ನನಗೆ ಅರ್ಥವಾಗಲಿಲ್ಲ. ಅವರು ಮುಂದುವರೆಸಿದರು. "ಈಗ ಗೊತ್ತಲ್ಲ, ಫ್ರೀಶಿಪ್ಪು, ಸ್ಕಾಲರ್ ಶಿಪ್ಪು, ಡಿಸೈಡ್ ಮಾಡೋ ಕಾಲ. ಅದಕ್ಕಾಗಿ ಹುಡುಗರು ಬೆಳಿಗ್ಗೆಯಿಂದ ಬಂದು ಪೀಡಿಸುತ್ತಾ ಇದ್ದಾರೆ. ಒಬ್ಬ ಬರ್ತಾನೆ. ಸಾರ್ ರಾಮಯ್ಯನಿಗೆ ಹಾಫ್ ಫ್ರೀ ಕೊಟ್ಟಿದ್ದೀರಿ, ವೆಂಕಟಪ್ಪನಿಗೆ ಫುಲ್ ಫ್ರೀ ಕೊಟ್ಟಿದ್ದೀರಿ. ಸೋಮಣ್ಣನಿಗೆ ಸ್ಕಾಲರ್ ಶಿಪ್ ಕೊಡುವುದಾಗಿ ಹೇಳಿದ್ದೀರಿ...ನಂಗ್ಯಾಕೆ ಸಾ, ಒಂದು ಹಾಫ್ ಫ್ರೀನಾದರೂ ಕೊಡಬಾರದು?" ಹೀಗೆ ಪ್ರತಿಯೊಬ್ಬರೂ ಪುರಂದರದಾಸರ ಹಾಗೆ "ಅಜಾಮಿಳನಿಗೆ ನಾರಾಯಣ ಅಂದದ್ದಕ್ಕೆ ಒಲಿದೆ. ದ್ರೌಪದಿ ಕೃಷ್ಣಾ ಎಂದು ಕರೆದದ್ದಕ್ಕೆ ಅಕ್ಷಯ ವಸ್ತ್ರ ಕರುಣಿಸಿದೆ. ಗಜೇಂದ್ರ ಸೊಂಡಿಲೆತ್ತಿ ಕರೆದ. ಅವನಿಗೆ ಒಲಿದೆ. ನನಗ್ಯಾಕೆ ಕೃಪೆ ಮಾಡಬಾರದು?" ಇದೇ ತಾನೆ ದಾಸರ ಕೀರ್ತನೆಗಳ ಧಾಟಿ?"

ಜಿಎಸ್ಸೆಸ್ ಅವರಿಗೆ ಏಕವಚನದ ಗೆಳೆಯರು ತುಂಬಾ ಕಮ್ಮಿ. ಆ ಕಮ್ಮಿ ಜನರಲ್ಲಿ ಜಿ.ಬ್ರಹ್ಮಪ್ಪ ಒಬ್ಬರು. ಜಿಎಸ್ಸೆಸ್ ಬಿ.ಎ.ಆನರ್ಸ್ ಓದುತ್ತಿದ್ದ ಕಾಲ. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕಾಗಿ ಮೈಸೂರಿಂದ ಹಂಪೆಗೆ ಬಂದಿದ್ದಾರೆ. ಹಂಪೆಯಿಂದ ಮುಂದೆ ಅವರು ಬಾದಾಮಿಗೆ ಹೋಗಬೇಕು. ಎಲ್ಲ ಗಂಟುಮೂಟೆ ಕಟ್ಟಿ ಹೊಸಪೇಟೆಯ ರೈಲ್ವೇಸ್ಟೇಷನ್ ಗೆ ಹೊರಟಿದ್ದಾರೆ. ಸಹಪಾಠಿ ಜಿ.ಬ್ರಹ್ಮಪ್ಪನವರ ಸುದ್ದಿ ಸುಳಿವಿಲ್ಲ. ಎಲ್ಲಾ ಗಡಿಬಿಡಿಯಿಂದ ಬ್ರಹ್ಮಪ್ಪನವರಿಗಾಗಿ ಹಂಪಿಯಲ್ಲಿ ಅಲ್ಲಿ ಇಲ್ಲಿ ಪರದಾಡುತ್ತಿದ್ದರೆ ಬ್ರಹ್ಮಪ್ಪ ಯಾವುದೋ ಒಂದು ಮುರುಕು ಮಂಟಪದಲ್ಲಿ ಕೂತು ನಿಶ್ಚಿಂತೆಯಿಂದ ಏನೋ ಬರೆಯುತ್ತಿದ್ದಾರೆ. ಹೋಗಿ ಕೂಗಿದರೂ ಮಾತಡುತ್ತಿಲ್ಲ. ಎಲ್ಲರಿಗೂ ತಿಳಿಯುತ್ತದೆ. ಓಹೋ! ಬ್ರಹ್ಮಪ್ಪ ಕಾವ್ಯ ಸಮಾಧಿಯಲ್ಲಿದ್ದಾರೆ ಎಂದು. ರಾತ್ರಿ ಇವರದ್ದು ಪಟ್ಟದಕಲ್ಲಲ್ಲಿ ಬಿಡಾರ. ಜಿಎಸ್ಸೆಸ್ ಅವರ ಗೆಳೆಯರೊಬ್ಬರು ರಾತ್ರಿ ಎಲ್ಲರೂ ಕೂತು ಪಟ್ಟಾಂಗ ಹೊಡೆಯುತ್ತಿರುವಾಗ ಪ್ರಾಧ್ಯಾಪಕ ರಾಘವಾಚಾರ್ ಗೆ ಹೇಳುತ್ತಾರೆ. "ಸಾರ್ ಬ್ರಹ್ಮಪ್ಪನವರು ಒಂದು ಭಾರೀ ಕಾವ್ಯವನ್ನು ಬರೆದು ಮುಗಿಸಿದ್ದಾರೆ ಹಂಪೆಯಲ್ಲಿ. ಅದನ್ನು ಓದಲು ಹೇಳಿ ಸಾರ್" . ಆ ಪ್ರಸಂಗವನ್ನು ಜಿಎಸ್ಸೆಸ್ ವರ್ಣಿಸುವ ಕ್ರಮವನ್ನು ಗಮನಿಸಿ: " ಕೂಡಲೇ ಬ್ರಹ್ಮಪ್ಪನವರು ತಮ್ಮ ಕೈಚೀಲದಿಂದ ಒಂದು ನೋಟ್ ಬುಕ್ ತೆರೆದು, ಒಂದು ಚಿಟಕಿ ನಶ್ಯ ಏರಿಸಿ, ತಮ್ಮ ಹೊಚ್ಚ ಹೊಸ ಕಾವ್ಯವನ್ನು ಓದಲು ಸಿದ್ಧರಾದರು. ರಾತ್ರಿ ಹನ್ನೊಂದೂವರೆ ಗಂಟೆ. ನಿಶ್ಶಬ್ದವಾದ ಹಳ್ಳಿ. ಇಡೀ ಹಳ್ಳಿಯ ಮೇಲೆ ಬೆಳದಿಂಗಳು. ಆದರೆ ಕೆಳಗಿನ ಮುರುಕು ಹೆಂಚಿನ ಮನೆಯೊಳಗೆ ಉರಿಯುವ ಲಾಟೀನಿನ ಸುತ್ತಾ ಕುತೂಹಲಭರಿತರಾದ ಸಹೃದಯ ವೃಂದ. ಕವಿಗೆ ಇದಕ್ಕಿಂತ ಪ್ರಶಸ್ತವಾದ ಸಂದರ್ಭ ಬೇರೆ ಬೇಕೆ? ನಶ್ಯವನ್ನು ಮತ್ತೆ ಒಮ್ಮೆ ಮೂಗಿಗೆ ಏರಿಸಿ ಕರ್ಚೀಫಿನಿಂದ ಮೂಗೊರೆಸಿಕೊಂಡು ಶುರು ಮಾಡಿದರು ಬ್ರಹ್ಮಪ್ಪನವರು.

ಹಂಪೆಯ ಬಳಿ ಹರಿಯುತಿದೆ ತುಂಗಭದ್ರೆ

ಇದ ನೋಡಿದರೆ ನನಗೆ ಬರುವುದು ನಿದ್ರೆ

-ಎಂದು ಅವರು ತಮ್ಮ ಮಹಾಕಾವ್ಯದ ಮೊದಲೆರಡು ಪಂಕ್ತಿಗಳನ್ನು ಓದುತ್ತಲೇ, ಹಂಪೆಯಿಂದ ದೂರದ ಪಟ್ಟದಕಲ್ಲಿನ ಮುರುಕು ಮನೆಯಲ್ಲಿ ನಿದ್ರೆ ಬರುವ ಹಾಗಿದ್ದ ನಾವೆಲ್ಲಾ ಹೋ ಎಂದು ನಕ್ಕು ಪ್ರತಿಕ್ರಿಯೆಯನ್ನು ತೋರಿದೆವು. ತುಂಗಭದ್ರಾ ನದಿಯ ವರ್ಣನೆ, ಹಾಗೂ ಹಾಳು ಹಂಪೆಯನ್ನು ಕುರಿತ ಪ್ರತಿಕ್ರಿಯೆಗಳಿದ್ದ ಆ ಕಾವ್ಯ ಮುಂದೆ-


ರಾಣಿಯರ ರಾಗದ ರಾಟೆ ತಿರುವಿದ ತಾಣದಲಿ

ಕತ್ತೆಗಳು ಲದ್ದಿಯನಿಕ್ಕುತ್ತಿದ್ದವು ಸೋಗಿನಲಿ

ಎಂಬ ಚರಣಕ್ಕೆ ಬಂದ ಕೂಡಲೇ, ರಾಘವಾಚಾರ್ಯರು ಅದೇನಪ್ಪಾ ಸೋಗಿನಲಿ?- ಅಂದರೆ, 'ತಾಣದಲಿ ಅನ್ನೋದಕ್ಕೆ ಪ್ರಾಸವಾಗಿ ಬಂದಿದೆ ಸಾರ್ ಸೋಗಿನಲಿ ಅನ್ನುವುದು' ಅಂದರು ಬ್ರಹ್ಮಪ್ಪ."

ಬೆಂಗಳೂರಿನಲ್ಲಿ ಜಿಎಸ್ಸೆಸ್ ಪ್ರಾಧ್ಯಾಪಕರಾಗಿದ್ದಾಗ(೧೯೭೦ ರ ಸುಮಾರು) ಜಿಎಸ್ಸೆಸ್ ತಮ್ಮ ಸಹೋದ್ಯೋಗಿಗಳೊಡನೆ ಕರಗ ನೊಡಲಿಕ್ಕೆ ಹೋಗುತ್ತಾರೆ. ಕರಗ ಹಾದು ಹೋಗುವ ಕಬ್ಬನ್ ಪೇಟೆಯ ಎರಡೂ ಬದಿಯಲ್ಲಿ ಜನ ಜಮಾಯಿಸಿಬಿಟ್ಟಿದ್ದಾರೆ. ಜಿಎಸ್ಸೆಸ್ ಬರೆಯುತ್ತಾರೆ: " ಇಂಥಾ ಪರಿಸರದಲ್ಲಿ ನಾವೂ ಕಡಲೇ ಕಾಯಿ ತಿನ್ನುತ್ತಾ , ಲುಂಗಿ ಪಂಚೆ ಉಟ್ಟು, ಕೊರಳಿಗೆ ಮಫ್ಲರು ಸುತ್ತಿ, ಕರಗದ ಆ ಬೆಳದಿಂಗಳ ಇರುಳಿನಲ್ಲಿ ಜನಜಂಗುಳಿಯ ನಡುವೆ ಅಡ್ಡಾಡುತ್ತಾ, ಕರಗವನ್ನು ತೀರ ಹತ್ತಿರದಿಂದ ವೀಕ್ಷಿಸಲು ತಕ್ಕ ಸ್ಥಳವೊಂದರ ಸಂಶೋಧನೆಯಲ್ಲಿ ತೊಡಗಿದೆವು. ಕರಗ ಹಾದುಹೋಗುವ ಕಬ್ಬನ್ಪೇಟೆಯಿಕ್ಕಟ್ಟಿನ ಬೀದಿಯ ಎರಡೂ ಬದಿಗೆ ನಿಲ್ಲಲು ಕೂಡಾ ಸ್ಥಳವಿಲ್ಲದಂತೆ ಜಮಾಯಿಸಿದ್ದ ಜನದ ನಡುವೆ ನಿಂತರೆ, ಕೇವಲ ನಿಂತೇ ಇರಬೇಕಾದಂಥ ಸ್ಥಿತಿಗೆ ಹೆದರಿ , ಎಲ್ಲಾದರೂ ಕೂತು ನಿಧಾನವಾಗಿ ವೀಕ್ಷಿಸಲು ಸರಿಯಾದ ಸ್ಥಳ ದೊರೆತೀತೆ ಎಂದು ಅತ್ತ ಇತ್ತ ನೋಡುವಾಗ, ಕೆಲವರು ದೊಡ್ಡದೊಂದು ಏಣಿಯನ್ನು ತಂದು ಅತ್ತ ಇತ್ತ ನಿಂತ ಮನೆಗಳ ತಾರಸಿಯ ಮೇಲೆ ಜನರನ್ನು ಹತ್ತಿಸುವುದನ್ನು ಕಂಡೆವು. ಹೌದಲ್ಲ! ಈ ಏಣಿಯ ಮೇಲಿಂದ ಹೋಗಿ ಮನೆಯ ತಾರಸಿಯ ಮೇಲೆ ಕೂತರೆ ಕೆಳಗೆ ಬರುವ ಕರಗವನ್ನು , ಅದರ ಹಿಂದೆ ಮುಂದೆ ಬರುವ ಉತ್ಸವಗಳನ್ನು ಸಲೀಸಾಗಿ ನೋಡಬಹುದಲ್ಲ ಅನ್ನಿಸಿತು. ಹೋಗಿ ವಿಚಾರಿಸಿದರೆ ಏಣಿ ಹತ್ತಿ ಹೋಗಲು ಒಬ್ಬೊಬ್ಬರಿಗೆ ಕೇವಲ ನಾಲ್ಕೇ ಆಣೆ(ಇಪ್ಪತ್ತೈದು ಪೈಸೆ) ಎಂಬುದು ತಿಳಿಯಿತು. ಸರಿ, ನಾವೂ ಹಿಂದೆ ಮುಂದೆ ನೋಡದೆ , ನಾಲ್ಕು ನಾಲ್ಕು ಆಣೆ ತೆತ್ತು, ಸರಸರನೆ ಏಣಿಯ ಮೆಟ್ಟಿಲ ಮೇಲೆ ಹತ್ತಿ ಯಾರದೋ ಮನೆಯ ತಾರಸಿಯನ್ನು ತಲಪಿದೆವು! ಅದೊಂದು ವಿಸ್ತಾರವಾದ ಮೇಲುಪ್ಪರಿಗೆ. ಅದರ ತುಂಬಾ ಸಾಕಷ್ಟು ಕಸ ಧೂಳು. ಆದರೂ ಅಲ್ಲೇ ಕೂತು, ನಾವು ಕೊಂಡು ತಂದಿದ್ದ ಕಳ್ಳೇಪುರಿ ಹಾಗೂ ಕಡಲೇ ಕಾಯನ್ನು ಮೆಲ್ಲುತ್ತಾ, ಮೇಲಿನ ಆಕಾಶದಲ್ಲಿ ರಾರಾಜಿಸುವ ಪೂರ್ಣಚಂದ್ರನನ್ನೂ, ಆ ಚಂದ್ರಮಂಡಲದಿಂದ ಸುರಿಯುವ ಬೆಳದಿಂಗಳಲ್ಲಿ ಬೆಪ್ಪು ತಕ್ಕಡಿಗಳಂತೆ ಮಂಕಾಗಿ ಪಿಳಿ ಪಿಳಿ ಕಣ್ಣು ಬಿಡುವ ನಗರದ ವಿದ್ಯುದ್ದೀಪಗಳನ್ನೂ , ಕೆಳಗಿನ ಬೀದಿಯಲ್ಲಿ ಗೋಚರಿಸುವ ಜನಸಂದಣಿಯ ಚಲನವಲನವನ್ನೂ ನೋಡುತ್ತಾ ಕುಳಿತೆವು. ಆ ತಾರಸಿಯ ಅಂಚಿಗೆ ಎರಡಡಿಯ ಸಣ್ಣ ಗೋಡೆಯೊಂದು ಇದ್ದುದರಿಂದ ಯಾವುದೇ ಆತಂಕವಿಲ್ಲದೆ , ಬರುವ ಕರಗದ ದಾರಿ ಕಾಯ್ದುಕೊಂಡು, ಅದೂ ಇದೂ ಹರಟೆಹೊಡೆಯುತ್ತಾ ಕೂತೆವು." ಹೀಗೆ ಉಪ್ಪರಿಗೆಯಲ್ಲಿ ಕೂತು ಜಿಎಸ್ಸೆಸ್ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಚಿದಾನಂದ ಮೂರ್ತಿ, ಕೆ.ಮರುಳಸಿದ್ದಪ್ಪ ಮೊದಲಾದವರು ಕರಗದ ವೈಭವವನ್ನೇನೋ ಮನದಣಿಯ ಸವಿಯುತ್ತಾರೆ. ಕರಗ ದರ್ಶನ ಮುಗಿದಾಗ ರಾತ್ರಿ ಎರಡು ಗಂಟೆ ಸಮಯ. ತಾರಸಿ ಮೇಲೆ ಕೂತ ಇವರು ಈಗ ಕೆಳಗೆ ಇಳಿಯ ಬೇಕು. ಇಳಿಯಬೇಕಾದರೆ ಏಣಿಗಳು ಬೇಕು. ಆದರೆ ಅಲ್ಲಿ ಏಣಿಗಳೇ ಇಲ್ಲ. ಇವರಿಂದ ನಾಲ್ಕಾಣೆ ವಸೂಲು ಮಾಡಿ ಮೇಲಕ್ಕೆ ಹತ್ತಿಸಿದವನು ಮಂಗಮಾಯವಾಗಿಬಿಟ್ಟಿದ್ದಾನೆ. ತಾರಸಿ ಹತ್ತಿಸುವುದಕ್ಕೆ ಅವನು ಇವರಿಂದ ನಾಲ್ಕಾಣೆ ವಸೂಲು ಮಾಡಿದ್ದ. ಆಗ ಇಳಿಸುವ ಅಗ್ರೀಮೆಂಟೇನೂ ಆಗಿರಲಿಲ್ಲವಲ್ಲ! ಮುಂದೆ ಜಿಎಸ್ಸೆಸ್ ಮೊದಲಾದವರು ಹೇಗೆ ಏಣಿಯಿಲ್ಲದೆ ತಾರಸಿಯಿಂದ ಕೆಳಗಿಳಿದರು ಎಂಬುದನ್ನು ತಿಳಿಯಲು ನೀವು ಜಿಎಸ್ಸೆಸ್ ಅವರ 'ಚತುರಂಗ'ವನ್ನೇ ಓದಬೇಕು! ನಾನಂತೂ ಸಸ್ಪೆನ್ಸ್ ಉಳಿಸಲು ಬಯಸುತ್ತೇನೆ! ಜಿಎಸ್ಸೆಸ್ ಅವರ ಪ್ರವಾಸ ಕಥನದಲ್ಲೂ ಇಂಥಾ ಅನೇಕ ಹಾಸ್ಯಮಯವಾದ ವರ್ಣನೆಗಳು ಬರುತ್ತವೆ. ಜಿಎಸ್ಸೆಸ್ , ರುದ್ರಾಣಿ ಮತ್ತು ಪದ್ಮಾ ಅವರ ಜೊತೆ ಹಿಮಾಲಯ ಯಾತ್ರೆಗೆ ಹೋಗಿದ್ದಾಗ, ಯಾತ್ರಾರ್ಥಿಗಳು ಕಂಡಿವಾಲಾಗಳ ಬೆನ್ನ ಬುಟ್ಟಿಯಲ್ಲಿ ಕೂತು ಪರ್ವತವನ್ನೇರಬೇಕಷ್ಟೆ? ಜಿಎಸ್ಸೆಸ್, ರುದ್ರಾಣಿ ಮತ್ತು ಪದ್ಮಾ ಅವರು, ಮೂವರು ಕಂಡಿವಾಲಾಗಳ ಬೆಣ್ಣೇರಿ ಪರ್ವತ ಯಾನವನ್ನು ಪ್ರಾರಂಭಿಸುತ್ತಾರೆ. ಕೇದಾರದಿಂದ ನಮ್ಮ ಪಯಣಿಗರು ಕಂಡಿಗಳಲ್ಲಿ ಕುಳಿತು ಬರುತ್ತಿರುವಾಗ ತಮಗೆ ತಮ್ಮ ಶ್ರೀಮತಿಯರು ಹೇಗೆ ಕಂಡರು ಎಂಬುದನ್ನು ಜಿಎಸ್ಸೆಸ್ ವರ್ಣಿಸುತ್ತಾರೆ: "ಸ್ವಲ್ಪ ದೂರ ನಡೆದ ನಂತರ ಅಲ್ಲೊಂದು ಸರಿಯಾದ ಸ್ಥಳ ನೋಡಿ ಮತ್ತೆ ಕಂಡಿಯಲ್ಲಿ ಕೂರುವ ಸಿದ್ಧತೆ ನಡೆಸಿದೆವು. ಮೊದಲು ನಮ್ಮ ಮನೆಯವರು ಕಂಡಿಗಳಲ್ಲಿ ಕುಳಿತರು. ನಾನು ಇನ್ನೂ ಸ್ವಲ್ಪ ದೂರ ನಡೆದೇ ಹೋಗುವ ಅಪೇಕ್ಷೆಯಿಂದ ಹಿಂದೆ ಹೊರಟೆ. ಆ ಎತ್ತರದಲ್ಲಿ , ಹೊತ್ತು ನಡುಹಗಲನ್ನು ಸಮೀಪಿಸುತ್ತಿದ್ದರೂ ಚಳಿಯ ಕೊರೆತವೇನೂ ಕಡಿಮೆಯಾಗಿರಲಿಲ್ಲ. ಮೈತುಂಬ ಶಾಲು ಹೊದ್ದು, ತಲೆಗಳಿಗೆ ಉಣ್ಣೆಯ ಮಫ್ಲರುಗಳನ್ನು ಸುತ್ತಿಕೊಂಡು, ಕಂಡಿಯ ಬಿದಿರು ಬುಟ್ಟಿಯಲ್ಲಿ ಮುದುರಿಕೊಂಡು ಕೂತಿದ್ದ ನಮ್ಮ ಮನೆಯವರಿಬ್ಬರೂ ಗ್ರಾಮದೇವತೆಯರಂತೆ ವಿರಾಜಮಾನರಾಗಿದ್ದರು. ನನಗೆ ಒಂದು ಕ್ಷಣ ನಗು ಬಂತು. ನಾನು ಸಹ ಕೋಟು ತೊಟ್ಟು, ಮುಸುಕು ಟೋಪಿ ಹಾಕಿಕೊಂಡಿದ್ದರಿಂದ , ಕಂಡಿಯಲ್ಲಿ ಕೂತ ಸಮಯದಲ್ಲಿ, ಅವರ ಕಣ್ಣಿಗೆ ನಾನೂ ಏನೇನೋ ಆಗಿ ಕಾಣಿಸಲು ಸಾಧ್ಯ ಎಂದುಕೊಳ್ಳುತ್ತಾ ಹಿಂದೆ ನಡೆದೆ." ಇದು ಜಿಎಸ್ಸೆಸ್ ಅವರ ಹಾಸ್ಯ ಮನೋಧರ್ಮ. ಇನ್ನೊಬ್ಬರನ್ನು ನೋಡಿ ನಗುವಂತೆ , ತಮ್ಮನ್ನೂ ನೋಡಿ ನಗುವುದು ಸಾಧ್ಯವಾದಾಗ ಆ ಹಾಸ್ಯ ಸದಭಿರುಚಿಯ ಹಾಸ್ಯವಾಗುತ್ತದೆ. ಜಿಎಸ್ಸೆಸ್ ಅವರದ್ದು ಆ ಬಗೆಯ ಹಾಸ್ಯ ಮನೋಧರ್ಮ.

Friday, November 20, 2009

ವಿರಾಟಪರ್ವ...

ಅಲ್ಲಾಡಿ ರುದ್ರಣ್ಣನವರ ಪತ್ರ ನನ್ನನ್ನು ಆತಂಕಕ್ಕೆ ಈಡುಮಾಡಿತು. ಎರಡೇ ಸಾಲು. ಭದ್ರಕ್ಕ ನೆಲ ಹಿಡಿದಿದ್ದಾಳೆ. ಅವಳ ಕೊನೆಯ ಆಸೆಯಂತೆ ಗೊಂಬೆ ಮ್ಯಾಳ ಏರ್ಪಡಿಸಲಾಗಿದೆ. ತಕ್ಷಣ ಹೊರಟು ಬರತಕ್ಕದ್ದು. ಭದ್ರಕ್ಕ ನೆಲ ಹಿಡಿದಿದ್ದಾಳೆ ಎನ್ನುವ ಮಾತು ನನ್ನ ಕರುಳನ್ನು ಕಿವುಚಿತು. ಬದ್ರಕ್ಕ ನಮ್ಮ ಮನೆತನಕ್ಕೆ ಮೊದಲಿಂದ ಹತ್ತಿರದವಳು. ಆಕೆಯೂ ನಮ್ಮ ಅಜ್ಜಿಯೂ ಆಪ್ತ ಗೆಳತಿಯರು. ನಮ್ಮ ಕೇರಿಯಲ್ಲೇ ಭದ್ರಕ್ಕನ ಮನೆಯೂ ಇತ್ತು. ಓಣಿಯಾಕಾರದ ದೊಡ್ಡ ಮನೆ. ಅದರಲ್ಲಿ, ಪಾಪ, ಒಬ್ಬಳೇ ಮುದುಕಿ ವಾಸವಾಗಿದ್ದಳು. ಕ್ಷಮಿಸಿ. ಒಬ್ಬಳೇ ಅನ್ನುವುದು ತಪ್ಪು. ಅವಳ ಜೊತೆಗೆ ಅವಳ ಹತ್ತು ರಾಸುಗಳೂ ಆ ಮನೆಯಲ್ಲಿ ಇದ್ದವು. ಒಂದೆರಡು ಒದ್ದುಕೊಂಡಿದ್ದರೂ ಏಳೆಂಟು ಎಮ್ಮೆಗಳಾದರೂ ಅವಳ ಮನೆಯಲ್ಲಿ ಹಾಲು ಕರೆಯುತ್ತಲೇ ಇದ್ದವು. ಜೊತೆಗೆ ಒಂದೆರಡು ಮಣಕ. ನಾಕಾರು ಸಣ್ಣ ಕರುಗಳು. ದೊಡ್ಡ ಸಂಸಾರ ಭದ್ರಕ್ಕನದು. ನಮ್ಮ ಊರಿನ ಹೆಚ್ಚಿನ ಮನೆಗಳಿಗೆ ಭದ್ರಕ್ಕನ ಮನೆಯಿಂದಲೇ ಹಾಲು ಸರಬರಾಜು ಆಗುತಿತ್ತು. ಮನೆಗಳು ಮಾತ್ರವಲ್ಲ ರುದ್ರಣ್ಣನ ಹೋಟೆಲ್ಲಿಗೂ ಭದ್ರಕ್ಕನೇ ಹಾಲು ಕಳಿಸುತ್ತಿದ್ದಳು. ರಾಸು ಸಾಕುವುದರಲ್ಲಾಗಲಿ, ಅವಕ್ಕೆ ಬ್ಯಾನೆ ಬೇಸರಿಕೆ ಆದಾಗ ಔಷಧೋಪಚಾರ ಮಾಡುವುದರಲ್ಲಾಗಲೀ, ಟೊಂಕದ ಮೇಲೆ ಬೆನ್ನನ್ನು ಒತ್ತಿ ಹಿಡಿದು ಅದು ಈದಮೇಲೆ ಎಷ್ಟು ಹಾಲು ಕೊಡಬಹುದು ಎಂಬುದನ್ನು ಕರಾರುವಾಕ್ಕಾಗಿ ಊಹಿಸುವುದರಲ್ಲಾಗಲೀ, ಹಲ್ಲುಬಿಡಿಸಿ ಅವುಗಳ ವಯಸ್ಸು ಹೇಳುವುದರಲ್ಲಾಗಲೀ, ಅವುಗಳ ಸುಳಿ ನೋಡಿ ಶುಭ ಅಶುಭ ಹೇಳುವುದರಲ್ಲಾಗಲೀ ಭದ್ರಕ್ಕನನ್ನು ಮೀರಿಸುವರೇ ಆಸುಪಾಸಲ್ಲಿ ಇರಲಿಲ್ಲ ಎಂದರೆ ನೀವು ನಂಬಬೇಕು. ತಾನಾಯಿತು ತನ್ನ ಎಮ್ಮೆಗಳಾಯಿತು, ಅವುಗಳ ಕರುಗಳಾಯಿತು...ಈ ಪ್ರಪಂಚದಲ್ಲಿ ಇಡೀ ದಿನ ಭದ್ರಕ್ಕನ ಸಮಯ ಕಳೆದು ಹೋಗುತ್ತಿತ್ತು. ಬೆಳಗಾದರೆ ಅವನ್ನು ಮನೆಯಿಂದ ಹಿತ್ತಲಿಗೆ ಒಯ್ದು ಅವುಗಳ ಮೈ ತೊಳೆಯುವುದು, ಆಮೇಲೆ ಕೊಟ್ಟಿಗೆ ಕ್ಲೀನು ಮಾಡಿ ಹೊಸ ಹುಲ್ಲು ಹಾಕಿ ದನಗಳನ್ನು ಒಳಗೆ ಕಟ್ಟುವುದು, ಬಳಿಕ ತಾನು ಮೈತೊಳಕೊಂಡು, ಶಿವಪೂಜೆ ಮುಗಿಸಿ, ಕರುಬಿಟ್ಟು, ಆಮೇಲೆ ಹಾಲು ಕರೆದು, ಮುಖದ ತುಂಬ ಬೆವರ ಹನಿ ಮುಡಕೊಂಡು ಹೊರಕ್ಕೆ ಬಂದು, ಗುಪ್ಪೆ ಮಂಚದ ಮೇಲೆ ಕಾಲು ಚಾಚಿ ಕೂತು ಶಿವನೇ ಎಂದು ಅವಳು ಉದ್ಗಾರ ತೆಗೆಯುವುದು. ಅಷ್ಟರಲ್ಲಿ ಹಾಲಿಗಾಗಿ ವರ್ತನೆಯ ಮನೆಯವರು ಬರಲು ಶುರುವಾಗುತ್ತಿತ್ತು. ಆ ವೇಳೆಗಾಗಲೇ ಭದ್ರಕ್ಕ ಧರ್ಮ ಕರ್ಮ ನೋಡಿ ಹಾಲಿಗೆ ಎಷ್ಟು ನೀರು ಬೆರೆಸಿದರೆ ಅನ್ಯಾಯವಾಗುವುದಿಲ್ಲವೋ ಅಷ್ಟು ಮಾತ್ರ ನೀರು ಬೆರೆಸಿ ವರ್ತನೆಯವರಿಗೆ ಹಾಲು ಅಳೆದು ಕೊಡುತ್ತಿದ್ದಳು. ಭದ್ರಕ್ಕನ ಮನೆಯಷ್ಟು ಗಟ್ಟಿ ಹಾಲು, ಹಾಲು ಹೈನಿಗೆ ಪ್ರಸಿದ್ಧವಾಗಿದ್ದ ಎರಗಟ್ಟೀಹಳ್ಳಿಯಲ್ಲೂ ಸಿಕ್ಕುವುದಿಲ್ಲ ಎಂದು ಆ ಕಾಲದಲ್ಲಿ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಎಮ್ಮೆ ಸಾಕುವುದು, ಹಾಲು ಮಾರುವುದು ಅಷ್ಟೇ ಭದ್ರಕ್ಕನ ಜೀವನವಾಗಿದ್ದರೆ ಅವಳ ನೆನಪು ನನ್ನಲ್ಲಿ ಇಷ್ಟು ಗಾಢವಾಗಿ ಉಳಿಯುತ್ತಿರಲೇ ಇಲ್ಲ. ದನಗಳನ್ನು ಜಂಗ್ಲಿಗೆ ಹೊಡೆದ ಮೇಲೆ ಬೇಗ ಬೇಗ ನಾಷ್ಟ ಮುಗಿಸಿ ಭದ್ರಕ್ಕ ಒಂದು ಸಣ್ಣ ಸರ್ಕೀಟು ಹೊಡೆಯುತ್ತಿದ್ದಳು. ಭದ್ರಕ್ಕ ಆರಡಿಯ ಆಜಾನುಬಾಹು ಆಳು. ಸೀರೆ ಸ್ವಲ್ಪ ಮೇಲಕ್ಕೇ ಉಟ್ಟುಕೊಳ್ಳುತ್ತಿದ್ದಳು. ಅಥವಾ ಹೀಗೆ ಹೇಳೋಣ. ಎಂಥ ದೊಡ್ಡ ಪನ್ನದ ಸೀರೆ ತಂದರೂ ಅದು ಭದ್ರಕ್ಕನ ಎತ್ತರಕ್ಕೆ ಒಂದು ಗೇಣು ಕಮ್ಮಿಯೇ ಆಗುತ್ತಿತ್ತು. ಸರಿ. ಆ ಸೀರೆ ಸೆರಗನ್ನು ಭದ್ರಕ್ಕ ತಲೆ ಅರ್ಧ ಮುಚ್ಚುವಂತೆ ಹೊದ್ದು, ಸೆರಗಿನ ಚುಂಗನ್ನು ಹಲ್ಲಲ್ಲಿ ಕಚ್ಚಿಕೊಂಡು , ಎರಡೂ ಕೈ ರಮ ರಮ ಬೀಸಿಕೊಂಡು ಬೀದಿಯಲ್ಲಿ ಬರುತ್ತಿದ್ದರೆ ಅದೊಂದು ವೈಭವ . ಅವಳ ನಡಿಗೆಯಲ್ಲಿ ಹೆಣ್ತನದ ನಯನಾಜೂಕು ಇರುತ್ತಿದ್ದಿಲ್ಲ. ಜೀಕು ಮೆಟ್ಟು ಹಾಕಿಕೊಂಡು ಜೀಕು ಜೀಕು ಸದ್ದು ಮಾಡುತ್ತಾ ಅವಳು ಬರುತ್ತಾ , ಗಟ್ಟಿಯಾಗಿ ನಗುತ್ತಾ, ತನ್ನ ಗಂಡು ಧ್ವನಿಯಲ್ಲಿ "ಅಕ್ಕಾ...ಕಾಫೀ ಆತೇನೇ?" ಎಂದು ಗಟ್ಟಿಯಾಗಿ ಕೂಗುತಾ ಇದ್ದಳು. ನಮ್ಮಜ್ಜಿ ಬಾರೇ ಬಾರೇ ಭದ್ರಕ್ಕ ಎಂದು ಭದ್ರಕ್ಕನನ್ನು ಕರೆದು, ಅವಳಿಗೆ ಚಾಪೆ ಕೊಡವಿ ಹಾಸಿ-ನಿನ್ನ ಹಾಲಿನ ಉಸಾಬರಿ ಎಲ್ಲಾ ಮುಗೀತಾ ? ಎಂದು ಕೇಳುತ್ತಿದ್ದಳು. "ಹಾಲು ಕಳಿಸೇ ಮತ್ತೆ ನಿಮ್ಮ ಹಟ್ಟೀಗೆ ಕಾಫೀ ನೀರಿಗೆ ಬಂದದ್ದು..!" ಎಂದು ಭದ್ರಕ್ಕ ಗಟ್ಟಿಯಾಗಿ ನಗುತ್ತಾ ಇದ್ದಳು. ಆ ಧ್ವನಿ ಕೇಳಿ ಭದ್ರಕ್ಕ ಬಂದಳೂ ಅಂತ ಕಾಣತ್ತೆ ಎಂದು ಇನ್ನೂ ಹಾಸಗೆಯಲ್ಲಿ ಗುಬುರಿಕೊಂಡಿರುತ್ತಾ ಇದ್ದ ನಾನು ಹೊರಗೆ ಓಡಿ ಬರುತಾ ಇದ್ದೆ. ಭದ್ರಕ್ಕ ನನ್ನನ್ನು ನೋಡಿ-"ಯವ್ವ ನನ್ನ ಚಂದುಳ್ಳಿ ಚಲುವರಾಯ ಬಂತಲ್ಲಪ್ಪಾ... ಏ ನನ್ನ ಬಂಗಾರದ್ ಬುಗುಡಿ...ಯಾವತ್ತೋ ನನ್ನಾನಿನ್ನಾ ಮದವೀ ಮುಹೂರ್ತ?" ಎಂದು ನಗೆಸಾರ ಮಾಡುತ್ತಾ ಅಟ್ಟಿಸಿಕೊಂಡು ಬರುತ್ತಾ ಇದ್ದಳು. ಇಬ್ಬರ ನಡುವೆ ಒಂದು ಸಣ್ಣ ಸ್ಪರ್ಧೆ ನಡೆದು ಕೊನೆಗೆ ನಾನು ಭದ್ರಕ್ಕನ ಕೈವಶವಾಗದೆ ನಿರ್ವಾಹವಿರಲಿಲ್ಲ. ಭದ್ರಕ್ಕ ನನ್ನನ್ನು ಎತ್ತಿಕೊಂಡು ತನ್ನ ಎರಡು ದಿನದ ಗಡ್ಡದ ಮೊಳಕೆ ಕೆನ್ನೆಗೆ ಚುಚ್ಚುತ್ತಾ ಬುಳು ಬುಳು ಮಾಡುತಾ ಇದ್ದಳು.
ಹೀಗೆ ಹಾಸ್ಯ, ನಗೆಚಾಟಿಕೆ, ಜೀವನೋತ್ಸಾಹಗಳಿಂದ ನಮ್ಮ ಸಣ್ಣ ಹಳ್ಳಿಯಲ್ಲಿ ಭದ್ರಕ್ಕ ಎಲ್ಲರ ಮನೆಯ ಹೆಣ್ಣುಮಗಳಾಗಿದ್ದಳು. ಆಕೆಯನ್ನು ಕಂಡರೆ ಎಲ್ಲರಿಗೂ ಒಂದು ಬಗೆಯ ಮಮಕಾರ. ಊರೊಟ್ಟಿನ ಬಾಳಲ್ಲಿ ಭದ್ರಕ್ಕನಿಲ್ಲದೆ ಯಾವುದೂ ನಡೆಯುವಂತಿರಲಿಲ್ಲ. ಜಾತ್ರೆಯಾಗಲೀ, ತೆಪ್ಪವಾಗಲೀ, ಬಯಲುಬಸವನ ನೀರ್ಮಜ್ಜನವಾಗಲೀ ಭದ್ರಕ್ಕ ಗಟ್ಟಿ ದನಿಯಲ್ಲಿ ಕೂಗುತ್ತಾ ನಗುತ್ತಾ ಮುಂದೆ ಇರಲೇ ಬೇಕು. ಗೌಡರು, ಶಾನುಭೋಗರೂ ಎಲ್ಲರ ಜತೆಗೂ ಅವಳಿಗೆ ಬಹಳ ಸಲುಗೆ. ವಯೋವೃದ್ಢರಾದ ಪುರೋಹಿತರ ಕೈ ಹಿಡಿದು ಎಳೆದು ನಗೆಚಾಟಿಕೆ ಮಾಡುವ ಸಲುಗೆ ನಮ್ಮೂರಲ್ಲಿ ಭದ್ರಕ್ಕನಿಗಲ್ಲದೆ ಬೇರೆ ಯಾರಿಗೆ ಇತ್ತು?
ಜೊತೆಗೆ ಭದ್ರಕ್ಕ ಮಹಾ ಕಲಾಪ್ರೇಮಿಯಾಗಿದ್ದಳು. ಚನ್ನಗಿರಿಯ ಟೆಂಟಿಗೆ ಯಾವ ಸಿನಿಮಾ ಬಂದಿದೆ ಎಂಬುದು ಎಲ್ಲರಿಗಿಂತಾ ಮುಂಚೆ ಅವಳಿಗೆ ಗೊತ್ತಾಗುತ್ತಾ ಇತ್ತು. "ಅಕ್ಕಾ...ಮದಾಲಸೆ ಅಂತ ಸಿನಿಮಾ ಬಂದೈತಂತೆ...ಭೋ ಚಂದಾಗದಂತೆ...ಹೋಗೋಣೇನ್ರಿ ಚನ್ನಗಿರಿಗೆ?" ಎಂದು ಸಂಜೆ ನಾಕಕ್ಕೇ ಬಂದು ನಮ್ಮ ಅಜ್ಜಿಗೆ ದುಂಬಾಲು ಬೀಳುತ್ತಿದ್ದಳು. ಗಾಡಿ ಸಿಗಬೇಕಲ್ಲವ್ವಾ ಎಂದು ನಮ್ಮ ಅಜ್ಜಿ ರಾಗ ಎಳೆಯುತ್ತಿದ್ದಳು. "ಬಸಣ್ಣಂದು ಕಾರಿಲ್ವಾ ನಮ್ಮ ತಾವು?". ಎಂದು ಭದ್ರಕ್ಕ ಯಥಾಪ್ರಕಾರ ಗಟ್ಟಿಯಾಗಿ ನಗುತಾ ಇದ್ದಳು. ಅಲ್ಲಿಗೆ ನಾವು ಚನ್ನಗಿರಿಗೆ ಹೋಗೋದು ಖಾತ್ರಿಯಾದಂತೆ. ಬಸಣ್ಣ ಕೀಲು ಹೆರೆದು ಬಂಡಿ ರೆಡಿ ಮಾಡೋನು. ಇನ್ನೂ ಒಂದೆರಡು ಮನೆಯವರು ನಮ್ಮೊಟ್ಟಿಗೆ ಸೇರಿಕೊಳ್ಳುತಾ ಇದ್ದರು. ಬುತ್ತಿಕಟ್ಟಿಕೊಂಡು ಆರುಗಂಟೆಗೆ ನಾವು ನಮ್ಮ ಹಳ್ಳಿಯಿಂದ ಹೊರಟೆವೆಂದರೆ, ಕಣಿವೆ ದಾಟುವಾಗ ಹುಡುಗರಾದ ನಮಗೆಲ್ಲಾ ಪುಕುಪುಕು ಅನ್ನುತಾ ಇತ್ತು. ಎರಡೂ ಪಕ್ಕ ಎತ್ತರೆತ್ತರಕ್ಕೆ ಬೆಳೆದ ಸಾಲ್ಮರಗಳು. ಪಕ್ಕದಲ್ಲೇ ಮಟ್ಟಿಯ ಕಾಡು. ಅಲ್ಲಿ ಹುಲಿ ಚಿರತೆಗಳು ಇವೆ ಅಂತ ನನ್ನ ಸಹಪಾಠಿಗಳು ಯಾವಾಗಲೂ ನನ್ನನ್ನು ಹೆದರಿಸುತ್ತಾ ಇದ್ದರು. ನಾನು ಭದ್ರಕ್ಕನ ತೊಡೆಯ ಮೇಲೆ ತಲೆಯಿಟ್ಟು ಗಟ್ಟಿಯಾಗಿ ಕಣ್ಮುಚ್ಚಿಕೊಂಡು ಮಲಗಿಬಿಡುತ್ತಾ ಇದ್ದೆ. ಘುಲು ಘುಲು ಕೊರಳ ಗಂಟೆಯ ಸದ್ದು ಮಾಡುತ್ತಾ, ಏರ್‍ಇನಲ್ಲಿ ಮುಸುಕರೆಯುತ್ತಾ ಎತ್ತುಗಳು ಗಾಡಿ ಎಳೆಯುತ್ತಾ ಇದ್ದವು. ಪಶ್ಚಿಮದಿಂದ ಗಾಳಿಬೀಸುತ್ತಾ , ಚಕ್ರದ ಧೂಳು ಗಾಡಿಯಮೇಲೆ ಇದ್ದವರ ಕಣ್ಣಿಗೇ ಬರುತ್ತಾ ಇತ್ತು. ಎಲ್ಲಾ ಪೂರ್ವಾಭಿಮುಖವಾಗಿ ತಿರುಗಿ ಕುಳಿತುಕೊಳ್ಳುತ್ತಾ ಇದ್ದರು. ಬಸಣ್ಣ ಎತ್ತಿನ ಬಾಲ ಮುರಿಯುತ್ತಾ -ಏ ಈರಾ... ಹುಲಿಯಾ ..ಎಂದು ಅವನ್ನು ಬೀಸುಹೆಜ್ಜೆಯಲ್ಲಿ ನಡೆಯಲಿಕ್ಕೆ ಹುರಿದುಂಬಿಸುತ್ತಾ ಇದ್ದನು. ನಮ್ಮ ಗಾಡಿ ಚನ್ನಗಿರಿಯ ಟೋಲ್ ಗೇಟು ದಾಟುವ ವೇಳೆಗೆ ಎಂಟುಗಂಟೆಯಾಗಿರೋದು. ಚನ್ನಗಿರಿಯ ವಿದ್ಯುದ್ ದೀಪಗಳು ಆಕಾಶದ ನಕ್ಷತ್ರಗಳೊಂದಿಗೆ ಸ್ಪರ್ಧಿಸುತ್ತಾ ಹುಡುಗರಾದ ನಮ್ಮನ್ನು ನಿಬ್ಬೆರಗುಗೊಳಿಸುತ್ತಾ ಇದ್ದವು. ಅಲ್ಲೇ ಎಡಕ್ಕೆ ತಣ್ಣೀರು ಹೊಂಡ. ಅಲ್ಲಿ ಮೆಟ್ಟಿಲು ಇಳಿದು ಬುತ್ತಿ ಊಟ ಮುಗಿಸುತ್ತಿದ್ದೆವು. ಆಮೇಲೆ ಮತ್ತೆ ಎತ್ತುಹೂಡಿಕೊಂಡು ಟೆಂಟಿನ ಬಳಿಹೋಗಿ ಅಲ್ಲಿ ಕೊಳ್ಳು ಹರಿದು, ಸಿನಿಮಾ ಟೆಂಟಿಗೆ ನುಗ್ಗುತ್ತಾ ಇದ್ದೆವು. ನೆಲ, ಚಾಪೆ, ಬೆಂಚು ಅಂತ ಮೂರು ವಿಭಾಗ. ನಾವು ಚಾಪೆ ಟಿಕೆಟ್ಟು ಸಾಮಾನ್ಯವಾಗಿ ತೆಗೆದುಕೊಳ್ಳುತ್ತಾ ಇದ್ದೆವು. ಮೊದಲು, "ಬರುತ್ತದೆ", "ಶೀಘ್ರದಲ್ಲಿ ನಿರೀಕ್ಷಿಸಿ" ಎಂದು ಕೆಲವು ಸಿನಿಮಾಗಳ ಪ್ರಕಟಣೆ. ಅಲ್ಲಿ ಪರಿಚಿತರಾದ ಹೊನ್ನಪ್ಪಭಾಗವತರೋ, ಪ್ರೇಮ್ ನಜೀರೋ, ಇಂದುಶೇಖರ್ರೋ ಕಂಡಾಗ ಸಿಳ್ಳೆ ಹೊಡೆಯುವುದು, ಅರಚುವುದು ಆಗುತ್ತಿತ್ತು. ಕೊನೆಗೆ ಮದಾಲಸೆ ಶುರುವಾಯಿತು. ಮಂತ್ರ ತಂತ್ರದ ರೋಮಾಂಚಕಾರೀ ಕಥೆ. ಮಂತ್ರವಾದಿ ಬಂದಾಗಂತೂ ನಾನು ಅಜ್ಜಿಯ ಸೆರಗಲ್ಲಿ ಮುಸುಕು ಹಾಕಿಕೊಂಡು ಮಲಗಿ ಬಿಟ್ಟೆ. ಯಾವ ಮಾಯದಲ್ಲಿ ನಿದ್ದೆ ಬರುತ್ತಾ ಇತ್ತೋ! ಮತ್ತೆ ಯಾವಾಗಲೋ ಎಚ್ಚರವಾದಾಗ ಕಣಿವೆಯ ದಾರಿಯಲ್ಲಿ, ಗವ್ವೆನ್ನುವ ಕತ್ತಲಲ್ಲಿ, ಮೂಕಿಗೆ ಲಾಟೀನು ಕಟ್ಟಿಕೊಂಡ ನಮ್ಮ ಬಂಡಿ ಧಡ ಬಡ ಸಾಗುತಾ ಇರುತ್ತಿತ್ತು. ಸಾಲುಮರಗಳ ಭಯ ಹುಟ್ಟಿಸುವ ಕಪ್ಪು ನೆರಳು. ಮಧ್ಯೆ ಮಧ್ಯೆ ನಕ್ಷತ್ರಗಳ ಮಿನುಕು. ಮತ್ತೆ ಕಣ್ಣನ್ನು ಒತ್ತಿಕೊಂಡು ಬರುವ ನಿದ್ದೆ! ಮತ್ತೆ ನಮಗೆ ಎಚ್ಚರಾಗುತ್ತಿದ್ದುದು ಮರು ದಿನ ಬೆಳಿಗ್ಗೆಯೇ!
ಸಿನಿಮಾ ಭದ್ರಕ್ಕನಿಗೆ ಬರೀ ರಂಜನೆಯ ವಿಷಯವಾಗಿತ್ತು,ಅಷ್ಟೆ! ಅವಳ ನಿಜವಾದ ಕಲಾಪ್ರೇಮ ಆರಾಧನೆಯ ನೆಲೆಯಲ್ಲಿ ವ್ಯಕ್ತವಾಗುವುದನ್ನು ನೋಡಬೇಕೆಂದರೆ ಗೊಂಬೆ ಮ್ಯಾಳದಲ್ಲಿ ಅವಳು ತೊಡಗಿಕೊಳ್ಳುತ್ತಿದ್ದ ರೀತಿಯನ್ನು ಗಮನಿಸಬೇಕು.ಅವಳ ದನಗಳಲ್ಲಿ ಯಾವುದಾದರೂ ಒಂದಕ್ಕೆ ಕಾಲುಜ್ವರವೋ, ಬಾಯಿಜ್ವರವೋ ಬಂತೂ ಎನ್ನಿ, ಭದ್ರಕ್ಕ ಮಟ್ಟೀರಂಗಪ್ಪನಿಗೆ ಹರಕೆ ಹೊರುತ್ತಿದ್ದಳು. ತಾನು ವೀರಶೈವಳು, ವೈಷ್ಣವದೇವರಾದ ರಂಗನಾಥನಿಗೆ ಹರಸಿಕೊಳ್ಳುವುದು ಯುಕ್ತವೇ ಇತ್ಯಾದಿ ಧರ್ಮಸೂಕ್ಷ್ಮಗಳು ಮುಗ್ಧೆಯಾದ ಆಕೆಗೆ ಹೊಳೆಯುತ್ತಲೇ ಇರಲಿಲ್ಲ. ಅವಳು ದೇವರುಗಳ ಸಂಬಂಧವನ್ನು ವಿವರಿಸುವ ರೀತಿಯನ್ನು ಅವಳ ಬಾಯಲ್ಲೇ ಕೇಳಬೇಕು. ಅವಳ ಪ್ರಕಾರ ಮಟ್ಟಿರಂಗ, ಕಲ್ಲುಗುಡಿ ಈಶ್ವರನ ಅಣ್ಣ. ಗ್ರಾಮದೇವತೆ ಕೆಂಚಮ್ಮ ಇಬ್ಬರಿಗೂ ತಂಗಿ. ಬೆಂಕೀಕೆರೆ ಕರಿಯವ್ವ ಕೆಂಚಮ್ಮನ ವಾರಗಿತ್ತಿ. ತಾನು ಕಪ್ಪಾಗಿರುವುದೂ, ಕೆಂಚಮ್ಮ ಕೆಂಪಾಗಿರುವುದೂ ಅವಳಿಗೆ ಸಹಿಸದು. ಆದುದರಿಂದ ಇಬ್ಬರಲ್ಲೂ ಸ್ವಲ್ಪ ತಿಕ್ಕಾಟವಿದೆ. ಆದರೆ ರಂಗಪ್ಪ ಮತ್ತು ಕಲ್ಲುಗುಡಿ ಈಶ್ವರ ಈ ದೇವಿಯರಿಗೆ ಬುದ್ಧಿಹೇಳಿ ಪ್ರತೀ ಯುಗಾದಿಗೊಮ್ಮೆ ಅವರನ್ನು ಒಟ್ಟುಗೂಡಿಸುತ್ತಾರೆ. ಸುಲಭಕ್ಕೆ ಅವರು ರಾಜಿಗೆ ಒಪ್ಪುವುದಿಲ್ಲ. ಆದರೆ ಮಟ್ಟಿರಂಗ ಮತ್ತೂ ಕಲ್ಲುಗುಡಿ ಈಶ್ವರ ಅಷ್ಟು ಸುಲಭಕ್ಕೆ ಬಿಡುವ ಪೈಕಿ ಅಲ್ಲ. ಅವರು ಇಬ್ಬರು ಹೆಣ್ಣು ದೇವತೆಗಳಿಗೂ ಬೈದು ಬುದ್ಧಿ ಹೇಳಿ ಕೊನೆಗೂ ಅವರನ್ನು ಒಂದೇ ಮಂಟಪದಲ್ಲಿ ಕುಳಿತುಕೊಳ್ಳಲು ಮನಸ್ಸು ಒಲಿಸುತ್ತಾರೆ. ಇದೇ ಯುಗಾದಿಯ ಬೆಳಿಗ್ಗೆ ನಮ್ಮೂರಲ್ಲಿ ನಡೆಯುವ ದೊಡ್ಡ ಹಗರಣ! ಇದನ್ನೆಲ್ಲಾ ನಮ್ಮೂರ ಭಕ್ತರು ಬಹಳು ತಮಾಷೆಯಾಗಿ, ಖುಷಿಯಾಗಿ, ಭಯಭೀತಿಗಳ ಸಮೇತ ನೋಡಿ ನೋಡಿ ಆನಂದಿಸುತ್ತಾ ಇದ್ದರು. ನಮ್ಮ ಭದ್ರಕ್ಕ ಕಲ್ಲುಗುಡಿಯ ಈಶ್ವರನ ಭಕ್ತೆಯಾಗಿರುವಂತೇ, ಮಟ್ಟೀರಂಗನ ಅಂತರಂಗದ ಒಕ್ಕಲೂ ಹೌದು! ಹಾಗಾಗಿ ಅವಳು ಮಟ್ಟಿರಂಗನಿಗೆ ಹರಕೆ ಒಪ್ಪಿಸುವುದರಲ್ಲಿ ಏನೂ ತಪ್ಪಿಲ್ಲ. ಕೆಲವುಬಾರು ಕಲ್ಲುಗುಡಿ ಈಶ್ವರನೇ ಮಟ್ಟೀ ರಂಗನಿಗೆ ಹರಕೆ ಒಪ್ಪಿಸುವಂತೆ ಸೂಚಿಸುವುದೂ ಉಂಟು. ಹೀಗೆ ನಮ್ಮ ಊರಿನ ದೇವತೆಗಳು ತಮ್ಮ ತಮ್ಮ ಜಾತಿ ಪಂಥ ಮರೆತು ತುಂಬ ಅನ್ಯೋನ್ಯವಾಗಿ ಹೊಂದಿಕೊಂಡು ಬಾಳುವೆ ಮಾಡುತ್ತಿದ್ದವು. ಸಾಬರ ದೇವರೂ ಕಲ್ಲುಗುಡಿ ಈಶ್ವರನ ಹಿಂದಿನ ಪೌಳಿಯಲ್ಲೇ ವಾಸವಾಗಿರುತ್ತಾ ಅವರಿಬ್ಬರೂ ಆಪ್ತಮಿತ್ರರೆಂದೂ, ರಾತ್ರಿ ನಿದ್ದೆ ಬರದಿದ್ದಾಗ ಇಬ್ಬರೂ ಚಾವಡಿಯಲ್ಲಿ ಕೂತು ಪಗಡೆ ಆಡುತ್ತಾರೆಂದೂ, ನಮ್ಮ ಹಳ್ಳಿಯಲ್ಲಿ ಹಳೇ ಮುದುಕರು ಕಥೆ ಹೇಳುತಾ ಇದ್ದರು. ಗೀಬಿನ ಹಾಲು ಮತ್ತು ಸಕ್ಕರೆ ಈಶ್ವರ ಮತ್ತು ಸಾಬರದೇವರಿಗೆ ಓದಿಸಿ ಭದ್ರಕ್ಕ ಮೀಸಲು ಮುರಿಯುತ್ತಾ ಇದ್ದಳು.
ಭದ್ರಕ್ಕ ಹರಕೆ ಆಟ ಆಡಿಸಲಿಕ್ಕೆ ಅಕ್ಕಿ,ಕಾಯಿ,ಬೆಲ್ಲ, ವೀಳ್ಯ(ಜೊತೆಗೆ ನೂರಾಒಂದು ರೂಪಾಯಿ)ಸಮೇತ ಗಂಗೂರಿಗೆ ಹೋಗಿ ಅಲ್ಲಿದ್ದ ಗೊಂಬೇಮೇಳದ ಗೋಪಾಲಯ್ಯನವರಿಗೆ ವೀಳ್ಯಕೊಟ್ಟು ಬರುತ್ತಿದ್ದಳು. ಭದ್ರಕ್ಕ ಗಂಗೂರಿಗೆ ಹೋಗಿಬಂದದ್ದು ರಾತ್ರಿಯೊಳಗಾಗಿ ಊರಿನ ತುಂಬಾ ಢಾಣಾ ಡಂಗುರವಾಗಿ ಹೋಗುತ್ತಿತ್ತು. ಭಾನುವಾರ ಆಟ ಎಂದರೆ ಶನಿವಾರವೇ ಚಟುವಟಿಕೆ ಶುರು. ತುಟಿದಪ್ಪದ ನಿಂಗಣ್ಣ ತನ್ನ ಗರಡಿ ಹೈಕಳ ಸಮೇತ ಊರ ಹೊರಗಿನ ಕಣಗಳಿಗೆ ಹೋಗಿ, ಅಲ್ಲಿ ಸುಗ್ಗಿಯನ್ನು ಕಾಯುತ್ತಾ ಬಿಸಿಲಲ್ಲಿ ಬಿದ್ದಿರುತ್ತಿದ್ದ ಭಾರೀ ಗಾತ್ರದ ರೋಂಡುಗಲ್ಲುಗಳನ್ನು ಉರುಳಿಸಿಕೊಂಡು ಕಲ್ಲುಗುಡಿಯ ಬಳಿ ಬರುತಾ ಇದ್ದ.ಕಣದಿಂದ ರೋಂಡುಗಲ್ಲುಗಳು ಹೀಗೆ ಊರೊಳಕ್ಕೆ ಬಂದವೂ ಅಂದರೆ ಗೊಂಬೇ ಆಟ ಖಾತ್ರಿ.ನಾವು ಹುಡುಗರೆಲ್ಲಾ ಹೋ ಅಂತ ಅರಚುತ್ತಾ ಗುಡುಗುಡು ಉರುಳುತ್ತಿದ್ದ ರೋಂಡುಗಲ್ಲನ್ನು ಹಿಂಬಾಲಿಸುತ್ತಾ ಇದ್ದೆವು.ಗುಡಿಯ ಮುಂದೆ ರೋಂಡುಗಲ್ಲು ಬಂದಮೇಲೆ ನಾಕು ಮೂಲೆಗೂ ನಾಕು ಕಲ್ಲು ಇಟ್ಟು. ಅವು ಅಲುಗಾಡದಂತೆ ತಳಕ್ಕೆ ಚಪ್ಪೆಕಲ್ಲು ಕೊಟ್ಟು, ಅವುಗಳ ಮೇಲೆ ಅಡಕೆ ಬೊಂಬುಹಾಸಿ. ತುಟಿದಪ್ಪ ಮಂತು ಸಿದ್ಧಪಡಿಸುತ್ತಿದ್ದ.ಸುತ್ತಾ ಚಚ್ಚೌಕಾಕಾರದ ಚಪ್ಪರ. ಅದರ ಮೇಲೆ ತೆಂಗಿನ ಗರಿ. ನಾಕೂ ಕಂಬಕ್ಕೆ ಬಾಳೇ ಕಂದು. ಚಪ್ಪರದ ಮೇಲೆ ಮಾವಿನ ತೋರಣ. ಮಂತಿನ ಅರ್ಧಭಾಗಕ್ಕೆ ಅಡ್ಡ ತರೆ. ಕೆಳಗಿಂದ ಒಂದು ಮೇಲಕ್ಕೆ. ಮೇಲಿಂದ ಒಂದು ಕೆಳಕ್ಕೆ. ಅವೆರಡರ ಮಧ್ಯೆ ಒಂದಡಿ ಜಾಗ. ಅಲ್ಲಿಂದ ಮೇಳದವರು ಬೊಂಬೆಗಳನ್ನು ಮಂತಿನ ಮೇಲೆ ಇಳಿಸಿ ಪ್ರಸಂಗ ನಡೆಸುತ್ತಿದ್ದರು. ಬೊಂಬೆ ಕುಣಿಸುವ ಸೂತ್ರಧಾರಿಗಳು ಪ್ರೇಕ್ಷಕರಿಗೆ ಕಾಣುವುದಿಲ್ಲ. ಬೊಂಬೆಗಳು ಮಾತ್ರ ಕಾಣುತ್ತವೆ. ಇಷ್ಟೆಲ್ಲಾ ಸಿದ್ಧತೆಯಾಗುವಾಗ ನಾವುಗಳು ಸ್ಕೂಲಿಗೂ ಚಕ್ಕರ್ ಹಾಕಿ ಗುಡಿಯ ಮುಂದೇ ಠಿಕಾಣಿ ಹಾಕುತಾ ಇದ್ದೆವು. ನಮಗೆ ಆ ವೇಳೆ ಹಸಿವು ನೀರಡಿಕೆ ಏನೂ ಆಗದು.ಸಂಜೆಯ ವೇಳೆಗೆ ಮಂತು ಕಟ್ಟುವುದು ಮುಗಿಯುತ್ತಿತ್ತು.ಭಾನುವಾರ ಹೇಗೂ ಶಾಲೆಗೆ ಚುಟ್ಟಿ. ಬೆಳಗಿನಿಂದ ಹಳ್ಳಿಯಲ್ಲಿ ನಾವು ಪೇರಿಹೊಡೆಯುವುದು ಶುರುವಾಗುತ್ತಿತ್ತು.ಕೆಂಚಲಿಂಗಪ್ಪ, ಟಿ.ಕೆಂಚಣ್ಣ, ಗಿಡ್ಡ ನಿಂಗಪ್ಪ, ದಳವಾಯಿ, ಕಂಠಮಾಲೆ ಮಲ್ಲಣ್ಣ ಎಲ್ಲರೂ ಕೂಡಿ ಕಲ್ಲುಗುಡಿಯ ಬಳಿ ಹೋಗುತ್ತಿದ್ದೆವು. ಕಲ್ಲುಗುಡಿಯ ಪಕ್ಕದಲ್ಲೇ ಭದ್ರಕ್ಕನ ಮನೆ. ಅಲ್ಲಿಗೆ ತಾನೆ ಗಂಗೂರಿನ ಮೇಳದವರ ಎತ್ತಿನ ಬಂಡಿ ಬರಬೇಕು? ಸಾಮಾನ್ಯವಾಗಿ ಎರಡು ಗಾಡಿಯಲ್ಲಿ ಮೇಳದವರು ಬರುತ್ತಿದ್ದರು. ಒಂದೊಂದು ಗಾಡಿಯಲ್ಲಿ ಒಂದೊಂದು ದೊಡ್ಡ ಪೆಟ್ಟಿಗೆ. ಅವುಗಳಲ್ಲಿ ಗೊಂಬೆಗಳಿರುತ್ತಿದ್ದವು. ಮುಂದಿನ ಗಾಡಿಯಲ್ಲಿ ಪಾಂಡವರ ಪೆಟ್ಟಿಗೆ. ಹಿಂದಿನ ಗಾಡಿಯಲ್ಲಿ ಕೌರವರ ಪೆಟ್ಟಿಗೆ.ಮೊದಲೆಲ್ಲಾ ಪಾಂಡವರು ಮತ್ತು ಕೌರವರ ಬೊಂಬೆಗಳನ್ನು ಒಂದೇ ಪೆಟ್ಟಿಗೆಯಲ್ಲಿ ಇಡುತ್ತಾ ಇದ್ದರಂತೆ. ಹುಣ್ಣೀಮೆ ಅಮಾವಾಸ್ಯೆ ಬಂತೆಂದರೆ ಸರುವೊತ್ತಿನಲ್ಲಿ ಮ್ಯಾಳದವರ ಮನೆಯಲ್ಲಿ ಧಬ ಧಬ ಸದ್ದು ಶುರುವಾಗುತ್ತಿತ್ತು. ಒಬ್ಬರನ್ನೊಬ್ಬರು ಗುದ್ದುವ ಸದ್ದು ಅದು. ಏನಪ್ಪ ಅಂತ ನೋಡಿದರೆ ಸದ್ದು ಗೊಂಬೆ ಪೆಟ್ಟಿಗೆಯಿಂದ ಬರುತ್ತಾ ಇದೆ. ಮ್ಯಾಳದವರಿಗೆ ಗೊತ್ತಾಯಿತು. ರಾತ್ರಿಯಾದ ಮೇಲೆ ಕೌರವರು ಪಾಂಡವರು ಜಗಳ ಶುರು ಹಚ್ಚುತ್ತಾರೆ ಅಂತ. ಕೆಲವು ಗೊಂಬೆಗಳ ಕೈಕಾಲೇ ಮುರಿದು ಹೋಗಿರೋವಂತೆ. ಈ ಅನಾಹುತ ತಪ್ಪಿಸಲಿಕ್ಕಾಗಿ ಎರಡು ಪೆಟ್ಟಿಗೆ ಮಾಡಿ, ಒಂದರಲ್ಲಿ ಕೌರವರನ್ನೂ, ಇನ್ನೊಂದರಲ್ಲಿ ಪಾಂಡವರನ್ನೂ ಇಡುವ ಸಂಪ್ರದಾಯ ರೂಢಿಗೆ ಬಂತಂತೆ. ಇದನ್ನು ನಮಗೆ ಹೇಳಿದ್ದು ಉಷ್ಟುಮರ ಗೋವಿಂದಣ್ಣ. ನಮಗಂತೂ ಈ ವಿಷಯದಲ್ಲಿ ಯಾವುದೇ ಅಪನಂಬಿಕೆ ಇಲ್ಲ. ಕೌರವರು ಪಾಂಡವರು ಒಂದೇ ಪೆಟ್ಟಿಗೆಯಲ್ಲಿ ಹೇಗೆ ತಾನೇ ತಣ್ಣಗೆ ಮಲಗಿರೋದು ಸಾಧ್ಯ?
ಸಂಜೆ ಏಳು ಗಂಟೆ ವೇಳೆಗೆ ಗಂಗೂರಿನವರ ಮೇಳದ ಬಂಡಿಗಳು ಬರುತ್ತಾ ಇದ್ದವು. ಆಗ ನಾವೆಲ್ಲಾ ಕೂಡಿ ಒಮ್ಮೆ ಗಟ್ಟಿಯಾಗಿ ಅರಚಿಕೊಳ್ಳುತ್ತಿದ್ದೆವು. ಆಟ ರಾತ್ರಿ ಇದೆ ಎನ್ನುವುದು ಖಾತ್ರಿಯಾಯಿತಲ್ಲ, ಓಡುತ್ತಿದ್ದೆವು ನೋಡು ಹಾರಿಗ್ಗಾಲು! ನಮ್ಮ ನಮ್ಮ ಜಗಲಿಯ ಮೇಲೆ ಚಾಪೆ, ಜಮಖಾನ ಬಿಡಿಸಿ ಜಾಗ ಕಾದಿರಿಸುವುದಕ್ಕಾಗಿ ಈ ಓಟ. ನಮ್ಮ ಕೇರಿಯಲ್ಲಿ ಗುಂಡಾ ಶಾಸ್ತ್ರಿಗಳು ಬಹಳ ಮಡೀ ಮೈಲಿಗೆ ನೋಡುವ ಜನ. ಯಾರು ಯಾರೋ ಬಂದು ರಾತ್ರಿ ಜಗಲಿಯಮೇಲೆ ಕೂತು, ಕಟ್ಟೆಯ ಕೆಳಗೆಲ್ಲಾ ತಂಬುಲ ಉಗಿದು, ಹೊಲಸು ಮಾಡುತ್ತಾರೆ ಅಂತ ಈ ಪುಣ್ಯಾತ್ಮ, ಕಟ್ಟೆಯ ಮೇಲೆ ಕೊಡಗಟ್ಟಲೆ ನೀರುಸುರಿಯುತ್ತಾ ಇದ್ದರು! ಥೂ! ಎಂಥಾ ಜನವಪ್ಪಾ ಇವರು! ತಾವೂ ನೋಡುವುದಿಲ್ಲ, ಬೇರೆಯವರು ನೋಡಲಿಕ್ಕೂ ಬಿಡುವುದಿಲ್ಲ ಎಂದು ನಾವು ಹುಡುಗರು ಶಾಸ್ತ್ರಿಗಳನ್ನು ಮನಸ್ಸಲ್ಲೇ ಬಯ್ಯುತ್ತಾ ಇದ್ದೆವು.ಇತ್ತ ನಾಡಿಗರ ಮನೆಯಲ್ಲಿ ಮ್ಯಾಳದವರಿಗೆ ರಾತ್ರಿಯೆಲ್ಲಾ ಕಾಫಿ ಸರಬರಾಜು ಮಾಡಲಿಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಾ ಇದ್ದವು. ಭದ್ರಕ್ಕನ ಮನೆಯಿಂದ ಒಂದು ತಪ್ಪಲೆ ಹಾಲು ಬರುತಾ ಇತ್ತು. ಅಂಗಡಿ ಸಾಂಶಿವಣ್ಣ ಎರಡು ದೊಡ್ಡ ಪೊಟ್ಟಣ ಕಾಫೀ ಪುಡಿ, ಆರು ಬೆಲ್ಲದಚ್ಚು ಕಳಿಸುತಾ ಇದ್ದ. ದೊಡ್ಡ ತಪ್ಪಲೆಯಲ್ಲಿ ನೀರು ಕುದಿಯಲಿಕ್ಕೆ ಇಡುತಾ ಇದ್ದರು. ಇಡೀ ರಾತ್ರಿ ಮ್ಯಾಳದವರಿಗೆ ಕಾಫಿ ಸರಬರಾಜು ಆಗಬೇಕಾಗಿತ್ತು. ಮತ್ತೆ, ರಾತ್ರಿಯೆಲ್ಲಾ ಅವರು ನಿದ್ದೆಗೆಟ್ಟು ಕುಣಿಯ ಬೇಕಲ್ಲ? ಅಗೋ! ಭದ್ರಕ್ಕ ಗಟ್ಟಿಯಾಗಿ ಕೈ ಬೀಸಿಕೊಂಡು ನಾಡಿಗರ ಮನೆಯತ್ತ ಬರುತ್ತಾ ಇದ್ದಾಳೆ. "ಅಕ್ಕಾವರೇ... ಹಾಲು ಬೇಕಾದರೆ ಹೇಳ್ರಿ ಮತ್ತೆ...ಭೋ ಚಂದ ಆಗಬೇಕು ನೋಡ್ರಿ ಮತ್ತೆ... ಇಲ್ಲಾ ಅಂದರೆ ಈ ಮ್ಯಾಳದವರು ನನ್ನ ಮಾನ ತೆಗೆದು ಬಿಡ್ತಾರೆ! ಹೋದ ಸಾರಿ ಏನಾಯ್ತು ಗೊತ್ತಾ?" ಎಂದು ಹಳೆಯ ಪ್ರಸಂಗ ನಾಡಿಗರ ಮನೆಯಲ್ಲಿ ಬಿಚ್ಚುತಾ ಇದ್ದಳು. ಗೊಂಬೇ ಮ್ಯಾಳದಲ್ಲಿ ವಿದೂಷಕನದು ಒಂದು ಖಾಯಮ್ ಪಾತ್ರ ಇರುತ್ತದೆ. ಹನುಮನಾಯಕ ಅಂತ ಅವನ ಹೆಸರು. ಅವನ ಹೆಂಡತಿ ಅಕ್ಕಾಸಾಬಿ ಅಂತ. ಅಕ್ಕಾಸಾಬಿಗೆ ಪುಂಡೀನಾರಿನ ಜಡೇ! ಕಾಳಗಪ್ಪು ಬಣ್ಣ. ಅವಳು ರಂಗದ ಮೇಲೆ ಬರಬೇಕಾದರೆ ಎಷ್ಟು ವಯ್ಯಾರ ಮಾಡುತ್ತಾಳೆ ಗೊತ್ತಾ? ಭಾಗವತಣ್ಣಾ...ಬರಲಾ...ಬರಲಾ? ಅಂತ ಮತ್ತೆ ಮತ್ತೆ ಕೇಳುತ್ತಾಳೆ. ಗೌಡರ ಸಾಂಬಣ್ಣ ಇಲ್ಲ ತಾನೇ? ಗಡ್ಡದ ಬುಡೇನ್ ಸಾಬ್ರು ಇಲ್ಲಾ ತಾನೆ? ಅಂತ ಕೇಳುತ್ತಾಳೆ. ಗೌಡರ ಸಾಂಬಣ್ಣ, ಬುಡೇನ್ ಸಾಬ್ರು ಇವರೆಲ್ಲ ನಮ್ಮ ಹಳ್ಳಿಯ ಮುಖ್ಯಸ್ಥರು. ಅಕ್ಕಾಸಾಬಿ ಅವರ ಹೆಸರು ಹಿಡಿದು ಕಿಚಾಯಿಸುತ್ತಾಳೆ. ಅವರಿಬ್ಬರಿಗೂ ಕಚ್ಚೆ ಸ್ವಲ್ಪ ಸಡಿಲು ಭಾಗ್ವತಣ್ಣಾ... ನನ್ನ ನೋಡಿದರೂ ಅಂದರೆ ಮನೆ ಮಾರು ಆಸ್ತಿ ಪಾಸ್ತಿ ಎಲ್ಲಾ ಬಿಟ್ಟು ನನ್ನ ಹಿಂದೇ ಓಡಿ ಬಂದುಬಿಡ್ತಾರೆ! ಎಂದು ಅಕ್ಕಾ ಸಾಬಿ ಹಾಸ್ಯ ಮಾಡುತ್ತಾಳೆ. ಜನ ಎಲ್ಲಾ ಹೋ ಎಂದು ಕಿರುಚುತ್ತಾ ನಗುತ್ತಾರೆ. ಸಾಂಬಣ್ಣಾ... ಅಂತ ಕೆಲವರು ಕೂಗುತ್ತಾರೆ. ಹೋದ ಸಾರಿ ಏನಾಯಿತು ಅಂದರೆ, ಅಕ್ಕಾಸಾಬಿ ಬಹಳ ವಯ್ಯಾರ ಮಾಡಿ ರಂಗದ ಮೇಲೆ ಬಂದ ಮೇಲೆ ಭಾವತಣ್ಣ ಆಕೆಯನ್ನು" ಯಾಕವ್ವಾ ನೀನು ಇಷ್ಟು ಕಪ್ಪಾಗಿದ್ದೀ.. ಹೋದ ಸಾರಿ ಎಷ್ಟೊ ಬೆಳ್ಳಗಿದ್ದೆಯಲ್ಲ?" ಎನ್ನುತ್ತಾನೆ. ಆಗ ಅಕ್ಕಾ ಸಾಬಿ "ಈ ಸಾರಿ ಭದ್ರಕ್ಕ ಮಾಡಿಸಿದ ಕಾಫಿ ಕುಡಿದೆ ನೋಡು ಹಿಂಗಾಗಿ ಹೋತು ನನ್ನ ಕಲ್ಲರ್ರು!" ಅಂದು ಬಿಡೋದೆ?
ಭದ್ರಕ್ಕನಿಗೆ ಮ್ಯಾಳದ ದಿವಸ ಕಾಲೇ ನಿಲ್ಲೋದಿಲ್ಲ. ಮನೆ ಮನೆಗೂ ಅವಳು ಆವತ್ತು ಎಡಕಾಡುತ್ತಾಳೆ. ಕಂಠಮಾಲೆಯವರ ಮನೆಗೆ ಹೋಗಿ, ಈರಕ್ಕಾ...ದ್ರೌಪದಿಗೆ ನಿನ್ನ ಬುಟ್ಟಾ ಹೂವಿನ ರೇಷ್ಮೆ ಸೀರೇನೇ ಆಗಬೇಕು! ಅಂತ ಅದನ್ನ ಇಸಿದುಕೊಂಡು ಶ್ಯಾನುಭೋಗರ ಮನೆಗೆ ಬರುತ್ತಾಳೆ. ಪಾರ್ವತಮ್ಮನೋರೇ ಈವತ್ತು ಕೃಷ್ಣನಿಗೆ ನಿಮ್ಮ ಆನಂದ ಕಲರ್ ಸೀರೇ ಬೇಕು ಕಣ್ರೀ! ಎಂದು ಅವರಿಂದ ಕಡ ಪಡೆಯುತ್ತಾಳೆ. ಹೀಗೆ ಬೇರೆ ಬೇರೆ ಮನೆಯವರ ನಾನಾ ಬಗೆಯ ಸೀರೆಗಳು ಭದ್ರಕ್ಕನ ಮನೆ ಸೇರುತ್ತವೆ. ಇತ್ತ ಭದ್ರಕ್ಕನ ಮನೆಯಲ್ಲಿ ಮ್ಯಾಳದವರು ಹಗ್ಗ ಕಟ್ಟಿ ಸಾಲಾಗಿ ಗೊಂಬೆಗಳನ್ನು ನೇತು ಹಾಕಿದ್ದಾರೆ. ಮ್ಯಾಳದ ಯಜಮಾನರಾದ ನಾರಣಪ್ಪನವರು ಒಂದೊಂದೇ ಗೊಂಬೆಗೆ ಸೀರೆ ಉಡಿಸಿ ರೆಡಿ ಮಾಡುತ್ತಾರೆ. ಗಂಡು ಬೊಂಬೆಗಳ ವೇಷ ಬಹಳ ಸುಲಭ. ಸುಮ್ಮನೆ ಹೆಗಲಿಂದ ಮೂರು ಬಣ್ಣ ಬಣ್ಣದ ಸೀರೆ ಮಡಿಸಿ ಇಳಿಬಿಟ್ಟರೆ ಮುಗಿಯಿತು. ಇನ್ನು ನಮ್ಮ ಅಕ್ಕಾಸಾಬಿಗೆ ಭದ್ರಕ್ಕ ತನ್ನದೇ ಪಟ್ಟಾಪಟ್ಟಿ ಇಳಕಲ್ಲು ಸೀರೆ ಕೊಟ್ಟಿದ್ದಾಳೆ. ಗೊಂಬೆಗಳಿಗೆ ಅಲಂಕಾರ ಮಾಡುವುದು, ಹೂ ಮುಡಿಸುವುದು ಎಲ್ಲಾ ಸಾಂಗೋಪಾಂಗವಾಗಿ ನಡೆಯುತ್ತದೆ. ಒಂಬತ್ತು ಗಂಟೆಗೆ ಇದೆಲ್ಲಾ ಮುಗಿಯಿತು ಎಂದರೆ ಭಾವತರು ಬಂದು ಗೊಂಬೆಗಳಿಗೆ ಪೂಜೆ ಮಾಡಿ ಕರ್ಪೂರದಾರತಿ ಎತ್ತುತ್ತಾರೆ. ಅಲ್ಲಿಗೆ ಆಟಕ್ಕೆ ಎಲ್ಲವೂ ಸಿದ್ಧವಾದಂತೆ ಆಯಿತು. ಆ ರಾತ್ರಿ ಮ್ಯಾಳದವರು ಯಾರೂ ಊಟ ಮಾಡುವುದಿಲ್ಲ. ಊಟ ಮೈಲಿಗೆ ಅಂತ ಕೇವಲ ಉಪ್ಪಿಟ್ಟು ಅಥವಾ ಮಂಡಕ್ಕಿ ಉಸುಳಿಯ ಫಲಾಹಾರ ತೆಗೆದುಕೊಳ್ಳುತ್ತಾರೆ. ಠಾಕೋ ಠೀಕು ಹತ್ತು ಗಂಟೆಗೆ ಮಂತಿನ ಮುಂದೆ ಜನಸಾಗರವೇ ನೆರೆದುಬಿಟ್ಟಿರುತ್ತದೆ. ನಾವು ರಾತ್ರಿಯೆಲ್ಲಾ ಬಯಲಲ್ಲೇ ಕಳೆಯಲು ಮನೆಯಿಂದ ಸಿದ್ಧರಾಗಿಯೇ ಬಂದಿರುತ್ತೇವೆ. ತಲೆಗೆ ಮಂಕೀಕ್ಯಾಪು. ಮೈತುಂಬ ಸ್ವೆಟ್ಟರ್ರು. ನಿದ್ದೆ ಬಂದರೆ ಅಲ್ಲೇ ಮಲಗಲಿಕ್ಕೆ ಒಂದು ದುಪಟಿ! ಇದು ನಮ್ಮ ಸಿದ್ಧತೆಯಾದರೆ ನಮ್ಮಜ್ಜಿ ಹುರಿಗಾಳು, ಚಕ್ಕುಲಿ, ಕೋಡಬಳೆಯ ಡಬ್ಬವನ್ನೇ ತಂದಿಟ್ಟುಕೊಂಡಿದ್ದಾಳೆ! ಬೀದಿಯ ತುದಿಯಲ್ಲಿ ಒಡೆಮಲ್ಲಣ್ಣ ಆಗಲೇ ಬಿಸಿಬಿಸಿ ಒಡೆ ಕರಿಯಲಿಕ್ಕೆ ಶುರು ಹಚ್ಚಿದ್ದಾನೆ. ಒಡೇ ಮಂಡಕ್ಕಿ ಕೊಂಡು ಜನ ಆಟ ನೋಡಲು ಜಮಾಯಿಸುತ್ತಿದ್ದಾರೆ. ಆ ಗಮ್ಮು, ಆ ವಾಸನೆ ಇವೆಲ್ಲಾ ವರ್ಣಿಸಲಿಕ್ಕೆ ಸಾಧ್ಯವೇ ಇಲ್ಲ. ಯಾವಾಗ ಆಟ ಶುರುವಾಗುವುದೋ ಎಂದು ನಾವೆಲ್ಲಾ ಕಣ್ಣಲ್ಲಿ ಎಣ್ಣೆಬಿಟ್ಟುಕೊಂಡು ಕೂತಿದ್ದೇವೆ!

***
ಅಲ್ಲಾಡಿರುದ್ರಣ್ಣನವರ ಪತ್ರ ಬಂದಾಗ ಈ ನನ್ನ ಬಾಲ್ಯದ ನೆನಪುಗಳೆಲ್ಲಾ ಒಂದೊಂದಾಗಿ ಸಿನಿಮಾದಂತೆ ನನ್ನ ಕಣ್ಣುಮುಂದೆ ಸುಳಿದು ಹೋದವು.ನನ್ನ ಹೆಂಡತಿ ಬಂದು"ಏನು? ಹಿಂಗೆ ಗರಬಡಿದಹಂಗೆ ಕೂತಿದ್ದೀರಿ?"ಎಂದು ಕೇಳಿದಾಗಲೇ ನಾನು ಜಾಗೃತ ಪ್ರಪಂಚಕ್ಕೆ ಬಂದದ್ದು. ನಾನು ಊರಿಗೆ ಹೋಗಬೇಕು ಕಣೇ...ಭದ್ರಕ್ಕ ನೆಲ ಹಿಡಿದು ಬಿಟ್ಟಿದ್ದಾಳಂತೆ.ಅವಳ ಕೊನೇ ಆಸೆಯಂತೆ ಗೊಂಬೆ ಮ್ಯಾಳ ಏರ್ಪಾಡುಮಾಡಿದಾರಂತೆ..ನೋಡು...ಅಲ್ಲಾಡಿರುದ್ರಣ್ಣನೋರ ಕಾಗದ ಬಂದಿದೆ ಎಂದು ಪತ್ರವನ್ನು ಅವಳ ಕೈಗೆ ಕೊಡುತ್ತೇನೆ. ಭದ್ರಕ್ಕಾ ಅಂದರೆ ಮೊದಲಿಂದಲೂ ನಿಮಗೆ ಜೀವ. ಹೋಗಿ ಬನ್ನಿ...ಪಾಪ... ನಾವು ಮದುವೆಯಾದ ಹೊಸದರಲ್ಲಿ ನನ್ನನ್ನ ಮನೆಗೆ ಕರೆದು ಜರಿಯಂಚಿನ ಕ್ರೇಪು ಸೀರೆ ಕೊಟ್ಟಿದ್ದಳು..ಎಂದು ನನ್ನ ಹೆಂಡತಿ ನೆನಪು ಮಾಡಿಕೊಳ್ಳುತ್ತಾಳೆ.
ರಾತ್ರಿ ಆಟ ಎನ್ನುವಾಗ ಬೆಳಿಗ್ಗೆ ನಾನು ಮೇಲ್ ಟ್ರೇನ್ ಹಿಡಿದು ಊರು ತಲಪಿದೆ. ಹೋದವನೇ ಹಣ್ಣು ಹೂ ಹಿಡಿದುಕೊಂಡು ಭದ್ರಕ್ಕನ ಮನೆಗೆ ಹೋದೆ. ಭದ್ರಕ್ಕ ತನ್ನ ಗುಪ್ಪೆಮಂಚದಮೇಲೆ ಮಲಗಿಕೊಂಡಿದ್ದಳು. ನನ್ನ ನೋಡಿದವಳೇ ಗುರುತು ಹಿಡಿದು...ಯಂಟೇಶಣ್ಣಾ..ಬಾ..ಬಾ..ಕುಂತ್ಕಾ...ಎಂದು ಪ್ರಯಾಸದಿಂದ ಎದ್ದು ಕುಳಿತಳು. ಭದ್ರಕ್ಕಾ ..ಆಯಾಸ ಮಾಡಿಕೋ ಬ್ಯಾಡ..ನೀನು ಮಲಗೂ ಅಂದರೂ ಕೇಳದೆ ಅವಳು ಗೋಡೆಗೆ ಒರಗಿ ಕುಳಿತಳು. ಆ ಆಜಾನುಬಾಹು ಹೆಂಗಸು ಒಂದು ಹಿಡಿಯಾಗಿ ಬಿಟ್ಟಿದ್ದಳು. ಕಣ್ಣಲ್ಲಿ ಮಂಕು ಕಳೆ. ಮುಖದ ಮೇಲೆ ಮೂರುದಿನದ ಕೂಳೆ. ತಲೆ ಕೂಡಾ ಬಾಚಿಕೊಂಡಿರಲಿಲ್ಲ. ಕೆನ್ನೆಯ ಮೂಳೆಗಳು ಹಾದು ಮುಖ ಒಂದಂಗೈ ಅಗಲ ಆಗಿಹೋಗಿತ್ತು. ನಾನು ಭದ್ರಕ್ಕನ ಕೈ ಹಿಡಿದುಕೊಂಡು ಹೇಗಾಗಿ ಬಿಟ್ಟಿದೀಯಲ್ಲ ಭದ್ರಕ್ಕಾ...ಎಂದಾಗ ಅವಳು ನಕ್ಕು, ಸಂತೇ ಪಯಣ ಹಿಂಚುಮುಂಚು ಅಂತ ವೈರಾಗ್ಯದ ಮಾತಾಡಿದಳು.
ರಾತ್ರಿ ಭದ್ರಕ್ಕನ ಆಸೆಯಂತೆ ಊರ್ವಶೀ ಪ್ರಸಂಗ ಇಡಿಸಿದ್ದರು. ಯಾವುದಾದರೂ ಭಕ್ತಿಯ ಪ್ರಸಂಗ ಇಡಿಸದೆ, ಭದ್ರಕ್ಕ, ಊರ್ವಶೀ ಪ್ರಸಂಗ ಯಾಕೆ ಬಯಸಿದಳು ಎಂಬುದು ನನಗೆ ಹೊಳೆಯಲಿಲ್ಲ. ಆಟ ಶುರುವಾಗುವ ವೇಳೆಗೆ ಭದ್ರಕ್ಕನನ್ನು ಅನಾಮತ್ತಾಗಿ ಎತ್ತಿಕೊಂಡು ವೀರಾಚಾರ್ಯರ ಜಗಲಿಗೆ ತಂದರು. ಹಿಂದೆ ಹಾಸಿಗೆ ಸುರುಳಿ ಇರಿಸಿ ವರಗಿಕೊಳ್ಳುವುದಕ್ಕೆ ಏರ್ಪಾಡು ಮಾಡಿದ್ದರು. ನಾನೂ ಮತ್ತು ಅಲ್ಲಾಡಿ ರುದ್ರಣ್ಣ ತನ್ನ ಪಕ್ಕವೇ ಕುಳಿತುಕೊಳ್ಳಬೇಕೆಂದು ಭದ್ರಕ್ಕ ಬಯಸಿದ್ದರಿಂದ ನಾವೂ ಅವಳ ಪಕ್ಕದಲ್ಲೇ ಕುಳಿತುಕೊಂಡೆವು. ಆಟ ಶುರುವಾಯಿತು. ಭದ್ರಕ್ಕನ ಸ್ಥಿತಿ ಭಾವವತರಿಗೂ ಗೊತ್ತಿದ್ದುದರಿಂದ , ಹನುಮನಾಯಕ ಮತ್ತು ಅಕ್ಕಾಸಾಬಿಯ ಹಾಸ್ಯ ಪ್ರಸಂಗಗಳನ್ನು ಕಟ್ಟು ಮಾಡಿ ನೇರವಾಗಿ ಮುಖ್ಯ ಪ್ರಸಂಗವನ್ನೇ ಭಾಗವತರು ಶುರು ಮಾಡಿದರು.
ಧರೆಯೊಳು ಹೆಸರಾದ ಗಂಗೂರ ಪುರವಾಸಿ-ಎಂದು ಭಾಗವತರು ಪ್ರಾರ್ಥನಾ ಗೀತೆಯನ್ನು ತಮ್ಮ ಕಂಚು ಕಂಠದಲ್ಲಿ ಮೊಳಗಿಸಿಯಾದ ಮೇಲೆ ಇಂದ್ರನ ಒಡ್ಡೋಲಗ. ಊರ್ವಶಿಯ ನರ್ತನ. ಊರ್ವಶಿಯನ್ನ ನಿಬ್ಬೆರಗಿಂದ ಅರ್ಜುನ ನೋಡುವುದು. ರಾತ್ರಿ ಇಂದ್ರ ಊರ್ವಶಿಯನ್ನ ಅರ್ಜುನನ ಶಯನ ಗೃಹಕ್ಕೆ ಕಳಿಸುವುದು. ಅರ್ಜುನ , ಊರ್ವಶಿಯು ತನ್ನ ವಂಶದ ಹಿರೀಕನಾದ ಪುರೂರವನ ರಾಣಿಯಾಗಿದ್ದುದರಿಂದ ತನಗೆ ತಾಯಿ ಸಮಾನಳೆಂದು ಹೇಳಿ, ಆಕೆಯನ್ನು ತಿರಸ್ಕರಿಸುವುದು, ಊರ್ವಶಿ ರೋಷಭೀಷಣಳಾಗಿ ನಪುಂಸಕನಾಗೆಂದು ಅರ್ಜುನನಿಗೆ ಶಾಪ ಕೊಡುವುದು, ಅರ್ಜುನ ಭೂಮಿಗೆ ಹಿಂದಿರುಗಿ ವಿರಾಟನ ಮನೆಯಲ್ಲಿ ವೇಷ ಮರೆಸುವಾಗ ಹೆಣ್ಣುಡುಗೆ ತೊಟ್ಟು ನಪುಂಸಕನಾಗುವುದು..ಈ ದೃಶ್ಯ ಬಂದಾಗ ಭದ್ರಕ್ಕ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳನ್ನು ಸಮಾಧಾನ ಪಡಿಸುವುದು ನಮಗ್ಯಾರಿಗೂ ಸಾಧ್ಯವಾಗಲಿಲ್ಲ. ಆಕೆಯನ್ನು ಮತ್ತೆ ಎತ್ತಿಕೊಂಡು ಮನೆಗೆ ಸಾಗಿಸಬೇಕಾಯಿತು.
ಆಮೇಲೆ ಬಹಳ ದಿನಗಳೇನೂ ಭದ್ರಕ್ಕ ಬದುಕಿರಲಿಲ್ಲ. ಅವಳು ಮೃತಳಾದಾಗ ಯಥಾಪ್ರಕಾರ ಅಲ್ಲಾಡಿರುದ್ರಣ್ಣನವರ ಎರಡು ಸಾಲಿನ ಪತ್ರ ಬಂತು. ಅರ್ಜುನ ಹೆಣ್ಣುಡುಗೆ ತೊಡುವಾಗ ಭದ್ರಕ್ಕ ಬಿಕ್ಕಿಬಿಕ್ಕಿ ಅತ್ತದ್ದು ನೆನಪಾಗುತ್ತಾ, ಮೂಗು ಕಣ್ಣಿಂದ ನೀರು ಸುರಿಯುತ್ತಿದ್ದ ಆಕೆಯ ಮುಖ ಮತ್ತೆ ನನ್ನ ಕಣ್ಣ ಮುಂದೆ ಬಂದು, ನಾನು ಕರವಸ್ತ್ರದಿಂದ ಕಣ್ಣನ್ನು ಒತ್ತಿಕೊಂಡೆ.

(ಉದಯವಾಣಿ ದೀಪಾವಳಿ ಸಂಚಿಕೆಯಲ್ಲಿ ಪ್ರಕಟಿತ)

****

Saturday, October 17, 2009

ಅಶ್ವತ್ಥ ಎಂಬ ಅಯಸ್ಕಾಂತ...

ಸಮಕಾಲೀನ ಸಂದರ್ಭದಲ್ಲಿ ನಾನು ಕಂಡ ಮಹಾನ್ ಪ್ರತಿಭಾಶಾಲಿಗಳಲ್ಲಿ ಅಶ್ವಥ್ ಒಬ್ಬರು. ಸುಮಾರು ಮೂವತ್ತು ವರ್ಷಗಳ ಸುದೀರ್ಘವಾದ ಒಡನಾಟ ನಮ್ಮದು. ಸೃಷ್ಟಿಶೀಲವಾದ ಅನೇಕ ಗಟ್ಟಿ ಕ್ಷಣಗಳನ್ನು ಅವರೊಟ್ಟಿಗೆ ಕಳೆದಿರುವ ಅನುಭವ ನನಗುಂಟು. ಇಷ್ಟಾಗಿಯೂ ಅವರ ಬಗ್ಗೆ ಬರೆಯುವುದು ಒಂದು ಸವಾಲಿನ ಸಂಗತಿಯೇ. ಕಾರಣ ಸುಲಭವಾದ ಗ್ರಹಿಕೆಗೆ ಸಿಕ್ಕುವ ಸರಳ ವ್ಯಕ್ತಿಯಲ್ಲ ಅವರು. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂಬುದೇ ಅವರ ಜೀವನ ಸೂತ್ರ. ಸದಾ ಹೊಸ ಹೊಸ ಕನಸು ಕಾಣುತ್ತಾ, ಅವನ್ನು ಕಾರ್ಯ ರೂಪಕ್ಕೆ ತರುತ್ತಾ, ನನ್ನನ್ನು ಸದಾ ವಿಸ್ಮಿತಗೊಳಿಸುತ್ತಾ ಬಂದಿರುವ ವ್ಯಕ್ತಿ ಇವರು. ಇವರಂಥಾ ಕನಸುಗಾರರನ್ನು ನಾನು ಕಂಡೇ ಇಲ್ಲ ಎಂದರೂ ತಪ್ಪಾಗದು.ಇವರ ವ್ಯಕ್ತಿತ್ವದಲ್ಲಿ ಎರಡು ಧ್ಯಾನ ಕೇಂದ್ರಗಳಿವೆ. ಒಂದು ಸುಗಮಸಂಗೀತ. ಇನ್ನೊಂದು ಸ್ವತಃ ಅಶ್ವಥ್. ಈ ಎರಡು ಕೇಂದ್ರಗಳು ದೂರ ಸರಿಯುತ್ತಾ , ಹತ್ತಿರವಾಗುತ್ತಾ ಒಂದು ಬಗೆಯ ವಿಚಿತ್ರವಾದ ಖೋ ಆಟದಲ್ಲಿ ತೊಡಗಿರುವ ಹಾಗೆ ನನಗೆ ಯಾವಾಗಲೂ ಅನ್ನಿಸಿದೆ. ಕೆಲವೊಮ್ಮೆ ಸುಗಮ ಸಂಗೀತ ಅಶ್ವಥ್ ಅವರನ್ನು ಆವರಿಸಿಬಿಡುತ್ತದೆ. ಮತ್ತೆ ಕೆಲವೊಮ್ಮೆ ಅಶ್ವಥ್ ಸುಗಮ ಸಂಗೀತವನ್ನು ಆವರಿಸಿಬಿಡುತ್ತಾರೆ. ವಿಶೇಷವಾದ ಅರ್ಥದಲ್ಲಿ ಸುಗಮ ಸಂಗೀತ ಎಂಬುದು ಅಶ್ವಥ್ ಅವರ ಅಹಂಅಭಿವ್ಯಕ್ತಿಯೇ ಆಗಿದೆ. ಪ್ರಾಯಃ ಒಬ್ಬ ಸಾಹಿತಿ, ಚಿತ್ರಗಾರ, ಶಿಲ್ಪಿಗಿಂತ ಇದು ಭಿನ್ನವಾದ ನಿಲುವು. ಸಂಗೀತಗಾರ, ನೃತ್ಯಪಟು, ನಟ- ತಮ್ಮ ಹಾಜರಿಯಲ್ಲೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆಗೆ ಒಳಗಾದವರು. ಅಶ್ವಥ್ ಇಲ್ಲದೆ ಅಶ್ವಥ್ ಗಾಯನವಿಲ್ಲ; ಮಾಯಾರಾವ್ ಇಲ್ಲದೆ ಮಾಯಾರಾವ್ ಅವರ ನರ್ತನವಿಲ್ಲ; ರಾಜಕುಮಾರ್ ಇಲ್ಲದೆ ರಾಜಕುಮಾರ್ ಅವರ ಅಭಿನಯವಿಲ್ಲ. ಈ ಮಾಧ್ಯಮದವರು ವ್ಯಕ್ತಿ ನಿರಸನವನ್ನು ಸಾಧಿಸುವ ಬಗೆಯೆಂತು? ಅಸಾಮಾನ್ಯವಾದ ನಡಾವಳಿ, ಲಯಪ್ರತೀತಿ, ವೇಷಾಂತರಗಳು, ಮತ್ತು ಶಿಷ್ಯನಿರ್ಮಾಣಗಳಿಂದ ತಕ್ಕಮಟ್ಟಿಗಿನ ವ್ಯಕ್ತಿನಿರಸನವನ್ನು ಸಾಧಿಸಬಹುದೇನೋ! ಆದರೂ ಬೇರೆ ಕಲಾಮಾಧ್ಯಮಗಳಲ್ಲಿ ಸಾಧ್ಯವಾಗುವ ವ್ಯಕ್ತಿನಿರಪೇಕ್ಷತೆ (ವ್ಯಕ್ತಿತ್ವನಿರಪೇಕ್ಷತೆ ಅಲ್ಲ) ಸಂಗೀತ, ನೃತ್ಯ, ಅಭಿನಯದ ಮಾಧ್ಯಮಗಳಲ್ಲಿ ಸಾಧ್ಯವಾಗುವುದಿಲ್ಲವೇನೋ...!ಈ ತೊಡಕಿನ ಅರಿವು ಅಶ್ವಥ್ ಅವರನ್ನು ಅರ್ಥೈಸುವಲ್ಲಿ ನಮ್ಮ ನೆರವಿಗೆ ಬಂದೀತು!

***

ಅಶ್ವಥ್ ಅವರನ್ನು ಮೊಟ್ಟಮೊದಲಬಾರಿ ನಾನು ನೋಡಿದ್ದು ಯವನಿಕಾ ಕಲಾಮಂದಿರದಲ್ಲಿ. ಗೆಳೆಯ ವ್ಯಾಸರಾವ್, ಅವರನ್ನು ನನಗೆ ಪರಿಚಯಿಸಿದರು. ಅಶ್ವಥ್, ನಾನು ಮತ್ತು ಬಿ.ಆರ್.ಎಲ್. ಅವರನ್ನು ನೋಡಲಿಕ್ಕಾಗಿ ಯವನಿಕಾಕ್ಕೆ ಬಂದಿದ್ದರು. ಯವನಿಕಾದ ಮುಂಭಾಗದ ಅಂಗಳದಲ್ಲಿ ಸುತ್ತ ಇರುವ ಮಂದಿಯ ಗಮನವೇ ಇಲ್ಲದೆ ಅಶ್ವಥ್ ತಮ್ಮ ಒಂದು ಕನಸನ್ನು ನಮ್ಮ ಮುಂದೆ ತೆರೆದಿಡತೊಡಗಿದರು! ಹೀಗೆ ಒಂದು ಕನಸಿನ ಸಮೇತವೇ ಅಶ್ವಥ್ ಅವರನ್ನು ನಾನು ಮೊಟ್ಟಮೊದಲು ನೋಡಿದ್ದು. ಮುಂದೆ ಅದೆಷ್ಟು ಬಾರಿ ನಾನು ಅವರು ಸೇರಿ ಮಾತಾಡಿದ್ದೇವೋ. ಕನಸಿಲ್ಲದ ಬರಿಗಣ್ ಅಶ್ವಥ್ ಯಾವತ್ತೂ ನನ್ನ ಕಣ್ಣಿಗೆ ಬಿದ್ದಿಲ್ಲ. ಮೊದ ಮೊದಲು ಸಣ್ಣಪುಟ್ಟ ಕನಸುಗಳನ್ನು ಅಶ್ವಥ್ ಕಾಣುತ್ತಿದ್ದರು. ಬರು ಬರುತ್ತಾ ಅವು ವಿಶ್ವೋವಿಶಾಲವಾಗತೊಡಗಿದವು! ಅವರ ಕನಸಿನ ಪ್ರಪಂಚ ಅಳತೆಮೀರಿ ದೊಡ್ಡದಾಗತೊಡಗಿತು. ಅಸಂಖ್ಯ ಅನಾಮಿಕ ಮುಖಗಳು ಆ ಕನಸುಗಳಲ್ಲಿ ಕಿಕ್ಕಿರಿಯತೊಡಗಿದವು. ಅದೆಲ್ಲಾ ಅಶ್ವಥ್ ಅವರ ಆಯಸ್ಕಾಂತಪ್ರತಿಭೆಯಿಂದ ದೋಚಲ್ಪಟ್ಟ ಅನಾಮಿಕ ಅಭಿಮಾನಿಗಳ ಸಾಂದ್ರ ದಟ್ಟಣೆ. ಅಶ್ವಥ್..ಅಶ್ವಥ್..ಅಶ್ವಥ್..ಎಂದು ಅಭಿಮಾನದಿಂದ ಒಕ್ಕೊರಳಲ್ಲಿ ಘೋಷಿಸುವ ಅಭಿಮಾನಿಗಳು ಅವರು. ಇಂಥ ಒಂದು ವಿಶ್ವವ್ಯಾಪೀ ಕನಸು ಕನ್ನಡವೇ ಸತ್ಯ ಕಾರ್ಯಕ್ರಮದ್ದು! ಎಂಥಾ ಜನ ಸಾಗರ ನೆರೆದಿತ್ತು ಅಲ್ಲಿ! ಒಂದು ಸುಗಮಸಂಗೀತ ಕಾರ್ಯಕ್ರಮಕ್ಕೆ ಆಪಾಟಿ ಮಂದಿ ಸೇರುತ್ತಾರೆಂದು ನಾವು ಕಲ್ಪಿಸುವುದೇ ಸಾಧ್ಯವಿರಲಿಲ್ಲ. ಅದು ಅಶ್ವಥ್ ಕಲ್ಪಿಸಿದ್ದ ಅತ್ಯಂತ ಬೃಹತ್ ಆದ ಕನಸಾಗಿತ್ತು. ಆ ಅಸಾಧ್ಯವೆನಿಸುವ ಕನಸನ್ನು ಅವರು ಈ ನೆಲದ ಪಾತಳಿಗೇ ಎಳೆದು ತಂದಿದ್ದರು. ಇದೊಂದು ಅದ್ಭುತ ಪ್ರಮಾಣಾತ್ಮಕ ಕನಸು.

***

ಅಶ್ವಥ್ ಕಂಡ ಬೇರೆ ಬಗೆಯ ಕನಸುಗಳೂ ನನ್ನ ಕಣ್ಮುಂದೆ ಇವೆ. ನಿರ್ಜನವಾದ ಒಂದು ಅರಣ್ಯಪ್ರದೇಶ. ಇರುಳು ಮೆಲ್ಲಗೆ ತಾಯ ಮುಸುಕಿನಂತೆ ಭೂಮಿಯ ಮೇಲೆ ಇಳಿಬಿದ್ದಿದೆ. ಒಂದು ದೊಡ್ಡ ಹಸಿರುಕಪ್ಪು ಮರದ ಕೆಳಗೆ ಅಶ್ವಥ್ ಕುಳಿತಿದ್ದಾರೆ. ಕೆಲವರು ಕವಿಗಳು, ಕಾವ್ಯರಸಿಕರು, ಆಪ್ತೇಷ್ಟರು, ಅಶ್ವಥ್ ಅವರ ಮಿತ್ರಬಾಂಧವರು ಅಲ್ಲಿ ನೆರೆದಿದ್ದಾರೆ. ಪ್ರಖರವಾದ ಬೆಳಕೂ ಇಲ್ಲ. ಸಣ್ಣಗೆ ಒಂದು ಹಣತೆಯ ದೀಪ. ಅಷ್ಟೆ. ಅಶ್ವಥ್ ತಂಬೂರಿಯ ಮಂಗಲಶ್ರುತಿಯ ಹಿನ್ನೆಲೆಯಲ್ಲಿ ಮೆಲ್ಲಗೆ ಹಾಡ ತೊಡಗುತ್ತಾರೆ. ವಿಲಂಬ ಗತಿಯ ಗಂಭೀರವಾದ ಕವಿತೆಗಳು. ಸಾವಧಾನದ ಗಾಯನ. ಗಾಯಕ ಮತ್ತು ಕೇಳುಗ ಇಬ್ಬರೂ ಆ ಗಾಯನದಲ್ಲಿ ತನ್ಮಯರಾಗಿಬಿಟ್ಟಿದ್ದಾರೆ. ರಾತ್ರಿ ಎಷ್ಟುಹೊತ್ತಿನವರೆಗೆ ಈ ಕಾರ್ಯಕ್ರಮ ನಡೆಯಿತೋ...ಯಾರ ಅರಿವಿಗೂ ಬರುವುದಿಲ್ಲ. ಬೇಂದ್ರೆ, ಕುವೆಂಪು, ಕೆ.ಎಸ್.ನ, ಷರೀಫ್ ಇವರ ಗೀತೆಗಳು ಕೇಳುಗರ ಮನದ ಆಳಕ್ಕೆ ಇಳಿಯುತ್ತಾ ಗಾಢವಾದ ಸಂವೇದನೆಯನ್ನು ನಿರ್ಮಿಸುತ್ತಾ ಇವೆ...ಕೆಲವರು ಕೇಳುಗರ ಕಣ್ಣಂಚು ಕೂಡಾ ಒದ್ದೆಯಾಗುತ್ತಾ ಇದೆ. ಇದು ಇನ್ನೊಂದು ಬಗೆಯ ಕನಸು. ಈ ಕನಸನ್ನು ನಮ್ಮ ಕಣ್ಣಮುಂದೆ ನೆಲಕ್ಕಿಳಿಸಿದವರು ಅಶ್ವಥ್ ಅವರೇ!

***

ತಮ್ಮ ಮಾಧ್ಯಮ ಕೇವಲ ಒಪ್ಪಿಸುವ ಮಾಧ್ಯಮವಲ್ಲ; ಚಿಂತಿಸುವ ಮಾಧ್ಯಮ ಎಂದು ದೃಢವಾಗಿ ನಂಬಿದವರು ಅಶ್ವಥ್. ತನ್ನದೇ ಕಾವ್ಯ ಮೀಮಾಂಸೆಯನ್ನು ಬೆಳೆಸದೆ ಒಬ್ಬ ಕವಿ ಹೇಗೆ ಬೆಳೆಯಲಾರನೋ, ಹಾಗೇ ತನ್ನ ಗಾಯನ ಮೀಮಾಂಸೆಯನ್ನು ಬೆಳೆಸದೆ ಒಬ್ಬ ಗಾಯಕನೂ ಬೆಳೆಯಲಾರ. ತಮ್ಮ ಮಾಧ್ಯಮದ ವ್ಯಾಕರಣದ ಬಗ್ಗೆ ಆಳವಾಗಿ ಚಿಂತಿಸುವ ಒಬ್ಬನೇ ಗಾಯಕ ಸಿ.ಅಶ್ವಥ್. ಅಶ್ವಥ್ ಚಾಲ್ತಿಗೆ ಬರುವ ತನಕ , ರಾಗ ಸಂಯೋಜನೆ ಎನ್ನುವ ಮಾತೇ ನಮ್ಮಲ್ಲಿ ರೂಢಿಯಲ್ಲಿದ್ದುದು. ಅಶ್ವಥ್ "ಸ್ವರ ಸಂಯೋಜನೆ " ಎಂಬ ಹೊಸ ವ್ಯಾಕರಣ ಸೂತ್ರವನ್ನು ಹುಟ್ಟು ಹಾಕಿದರು. ಇದು ಸುಲಭಸಾಧ್ಯವಾದುದಲ್ಲ. ಹಗಲೂ ಇರುಳೂ ತನ್ನ ಮಾಧ್ಯಮವನ್ನ ಹಚ್ಚಿಕೊಂಡು ಚಿಂತಿಸದೆ ಹೊಸ ಕಲ್ಪನೆಗಳು ಆವಿರ್ಭವಿಸಲಾರವು.ಸ್ವರ ಸಂಯೋಜನೆ ಎಂಬುದು ಸುಗಮ ಸಂಗೀತಕ್ಕೆ ಅಶ್ವಥ್ ಕೊಟ್ಟ ಬಹು ದೊಡ್ಡ ಕಾಣಿಕೆ. ಇದು ಸರ್ವ ಸಮ್ಮತವಾಗುವ ತನಕ ಚರ್ಚೆಗಳು ನಡೆಯಬಹುದು. ಆದರೆ ಇದು ಚರ್ಚೆಗೆ ಯೋಗ್ಯವಾದ ನವೋನವ ಕಲ್ಪನೆ. ಈಚಿನ ದಿನಗಳಲ್ಲಿ ಅಶ್ವಥ್ ಹಾಡುತ್ತಾರೆ ಅಥವಾ ಹಾಡಿನ ಶಾಸ್ತ್ರವನ್ನು ಚಿಂತಿಸಿ, ತಮ್ಮ ಹೊಸ ಹೊಳಹುಗಳನ್ನು ಭಾಷೀಕರಿಸಲು ಹರಸಾಹಸ ಮಾಡುತ್ತಾರೆ. ಮಂಗಳೂರು ಸಾಹಿತ್ಯ ಸಮ್ಮೇಳನದಲ್ಲಿ ಅವರು ನೀಡಿದ ಸೋದಾಹರಣ ಉಪನ್ಯಾಸ ನನ್ನ ನೆನಪಲ್ಲಿದೆ. ಅಷ್ಟು ದೊಡ್ಡ ಸಭೆಗೆ ಸೂಕ್ಷ್ಮವಾದ ಸುಗಮಸಂಗೀತದ ವ್ಯಾಕರಣವನ್ನು ತಿಳಿಸಲು ಅಶ್ವಥ್ ಹೇಗೆ ಸಮರ್ಥರಾದರು? ಇದು ನನಗೆ ಇವತ್ತೂ ಆಶ್ಚರ್ಯ ಹುಟ್ಟಿಸುವ ಸಂಗತಿ. ಇದು ವಾಗ್ಮಿತೆಯ ಬಲವಲ್ಲ. ಹೊಸದನ್ನು ಹೊಸದಾಗಿ ಹೇಳಬೇಕೆಂಬ ಒಬ್ಬ ಆಳಚಿಂತಕನ ಮನಸ್ಸಿನ ಒಳಾಂದೋಳನದ ಕೊಡುಗೆ. ಬುದ್ಧಿ ಮತ್ತು ಭಾವ ಇವುಗಳ ಬೆಸುಗೆಗಾರನಾಗಿ ಹೀಗೆ ಅಶ್ವಥ್ ನನಗೆ ಪ್ರಿಯರಾದ ಕಲಾವಿದರಾಗಿದ್ದಾರೆ.

***

ಅಶ್ವಥ್ ಒಬ್ಬ ಮೋಡಿಕಾರ ಎಂಬುದು ಸಾಮಾನ್ಯವಾಗಿ ಹೇಳಲಾಗುವ ಮಾತು. ಹಾಗೇ ಅವರು ಮೂಡಿಕಾರನೂ ಹೌದು! ಈ ಮೋಡಿ ಮತ್ತು ಮೂಡಿ ಎಷ್ಟು ಹತ್ತಿರದ ಪದಗಳಾಗಿವೆ! ಮೊದಲನೆಯದು ಕನ್ನಡದ ಮೋಡಿ. ಎರಡನೆಯದು ಇಂಗ್ಲಿಷ್ ಮೂಡಿ! ಕಲಾವಿದರೆಲ್ಲಾ ಸಾಮಾನ್ಯವಾಗಿ ಮೂಡಿ ಮನುಷ್ಯರೇ! ಅಶ್ವಥ್ ಅತಿ ಎನ್ನಬಹುದಾದಷ್ಟು ಮೂಡಿ. ಶೀಘ್ರಕೋಪಿ; ಅಪರಿಮಿತ ಭಾವುಕ; ಮಹಾನ್ ಹಠಗಾರ; ಸ್ವಕೇಂದ್ರಿತವ್ಯಕ್ತಿ. ಈ ಎಲ್ಲ ಮಾತಿಗೂ ವಿರುದ್ಧವಾದುದನ್ನೂ ಅವರ ಬಗ್ಗೆ ಹೇಳ ಬಹುದು. ಮಹಾ ಮುಗ್ಧ; ತಕ್ಷಣ ಕರಗಿಬಿಡುವ ಸ್ವಭಾವ; ವಿಮರ್ಶೆ, ಟೀಕೆಗಳಿಗೆ ಅತಿಯಾಗಿ ಘಾಸಿಗೊಳ್ಳುವ ಮನಸ್ಸು; ಮಹಾ ಸ್ನೇಹಜೀವಿ; ಬೀಸುಗೈ ಧಾರಾಳಿ! ಎಂಥಾ ಕಲಸುಮೇಲೋಗರ ವ್ಯಕ್ತಿತ್ವ ಈ ಮನುಷ್ಯನದ್ದು! ಈ ವಿಕ್ಷಿಪ್ತತೆಗಳ ನಡುವೆ ಅಶ್ವಥ್ ಅವರನ್ನು ಗರಿಷ್ಠ ಪ್ರಮಾಣದಲ್ಲಿ ನಾವು ನೋಡ ಬಹುದಾದದ್ದು ಎಲ್ಲಿ?

ನಾನು ಕಂಡಂತೆ ನಾನು ಅತ್ಯಂತ ಆಳದಲ್ಲಿ ಪ್ರೀತಿಸುವ ಅಶ್ವಥ್ ವ್ಯಕ್ತಿತ್ವದ ಅಭಿವ್ಯಕ್ತಿ ಕೆಳಕಂಡಂತೆ:

"ಅಶ್ವಥ್ ಮಸುಕು ಬೆಳಕಿನ ಕೋಣೆಯೊಂದರಲ್ಲಿ ತಮ್ಮ ಹಾರ್ಮೋನಿಯಮ್ಮಿನ ಹಿಂದೆ ಕೂತು ಅರೆಗಣ್ಣಿನಲ್ಲಿ ತನ್ಮಯರಾಗಿ ಹೋಗಿದ್ದಾರೆ. ಕೆಲವರೇ ಅತ್ಯಾಪ್ತ ಗೆಳೆಯರು ಅವರ ಎದುರು ಕೂತಿದ್ದಾರೆ. ಅಶ್ವಥ್ ಕವಿತೆಯೊಂದಕ್ಕೆ ಸ್ವರ ಸಂಯೋಜಿಸುವ ಸೃಷ್ಟಿಶೀಲ ಕ್ಷಣವದು. ಎಲ್ಲರೂ ತುಟಿಪಿಟ್ಟೆನ್ನದೆ ಕಾಯುತ್ತಾ ಇದ್ದಾರೆ. ಕಾಯುತ್ತಿದ್ದಾರೆ-ಗೆಳೆಯರು. ಕಾಯುತ್ತಿದ್ದಾರೆ-ಪಕ್ಕವಾದ್ಯದ ಆತ್ಮೀಯರು. ಕಾಯುತ್ತಿದ್ದಾರೆ-ಸ್ವತಃ ಅಶ್ವಥ್. ಕಾಯುತ್ತಿದ್ದಾರೆ ಬೇಂದ್ರೆ, ಕುವೆಂಪು, ಕೆ.ಎಸ್.ನ.,ಜಿ.ಎಸ್.ಎಸ್., ಷರೀಫ್....ಮೆಲ್ಲಗೆ ಏನೋ ಒಡಲಾಳದಿಂದ ಒಡಮುರಿದು ಮೇಲೇಳುತ್ತಾ ಇದೆ. ಏನೋ ಸಿಕ್ಕಂತೆ ತಕ್ಷಣ ಇಷ್ಟಗಲ ಕಣ್ಣರಳಿಸುತ್ತಾರೆ ಅಶ್ವಥ್. ಅದೊಂದು ವಿಲಕ್ಷಣ ಕ್ಷಣ; ಹೆಚ್ಚೂ ಕಮ್ಮಿ ಸಮಾಧಿ ಸ್ಥಿತಿ. ಅಶ್ವಥ್ ತಮಗೆ ತಾವೇ ಎಂಬಂತೆ ಮೆಲ್ಲಗೆ ಹಾಡ ತೊಡಗುತ್ತಾರೆ....ಷ್! ಸುಮ್ಮನಿರಿ. ಇದು ಕವಿತೆ ಮತ್ತು ಗೀತೆ ಸಂಲಗ್ನಗೊಳ್ಳುತ್ತಿರುವ ಶುಭ ಮುಹೂರ್ತ..!"

******

Tuesday, September 29, 2009

ಸ್ನೇಹ ಪ್ರೀತಿಗಳನ್ನೇ ದೇವರೆಂದು ನಂಬಿರುವ ಜಿ.ಎಸ್.ಎಸ್.

ಸುವರ್ಣ ಕರ್ನಾಟಕ ಸಂದರ್ಭದ ಈ ಬಾರಿಯ ರಾಜ್ಯೋತ್ಸವದ ಆಚರಣೆಯಲ್ಲಿ ಒಂದು ಮಹತ್ವದ ಸಂಗತಿಯೆಂದರೆ ರಾಷ್ಟ್ರಕವಿ ಗೋವಿಂದಪೈ ಮತ್ತು ರಾಷ್ಟ್ರಕವಿ ಕುವೆಂಪು ಅವರ ನಂತರ ಮತ್ತೋರ್ವ ಮಹತ್ವದ ಸಾಧಕನನ್ನು ನಮ್ಮ ಸರ್ಕಾರ ರಾಷ್ಟ್ರಕವಿಯಾಗಿ ನಾಮಕರಣ ಮಾಡಿ ಗೌರವಿಸುತ್ತಿರುವುದು! ಆ ವಿಶೇಷ ಗೌರವಕ್ಕೆ ಪಾತ್ರರಾಗುತ್ತಿರುವ ವ್ಯಕ್ತಿ ನಮ್ಮೆಲ್ಲರ ಅಚ್ಚುಮೆಚ್ಚಿನ ಕವಿ ಮತ್ತು ಸಾಂಸ್ಕೃತಿಕ ನಾಯಕರಾದ ಡಾಜಿ.ಎಸ್.ಶಿವರುದ್ರಪ್ಪ ಅವರು. ತಿಂಗಳ ಹಿಂದೆ ಒಮ್ಮೆ ಜಿ.ಎಸ್.ಎಸ್. ಅವರೊಂದಿಗೆ ಮಾತಾಡಿದಾಗ-" ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಸರ್ಕಾರ ಮತ್ತೊಬ್ಬ ಮಹಾ ಸಾಧಕರನ್ನು ರಾಷ್ಟ್ರ ಕವಿಯಾಗಿ ನಾಮಕರಣ ಮಾಡುತ್ತದೆಂದು ಸುದ್ದಿ... ಆ ಗೌರವ ಅಕಸ್ಮಾತ್ ನಿಮ್ಮ ಪಾಲಾದರೆ...ನಿಮ್ಮ ಸಹಜ ಪ್ರತಿಕ್ರಿಯೆ?" ಎಂದಾಗ, ಜಿಎಸೆಸ್ ಹೇಳಿದರು:"ಆದಾಗ ತಾನೇ ಆ ಪ್ರಶ್ನೆ?"....."ಒಂದು ವೇಳೆ ಆದರೆ?"..ಜಿಎಸೆಸ್ ನಕ್ಕು :"ಕೆ.ಎಸ್.ನರಸಿಂಹಸ್ವಾಮಿ ಅವರು ಹೇಳಿಲ್ಲವಾ? ಮಲ್ಲಿಗೆ ಹಾರ ಕೊರಳಿಗೆ ಭಾರ!"

ಪ್ರಾಯಃ ಇದು ಸಹಜ ಕವಿ ಒಬ್ಬರು ಮಾತ್ರ ನೀಡಬಹುದಾದ ಪ್ರತಿಕ್ರಿಯೆ. ಜಿಎಸೆಸ್ ತಮ್ಮ ಗುರುಗಳಾದ ಕುವೆಂಪು ಅವರನ್ನು ರಾಷ್ಟ್ರಕವಿಯೆಂದು ಗೌರವಿಸಿದ್ದನ್ನು ನೆನೆಸಿಕೊಂಡರು.ಅಂಥ ಗೌರವ ತಮಗೆ ಅನ್ನುವುದು ಅವರಿಗೆ ಸುಲಭವಾಗಿ ಒಪ್ಪಿಕೊಳ್ಳಬಹುದಾದ ಸಂಗತಿಯಾಗಿರಲಿಲ್ಲ. ಅದು ಅವರ ಸ್ವಭಾವಕ್ಕೆ ಸಹಜವಾದ ವಿನಯದ ಅಭಿವ್ಯಕ್ತಿಯಾಗಿತ್ತು.ಆದರೆ ಸದ್ಯದ ಸಂದರ್ಭದಲ್ಲಿ ಒಬ್ಬ ಕವಿ,ವಿಮರ್ಶಕ,ಕಾವ್ಯಚಿಂತಕರಾಗಿ ಜಿಎಸ್ಸೆಸ್ ಬಹು ಎತ್ತರದ ವ್ಯಕ್ತಿಯಾಗಿದ್ದಾರೆ ಅನ್ನುವುದು ನಿರ್ವಿವಾದದ ಸಂಗತಿ.ಜೊತೆಗೆ ಅವರು ಒಬ್ಬ ಸಾಂಸ್ಕೃತಿಕ ನಾಯಕರಾಗಿ ರೂಪಗೊಂಡಿದ್ದಾರೆ ಎನ್ನುವುದು ಇನ್ನೂ ಮಹತ್ವದ ಸಂಗತಿ. ಎಷ್ಟೋ ಜನ ಮಹತ್ವದ ಲೇಖಕರಿಗೆ ಈ ಸಾಂಸ್ಕೃತಿಕ ನಾಯಕತ್ವದ ಪ್ರಭಾವಲಿ ಸಿದ್ಧಿಸಿರುವುದಿಲ್ಲ! ಜಿ.ಎಸ್.ಎಸ್. ತಮ್ಮ ಸುದೀರ್ಘ ಜೀವಿತದ ಹರಹಿನಲ್ಲಿ ಉದ್ದಕ್ಕೂ ತಾವು ತೆಗೆದುಕೊಂಡ ರಾಜಕೀಯ ಸಾಂಸ್ಕೃತಿಕ ನಿಲುವುಗಳಿಂದ ಕರ್ನಾಟಕ ಒಂದು ಎಚ್ಚರದ ಪ್ರಜೆಯಾಗಿ ರೂಪಗೊಂಡಿದ್ದಾರೆ. ಇಂಥ ವ್ಯಕ್ತಿ ಅಖಂಡ ಕರ್ನಾಟಕದ ಬಿಕ್ಕಟ್ಟು ಮತ್ತು ಉಲ್ಲಾಸದ ಘಳಿಗೆಗಳಿಗೆ ಸಾಕ್ಷಿ ಮಿಡಿತಗಳನ್ನು ನೀಡುತ್ತಾ ಬಂದಿರಬೇಕಾಗುತ್ತದೆ.ಕರ್ನಾಟಕದ ಒಟ್ಟಾರೆ ಹಿತ ಈ ಬಗೆಯ ವ್ಯಕ್ತಿತ್ವದ ನಿರಂತರ ನಿಲುವಿನ ಅವಿಭಾಜ್ಯ ಅಂಗವಾಗಿರುತ್ತದೆ. ಒಂದು ಧರ್ಮ, ಒಂದು ರಾಜಕೀಯ ಪಕ್ಷ, ಒಂದು ನಿರ್ದಿಷ್ಟ ಸಂಸ್ಥೆ ,ಒಂದು ಸಾಹಿತ್ಯಕ ಗುಂಪು-ಇವುಗಳೊಂದಿಗೆ ತನ್ನನ್ನು ಸಮೀಕರಿಸಿಕೊಳ್ಳದೆ ಅನಿಕೇತನತ್ವ ಸಾಧಿಸದ ಹೊರತು ಅಖಂಡ ಕರ್ನಾಟಕದ ಸಾಕ್ಷೀಪ್ರಜೆಯಾಗಿ ರೂಪಗೊಳ್ಳುವುದು ಸಾಧ್ಯವಾಗುವುದಿಲ್ಲ.ತಮ್ಮ ವೈಯಕ್ತಿಕ ಅಭಿಪ್ರಾಯಗಳು ಏನೇ ಇರಲಿ ಅವನ್ನು ಸಮಷ್ಟಿಯ ಹಿತಕ್ಕಾಗಿ ಮೀರಿನಿಲ್ಲುವುದು ಅಗತ್ಯವಾಗುತ್ತದೆ. ತಾವು ನವೋದಯ ಕಾವ್ಯವನ್ನು ಮೆಚ್ಚುವವರಾಗಿರಬಹುದು. ಆದರೆ ನವ್ಯದ ಸತ್ವ ಸಾಮರ್ಥ್ಯಗಳಿಗೆ ತೆರೆದ ಮನಸ್ಸುಳ್ಳವರಾಗಿರಬೇಕಾಗುತ್ತದೆ. ಹೊಸದಾಗಿ ಕಾಣಿಸಿಕೊಳ್ಳುವ ಬಂಡಾಯ ದಲಿತ ಚಳುವಳಿಗಳು ಸಾಮಾಜಿಕ ಸಾಂಸ್ಕೃತಿಕ ನೆಲೆಯಲ್ಲಿ ಅನಿವಾರ್ಯವೆನಿಸಿದಾಗ ಅವನ್ನು ಮೆಚ್ಚಿ ಪ್ರೋತ್ಸಾಹಿಸುವ ಭವಿಷ್ಯದ್ ಹಿತಾಕಾಂಕ್ಷಿಯಾದ ನಿಲುವನ್ನು ಹೊಂದಿರಬೇಕಾಗುತ್ತದೆ. ಇಂತಹ ನಿರ್ಮಮ ನಿಷ್ಠುರತೆ ಕೇವಲ ಸಾಹಿತ್ಯಕ ಸಂದರ್ಭಕ್ಕೆ ಅನ್ವಯಿಸಿ ಮಾತ್ರವಲ್ಲ. ಸಾಮಾಜಿಕ ಸಾಂಸ್ಕೃತಿಕ ಸಂದರ್ಭಗಳಲ್ಲೂ ಜಿ.ಎಸ್.ಎಸ್ ಅವರು ಹೇಗೆ ತಮ್ಮ ನಿರ್ಮಮ ನಿಷ್ಠುರ ಪ್ರಜೆಯನ್ನು ಕಾಯ್ದುಕೊಂಡು ಬಂದಿದ್ದಾರೆ ಅನ್ನುವುದನ್ನು ಇಡೀ ಕನ್ನಡ ನಾಡೇ ಬಲ್ಲುದು.ಅದು ಜಾತಿವಿಷಯದಲ್ಲಿ ಆಗಿರಬಹುದು; ಧರ್ಮದ ವಿಷಯದಲ್ಲಿ ಆಗಿರಬಹುದು; ಭಾಷೆಯ ವಿಷಯದಲ್ಲಿ ಆಗಿರಬಹುದು. ನಮ್ಮಲ್ಲಿ ತೀವ್ರವಾದ ಅಭಿಪ್ರಾಯಭೇದಗಳು ಇರಬಹುದು. ಆದರೆ ನಾವೆಲ್ಲ ಒಟ್ಟು ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಹೊಣೆಗಾರಿಕೆ ಹೊತ್ತಿರುವವರು. ಆದಕಾರಣ ನಾವು ಒಂದುಕಡೆ ಸೇರಿ ಕೂತು ಚರ್ಚೆ ಮಾಡೋಣ. ಸಾಧ್ಯವಾದರೆ ಒಮ್ಮತದ ನಿಲುವಿಗೆ ಬರೋಣ. ಸಾಧ್ಯವಾಗದಿದ್ದರೆ ಪರಸ್ಪರ ಗೌರವ ಇಟ್ಟುಕೊಂಡೆ ಅಭಿಪ್ರಾಯ ಭೇದಗಳನ್ನು ಹೊಂದೋಣ ಎನ್ನುವ ಪ್ರಜಾಪ್ರಭುತ್ವವಾದೀ ನಿಲುವನ್ನು ತಮ್ಮ ಬದುಕಿನ ಉದ್ದಕ್ಕೂ ಪ್ರಕಟಿಸುತ್ತಾ, ನಿತ್ಯದ ಆಚರಣೆಯಲ್ಲಿ ರೂಢಿಸುತ್ತಾ ಬಂದಿರುವವರು ಡಾಜಿ.ಎಸ್.ಶಿವರುದ್ರಪ್ಪನವರು. ರಾಜಕೀಯ ,ಸಾಹಿತ್ಯಕ, ಧಾರ್ಮಿಕ, ಸಾಂಸ್ಕೃತಿಕ ವಲಯಗಳ ವಿರೋಧೀನೆಲೆಯ ವಕ್ತಾರರೂ ಜಿ.ಎಸ್.ಎಸ್ ಬಗ್ಗೆ ಪ್ರೀತಿ ಗೌರವ ಇಟ್ಟುಕೊಂಡು ಬಂದಿರುವುದು ಇದೇ ಕಾರಣಕ್ಕೆ ಎಂದು ನಾನು ಭಾವಿಸುತ್ತೇನೆ. ಇಂಥ ಸರ್ವ ಸಮ್ಮತ ವ್ಯಕ್ತಿತ್ವವನ್ನು ಹೊಂದಿರುವವರು ಯಾವತ್ತೂ ವಿರಲವೇ. ಸದ್ಯದ ಸಂದರ್ಭದಲ್ಲಿ ಜಿ.ಎಸ್.ಎಸ್. ಅಂತಹ ವಿರಲ ವ್ಯಕ್ತಿಗಳಲ್ಲಿ ಒಬ್ಬರು...ಮತ್ತು ಮುಖ್ಯರು. ಹಾಗಾಗಿ ಅವರನ್ನು ರಾಷ್ಟ್ರಕವಿ ಎಂದು ಸರ್ಕಾರ ಗೌರವಿಸುತ್ತಿರುವುದು ಕನ್ನಡ ನಾಡಿನ ಸಮಷ್ಟಿಪ್ರಜೆಯ ಸಮ್ಮತಿಯ ಚಿಹ್ನೆ ಎಂದು ನಾನು ಭಾವಿಸುತ್ತೇನೆ.

*****

ಕೆಲವು ದೃಷ್ಟಿಯಲ್ಲಿ ನಾನು ತುಂಬಾ ಅದೃಷ್ಟಶಾಲಿ. ೧೯೭೧ರಲ್ಲಿ ನಾನು ಬೆಂಗಳೂರಿಗೆ ನನ್ನ ಹಳ್ಳಿಯಿಂದ ಒಲಸೆ ಬಂದಾಗ ಅನೇಕ ಸಾಹಿತ್ಯ ದಿಗ್ಗಜರು, ಸಾಂಸ್ಕೃತಿಕ ನಾಯಕರು ನನ್ನನ್ನು ತಮ್ಮ ಅಂತರ್ವಲಯಕ್ಕೆ ತೆಗೆದುಕೊಂಡರು. ನಾನು ಅವರ ಆಪ್ತವರ್ಗದಲ್ಲಿ ಒಬ್ಬನಾಗಿ ಹೋದೆ. ಡಾಪುತಿನ, ಡಾಗೋಪಾಲಕೃಷ್ಣ ಅಡಿಗ, ಶ್ರೀ ಕೆ.ಎಸ್.ನರಸಿಂಹಸ್ವಾಮಿ, ಪ್ರೊ.ಎಲ್.ಎಸ್.ಶೇಷಗಿರಿರಾವ್, ಡಾಜಿ.ಎಸ್.ಶಿವರುದ್ರಪ್ಪ -ಅವರಲ್ಲಿ ಮುಖ್ಯರು.ನಾನು ಎಂ.ಎ. ದಲ್ಲಿ ಜಿ.ಎಸ್.ಎಸ್.ಅವರ ವಿದ್ಯಾರ್ಥಿ. ಆಮೇಲೆ ಉದ್ದಕ್ಕೂ ಜಿ.ಎಸ್.ಎಸ್. ನನ್ನ ಜೀವನದಲ್ಲಿ ನಿರ್ಣಾಯಕ ಕ್ಷಣಗಳಲ್ಲಿ ಮಹತ್ವದ ಭೂಮಿಕೆ ನಿರ್ವಹಿಸುತ್ತಾ ಬಂದಿದ್ದಾರೆ. ವಿದ್ಯಾರ್ಥಿಯನ್ನು ಆಪ್ತ ಸ್ನೇಹಿತನಂತೆ ನಡೆಸಿಕೊಂಡಿದ್ದಾರೆ. ಸ್ನೇಹಿತನನ್ನು ಪರಮಬಂಧುವಿನಂತೆ ನಡೆಸಿಕೊಂಡಿದ್ದಾರೆ. ನನ್ನ ಸಾಹಿತ್ಯಕ ಜೀವನದ ಬಿಕ್ಕಟ್ಟುಗಳಲ್ಲಿ ನನಗೆ ಆಸರೆಯಾಗಿ ನಿಂತವರು ಅವರು. ಹಾಗೇ ಬದುಕಿನ ಕಷ್ಟ ನಿಷ್ಠುರದ ಸಂದರ್ಭಗಳಲ್ಲೂ. ವಿದ್ಯಾರ್ಥಿಗಳ ಬಗ್ಗೆ ಅವರ ಪ್ರೀತಿ ಅಪರಿಮಿತವಾದುದು. ನಮ್ಮ ಈವತ್ತಿನ ಅನೇಕ ಮುಖ್ಯ ಲೇಖಕರು ಜಿ.ಎಸ್.ಎಸ್. ಅವರ ಶಿಷ್ಯರು! ಆ ಶಿಷ್ಯರ ಬಗ್ಗೆ ಯುಕ್ತ ಸಂದರ್ಭಗಳಲ್ಲಿ ಅವರೇ ಸೊಗಸಾದ ಲೇಖನಗಳನ್ನು ಬರೆದು ತಮ್ಮ ಶಿಷ್ಯ ಪ್ರೀತಿಯನ್ನು ಮೆರೆದಿದ್ದಾರೆ.ತಮಗಿಂತ ಕಿರಿಯರ ವಿಷಯ ಇರಲಿ, ತಮ್ಮ ಸಮಕಾಲೀನ ಲೇಖಕರ ಬಗ್ಗೆ ಬರೆಯುವುದು ಕೂಡಾ ತಮ್ಮ ಘನತೆಗೆ ಕುಂದು ಎಂದು ಭಾವಿಸುವ ಅನೇಕ ಲೇಖಕರು ನಮ್ಮ ಸುತ್ತಾ ಇರುವಾಗ ಜಿ.ಎಸ್.ಎಸ್. ಅವರಂತೆ ಶಿಷ್ಯರ ಬಗ್ಗೆ ಪತ್ರಿಕೆಗಳಲ್ಲಿ ಲೇಖನ ಬರೆಯುವುದು ಆಶ್ಚರ್ಯಕರ ವಿದ್ಯಮಾನವೇ ಸೈ!

ಈ ಶಿಷ್ಯ ಪ್ರೀತಿಗೆ ಶಿವರುದ್ರಪ್ಪನವರು ತಮ್ಮ ಮೂವರು ಮಹಾಗುರುಗಳಿಂದ ಪಡೆದ ಸ್ಫೂರ್ತಿಯೇ ಮುಖ್ಯ ಪ್ರೇರಣೆ ಎಂದು ನಾನು ಭಾವಿಸುತ್ತೇನೆ. ಜಿ.ಎಸ್.ಎಸ್. ಮತ್ತೆ ಮತ್ತೆ ನೆನೆಯುವ ಅವರ ಮೂವರು ಗುರುಗಳೆಂದರೆ ಶ್ರೀ ಕುವೆಂಪು, ಪ್ರೊ.ತೀನಂಶ್ರೀ , ಮತ್ತು ಪ್ರೊ.ತ.ಸು.ಶ್ಯಾಮರಾಯರು! ಕುವೆಂಪು ಎಂದರೆ ಜಿ.ಎಸ್.ಎಸ್. ಅವರಿಗೆ ಎಣೆಯಿಲ್ಲದ ಪ್ರೀತಿ ಗೌರವ. ಕುವೆಂಪು ಬಗ್ಗೆ ಅವರು ಬರೆದಿರುವ ಈ ಪದ್ಯ ಅದನ್ನು ಅತ್ಯಂತ ಸ್ವಾರಸ್ಯಕರವಾಗಿ ನಿರೂಪಿಸಬಲ್ಲುದು:

ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ ಗುಟ್ಟುಗಳ.

ನೀವು ಕಲಿಸಿದಿರಿ ನನಗೆ ತಲೆ ಎತ್ತಿ ನಿಲ್ಲುವದನ್ನು,
ಕಿರಿಕುಳಗಳಿಗೆ ಜಗ್ಗದೆ ನಿರ್ಭಯವಾಗಿ ನಡೆವುದನ್ನು,
ಸದ್ದಿರದೆ ಬದುಕುವುದನ್ನು.

ಎಷ್ಟೊಂದು ಕೀಲಿ ಕೈಗಳನ್ನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನ್ನು ತೆರೆದಿದ್ದೀರಿ ನನ್ನೊಳಗೆ;
ಕಟ್ಟಿ ಹರಸಿದ್ದೀರಿ ಕನ್ನಡದ ಕಂಕಣವನ್ನು ಕೈಗೆ

ಸದ್ದು ಗದ್ದಲದ ತುತ್ತೂರಿ ದನಿಗಳಾಚೆಗೆ ನಿಂತು
ನಿಶ್ಶಬದಲ್ಲಿ ನೆನೆಯುತ್ತೇನೆ
ಗೌರವದಿಂದ.

ನಕ್ಷತ್ರಖಚಿತ ನಭವಾಗಿ ತಬ್ಬಿಕೊಂಡಿದ್ದೀರಿ
ನನ್ನ ಸುತ್ತ
ಪಟಬಿಚ್ಚಿ ದೋಣಿಯನ್ನೇರಿ ಕುಳಿತಿದ್ದೇನೆ
ನೀವಿತ್ತ ಹೊಸ ಹುಟ್ಟುಗಳ ಹಾಕುತ್ತ.

ಕುವೆಂಪು ಅವರ ಬಗ್ಗೆ ಒಂದು ಸಮಗ್ರ ವಿಮರ್ಶಾಗ್ರಂಥವನ್ನು ಬರೆಯಬೇಕೆಂಬುದು ಜಿ.ಎಸ್.ಎಸ್.ಅವರ ಬಹುದಿನದ ಆಶೆಯಾಗಿತ್ತು. ಜಿ.ಎಸ್.ಎಸ್. ಇತ್ತೀಚೆಗೆ ತಮ್ಮ ಆರೋಗ್ಯ ಅಷ್ಟು ಚೆನ್ನಾಗಿರದಿದ್ದರೂ ತಮ್ಮ ನಚ್ಚಿನ ಗುರು ಕುವೆಂಪು ಅವರ ಬಗ್ಗೆ ಒಂದು ಅಚ್ಚುಕಟ್ಟಾದ ವಿಮರ್ಶಾಕೃತಿಯನ್ನು ಬರೆದು ಪ್ರಕಟಿಸಿದ್ದಾರೆ.

ಜಿ.ಎಸ್.ಎಸ್.ಅವರ ಮೇಲೆ ತೀವ್ರವಾದ ಪ್ರಭಾವ ಬೀರಿದ ಅವರ ಇನ್ನೊಬ್ಬ ಗುರು ತೀ.ನಂ.ಶ್ರೀಕಂಠಯ್ಯನವರು. ಕನ್ನದದ ಕೊರಳಲ್ಲಿ ಶ್ರೀಕಂಠಿಕೆ ಎಂದು ತೀ.ನಂ.ಶ್ರೀ ಅವರನ್ನು ಜಿ.ಎಸ್.ಎಸ್. ಕೈವಾರಿಸುತ್ತಾರೆ.ಅಚ್ಚುಕಟ್ಟಿನ ಸ್ವಚ್ಛತೆಯ ಸಂಕೇತವಾದ ತೀನಂಶ್ರೀ ಅವರ ಒಂದೊಂದು ಕೃತಿಯೂ ಕೃತಾರ್ಥ. ಅವರು ಪರಿಪೂರ್ಣತೆಯ ಅತೃಪ್ತ ಅನ್ವೇಷಕ ಮತ್ತು ಪಾಂಡಿತ್ಯ ಪ್ರತಿಭೆಗಳ ಹದವಾದ ಪಾಕ ಎಂಬುದಾಗಿ ತಮ್ಮ ಗುರುಗಳನ್ನು ಮೆಚ್ಚಿಕೊಳ್ಳುತ್ತಾರೆ. ಜಿ.ಎಸ್.ಎಸ್. ವವರ ವ್ಯಕ್ತಿತ್ವ ನಿರ್ಮಿತಿಯಲ್ಲಿ ತೀನಂಶ್ರೀ ಅವರದ್ದು ಗಾಢವಾದ ಪ್ರಭಾವ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.ಇನ್ನು ತಸು ಶ್ಯಾಮರಾಯರಂತೂ ಜಿ.ಎಸ್.ಎಸ್. ಅವರಿಗೆ ತಾಯ್ತನದ ವಾತ್ಸಲ್ಯವನ್ನು ಧಾರೆಯೆರೆದ ಮಹಾನುಭಾವರು. ಶ್ಯಾಮರಾಯರು ಬದುಕಿರುವವರೆಗೂ ಅವರ ಹುಟ್ಟುಹಬ್ಬದ ದಿನ ಜಿ.ಎಸ್.ಎಸ್. ಎಲ್ಲೇ ಇರಲಿ ಮೈಸೂರಿಗೆ ಧಾವಿಸುತ್ತಿದ್ದರು.ಅನೇಕರಿಗೆ ಗೊತ್ತಿರುವಂತೆ ಜಿ.ಎಸ್.ಎಸ್. ಅವರ ಜನಪ್ರಿಯ ಗೀತೆ "ಎದೆತುಂಬಿ ಹಾಡಿದೆನು" ಈ ಶ್ಯಾಮರಾಯರನ್ನು ಉದ್ದೇಶಿಸಿ ಬರೆದ ಹಾಡು.ಅದೀಗ ಸುಗಮ ಸಂಗೀತ ಕಛೇರಿಗಳ ಮಂಗಳ ಗೀತೆಯಾಗಿ ಪರಿಣಮಿಸಿದೆ.ಮೈಸೂರು ಅನಂತಸ್ವಾಮಿಯವರ ಅತ್ಯದ್ಭುತ ಸಂಯೋಜನೆಯಾದ ಎದೆತುಂಬಿ ಹಾಡಿದೆನು ಸುಗಮಸಂಗೀತದ ಮನೋಹರ ಮಂಜುಲ ಗೀತೆಗಳಲ್ಲಿ ಒಂದು.ಜಿ.ಎಸ್.ಎಸ್. ಆಗಾಗ ಹೇಳುತ್ತಿರುತ್ತಾರೆ: "ಇಂಥ ಒಂದು ಗೀತೆ ಜನತೆಯ ಹೃದಯದಲ್ಲಿ ಸ್ಥಾನ ಗಿಟ್ಟಿಸಿತು ಎಂದರೆ ಕವಿಯ ಹೆಸರು ಅಜರಾಮರವಾಗಿಬಿಡುತ್ತದೆ! ಈ ಗೀತೆಗೆ ರಾಗ ಸಂಯೋಜನೆ ಮಾಡಿದ ಅನಂತಸ್ವಾಮಿಅವರನ್ನು ಜಿ.ಎಸ್.ಎಸ್. ಬಹಳ ಪ್ರೀತಿಯಿಂದ ನೆನೆಯುತ್ತಾರೆ.(ಅನಂತಸ್ವಾಮಿ ಅವರು ಆಸ್ಪತ್ರೆಯಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಿದ್ದಾಗ ಜಿ.ಎಸ್.ಎಸ್.ಅವರಿಗೆ ಬಹುಪ್ರಿಯರಾದ ಇನ್ನೊಬ್ಬ ಸಂಗೀತ ನಿರ್ದೇಶಕ ಸಿ.ಅಶ್ವಥ್ ಅವರು ಜಿ.ಎಸ್.ಎಸ್. ಮತ್ತು ನನ್ನನ್ನು ಅನಂತಸ್ವಾಮಿ ಅವರನ್ನು ನೋಡಲು ಕರೆದೊಯ್ದಿದ್ದು ನೆನಪಾಗುತ್ತಿದೆ).ಎದೆ ತುಂಬಿ ಹಾಡಿದೆನು ಎಂಬ ಈ ಗೀತೆಯನ್ನು ರತ್ನಮಾಲಾಪ್ರಕಾಶ್ ಅವರ ಕೊರಳಲ್ಲಿ ಕೇಳುವುದೆಂದರೆ ಜಿ.ಎಸ್.ಎಸ್.ಅವರಿಗೆ ಇಂದಿಗೂ ತುಂಬ ಇಷ್ಟ.

ಕುವೆಂಪು ಅವರ ನಂತರ ಬೇಂದ್ರೆ ಮತ್ತು ಪುತಿನ -ಜಿ.ಎಸ್.ಎಸ್ ಅವರಿಗೆ ಬಹು ಪ್ರಿಯರಾದ ಕವಿಗಳು. ಪುತಿನ ಅವರ ಎಣೆಯಿಲ್ಲದ ಪ್ರೀತಿಗೆ ಜಿ.ಎಸ್.ಎಸ್ ಮಾರುಹೋಗಿದ್ದರು. ಅನೇಕ ಬಾರಿ ಜಿ.ಎಸ್.ಎಸ್. ಮತ್ತು ನಾನು ಒಟ್ಟಿಗೇ ಪುತಿನ ಅವರ ಮನೆಗೆ ಹೋಗಿದ್ದೇವೆ. (ಮೊಟ್ಟಮೊದಲು ನನ್ನನ್ನು ಕುವೆಂಪು ಮತ್ತು ಪುತಿನ ಅವರ ಮನೆಗೆ ಕರೆದುಕೊಂಡು ಹೋದವರು ಜಿ.ಎಸ್.ಎಸ್.ಅವರೇ). ಗಂಟೆ ಗಟ್ಟಲೆ ಪುತಿನ ವರೊಂದಿಗೆ ಸರಸ ಸಂಭಾಷಣೆ ನಡೆಸಿದ್ದೇವೆ.ಸಾಯುವ ಕೆಲವು ತಿಂಗಳು ಮುನ್ನ ಪುತಿನ ಅವರು ತಮ್ಮ ಹೆಸರಿನಲ್ಲಿ ಸರ್ಕಾರ ಸ್ಥಾಪಿಸಲಿರುವ ಟ್ರಸ್ಟ್ ನಲ್ಲಿ ಅವರಿಗೆ ತುಂಬ ಪ್ರಿಯರಾದ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರೂ, ಜಿ.ಎಸ್.ಶಿವರುದ್ರಪ್ಪನವರೂ ಇರಬೇಕೆಂದು ಸೂಚಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಒಮ್ಮೆ ನನ್ನ ಬಳಿ ಮಾತಾಡುವಾಗ "ನಮ್ಮ ಶಿವರುದ್ರಪ್ಪ ತುಂಬಾ ಗಟ್ಟಿಗ ಕಾಣಯ್ಯ ..!"ಎಂದು ಪುತಿನ ತುಂಬು ಪ್ರೀತಿಯಿಂದ ನುಡಿದದ್ದು ನನಗೆ ನೆನಪಾಗುತ್ತಿದೆ.

ಜಿ.ಎಸ್.ಎಸ್. ಪುತಿನ ಟ್ರಸ್ಟ್ ನ ಅಧ್ಯಕ್ಷರಾದ ಮೇಲೆ ಏನೆಲ್ಲ ಕೆಲಸ ಮಾಡಿದ್ದಾರೆ ಎಂಬುದನ್ನು ನಾನು ಹತ್ತಿರದಿಂದ ಬಲ್ಲೆ. ಮೇಲುಕೋಟೆಯ ಪುತಿನ ಮನೆಯನ್ನು ಪುನಾರಚಿಸಿ ನಾಡಿಗೆ ಸಾಂಸ್ಕೃತಿಕ ನೆನಪಾಗಿ ನೀಡುವಾಗ ಒಂದು ದಿನ ಮೊದಲೇ ಜಿ.ಎಸ್.ಎಸ್., ಚೆನ್ನವೀರ ಕನವಿ, ಅಚ್ಯುತಕಾದ್ರಿ, ಕಮಲೇಶ್ ಮತ್ತು ನಾನು ಮೇಲುಕೋಟೆಗೆ ಹೋಗಿದ್ದೆವು.ಇಡೀ ರಾತ್ರಿ ನಾವು ಪುತಿನ ಮನೆಯ ಅಲಂಕರಣ ಕಾರ್ಯದಲ್ಲಿ ತೊಡಗಿದ್ದೆವು. ಯಾವ ಫೋಟೊ ಎಲ್ಲಿರಬೇಕು, ಪುತಿನ ಅವರ ಯಾವ ಕವಿತೆಯ ಸಾಲು ಯಾವ ಗೋಡೆಯ ಮೇಲೆ ಇರಬೇಕು ಎಲ್ಲದರಲ್ಲೂ ಜಿ.ಎಸ್.ಎಸ್. ಅವರ ಮಾರ್ಗದರ್ಶನ! ಮಾರ್ಗದರ್ಶನ ಎಂಬ ಮಾತು ತಪ್ಪು. ಮೊದಲು ಸ್ವತಹ ಅವರು ಮಾಡಲು ಹೊರಡುವುದು. ಆಮೇಲೆ ನಾವು ಅವರಿಗೆ ಅಸರೆಯಾಗಿ ನಿಲ್ಲುವುದು. ದೂರದಿಂದ ನೋಡಿ , ತಲೆದೂಗುತ್ತಾ ಕಣವಿಯವರು(ಇವರು ಜಿಎಸ್ಸೆಸ್ ಅವರ ಪರಮಾಪ್ತ ಗೆಳೆಯರು ಎಂಬುದನ್ನು ಕನ್ನದ ಸಾರಸ್ವತ ಲೋಕ ಬಲ್ಲುದು): " ಈಗ ಅಗ್ದೀ ಚಲು ಆತು ನೋಡ್ರಿ..!" ಎಂದು ಉದ್ಗರಿಸುವುದು. ಹೀಗೆ ಜಿ.ಎಸ್.ಎಸ್ ಕಾರ್ಯಶ್ರದ್ಧೆ, ಸ್ನೇಹಪ್ರೀತಿ, ರುಚಿಶುದ್ಧಿ ಎಲ್ಲಕ್ಕೂ ನಮಗೆ ಆದರ್ಶವಾಗಿ ನಿಂತವರು!

ಊಟ ತಿಂಡಿಗಳಲ್ಲಿ ಜಿ.ಎಸ್.ಎಸ್. ಅವರು ಒಳ್ಳೇ ರಸಿಕರು! ಹೂರಣದ ಹೋಳಿಗೆಯ ಊಟವನ್ನು ಅವರ ಮನೆಯಲ್ಲೇ ಮಾಡಬೇಕು.ಹೋಳಿಗೆ ಹಾಕಿಸಿಕೊಂಡು, ಅದರಮೇಲೆ ತುಪ್ಪ ಸುರುವಿಕೊಂಡು, ಅದಕ್ಕೆ ಕಸಿಮಾವಿನ ಸೀಕರಣೆ ಬೆರೆಸಿಕೊಂಡು ಅದನ್ನೆಲ್ಲಾ ಹದವಾಗಿ ಕಿವುಚಿ ರಸಪಾಕ ಮಾಡಿಕೊಂಡು ಸಶಬ್ದವಾಗಿ ಅದನ್ನು ತಿನ್ನಿವುದು ಜಿ.ಎಸ್.ಎಸ್.ಕ್ರಮ!. " ಹೀಗೆ ....ಹೋಳಿಗೆ ತಿನ್ನಬೇಕಾದ್ದು..!" ಎಂದು ಅವರು ನಮ್ಮತ್ತ ನೋಡುತ್ತಾ ಪಾಪ ತಿಳಿಯದ ಮುಗ್ಧರು ನೀವು ಎಂದು ಅನುಕಂಪೆ ತೋರುವ ಗತ್ತನ್ನು ನೋಡಿಯೇ ಅನುಭವಿಸಬೇಕು! ಹಾಗೇ ವಿದ್ಯಾರ್ಥಿಭವನದ ದೋಸೆ ಅವರಿಗೆ ಪ್ರಿಯವಾದುದು! ಮೈಸೂರಿಗೆ ಹೋದಾಗ ಮೈಲಾರಿ ಹೋಟೆಲ್ ಗೆ ಅವರೇ ನಮ್ಮನ್ನು ಕರೆದೊಯ್ದಾರು! ಆರೋಗ್ಯಕ್ಕೆ ತೊಂದರೆಯಿಲ್ಲ ತಗೊಳ್ಳಿ ತಗೊಳ್ಳಿ ಎಂದು ಉಪಚಾರಮಾಡುವುದು ಬೇರೆ! ಕೊನೆಗೆ ಮಾಣಿ ಬಂದು ಬಿಲ್ಲು ಬಡಿಯುತ್ತಾನೆ. ಅದನ್ನು ಜಿ.ಎಸ್.ಎಸ್. ಇರುವಾಗ ಅವರ ವಿದ್ಯಾರ್ಥಿಗಳು ಹೇಗೆ ತಾನೆ ಮುಟ್ಟುವ ಧೈರ್ಯ ಮಾಡಬಲ್ಲರು! ಚಿಕ್ಕವರಿಗೆ ತಿನ್ನಿಸುವುದು ದೊಡ್ಡವರ ಆಜನ್ಮ ಸಿದ್ಧ ಹಕ್ಕು ಎಂಬ ಘೋಷಣೆಯಲ್ಲಿ ದೃಢವಾದ ವಿಶ್ವಾಸ ಉಳ್ಳವರು ನಮ್ಮ ಮೇಷ್ಟ್ರು! ಅಥವಾ ಆ ಘೋಷಣೆಯನ್ನು ಹುಟ್ಟಿ ಹಾಕಿದವರು ಅವರೇ ಎನ್ನೋಣ!

ಕನ್ನದ ಕಾವ್ಯದಲ್ಲಿ ನಮ್ಮ ಪ್ರತಿಯೊಬ್ಬ ಮುಖ್ಯ ಕವಿಯನ್ನೂ ಒಂದಲ್ಲ ಒಂದು ದನಿ ಕಾಡುತ್ತಾ ಹೋಗುತ್ತದೆ. ಅದು ಮೋಹನ ಮುರಲಿ ಆಗಬಹುದು! ವನಮಾಲಿಯ ವೇಣು ವಾದನ ಇರಬಹುದು. ಅಸರಂತ ಒಂದೇ ಸಮ ಕೂಗುವ ಕೋಗಿಲೆಯ ಕಾಡುವ ಧ್ವನಿ ಇರಬಹುದು! ಜಿ.ಎಸ್.ಎಸ್. ಅವರನ್ನೂ ಒಂದು ಧ್ವನಿ ಕಾಡುತ್ತಾ ಇದೆ! ಅದು ಒಂದು ಒಂದು ಮಗುವಿನ ನೀಳ್ದನಿಯ ರೋದನ!

ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ-
ದೂರದ ಬಿರುಗಾಳಿಯ ಮೊರೆಯಂತೆ
ಮುಗಿಲಿಂದಿಳಿಯುವ ಧಾರಾಕಾರದ
ಮಳೆಯಂತೆ
ದದವನು ಅಪ್ಪಳಿಸುವ ಅಲೆಯಂತೆ
ಎಲ್ಲೋ ಮಗು ಅಳುತಾ ಇದೆ
ಒಂದೇ ಸಮನೆ!

ಕೈಗೆಟುಕದ ರೊಟ್ಟಿಯ ಚೂರಾಗಿದೆಚಂದಿರ
ಬಾನಿನ ತಟ್ಟೆಯಲಿ!
ಹಸಿವಿನ ತುಣುಕುಗಳಂದದಿ ಚಿಕ್ಕೆಗಳುರಿಯುತ್ತಿವೆ
ಶೂನ್ಯದ ಹೊಟ್ಟೇಯಲಿ
ಸೊಕ್ಕಿದ ತೇಗಿನ ತೆರ ಝಗಝಗಿಸಿವೆ
ನಗರದ ಬೆಳಕಿನ ವಿಸ್ತಾರ
ಸುತ್ತಲು ಛಳಿಗಾಳಿಗೆ ನಡುಗತಲಿವೆ
ಎಲೆಯುದುರಿದ ಕೈ ಚಾಚಿದ
ಅನಾಥ ಮರಗಲ ಪರಿವಾರ!


ಪದ್ಯವನ್ನು ಪೂರ್ತಿ ಓದಿದ ಮೇಲೆ ಗೊತ್ತಾಗುತ್ತದೆ ಈ ಮಗು ಮನುಷ್ಯಕುಲದ ದೀನತೆಯ ಪ್ರತೀಕ ಎಂದು. ಈವತ್ತಿನ ಸಾಮಾಜಿಕ ವಿಷಮತೆಯ ಸಂದರ್ಭದಲ್ಲಿ ಮಾನವತೆ ದೀನವಾಗಿ ಅಳುತ್ತಿರುವುದನ್ನು ಈ ಕವಿತೆ ಅದ್ಭುತವಾಗಿ ವರ್ಣಿಸುತ್ತದೆ!

ಶೋಷಿತವರ್ಗದ ಪರವಾದ ಜಿ.ಎಸ್.ಎಸ್.ನಿಲುವು ಆರೋಪಿತವಾದುದಲ್ಲ. ಅವರ ರಕ್ತದ ದಮನಿಯಲ್ಲಿ ಸಹಜವಾಗಿ ಪ್ರವಹಿಸುವಂಥದ್ದು! ಜಿ.ಎಸ್.ಎಸ್.ಜಗತ್ತು ಕಾಯುವ ದೈವದಲ್ಲಿ ನಂಬಿಕೆ ಕಳೆದುಕೊಂಡ ಜಗತ್ತು. ಜಿ.ಎಸ್.ಎಸ್. ದೈವದ ಹಂಗಿಲ್ಲದ ಕವಿ ನಿಜ. ಮನುಷ್ಯನೇ ತನ್ನ ಕರ್ಮಕ್ಕೆ ಹೊಣೆಗಾರಿಕೆ ಒಪ್ಪಿಕೊಂಡು ಬದುಕಬೇಕಾದ ಜಗತ್ತು ಇದು ಎಂದು ಜಿ.ಎಸ್.ಎಸ್ ಕಾವ್ಯ ನಂಬಿದೆ.ಅವರ ಪ್ರಸಿದ್ಧವಾದ ಒಂದು ಕವಿತೆಯೇ ಇದೆಯಲ್ಲ!

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ -ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ!

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೇ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ!

ಮೂವತ್ತೆರಡು ವರ್ಷಗಳ ಹಿಂದೆ ರಚಿತವಾದ ಈ ಗೀತೆ ಜಿ.ಎಸ್.ಎಸ್. ಕಾವ್ಯದ ಕೇಂದ್ರ ಸ್ಪಂದನವನ್ನು ಸೂಚಿಸಬಲ್ಲುದು. ಅಂತರದ ನಿವಾರಣೆ, ಪ್ರೀತಿ ಸ್ನೇಹಗಳ ಆವಾಹನೆ ಅವರ ಕಾವ್ಯದ ಬಹು ಮುಖ್ಯ ಆಶಯವಾಗಿದೆ.

ಸಿ.ಅಶ್ವಥ್ ಈ ಗೀತೆಗೆ ಅದ್ಭುತವಾಗಿ ಸ್ವರಸಂಯೋಜನೆ ಮಾಡಿದ್ದಾರೆ. ದೈವಶ್ರದ್ಧೆಯ ಅವರಿಗೆ ಇಲ್ಲದ ದೇವರು ಅನ್ನುವ ಮಾತು ಒಂದು ನುಂಗಲಾರದ ತುತ್ತು! ಅದನ್ನು ಕಾಣದ ದೇವರು ಕೆಲವರು ತಿದ್ದಿ ಹಾಡಿದ್ದೂ ಉಂಟು! ಜಿ.ಎಸ್.ಎಸ್. ಈ ಕವಿತೆಯಲ್ಲಿ ವ್ಯಕ್ತ ಪಡಿಸಿರುವ ಭಾವ ಸ್ಪಷ್ಟವಾಗಿದೆ. ಕಲ್ಲುಮಣ್ಣಿನ ಗುಡಿಯಲ್ಲಿ ದೇವರು ಇಲ್ಲ ಎಂಬುದೇ ಸೂಚ್ಯಾರ್ಥ! ದೇವರು ಇದ್ದರೆ ಅವನು ನಮ್ಮೊಳಗೇ ಇರುವ ಪ್ರೀತಿ ಸ್ನೇಹಗಳಲ್ಲಿ ಇದ್ದಾನೆ ಎನ್ನುತ್ತಾರೆ ಅವರು. ಇದು ದೈವವಿರೋಧೀ ನಿಲುವಲ್ಲ. ದೈವದ ವ್ಯಾಖ್ಯಾನದಲ್ಲಿ ಇರುವ ಭಿನ್ನತೆಯ ನಿಲುವು.

ಜಿ.ಎಸ್.ಎಸ್. ಕಾವ್ಯದ ಪರಮ ಲಕ್ಷಣವನ್ನೂ ಈ ಕವಿತೆಯ ಭಾಷಿಕ ಸ್ವರೂಪ ಪ್ರತಿನಿಧಿಸುವಂತಿದೆ. ಜಿ.ಎಸ್.ಎಸ್. ಅವರದ್ದು ವಚನಕಾರರಂತೆ(ಅದರಲ್ಲೂ ಬಸವಣ್ಣನವರಂತೆ) ನೇರವಾಗಿ ಹೃದಯಕ್ಕೆ ತಾಗುವ ಮಾತು. ಅವರ ಯಾವುದೇ ಜನಪ್ರಿಯ ಗೀತೆಯನ್ನು ತೆಗೆದುಕೊಳ್ಳಿ ಅದು ಹೀಗೆ ನೇರ ಮಾತು ಗಾರಿಕೆಯ ಫಲವಾಗಿದೆ. ಆ ನೇರ ಮಾತುಗಾರಿಕೆಗೆ ಕನ್ನಡ ಭಾಷೆಯ ಹೃದಯವನ್ನು ಬಲ್ಲ ನುಡುಗಾರಿಕೆ ಶಕ್ತಿಯನ್ನು ನೀಡುತ್ತದೆ. ಕನ್ನಡದ ಅಚ್ಚ ನುಡಿಗಟ್ಟನ್ನು ಜಿ.ಎಸ್.ಎಸ್. ಅಂತೆ ಬಳಸುವ ಕವಿಗಳು ವಿರಳ.ರಮ್ಯತೆಯನ್ನು ಅದರ ನುಡಿಗಟ್ಟಲ್ಲೇ ಛಿದ್ರಿಸಿ ಹೊಸ ಅರ್ಥವಂತಿಕೆಯನ್ನು ಅವರ ಕಾವ್ಯ ಕಟ್ಟಬಲ್ಲದು. ನಕ್ಷತ್ರಗಳನ್ನು ಶೂನ್ಯದ ಹೊಟ್ಟೆಯಲ್ಲಿ ಉರಿಯುವ ಹಸಿವಿನ ತುಣುಕುಗಳು ಎನ್ನುವಲ್ಲಿ ಇಂಥಾ ಪ್ರಯತ್ನವಿರುವುದನ್ನು ನೋಡಬಹುದು. ಅಸುಂದರವಾದುದನ್ನು ಹೀಗೆ ಕಾವ್ಯದಲ್ಲಿ ಒಳಗೊಳ್ಳಬಲ್ಲ ಕವಿ ರಮ್ಯಮಾರ್ಗದಲ್ಲಿ ಇದ್ದೂ ಒಳ ಬಂಡಾಯ ನಡೆಸುವ ಕವಿಯಾಗಿರುತ್ತಾನೆ. ಜಿ.ಎಸ್.ಎಸ್.ಅಂಥ ಕವಿಯಾಗಿದ್ದಾರೆ.ಖಾಸಗೀ ದುಗುಡ ದುಮ್ಮಾನಗಳನ್ನು ಅವರ ಕಾವ್ಯ ಸಾಮಾಜಿಕ ಪರಿಪ್ರೇಕ್ಷ್ಯದಲ್ಲೇ ಒಳಗೊಳ್ಳುವ ಯತ್ನ ಮಾಡುತ್ತದೆ. ಆದುದರಿಂದಲೇ ಅವರು ಅಖಂಡ ಕರ್ನಾಟಕದ ಹೃದಯಸ್ಪಂದನವನ್ನು ಹಿಡಿಯಬಲ್ಲ ಕವಿಯಾಗಿದ್ದಾರೆ. ಅವರು ರಾಷ್ಟ್ರ ಕವಿಯಾಗುವುದು ಈ ನೆಲೆಯಲ್ಲೂ ಯುಕ್ತವಾದುದು ಅನ್ನಿಸುತ್ತದೆ.ಈ ನೆಲೆಯಲ್ಲಿ ಅವರ ಕಾವ್ಯ ಮತ್ತು ಜೀವಿತದ ಅಧ್ಯಯನ ನಮ್ಮನ್ನು ನಮ್ಮ ನಾಡಿನ ಹೃದಯದ ಹತ್ತಿರಕ್ಕೆ ಕೊಂಡೊಯ್ಯಬಲ್ಲುದು.

**********************
ಜೀವನಪಥ:
ಜನನ:೧೯೨೬,ಫೆಬ್ರವರಿ ೭ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ
ಶಿಕ್ಷಣ:ಎಂ.ಎ.,ಪಿಎಚ್.ಡಿ,
ಡಾಕ್ಟರೇಟ್: ಸೌಂದರ್ಯಸಮೀಕ್ಷೆ-೧೯೬೦(ಕುವೆಂಪು ಮಾರ್ಗದರ್ಶನದಲ್ಲಿ)
೧೯೪೯ರಲ್ಲಿ ಮಹರಾಜಾ ಕಾಲೇಜಿನಲ್ಲಿ ಕನ್ನದ ಅಧ್ಯಾಪಕ ವೃತ್ತಿ ಪ್ರಾರಮ್ಭ
೧೯೬೩ ರಿಂದ ೧೯೬೬ ಹೈದರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ರೀಡರ್ ಮತ್ತು ಕನ್ನದ ವಿಭಾಗದ ಮುಖ್ಯರು
೧೯೭೦ ರಿಂದ ೧೯೮೬ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರು ಮತ್ತು ನಿರ್ದೇಶಕರು
೧೯೭೪-ಮಾಸ್ಕೋದಲ್ಲಿ ೨೨ದಿನ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ.
೧೯೮೨ರಲ್ಲಿ ರಾಜ್ಯಸಾಹಿತ್ಯ ಅಕಾಡೆಮಿ ಪುರಸ್ಕಾರ.
೧೯೮೪-ಕಾವ್ಯಾರ್ಥ ಚಿಂತನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
೧೯೮೭-ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪದವಿ
೧೯೮೭-೬೧ನೇ ಅ.ಭಾ.ಕನ್ನದ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪದವಿ.
೧೯೯೪-೯೫ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರು.
೧೯೯೮-ಪಂಪ ಪ್ರಶಸ್ತಿ.